ಬಾ ಬಾ ಬ್ಲಾಕ್ ಶೀಪ್… ಅಂತಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಹಿನ್ನೆಲೆ ದನಿಯೊಂದಿಗೆ ಶುರುವಾಗಿ ಕಾಳಿ ಮಾತೆಯ ಮುಂದೆ ಸ್ಟೆಪ್ಪು ಹಾಕುತ್ತಾ ಬರುವ ತನಕದ ಖಡಕ್ಕು ಟೀಸರ್ ಅಫಿಷಿಯಲ್ಲಾಗಿ ಹೊರಬಂದಿದೆ. ಅದು ಬಾದ್ಷ ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ʻಮ್ಯಾಕ್ಸ್ʼ ಚಿತ್ರದ ಟೀಸರ್!
ಪ್ಯಾನ್ ಇಂಡಿಯಾ ಲೆವೆಲ್ಲಿಗೆ ಇವತ್ತಿಗೆ ಯಾವ ಗುಣಮಟ್ಟ ಬೇಕೋ ಅದನ್ನು ಪರಿಪೂರ್ಣವಾಗಿಸಿಕೊಂಡು ಹೊರಬಂದಿರುವ ಟೀಸರ್ ಇದು. ಬಹುಕೋಟಿ ಬಜೆಟ್ಟಿನಲ್ಲಿ ತಯಾರಾಗಿರುವ ʻಮ್ಯಾಕ್ಸ್ʼ ಸಿನಿಮಾದಲ್ಲಿ ಈತನಕ ಎಲ್ಲೂ ತೆರೆದುಕೊಳ್ಳದ ಕಥೆಯೊಂದು ಇದೆ…. ಅನ್ನೋದರ ಸುಳಿವನ್ನು ಈ ಟೀಸರ್ ಬಿಟ್ಟುಕೊಟ್ಟಿದೆ. ಟೀಸರಿನ ಕೊನೆಯಲ್ಲಿ ಮಹಾಕಾಳಿ ಮುಂದೆ ಕುಣಿಯುತ್ತಾ ಬರುವ ಕಿಚ್ಚನ ಖದರನ್ನು ಸಣ್ಣ ಪರದೆಯಲ್ಲಿ ನೋಡಿದರೇನೇ ಮೈ ಜುಮ್ ಅನ್ನುವಂತಿದೆ. ಇನ್ನು ಇಡೀ ಸಿನಿಮಾ ಬೆಳ್ಳಿತೆರೆಯಲ್ಲಿ ಯಾವ ರೀತಿ ಅರಳಬಹುದು ಅನ್ನೋದು ಕಿಚ್ಚ ಸುದೀಪ ಅವರ ಅಭಿಮಾನಿಗಳಲ್ಲಿ ಮಾತ್ರವಲ್ಲದೆ, ಇಡೀ ಇಂಡಿಯಾದ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.
ʻಮ್ಯಾಕ್ಸ್ʼ ಟೀಸರ್ ನೆರೆಯ ತಮಿಳುನಾಡು, ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ, ಬಾಲಿವುಡ್ಡಿನ ತುಂಬಾ ಹವಾ ಎಬ್ಬಿಸಿದೆ. ಎಲ್ಲ ಭಾಷೆಯ ವಿಮರ್ಶಕರು ಮ್ಯಾಕ್ಸ್ ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮೂಲಗಳ ಪ್ರಕಾರ ಸಿನಿಮಾದ ಟ್ರೇಲರ್ ಕೂಡಾ ಇದನ್ನು ಮೀರಿಸುವಂತಿದೆಯಂತೆ. ಕಿಚ್ಚ ಸುದೀಪ ಅವರ ಅಭಿಮಾನಿಗಳಿಗೆ ಈ ಸಲ ಪರಿಪೂರ್ಣ ಮನರಂಜನೆಯ ಜೊತೆಗೆ ಕಾಡುವ ಅಂಶಗಳನ್ನಿಟ್ಟುಕೊಂಡು ಮ್ಯಾಕ್ಸ್ ಸಿನಿಮಾವನ್ನು ರೂಪಿಸಲಾಗಿದೆಯಂತೆ. ಕ್ಲಾಸು, ಮಾಸು ಎಲ್ಲ ವರ್ಗದವರೂ ಮ್ಯಾಕ್ಸ್ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ “ಮ್ಯಾಕ್ಸ್” ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
No Comment! Be the first one.