ರಾಮ್ಚರಣ್ ನಾಯಕನಾಗಿ ನಟಿಸಿದ್ದ ರಂಗಸ್ಥಳಂ ಚಿತ್ರದ ಮೂಲಕ ಭರ್ಜರಿ ಗೆಲುವು ದಾಖಲಿಸಿರುವವರು ನಿರ್ದೇಶಕ ಸುಕುಮಾರ್. ಆರಂಭದಿಂದ ಇಲ್ಲಿಯವರೆಗೂ ಹಿಟ್ ಚಿತ್ರಗಳನ್ನೇ ಸೃಷ್ಟಿಸುತ್ತಾ ಬಂದಿರೋ ಸುಕುಮಾರ್ ಇದೀಗ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಅವರಿಬ್ಬರ ನಡುವೆ ಸುದೀರ್ಘವಾದೊಂದು ಮಾತುಕತೆಯೂ ನಡೆದಿದೆ!
ಇದೀಗ ಮೈಸೂರಿನಲ್ಲಿ ಒಡೆಯ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ತೆಲುಗಿನ ಸ್ಟಾರ್ ನಿರ್ದೇಶಕ ಸುಕುಮಾರ್ ಸೆಟ್ಟಿಗೆ ಭೇಟಿ ನೀಡಿದ್ದಾರೆ. ಅವರನ್ನು ಖುದ್ದಾಗಿ ಬರಮಾಡಿಕೊಂಡ ದರ್ಶನ್ ಸುಕುಮಾರ್ ಜೊತೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ. ಸುಕುಮಾರ್ ಅವರೇ ದರ್ಶನ್ ಅವರಿಗಾಗಿ ಕನ್ನಡ ಚಿತ್ರ ನಿರ್ದೇಶನ ಮಾಡಲಿದ್ದಾರಾ? ಅಥವಾ ದರ್ಶನ್ ಅವರನ್ನ ತೆಲುಗಿನಲ್ಲಿ ನಟಿಸುವಂತೆ ಮಾಡೋ ಪ್ಲಾನು ನಡೆಯುತ್ತಿದೆಯಾ? ಈ ಬಗ್ಗೆ ನಿಖರ ಉತ್ತರ ಹೊರ ಬಿದ್ದಿಲ್ಲವಾದರೂ ಸುಕುಮಾರ್ ಮತ್ತು ದರ್ಶನ್ ಕಾಂಬಿನೇಷನ್ನಿನಲ್ಲೊಂದು ಚಿತ್ರ ತೆರೆ ಕಾಣುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ಒಂದು ವೇಳೆ ಸುಕುಮಾರ್ ಕನ್ನಡದಲ್ಲಾಗಲಿ, ತೆಲುಗಿನಲ್ಲಾಗಲಿ ದರ್ಶನ್ ಅವರ ಚಿತ್ರ ನಿರ್ದೇಶನ ಮಾಡಿದರೆ ಖಂಡಿತಾ ಬಾಲಿವುಡ್ ಮಂದಿಯೂ ಬೆರಗಾಗುವಂಥಾದ್ದೊಂದು ಚಿತ್ರ ಸೃಷ್ಟಿಯಾಗುತ್ತೆ. ಸುಕುಮಾರ್ ಅವರಿಗೂ ಅಂಥಾದ್ದೊಂದು ಖದರ್ ಇದೆ. ೨೦೦೪ರಲ್ಲಿ ಆರ್ಯ ಎಂಬ ಚಿತ್ರ ನಿರ್ದೇಶನ ಮಾಡೋ ಮೂಲಕ ನಿರ್ದೇಶಕನಾಗಿ ಎಂಟ್ರಿ ಕೊಟ್ಟಿದ್ದವರುಯ ಸುಕುಮಾರ್. ಆ ನಂತರ ರಂಗಸ್ಥಳಂ ವರೆಗೂ ಅವರು ಸೋತ ಉದಾಹರಣೆಗಳಿಲ್ಲ. ಇಂಥಾ ನಿರ್ದೇಶಕ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಭೇಟಿ ನಿಜಕ್ಕೂ ಕುತೂಹಲ ಕೆರಳಿಸಿದೆ.
#
No Comment! Be the first one.