ಕಿಚ್ಚಾ ಸುದೀಪ್ ಕನ್ನಡದಾಚೆಗೂ ಕೀರ್ತಿ ಪತಾಕೆ ಹಾರಿಸಿರುವ ಪ್ರತಿಭಾವಂತ ನಟ. ನಿರ್ದೇಶನ, ಗಾಯನ ಸೇರಿದಂತೆ ಅವರ ಪ್ರತಿಭೆಗೆ ನಾನಾ ಮುಖಗಳಿವೆ. ಆದರೆ ಅವರೊಳಗಿನ ಬರಹಗಾರನನ್ನು ಶೋಧಿಸಿದ ಕೀರ್ತಿ ಹಿರಿಯ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ ಅವರಿಗೇ ಸಲ್ಲಬೇಕು. ಸದಾಶಿವ ಶೆಣೈ ಅವರು ವಿಷ್ಣುವರ್ಧನ್ ಅವರ ಬಗ್ಗೆ ಬರೆದಿರುವ `ಮುಗಿಯದಿರಲಿ ಬಂಧನ ಎಂಬ ಕೃತಿಗೆ ಸುದೀಪ್ ಅವರಿಂದ ಬೆನ್ನುಡಿ ಬರೆಸಿದ ರಸವತ್ತಾದ ಅನುಭವವನ್ನು ಹಂಚಿಕೊಂಡಿದ್ದಾರೆ…
ಇದು ವ್ಯಕ್ತಿ ಚಿತ್ರಣ ಅಲ್ಲ. ವ್ಯಕ್ತಿ ಗೌರವದ ಸಣ್ಣ ಟಿಪ್ಪಣಿ. ನಾನು ನನ್ನ ಗೆಳೆಯರಲ್ಲಿ ಅನೇಕ ಬಾರಿ ಹೇಳಿದ್ದೆ.., ವರ್ಕೋಹಾಲಿಕ್ ವ್ಯಕ್ತಿತ್ವದಲ್ಲಿ ಶಂಕರ್ನಾಗ್ ಎತ್ತಿದ ಕೈ. ಕ್ರೀಯಾಶೀಲತೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರದ್ದು ಮೇಲುಗೈ. ಇದು ಸ್ಯಾಂಡಲ್ವುಡ್ನಲ್ಲಿ ಎಲ್ಲರೂ ಒಪ್ಪುವ ಮಾತು. ಈ ಎರಡು ವ್ಯಕ್ತಿಗಳ ಕಾಂಬಿನೇಶನ್ ತರಹ ನನಗೆ ಸುದೀಪ್ ಕಾಣಿಸುತ್ತಿದ್ದಾರೆ. ನಾನಿಲ್ಲಿ ಅವರ ನಟನೆಯ ವಿಷಯ ಪ್ರಸ್ತಾಪಿಸಲು ಹೋಗುವುದಿಲ್ಲ. ಅವರ ನಟನಾ ಶೈಲಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಕೆಲವರು ಅವರಲ್ಲಿ ವಿಷ್ಣುವರ್ಧನ್ ಅವರನ್ನು ಕಂಡರೆ, ಮತ್ತೆ ಕೆಲವರು ಅವರೊಳಗೆ ಕಮಲ್ ಹಾಸನ್ ಅವರನ್ನು ಕಾಣುತ್ತಾರೆ.
ಇತ್ತೀಚೆಗೆ ಅವರ ಜೊತೆ ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್ನ ಆಯೋಜಕರಲ್ಲೊಬ್ಬನಾಗಿ ಕೆಲಸ ಮಾಡಿದಾಗ ನನಗೆ ಶಂಕರ್ನಾಗ್ ನೆನಪಿಗೆ ಬಂದರು. ಮೂರ್ನಾಲ್ಕು ದಿನ ರಾತ್ರಿ ಸುಮಾರು ಎರಡು ಗಂಟೆಯಾಗಲು ಕ್ರಿಕೆಟ್ ಸ್ಟೇಡಿಯಂನಲ್ಲಿ ಅವರು ಟೂರ್ನಮೆಂಟ್ಗೆ ಫೈನಲ್ ಟಚ್ ನೀಡುವುದರಲ್ಲಿ ಮಗ್ನರಾಗಿದ್ದರು. ತಾನೊಬ್ಬ ಸೂಪರ್ ಸ್ಟಾರ್ ಎಂಬುದನ್ನು ಮರೆತು ಸಾಮಾನ್ಯ ಶ್ರಮಿಕನಂತೆ ಡೇ & ನೈಟ್ ಅಲ್ಲೇ ಓಡಾಡುತ್ತಿರುವುದನ್ನು ಕಂಡು ಚಕಿತಗೊಂಡೆ. ಇದನ್ನು ಕಮಿಟ್ಮೆಂಟ್ ಅಥವ ಕಾರ್ಯ ತತ್ಪರತೆ ಎಂದು ಹೇಳಬಹುದು. ಪ್ರತಿಯೊಂದು ಸಣ್ಣ ಸಣ್ಣ ವಿಷಗಳತ್ತವೂ ಗಮನ ಹರಿಸುವ ಅವರ ಶೈಲಿ ಮೆಚ್ಚುಗೆಯಾಯ್ತು.
ಅಂದಹಾಗೆ ನಾನೀಗ ಹೇಳಲು ಹೊರಟ್ಟಿದ್ದು ಅವರ ಪ್ರತಿಭೆಯ ಮತ್ತೊಂದು ಮಜಲನ್ನು. ನಟ, ನಿರ್ದೇಶಕ, ನಿರೂಪಕ, ಸಂಘಟಕ,ಕ್ರಿಕೆಟಿಗ… ಹೀಗೆ ಹತ್ತು ಹಲವು ಮುಖಗಳನ್ನು ಹೊಂದಿರೋದು ನಿಮಗೆ ಗೊತ್ತೇ ಇದೆ. ಆದರೆ ಅವರೊಬ್ಬ ಉತ್ತಮ ಬರಹಗಾರ ಕೂಡ ಎಂಬುದು ನನಗೆ ಮೊನ್ನೆ ಗೊತ್ತಾಯ್ತು. ನಾನು ಬರೆದ ‘ಮುಗಿಯದಿರಲಿ ಬಂಧನ’ ಎಂಬ ವಿಷ್ಣುವರ್ಧನ್ ಅವರ ಆತ್ಮಚರಿತ್ರೆಯ ಮೂರನೇ ಆವೃತ್ತಿಗೆ ‘ಒಂದು ಬೆನ್ನುಡಿ ಬರೆದು ಕೊಡುತ್ತಿರಾ?’ ಎಂದು ಅತ್ಯಂತ ಮುಜುಗರದಿಂದಲೇ ಅವರ ವಾಟ್ಸಪ್ಗೆ ಮೆಸೇಜ್ ಮಾಡಿದೆ. ಆ ಕಡೆಯಿಂದ ‘Yes sure’ ಎಂಬ ಉತ್ತರ ಕ್ಷಣಾರ್ಧದಲ್ಲಿ ಬಂತು. ‘ಮುಂದಿನ ವಾರ ಮನೆಗೆ ಬನ್ನಿ..’ ಎಂದು ಮತ್ತೆ ಸಂದೇಶ ಕಳಿಸಿದರು. ‘ಸಾರ್ ನಾಳೆ ಬೆಳಗ್ಗೆ ಪ್ರಿಂಟ್ಗೆ ಹೋಗಬೇಕು: ಬೆಳಗ್ಗೆ ಕೊಟ್ಟರೆ ಒಳ್ಳೆದಿತ್ತು’ ಎಂದು ಮತ್ತೆ ಮಸೇಜ್ ಹಾಕಿದೆ. ಆಗ ಅವರು ಹೈದರಾಬಾದ್ನಲ್ಲಿ ಚಿರಂಜೀವಿ ಜೊತೆ ಶೂಟಿಂಗ್ನಲ್ಲಿ ಇದ್ದರು. ನನ್ನ ಪ್ರೀತಿಯ ಒತ್ತಾಯಕ್ಕೆ ಮಣಿದೋ ಏನೋ ಬೆಳಗ್ಗೆ ಕಳುಹಿಸುತ್ತೇನೆ ಎಂದು ರಾತ್ರಿ ಹತ್ತು ಗಂಟೆಗೆ ಮಸೇಜ್ ಮಾಡಿದ್ರು.
ನಾನು ಸುದೀಪ್ ಅವರ ಬರವಣಿಗೆ ಸಿಗುವುದು ಕಷ್ಟ ಎಂದೇ ಅಂದುಕೊಂಡಿದ್ದೆ. ಆದ್ರೆ ಬೆಳಗಿನ ಜಾವ ಎಂದಿನಂತೆ ಐದೂವರೆಗೆ ಎದ್ದು ವಾಟ್ಸಪ್ ನೋಡಿದಾಗ ನನಗೆ ನಿಜಕ್ಕೂ ಆಶ್ಚರ್ಯ ಕಾದಿತ್ತು. ಕಿಚ್ಚ, ವಿಷ್ಣು ಬಗ್ಗೆ ಒಂದು ಟಿಪ್ಪಣಿ ಕಳುಹಿಸಿಕೊಟ್ಟಿದ್ದರು.ಅದನ್ನು ಓದಿ ನಾನು ಥ್ರಿಲ್ ಆದೆ. ಒಬ್ಬ ಸೂಪರ್ ಸ್ಟಾರ್ ಇನ್ನೊಬ್ಬ ಸೂಪರ್ ಸ್ಟಾರ್ ಬಗ್ಗೆ ಇಷ್ಟೊಂದು ಭಾವಪೂರ್ಣವಾಗಿ ಬರೆಯಲು ಸಾಧ್ಯವೇ ಎಂದು ಬೆಳಗ್ಗಿನ ಕಾಫಿ ಹೀರುತ್ತಾ ಯೋಚಿಸುತ್ತಾ ಕುಳಿತೆ. ಸುದೀಪ್ ಅವರೊಳಗೆ ಒಬ್ಬ ಅದ್ಬುತ ಬರಹಗಾರನೂ ಇದ್ದಿದ್ದು ನೋಡಿ ಖುಷಿಯಾಯ್ತು. ಅವರು ವಿಷ್ಣುವರ್ಧನ್ ಬಗ್ಗೆ ಬರೆದಿರುವ ಆ ಅಭಿಮಾನದ ಸಾಲುಗಳ ಬಗ್ಗೆ ನಾನು ಇನ್ನೇನು ಹೇಳಲಾರೆ… ನೀವೇ ಓದಿ ಆನಂದಿಸಿ… Thank You Sudeep Sir for the wonderful write-up..
#
No Comment! Be the first one.