ಮಂಡ್ಯಾ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಅವರ ಬಹಿರಂಗ ಕಲಾಪ್ರದರ್ಶನಕ್ಕೆ ತೆರೆ ಬಿದ್ದಿದೆ. ಚುನಾವಣಾ ಪ್ರಕ್ರಿಯೆ ಆರಂಭವಾದಂದಿನಿಂದ ಕಡೇ ಘಳಿಗೆಯವರೆಗೂ ಸುಮಲತಾರಾ ಮಾತು, ಹಾವಭಾವಗಳನ್ನೊಮ್ಮೆ ಮತ್ತೆ ಕಣ್ಮುಂದೆ ತಂದುಕೊಳ್ಳಿ. ಸುಮಲತಾ ಜನರ ಸಮಸ್ಯೆಗಳ ಬಗ್ಗೆ ಮಾತಾಡಿದ್ದಕ್ಕಿಂತಲೂ ಹೆಚ್ಚಾಗಿ ಅಂಬರೀಶ್ ಬಗ್ಗೆ ಮಾತಾಡಿ ಸೆಂಟಿಮೆಂಟ್ ಕ್ರಿಯೇಟ್ ಮಾಡಿದ್ದೇ ಹೆಚ್ಚು. ಇಂಥಾ ಕಲೆಗಾರಿಕೆಯ ಮೂಲಕವೇ ಅಂಬಿ ಅಭಿಮಾನಿಗಳನ್ನು ಸೆಳೆದುಕೊಳ್ಳೋ ಕಸರತ್ತು ನಡೆಸಿರುವ ಸುಮಲತಾಗೆ ಗಂಡನ ಬಗ್ಗೆ ನಿಜಕ್ಕೂ ಎಂಥಾ ಸೆಂಟಿಮೆಂಟ್ ಇದೆ ಅಂತ ನೋಡ ಹೋದರೆ ಆಘಾತಕಾರಿ ವಿಚಾರವೊಂದು ಜಾಹೀರಾಗುತ್ತದೆ!
ಮನೆಯಲ್ಲಿ ಯಾರೇ ಮರಣ ಹೊಂದಿದರೂ ಎಂಥವರಿಗೂ ಕೂಡಾ ಅದರಿಂದ ಹೊರಬರಲು ತಿಂಗಳುಗಟ್ಟಲೆ ಬೇಕಾಗುತ್ತದೆ. ಆದರೆ ಸುಮಲತಾ ಮೇಡಮ್ಮು ಮಾತ್ರ ಈ ವಿಚಾರದಲ್ಲಿ ಭಲೇ ಗಟ್ಟಿಗಿತ್ತಿ ಹೆಣ್ಣುಮಗಳು. ಯಾಕೆಂದರೆ, ಅಂಬರೀಶ್ ನಿಧನರಾಗಿ ಎರಡನೇ ದಿನವೇ ಅವರು ಐಶಾರಾಮಿ ಜಾಗ್ವಾರ್ ಕಾರು ಬುಕ್ ಮಾಡಿದ್ದರಂತೆ. ಈ ಕಾರಿನ ಬೆಲೆ ಮೂರು ಕೋಟಿ ಹತ್ತು ಲಕ್ಷ!
ಯಾರೇ ಆದರೂ ಗಂಡ ಅಸುನೀಗಿ ಎರಡೇ ದಿನಕ್ಕೆ ಹೊಸಾ ಕಾರು ಬುಕ್ ಮಾಡುತ್ತಾರಾ? ಅದನ್ನು ಮಾಡಿದ್ದಾರೆಂದರೆ, ಸುಮಕ್ಕನಿಗೆ ಅಂಬಿ ಮೇಲೆ ಎಂಥಾ ಸೆಂಟಿಮೆಂಟಿತ್ತೆಂಬುದು ಎಂಥವರಿಗಾದರೂ ಅರ್ಥವಾಗದಿರೋದಿಲ್ಲ. ಹಾಗೆ ಅಂಬಿ ಸತ್ತ ಎರಡನೇ ದಿನವೇ ಜಾಗ್ವಾರ್ ಕಾರ್ ಬುಕ್ ಮಾಡಿದ್ದ ಸುಮಲತಾ ಹನ್ನೊಂದನೇ ದಿನ ಶ್ರೀರಂಗಪಟ್ಟಣದಲ್ಲಿ ಅಸ್ತಿ ಬಿಟ್ಟು ಬಂದವರೇ ಸೀದಾ ಮಲೇಷಿಯಾಕ್ಕೆ ಹೊರಟು ಬಿಡುತ್ತಾರೆ. ಇದು ಸುಮ್ಮಕ್ಕನಿಗೆ ಅಂಬಿ ಮೇಲೆ ಅದಿನ್ನೆಂಥಾ ಪ್ರೀತಿ ಇತ್ತೆಂಬುದಕ್ಕೆ ಮತ್ತೊಂದು ಉದಾಹರಣೆ.
ಸಾಮಾನ್ಯವಾಗಿ ಇಂಥಾ ಸಾವಾದಾಗ ಕಾರ್ಯವೆಲ್ಲ ಮುಗಿದ ನಂತರ ಸಂಬಂಧಿಕರ ಮನೆಗಳಿಗೆ ಹೋಗೋದಿದೆ. ಆದರೆ ಸುಮಲತಾ ತರಾತುರಿಯಿಂದ ಮಲೇಷಿಯಾಕ್ಕೆ ಹಾರುವ ದರ್ದೇನಿತ್ತೋ ಗೊತ್ತಿಲ್ಲ. ಹಾಗೆ ನೋಡಿದರೆ, ಸುಮಕ್ಕನಿಗ ಮಂಡ್ಯಕ್ಕಿಂತ ಹೆಚ್ಚಿನ ನಂಟಿರೋದೇ ಸಿಂಗಾಪುರದಂಥಾ ವಿದೇಶಗಳ ಜೊತೆಗೆ. ಕ್ಲಬ್ಬು ಅದೂ ಇದೂ ಅಂತ ಸಿಂಗಾಪುರದಲ್ಲಿಯೇ ಈಕೆ ಝಾಂಡಾವೂರುತ್ತಿದ್ದರೆಂಬ ಮಾತೂ ಇದೆ. ಆದರೆ ಗಂಡ ಮರೆಯಾಗಿ ಹನ್ನೊಂದನೇ ದಿನಕ್ಕೇ ಸಿಂಗಾಪುರಕ್ಕೆ ತೆರಳುವಂಥಾ ತುರ್ತು ಅದೇನಿತ್ತೋ ಅವರೇ ಹೇಳಬೇಕು.
ಹೀಗೆ ಸುಮಲತಾ ಸಿಂಗಾಪುರದಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿರುವಾಗಲೇ ಅಂಬಿ ನಿಧನರಾದ ಎರಡು ದಿನಗಳಲ್ಲಿ ಅವರು ಬುಕ್ ಮಾಡಿದ್ದ ಜಾಗ್ವಾರ್ ಕಾರ್ ಮನೆಗೆ ಬಂದಿಳಿಯೋ ಕರೆ ಬಂದಿದೆ. ಆದರೆ ಆಗ ಮನೆಯಲ್ಲಿ ಯಾರೂ ಇಲ್ಲದ ಕಾರಣ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅದನ್ನು ಪೋಸ್ಟ್ ಫೋನ್ ಮಾಡಿಸಿದ್ದರಂತೆ. ಅದಾದ ಕೆಲ ದಿನಗಳಲ್ಲಿಯೇ ಎಲೆಕ್ಷನ್ ಕಣಕ್ಕಿಳಿಯೋ ನಿರ್ಧಾರ ಮಾಡಿದ್ದ ಸುಮಲತಾ ಜಾಗ್ವಾರ್ ಕಾರನ್ನು ಮನೆಗೆ ತರೋ ಪ್ರೋಗ್ರಾಂ ಅನ್ನು ಮತ್ತೆ ಫೋಸ್ಟ್ ಫೋನ್ ಮಾಡಿದ್ದಾರೆ. ತೀರಾ ಎಲೆಕ್ಷನ್ ಸಂದರ್ಭದಲ್ಲಿ ಸಲ್ಲಿಸಿರೋ ಅಫೀಡವಿಟ್ ನಲ್ಲಿಯೂ ಈ ಜಾಗ್ವಾರ್ ಕಾರನ್ನು ಉಲ್ಲೇಖಿಸಿಲ್ಲ. ಹಾಗೆ ಮಾಡಿದರೆ ಗಂಡ ನಿಧನರಾದ ಎರಡನೇ ದಿನವೇ ಹೊಸಾ ಕಾರು ಖರೀದಿಸಿದ್ದು ವಿರೋಧಿಗಳಿಗೆ ಅಸ್ತ್ರವಾಗುತ್ತದೆ ಎಂಬ ಬುದ್ಧಿವಂತಿಕೆ ಸುಮ್ಮಕ್ಕನದ್ದಿರಬಹುದು.
No Comment! Be the first one.