ಈ ಹೊತ್ತಿಗೆ ಸುಮನಾ ವೆಬ್ ಸಿರೀಸ್’ಗಾಗಿ ಚಿತ್ರೀಕರಣವನ್ನೂ ಆರಂಭಿಸಬೇಕಿತ್ತು. ಕೊರೋನಾ ಪ್ರಾಬ್ಲಮ್ಮಿನಿಂದ ಅದು ಕೂಡಾ ಸ್ವಲ್ಪ ಮುಂದೆ ಹೋಗಿದೆ. ಈ ಗ್ಯಾಪಲ್ಲಿ ಮದುವೆ ಕಾರ್ಯ ಮುಗಿಸಿಕೊಂಡಿದ್ದಾರೆ. ಹೊಸ ಜೋಡಿಗೆ ಶುಭವಾಗಲಿ…
ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ತೀರಾ ಕಡಿಮೆ. ಅದರಲ್ಲಿ ಡಿ. ಸುಮನಾ ಕಿತ್ತೂರು ಮುಖ್ಯವಾದವರು. ಅಗ್ನಿ ವಾರಪತ್ರಿಕೆಯ ಸಿನಿಮಾ ಪತ್ರಕರ್ತೆಯಾಗಿ ಎಲ್ಲರಿಗೂ ಪರಿಚಯಗೊಂಡ ಸುಮನ್ ಆ ನಂತರ ‘ಆ ದಿನಗಳು’ ಚಿತ್ರದ ಮೂಲಕ ನಿರ್ದೇಶನ ವಿಭಾಗದಲ್ಲಿಯೂ ಕೆಲಸ ಆರಂಭಿಸಿದರು. ಆ ಸಿನಿಮಾದ ಟೈಟಲ್ ಸಾಂಗ್ ಬರೆದದ್ದೂ ಇವರೇ. ಆ ಮೂಲಕ ಸಿನಿಮಾ ಚಿತ್ರರಂಗದಲ್ಲಿ ಗುರುತು ಮೂಡಿಸಿದ ಸುಮನಾ `ಸ್ಲಂ ಬಾಲ’ ಮೂಲಕ ಪೂರ್ಣಪ್ರಮಾಣದ ನಿರ್ದೇಶಕಿಯಾಗಿ ಹೊರಹೊಮ್ಮಿದರು. ಕಳ್ಳರ ಸಂತೆ, ಎದೆಗಾರಿಕೆ ಮತ್ತು ಕಿರಗೂರಿನ ಗಯ್ಯಾಳಿಗಳು ಚಿತ್ರಗಳನ್ನು ಡೈರೆಕ್ಟ್ ಮಾಡಿದರು. ಒಬ್ಬ ಹೆಣ್ಣುಮಗಳು ದುನಿಯಾ ವಿಜಯ್, ಯಶ್, ಆದಿತ್ಯಾರಂಥ ಕಮರ್ಷಿಯಲ್ ಹೀರೋಗಳ ಸಿನಿಮಾ ಮಾಡಿ ಗೆಲ್ಲೋದು ಅಂದರೆ ಸುಲಭದ ಮಾತಲ್ಲ. ಧೈರ್ಯದಿಂದ ಸುಮನ್ ಅದನ್ನು ಸಾಧಿಸಿದರು. ನಾಲ್ಕಾರು ನಾಯಕಿಯರನ್ನು ಒಂದೇ ಕಡೆ ಸೇರಿಸಿ ಕಿರಗೂರಿನ ಗಯ್ಯಾಳಿಗಳು ರೂಪಿಸಿದರು.
ಇಷ್ಟೆಲ್ಲದರ ನಡುವೆ ಸುಮನ್ ಮದುವೆಯಾಗೋದು ಯಾವಾಗ ಅನ್ನೋ ಪ್ರಶ್ನೆ ಹಾಗೇ ಉಳಿದುಹೋಗಿತ್ತು. ಕಿತ್ತೂರಿನ ಹುಡುಗಿ ಸುಮನ್ ಅದಕ್ಕೆ ಈಗ ಉತ್ತರ ನೀಡಿದ್ದಾರೆ. ಶಿವಮೊಗ್ಗ ಮೂಲದ ಶ್ರೀನಿವಾಸ್ ಅವರೊಟ್ಟಿಗೆ ಸುಮನ್ ಸರಳವಾಗಿ ಮದುವೆಯಾಗಿದ್ದಾರೆ. ಸಾಫ್ಟ್’ವೇರ್ ಇಂಜಿನಿಯರ್ ಆಗಿರುವ ಶ್ರೀನಿವಾಸ್ ಪುದುಚೇರಿಯಲ್ಲಿ ಉದ್ಯೋಗದಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಸುಮನ್ ಮದುವೆ ಕುಪ್ಪಳ್ಳಿಯಲ್ಲಿ ನೆರವೇರಬೇಕಿತ್ತು. ಅಷ್ಟರಲ್ಲಿ ಲಾಕ್’ಡೌನ್ ಅಡ್ಡ ಬಂದಿದ್ದರಿಂದ ಪುದುಚೇರಿಯಲ್ಲಿ ಮನೆಯವರ ಸಮಕ್ಷಮದಲ್ಲಿ ಸಿಂಪಲ್ಲಾಗಿ ಮದುವೆಯಾಗಿದ್ದಾರೆ.
ಈ ಹೊತ್ತಿಗೆ ಸುಮನಾ ವೆಬ್ ಸಿರೀಸ್’ಗಾಗಿ ಚಿತ್ರೀಕರಣವನ್ನೂ ಆರಂಭಿಸಬೇಕಿತ್ತು. ಕೊರೋನಾ ಪ್ರಾಬ್ಲಮ್ಮಿನಿಂದ ಅದು ಕೂಡಾ ಸ್ವಲ್ಪ ಮುಂದೆ ಹೋಗಿದೆ. ಈ ಗ್ಯಾಪಲ್ಲಿ ಮದುವೆ ಕಾರ್ಯ ಮುಗಿಸಿಕೊಂಡಿದ್ದಾರೆ. ತೀರಾ ಸಣ್ಣ ವಯಸ್ಸಿಗೇ ಪತ್ರಕರ್ತೆ, ಅಂಕಣ ಬರಹಗಾರ್ತಿಯಾಗಿ, ಸಿನಿಮಾ ನಿರ್ದೇಶಕಿಯಾಗಿಯೂ ಕೆಲಸ ಮಾಡಿ ಗೆಲುವು ಕಂಡಿರುವ ಸುಮನಾ ಅವರ ವೈವಾಹಿಕ ಬದುಕು ಕೂಡಾ ಅಷ್ಟೇ ಲವಲವಿಕೆಯಿಂದ ಕೂಡಿರಲಿ. ಹೊಸ ಜೋಡಿಗೆ ಶುಭವಾಗಲಿ…