ಕನ್ನಡ ಚಿತ್ರರಂಗದಲ್ಲಿ ಹೊಸಾ ಅಲೆಯ, ಹೊಸಾ ಆಲೋಚನೆಯ ಚಿತ್ರಗಳಿಗೆ ನಾಂದಿ ಹಾಡಿದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. ಅವರು ಮೂರು ತಲೆಮಾರುಗಳ ನಟ ನಟಿಯರ ಚಿತ್ರಗಳನ್ನು ನಿರ್ದೇಶನ ಮಾಡಿದ ಹೆಗ್ಗಳಿಕೆ ಹೊಂದಿರುವವರು. ಸಾಮಾನ್ಯವಾಗಿ ಇತ್ತೀಚೆಗೆ ಅಡಿಯಿರಿಸಿದ ನಿರ್ದೇಶಕರೇ ಇನ್ನೂ ಅಪ್ಡೇಟ್ ಆಗಿಲ್ಲ ಎಂಬ ಆರೋಪಕ್ಕೆ ಗುರಿಯಾಗೋದಿದೆ. ಆದರೆ ಚಿತ್ರಗಳೆಲ್ಲ ಕೌಟುಂಬಿಕ ಕಥಾ ಹಂದರದ ಸುತ್ತ ಗಿರಕಿ ಹೊಡೆಯುತ್ತಿದ್ದ ಎಂಭತ್ತರ ದಶಕದಲ್ಲಿಯೇ ಅಪ್ಡೇಟ್ ಆಗಿ ಆಲೋಚಿಸಿದ್ದವರು, ಥ್ರಿಲ್ಲರ್ ಕಥನಗಳಿಂದ ಹೊಸಾ ಗಾಳಿ ಬೀಸುವಂತೆ ಮಾಡಿದ್ದವರು ಸುನೀಲ್ ಕುಮಾರ್ ದೇಸಾಯಿ. ಅವರು ಇಂದಿಗೂ ಚಾಲ್ತಿಯಲ್ಲಿರೋದರ ಹಿಂದೆ, ಅವರೇ ನಿರ್ದೇಶನ ಮಾಡಿರುವ ಉದ್ಘರ್ಷ ಚಿತ್ರವೀಗ ಎಲ್ಲ ದಿಕ್ಕಿನಲ್ಲಿಯೂ ಗಮನ ಸೆಳೆದಿರೋದರ ಹಿಂದಿರೋದು ದೇಸಾಯಿಯವರ ಹೊಸತನಕ್ಕೆ ಸದಾ ತುಡಿಯುವ ಮನಸ್ಥಿತಿ ಮಾತ್ರ!
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಗರ್ಷ ಚಿತ್ರ ಹೆಚ್ಚೂ ಕಮ್ಮಿ ಚಿತ್ರೀಕರಣ ಮುಗಿಸಿಕೊಂಡಿದೆ. ಇತ್ತೀಚೆಗಷ್ಟೇ ಮಡಿಕೇರಿಯಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣವೂ ನಡೆದಿದೆ. ಇನ್ನುಳಿದುಕೊಂಡಿರೋದು ಕೆಲ ಪ್ಯಾಚ್ ವರ್ಕ್ ಮಾತ್ರ. ಖ್ಯಾತ ಖಳನಟ ಅನೂಪ್ ಠಾಕೂರ್ ಸಿಂಗ್ ಈ ಚಿತ್ರದಲ್ಲಿ ಮೊದಲ ಸಲ ನಾಯಕರಾಗಿ ನಟಿಸುತ್ತಿದ್ದಾರೆ. ಕಬಾಲಿ ಖ್ಯಾತಿಯ ದನ್ಸಿಕಾ ನಾಯಕಿ. ಇನ್ನುಳಿದಂತೆ ಪರಭಾಷಾ ಖ್ಯಾತ ನಟರದ್ದೊಂದು ಬೃಹತ್ ತಾರಾಗಣವನ್ನೇ ಈ ಚಿತ್ರ ಹೊಂದಿದೆ. ಈ ಮೂಲಕ ಮತ್ತೆ ಸುನೀಲ್ ಕುಮಾರ್ ದೇಸಾಯಿ ಪರ್ವವೊಂದು ಆರಂಭವಾಗುವ ಎಲ್ಲ ಲಕ್ಷಣಗಳೂ ಢಾಳಾಗಿಯೇ ಕಾಣಿಸಲಾರಂಭಿಸಿದೆ.
ಕನ್ನಡ ಚಿತ್ರರಂಗದಲ್ಲಿಯೇ ಮೈಲಿಗಲ್ಲಿನಂಥಾ ಚಿತ್ರಗಳನ್ನು ನಿರ್ದೇಶನ ಮಾಡುತ್ತಲೇ ವಿಶಿಷ್ಟ ನಿರ್ದೇಶಕರಾಗಿ ಗುರುತಿಸಿಕೊಂಡವರು ದೇಸಾಯಿ. ಚಿತ್ರರಂಗವನ್ನು, ಪ್ರೇಕ್ಷಕರನ್ನು ಹೊಸಾ ಬಗೆಯ ಚಿತ್ರಗಳತ್ತ ಆಕರ್ಷಿಸಿದ ಕಾಶೀನಾಥ್ ಗರಡಿಯಲ್ಲಿಯೇ ಅರಳಿಕೊಂಡ ಪ್ರತಿಭೆಗಳಲ್ಲಿ ಸುನೀಲ್ ಕುಮಾರ್ ದೇಸಾಯಿ ಕೂಡಾ ಒಬ್ಬರು. ಅವರ ಸಿನಿಮಾ ಯಾನ ಶುರುವಾದದ್ದು ೧೯೮೩ರಲ್ಲಿ. ಮಡಿವಂತಿಕೆ ಮೇರೆ ಮೀರಿದ್ದ ಕಾಲದಲ್ಲಿಯೇ ತೆರೆ ಕಂಡು ಬೆಚ್ಚಿ ಬೀಳಿಸಿದ್ದ ಕಾಶೀನಾಥ್ ನಿರ್ದೇಶನದ ಅನುಭವ ಚಿತ್ರಕ್ಕೆ ಅಸಿಸ್ಟೆಂಣಟ್ ಆಗಿ ಕಾರ್ಯ ನಿರ್ವಹಿಸೋ ಮೂಲಕ ದೇಸಾಯಿಯವರ ಕನಸಿನ ಹಾದಿ ತೆರೆದುಕೊಂಡಿತ್ತು. ಆ ಬಳಿಕ ಸುರೇಶ್ ಹೆಬ್ಳೀಕರ್ ಅವರ ಆಗಂತುಕ ಸೇರಿದಂತೆ ಒಂದೆರಡು ಚಿತ್ರಗಳಿಗೂ ಕೆಲಸ ಮಾಡಿ ದೇಸಾಯಿ ಅನುಭವ ಗಿಟ್ಟಿಸಿಕೊಂಡಿದ್ದರು. ಆ ನಂತರ ಸ್ವತಂತ್ರ ನಿರ್ದೇಶಕರಾಗಿ ಅವರು ಶುರು ಮಾಡಿದ ಚಿತ್ರ ತರ್ಕ. ಶಂಕರ್ ನಾಗ್, ದೇವರಾಜ್, ವನಿತಾ ವಾಸು ಮುಖ್ಯ ಭೂಮಿಕೆಯಲ್ಲಿದ್ದ ತರ್ಕ ಸಿನಿಮಾ ಥ್ರಿಲ್ಲರ್ ಜಾನರಿನಲ್ಲಿ ಮೂಡಿ ಬಂದಿತ್ತು. ೧೯೮೯ರಲ್ಲಿ ಬಿಡುಗಡೆಯಾದ ಈ ಚಿತ್ರ ನೂರು ದಿನ ಯಶಸ್ವೀ ಪ್ರದರ್ಶನ ನೀಡುವ ಮೂಲಕ ದೇಸಾಯಿಯವರನ್ನು ನಿರ್ದೇಶಕರಾಗಿ ನೆಲೆ ನಿಲ್ಲುವಂತೆ ಮಾಡಿತ್ತು. ಅದು ಹೇಳಿಕೇಳಿ ಕೌಟುಂಬಿಕ ಸಿನಿಮಾಗಳು ಮಾತ್ರವೇ ತೆರೆ ಕಾಣುತ್ತಾ ಪ್ರೇಕ್ಷಕರೂ ಅದಕ್ಕೇ ಒಗ್ಗಿಕೊಂಡಿದ್ದ ಕಾಲ. ಅಂಥಾ ಘಳಿಗೆಯಲ್ಲಿ ಬೇರೆ ಥರದ ಕಥೆ ಹೇಳ ಹೊರಡಲು ನಿಜಕ್ಕೂ ಸಾಹಸೀ ಮನಸ್ಥಿತಿ ಬೇಕು. ಅಂಥಾದ್ದೊಂದು ಸಾಹಸವೇ ದೇಸಾಯಿಯವರಿಗೆ ಮೊದಲ ಹೆಜ್ಜೆಯಲ್ಲಿಯೇ ಪುಷ್ಕಳ ಗೆಲುವೊಂದನ್ನು ತಂದು ಕೊಟ್ಟಿತ್ತು!
ಆ ನಂತರ ದೇಸಾಯಿ ಎರಡನೇ ಚಿತ್ರವಾಗಿ ಶುರು ಮಾಡಿದ್ದು ಉತ್ಕರ್ಷ ಚಿತ್ರವನ್ನು. ೧೯೯೦ರಲ್ಲಿ ತೆರೆ ಕಂಡಿದ್ದ ಉತ್ಕರ್ಷ ಕೂಡಾ ಆ ಕಾಲಕ್ಕೆ ಮಾತ್ರವಲ್ಲದೇ ಈ ಕಾಲಕ್ಕೂ ಪೂರಕವಾಗಿ ಹೊಸಾ ಪ್ರಯೋಗಗಳೊಂದಿಗೆ ಮೂಡಿ ಬಂದಿತ್ತು. ಒಂದರ್ಥದಲ್ಲಿ ಅದು ಸಿದ್ಧ ಸೂತ್ರಗಳನ್ನು ಮುರಿದ ಸಿನೆಮಾ. ಆ ಕಾಲ ಘಟ್ಟದಲ್ಲಿಯೇ ದೇಸಾಯಿ ಮೂವತ್ತು ವರ್ಷ ಮುಂದೆ ಹೋಗಿ ಯೋಚಿಸಿ ಇಡೀ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಹಾಡು, ಫೈಟುಗಳಿಲ್ಲದ ಉತ್ಕರ್ಷ ಪ್ರೇಕ್ಷಕರ ಪಾಲಿಗೆ ಹೊಸಾ ಅನುಭೂತಿಯನ್ನೇ ನೀಡಿತ್ತು. ಇದು ದೇಸಾಯಿಯವರ ಪಾಲಿಗೆ ಎರಡನೇ ಗೆಲುವನ್ನೂ ತಂದು ಕೊಟ್ಟಿತ್ತು. ಹೀಗೆ ಒಂದರ ಹಿಂದೊಂದರಂತೆ ಎರಡು ಗೆಲುವು ಕಂಡ ದೇಸಾಯಿಯವರು ಆ ನಂತರ ಹೊರಳಿಕೊಂಡಿದ್ದು ಆಕ್ಷನ್ ಕಥಾನಕದತ್ತ.
ದೇಸಾಯಿ ಮೊದಲು ನಿರ್ದೇಶನ ಮಾಡಿದ ಆಕ್ಷನ್ ಚಿತ್ರ ಸಂಘರ್ಷ. ಅದು ಸಾಹಸ ಸಿಂಹ ವಿಷ್ಣುವರ್ಧನ್ ಜೊತೆಗಿನ ಅವರ ಮೊದಲ ಚಿತ್ರವೂ ಹೌದು. ಈ ಚಿತ್ರವೂ ತೆರೆ ಕಂಡು ಗೆಲುವು ದಾಖಲಿಸಿತ್ತು. ಅದೇ ಬಿಸಿಯಲ್ಲಿ ದೇಸಾಯಿ ನಿಷ್ಕರ್ಶ ಚಿತ್ರ ನಿರ್ದೇಶನ ಮಾಡಿದ್ದರು. ಅದನ್ನೂ ಪ್ರೇಕ್ಷಕರು ಪ್ರೀತಿಯಿಂದಲೇ ಗೆಲ್ಲಿಸಿದ್ದರು. ಈ ಗೆಲುಚವಿನ ಯಾನದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಆಕ್ಷನ್ ಓರಿಯಂಟೆಡ್ ಕಥೆಗಳನ್ನು ಹೇಳಿದ್ದ ಸುನೀಲ್ ಕುಮಾರ್ ದೇಸಾಯಿ ಆ ನಂತರ ಪ್ರೇಮ ಕಥನದತ್ತ ಆಕರ್ಷಿತರಾಗಿದ್ದರು. ಅದರ ಫಲವಾಗಿ ಮೂಡಿ ಬಂದಿದ್ದು ಬೆಳದಿಂಗಳ ಬಾಲೆ. ಇದೂ ಕೂಡಾ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾಗಿ ದಾಖಲಾಗುವಂಥಾ ಹೊಸಾ ಪ್ರಯೋಗ ಹೊಂದಿದ್ದ ಚಿತ್ರ. ಇದರಲ್ಲಿ ನಾಯಕಿ ಇರಲಿಲ್ಲ. ನಾಯಕಿ ಎಂಬುದು ನಾಯಕನ ಕಲ್ಪನೆಯಾಗಿ ದೇಸಾಯಿ ಕಟ್ಟಿ ಕೊಟ್ಟಿದ್ದರು. ಯಂಡಮೂರಿ ವೀರೇಂದ್ರನಾಥರ ಕಥೆಯಾಧಾರಿತವಾದ ಈ ಚಿತ್ರ ಜನರಿಗೆ ಹೊಸಾ ಬಗೆಯ ಫೀಲ್ ಕೊಡುವಲ್ಲಿ ಯಶ ಕಂಡಿತ್ತು. ಪ್ರೇಕ್ಷಕರೆಲ್ಲ ಎಂಜಾಯ್ ಮಾಡುತ್ತಲೇ ದೇಸಾಯಿಯವರ ಈ ಚಿತ್ರವನ್ನು ಗೆಲ್ಲಿಸಿ ಕೊಟ್ಟಿದ್ದರು.
ಇದಾದ ನಂತರದಲ್ಲಿ ಎರಡನೇ ತಲೆಮಾರಿನ ನಟರತ್ತಲೂ ಚಿತ್ರ ಹರಿಸಿದ್ದ ದೇಸಾಯಿ ತಿರುಗಿಕೊಂಡಿದ್ದು ಕಮರ್ಶಿಯಲ್ ಜಾಡಿನತ್ತ. ಆ ಜಾಡಿನಲ್ಲಿಯೇ ಮೂಡಿ ಬಂದ ಚಿತ್ರ ನಮ್ಮೂರ ಮಂದಾರ ಹೂವೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮೇಶ್ ಅರವಿಂಣದ್ ಮತ್ತು ಪ್ರೇಮಾ ನಟಿಸಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದೀಗ ಇತಿಹಾಸ. ಆ ಕಾಲಕ್ಕೆ ರಮೇಶ್ ತಮಿಳು ಚಿತ್ರರಂಗಕ್ಕೆ ಗುಳೇ ಹೋಗಿದ್ದರು. ಅವರನ್ನು ವಾಪಾಸು ಕರೆತಂದ ದೇಸಾಯಿ ಈ ಚಿತ್ರದ ಬಳಿಕ ನೀವುಇ ಮತ್ತೆ ಚೆನೈನತ್ತ ಹೋಗೋ ಪ್ರಮೇಯ ಬರೋದಿಲ್ಲ ಅಂದಿದ್ದರಂತೆ. ಅದಕ್ಕೆ ಸರಿಯಾಗಿಯೇ ಈ ಚಿತ್ರ ಹಿಟ್ ಆಗಿತ್ತು. ರಮೇಶ್ ಪಾಲಿಗೂ ಹೊಸಾ ಅವಕಾಶಗಳು ಅರಸಿ ಬಂದು ಅವರು ಕನ್ನಡದಲ್ಲಿಯೇ ನೆಲೆ ನಿಲ್ಲುವಂತಾಗಿತ್ತು.
ಆ ನಂತರ ದೇಸಾಯಿ ನಿರ್ದೇಶನ ಮಾಡಿದ್ದ ಪ್ರೇಮರಾಗ ಹಾಡು ಗೆಳತಿ ಚಿತ್ರ ನಿರೀಕ್ಷಿತ ಮಟ್ಟಕ್ಕೆ ಗೆಲುವು ಕಾಣಲಿಲ್ಲ. ಬಳಿಕ ಸುದೀಪ್ ನಾಯಕನಾಗಿ ನಟಿಸಿದ್ದ ಸ್ಪರ್ಶ ಎಂಬ ಲವ್ ಸ್ಟೋರಿ ಆಧಾರಿತ ಚಿತ್ರ ದೇಸಾಯಿಯವರನ್ನು ಮತ್ತೆ ಗೆಲುವಿನ ಟ್ರಯಾಕಿಗೆ ತಂದು ನಿಲ್ಲಿಸಿತ್ತು. ಸುದೀಪ್ ಅವರ ಪಾಲಿಗೂ ಈ ಚಿತ್ರ ಹೊಸಾ ಸಾಧ್ಯತೆಗಳನ್ನು ಕಾಣಿಸಿತ್ತು. ಅದಾದ ಬಳಿಕ ವಿಷ್ಣುವರ್ಧನ್ ಅವರಿಗಾಗಿ ಪರ್ವ ಚಿತ್ರ ಮಾಡಿದ್ದರು. ಆದರೆ ಪ್ರಯೋಗಾತ್ಮಕ ಕಥೆ ಹೊಂದಿದ್ದ ಆ ಚಿತ್ರವನ್ನು ಜನರ್ಯಾಕೋ ಅರಗಿಸಿಕೊಳ್ಳಲಿಲ್ಲ. ಅದಾದ ನಂತರ ರಮ್ಯ ಚೈತ್ರ ಕಾಲದ ಮೂಲಕ ಒಂದು ಮಟ್ಟದ ಗೆಲುವು ದಾಖಲಿಸಿದ ದೇಸಾಯಿ ಇದೀಗ ಉದ್ಗರ್ಷ ಚಿತ್ರದ ಮೂಲಕ ಹೊಸಾ ಪೀಳಿಗೆಯನ್ನು ಮುಖಾಮುಖಿಯಾಗಿದ್ದಾರೆ.
ಉದ್ಘರ್ಷ ಚಿತ್ರಕ್ಕಾಗಿ ದೇಸಾಯಿ ಮೂರು ವರ್ಷಗಳಿಂದ ನಿರಂತರವಾಗಿ ತಯಾರಿ ಮಾಡಿಕೊಂಡಿದ್ದರಂತೆ. ಈ ಚಿತ್ರ ಶುರುವಾಗಿ ಒಂದು ವರ್ಷದ ನಂತರ ಪೂರ್ಣಗೊಂಡಿದೆ. ಈ ನಡುವೆ ನಾನಾ ಅಡೆತಡೆಗಳು ಬಂದು ಒಂದು ಹಂತದಲ್ಲಿ ಚಿತ್ರ ನಿಂತೇ ಹೋಗಿತ್ತು. ಆಗ ಆಪತ್ಬಾಂಧವನಂತೆ ಬಂದು ಮತ್ತೆ ಚಿತ್ರ ಶುರುವಾಗುವಂತೆ ಮಾಡಿದವರು, ನಿರ್ಮಾಪಕರಾಗಿ ದೇಸಾಯಿಯವರಿಗೆ ಹೆಗಲಾದವರು ದೇವರಾಜ್. ಈ ಚಿತ್ರವೀಗ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿಯೂ ಅಣಿಗೊಂಡಿದೆ. ಇದೇ ಡಿಸೆಂಬರ್ ಅಥವಾ ಜನವರಿ ತಿಂಗಳಾರಂಭದಲ್ಲಿಯೇ ಉದ್ಘರ್ಷ ತೆರೆ ಕಾಣಲಿದೆ.
ಕನ್ನಡ ಚಿತ್ರರಂಗ ಒಂದೇ ಬಗೆಯ ಚಿತ್ರಗಳಲ್ಲಿ ಸುತ್ತಾಡುತ್ತಿದ್ದಾಗಲೇ ಅದಕ್ಕೊಂದು ಹೊಸಾ ಹರಿವು ಕೊಟ್ಟವರು ಸುನೀಲ್ ಕುಮಾರ್ ದೇಸಾಯಿ. ಅವರು ಆ ಕಾಲದಲ್ಲಿಯೇ ನಿರ್ದೇಶನ ಮಾಡಿದ್ದ ತರ್ಕ ಮತ್ತು ಉತ್ಕರ್ಷದಂಥಾ ಚಿತ್ರಗಳು ಇಂದಿಗೂ ಹಳತಾಗಿಲ್ಲ. ಈವತ್ತಿನ ಹೊಸಾ ತಂತ್ರಜ್ಞರ ಪಾಲಿಗೂ ದೇಸಾಯಿ ಹೊಸಬರಂತೆಯೇ ಕಾಣಿಸುತ್ತಾರೆಂಬುದು ಅವರೊಳಗಿನ ನಿಜವಾದ ಶಕ್ತಿ. ಅದರ ಸಂಗಮದಂತೆ ಮೂಡಿ ಬಂದಿರೋ ಚಿತ್ರ ಉದ್ಘರ್ಷ.
ಇನ್ನು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಆತ್ಮೀಯ ಬಳಗದಲ್ಲಿದ್ದವರು, ನಂಬುಗೆಯ ವ್ಯಕ್ತಿಯಾಗಿದ್ದವರು ದೇಸಾಯಿ. ಅವರು ನಾಯಕರಾಗಿದ್ದ ಸಂಘರ್ಷ ಚಿತ್ರವನ್ನೂ ದೇಸಾಯಿ ನಿರ್ದೇಶನ ಮಾಡಿದ್ದರಲ್ಲಾ? ಅದು ನಿರೀಕ್ಷಿತ ಗೆಲುವು ಕಾಣದಿದ್ದಾಗ ಮತ್ತೊಂದು ಚಿತ್ರ ಮಾಡೋಣ ಅಂದಿದ್ದೇ ವಿಷ್ಣು ಹಿಂದೆ ಮುಂದೆ ನೋಡದೆ ಒಪ್ಪಿಕೊಂಡಿದ್ದರಂತೆ. ಈತ ಏನೋ ಮಾಡುತ್ತಾನೆಂಬ ನಂಬಿಕೆ ದೇಸಾಯಿಯವರ ಮೇಲೆ ವಿಷ್ಣುವರ್ಧನ್ ಅವರಿಗಿತ್ತು.
ಹೀಗೆ ಎಂಭತ್ತರ ದಶಕದಿಂದ ಯಶಸ್ಸಿನ ಓಟ ಆರಂಭಿಸಿ, ಅಲ್ಲಲ್ಲಿ ಒಂದಷ್ಟು ಏಳು ಬೀಳುಗಳನ್ನೂ ಅನುಭವಿಸಿ ಇಷ್ಟು ದೂರ ಸಾಗಿ ಬಂದಿರುವವವರು ಸುನೀಲ್ ಕುಮಾರ್ ದೇಸಾಯಿ. ಅವರೀಗ ಉದ್ಘರ್ಷ ಚಿತ್ರದ ಮೂಲಕ ಮತ್ತೆ ಗೆಲುವಿನ ಪರ್ವವೊಂದನ್ನು ಆರಂಭಿಸೋ ಯುವ ಉತ್ಸಾಹದಿಂದಿದ್ದಾರೆ.
#
No Comment! Be the first one.