ಕಿಚ್ಚ ಸುದೀಪ್ ಯಾವತ್ತಿಗೂ ಕಷ್ಟದಲ್ಲಿರುವ ಜೀವಗಳಿಗೆ ನೆರವಾಗುತ್ತಾ ಬಂದವರು. ಅದೊಂದು ದಿನ ಡಿಸೈನರ್ ರವಿಶಂಕರ್ ಕ್ಯಾನ್ಸರ್ ಗೆ ತುತ್ತಾಗಿ ಜೀವಬಿಟ್ಟಿದ್ದರು. ಅದ್ಯಾವುದೋ ದರಿದ್ರ ಆಸ್ಪತ್ರೆಯ ಸೈತಾನ ಡಾಕ್ಟರುಗಳು ಹಣ ಕೊಡದಿದ್ದರೆ ಆತನ ಹೆಣವನ್ನೂ ಕೊಡೋದಿಲ್ಲ ಅಂದುಬಿಟ್ಟಿದ್ದರು. ದೂರದ ದೇಶದಲ್ಲೆಲ್ಲೋ ಚಿತ್ರೀಕರಣದಲ್ಲಿದ್ದ ಸುದೀಪ್ ಅವರಿಗೆ ಈ ವಿಚಾರ ಕಿವಿಗೆ ಬಿದ್ದಿದ್ದೇ ತಡ ತಮ್ಮ ಹುಡುಗರ ಬಳಿ ಹಣದ ಏರ್ಪಾಟು ಮಾಡಿ, ರವಿಶಂಕರ್ ಅವರ ಮೃತದೇಹವನ್ನು ಅವರ ಮನೆಗೆ ರವಾನೆ ಮಾಡುವ ವ್ಯವಸ್ಥೆ ಮಾಡಿದ್ದರು.

https://twitter.com/KicchaSudeep/status/1165998285401681921

ಇಂದು ಕೂಡಾ ಯಾರೋ ಅಭಿಮಾನಿ ಪಾರ್ಥ ಗೌಡ ಎಂಬಾತ “ತನ್ನ ಸ್ನೇಹಿತನೊಬ್ಬನಿಗೆ ಅಪಘಾತವಾಗಿದೆ. ವೈದ್ಯರು ಹತ್ತು ಲಕ್ಷ ರುಪಾಯಿ ಕೇಳುತ್ತಿದ್ದಾರೆ ಎಂದು ಟ್ವೀಟ್ ಮಾಡಿ, ಅಪಘಾತಕ್ಕೊಳಗಾದವನ ಫೋಟೋಗಳನ್ನು ಹಾಕಿದ್ದ. ತಕ್ಷಣ ಅದಕ್ಕೆ ಸ್ಪಂದಿಸಿರುವ ಕಿಚ್ಚ ‘ನನ್ನ ಕಡೆಯವರು ಭೇಟಿ ಮಾಡಿ ಸಾಧ್ಯವಾದಷ್ಟೂ ಸಹಕರಿಸುತ್ತಾರೆ ಎಂದು ರೀ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ತಮ್ಮ ಅಭಿಮಾನಿಗಳು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲೂ ಸಾಕಷ್ಟು ಬಾರಿ ಅವರ ನೋವಿಗೆ ಸ್ಪಂದಿಸಿದ್ದಾರೆ. ಸಾಂತ್ವನ ಹೇಳಿದ್ದಾರೆ.

ಅಣ್ಣನನ್ನು ನೋಡೋತನಕ ಜೀವ ಬಿಡಲ್ಲ ಅಂತಿದ್ದಾನೆ!

ಇಲ್ಲಿ ಕಿಚ್ಚ ಸುದೀಪ್ ಅವರ ಪರಮ ಅಭಿಮಾನಿಯೊಬ್ಬ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ, ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ‘ನಾನು ಸುದೀಪ್ ಅಣ್ಣನನ್ನು ನೋಡುವ ತನಕ ಸಾಯೋದಿಲ್ಲ ಎಂದು ಹಠ ಹಿಡಿದು ಕೂತಿರುವ ಈತನ ಅಭಿಮಾನವನ್ನು ಕಂಡರೆ ಎಂಥವರ ಕಣ್ಣಲ್ಲೂ ನೀರುಕ್ಕದೇ ಇರುವುದಿಲ್ಲ. ಸಣ್ಣ ಜ್ವರ ಬಂದರೂ ಜಗತ್ತಿನ ಬಗ್ಗೆ, ಬದುಕಿನ ಬಗ್ಗೆ ಬೇಸರಿಸಿಕೊಂಡು ವೈರಾಗ್ಯದ ಮಾತಾಡುವವರನ್ನು ನೋಡುತ್ತಿರುತ್ತೇವೆ. ಆದರೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ವ್ಯಕ್ತಿ ‘ಸುದೀಪಣ್ಣನನ್ನು ನೋಡಿದ ಮೇಲಷ್ಟೇ ನಾನು ಜೀವ ಬಿಡೋದು ಅಂದರೆ ಕರುಳೊಳಗೆ ಕಳ್ಳಿ ಹಾಲು ಸುರಿದಂತಾಗುವುದಿಲ್ಲವೆ?

ಕ್ಯಾನ್ಸರ್ ಗೆ ತುತ್ತಾಗಿದ್ದರೂ ಸಹ  ಸುದೀಪ್ ಅಭಿನಯದ ದಿ. ವಿಲನ್ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ನಡೆಯಲು ಸಾಧ್ಯವಾಗದಿದ್ದರೂ ತೆವಳಿಕೊಂಡು ಫಸ್ಟ್ ಶೋ ನೋಡಿ ಬಂದಿದ್ದನಂತೆ. ಅದಾದಮೇಲೆ ವಿಧಿ ಆತನ ಅಭಿಮಾನಕ್ಕೂ ಹೊಟ್ಟೆ ಕಿಚ್ಚು ಪಟ್ಟು ತೆವಳಲೂ ಬಾರದಂತೆ ಹಾಸಿಗೆ ಹಿಡಿಸಿಬಿಟ್ಟಿತ್ತು.

ಚಾಮರಾಜನಗರ ತಾಲ್ಲೂಕಿನ ನಂಜದೇವನಪುರ ಗ್ರಾಮದ ನಾಯಕರ ಬೀದಿ ನಿವಾಸಿಯಾದ ಸಿದ್ದನಾಯಕನ ಮಗ ಸಿದ್ದರಾಜು ಎಂಬಾತ ಸರ್ವೈಕಲ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾನೆ. ಈ ಕ್ಯಾನ್ಸರ್ ವಾಸಿಯಾಗುವ ಸಾಧ್ಯತೆಯೂ ಇತ್ತು. ಆದರೆ  ವೈದ್ಯರ ಬೇಜವಾಬ್ದಾರಿ ಈತನ ಬದುಕಿಗೆ ಮುಳುವಾಗಿ ಆತನು ಅತ್ತ ಸಾಯಲಾರದೇ, ಬದುಕಲೂ ಆಗದೇ ಹಾಸಿಗೆಯಲ್ಲಿಯೇ ನರಳುವಂತೆ ಮಾಡಿಬಿಟ್ಟಿತ್ತು. ಬೆನ್ನಿನಲ್ಲಿ ಎದ್ದಿರುವ ಮೂರು ಗಂಟು ಯಾರೋ ಚಿವುಟುತ್ತಿರುವಂತೆ, ಹುಳುಗಳು ಬೇಕಂತಲೇ ಪೀಡಿಸುತ್ತಿರುವಂತಹ ಹಿಂಸೆಯಾಗುತ್ತದೆಯಂತೆ. ಪ್ರತಿದಿನವೂ ಆ ಗಂಟಿನ ಉರಿಗೆ ಬದುಕಿನ ಮೇಲೆಯೇ ಆಸೆ ಬಿಟ್ಟ ಸಿದ್ಧರಾಜು ಸದಾ ದೇವರನ್ನು ಶಪಿಸುತ್ತಾ ತನ್ನ ಸ್ಥಿತಿಯನ್ನು ನೆನೆಯುತ್ತಾ ಹಲುಬುವಂತಾಗಿದೆ. ಎರಡೂ ಕಾಲುಗಳ ಸ್ವಾದೀನ ಕಳೆದುಕೊಂಡಿರುವ ಈತ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾದಾಗ ಚಿಕಿತ್ಸೆಯ ವೆಚ್ಛ 5 ಲಕ್ಷ ರೂಪಾಯಿ ಆಗುತ್ತದೆಂದು ತಿಳಿಸಿದ್ದರಂತೆ. ಸ್ವತಃ ಸಿದ್ದರಾಜು ಹಣ ಸಹಾಯಕ್ಕಾಗಿ ಮೊರೆಯಿಟ್ಟಿದ್ದ. ಅದು ಸುದೀಪ್ ಅವರ ಗಮನಕ್ಕೆ ಬಂತೋ ಇಲ್ಲವೋ ಗೊತ್ತಿಲ್ಲ. ಆದರೆ ನಿತ್ಯ ಭಿಕ್ಷೆ ಬೇಡಿಯೇ ಬದುಕು ಸಾಗಿಸುತ್ತಿರುವ ಈತನ ತಂದೆ ಸಿದ್ದನಾಯಕ ನಾಲ್ಕು ಲಕ್ಷ ರುಪಾಯಿಯನ್ನು ಹೊಂಚುವುದಾದರೂ ಹೇಗೆ?

ಇನ್ನು ಸಿದ್ದರಾಜು ಆರೋಗ್ಯವಾಗಿದ್ದಿದ್ದರೆ ಅದಾಗಲೇ ನಿಶ್ಚಿತವಾಗಿದ್ದ ಲೀಲಾವತಿ ಎಂಬಾಕೆಯೊಂದಿಗೆ ಮದುವೆ ಮುಗಿದಿರುತ್ತಿತ್ತು. ಸಿದ್ದರಾಜುಗೆ ಕ್ಯಾನ್ಸರ್ ಗುಣವಾದಕೂಡಲೇ ಆತನನ್ನು ಮದುವೆಯಾಗಿಯೇ ತೀರುತ್ತೇನೆ ಅಂತಾ ಆ ಹುಡುಗಿಯೂ ಕಾದು ಕುಳಿತಿದ್ದಾಳೆ. ಆದರೆ ಸಿದ್ದರಾಜುಗೆ ತಾನು ಬದುಕುಳಿಯುತ್ತೇನೆ ಅನ್ನೋದರ ಬಗ್ಗೆಯೇ ಅನುಮಾನವಿದೆ. ತಾನು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗುತ್ತೇನೋ ಇಲ್ಲವೋ ಆದರೆ, ತಾನು ದೇವರಿಗಿಂತಾ ಹೆಚ್ಚು ಆರಾಧಿಸುವ ಕಿಚ್ಚನನ್ನು ಒಮ್ಮೆ ನೋಡಿ ಕಣ್ತುಂಬಿಕೊಂಡ ನಂತರ ಕಣ್ಮುಚ್ಚಬೇಕು ಎನ್ನುತ್ತಿದ್ದಾನೆ.

ಪೈಲ್ವಾನ್ ಚಿತ್ರದ ಪ್ರಮೋಷನ್ ಸೇರಿದಂತೆ ನಾನಾ ಕಾರಣಗಳಿಗಾಗಿ ಕಿಚ್ಚ ಬ್ಯುಸಿಯಾಗಿರುತ್ತಾರೆ. ಕಡೇಪಕ್ಷ ಒಂದು ಫೋನ್ ಕರೆಯನ್ನಾದರೂ ಮಾಡಿ, ಅಭಿಮಾನಿ ಸಿದ್ದರಾಜನ ಆರೋಗ್ಯವನ್ನೊಮ್ಮೆ ವಿಚಾರಿಸಿದರೆ, ಆ ಖುಷಿಯಲ್ಲೇ ಆತ ಬದುಕುಳಿಯಲೂಬಹುದು; ಕಡೇಪಕ್ಷ ಹೆಚ್ಚಿಗೆ ನಾಲ್ಕು ದಿನ ಉಸಿರುಳಿಸಿಕೊಳ್ಳಬಹುದು…

ಸಿದ್ಧರಾಜು ಅವರಿಗೆ ನಿಮ್ಮ ಕೈಲಾದ ಸಹಾಯ ಮಾಡಬೇಕೆಂದು ಅನ್ನಿಸಿದರೆ,
ಆಸಕ್ತರು ಕೆನರಾಬ್ಯಾಂಕ ಖಾತೆ ಸಂಖ್ಯೆ 5641131000052
ಐಎಫ್.ಸಿ ಕೋಡ್ CNRB0005641
ಹಣವನ್ನು ಜಮೆ ಮಾಡಬಹುದು. ಜತೆಗೆ ಈ ನಂಬರಿಗೆ 9353145317 ಕರೆ ಮಾಡಿ ಸಿದ್ಧರಾಜುವನ್ನು ಖುದ್ದಾಗಿ ಮಾತನಾಡಿಸಬಹುದು.

CG ARUN

ಮರುಬಿಡುಗಡೆಯಾಗಲಿದೆ ನಿಷ್ಕರ್ಷ!

Previous article

ಕಾಣದಂತೆ ಮಾಯವಾದನು ಚಿತ್ರಕ್ಕೆ ಯು/ಎ ಪ್ರಮಾಣಪತ್ರ!

Next article

You may also like

Comments

Leave a reply

Your email address will not be published. Required fields are marked *

More in cbn