ಕಥೆ-1
ಪುಟ್ಟ ಮಗು, ಸುಂದರವಾದ ಹೆಂಡತಿ, ತುಂಬು ಕುಟುಂಬ – ಎಲ್ಲವನ್ನೂ ಬಿಟ್ಟು ಓಡಿ ಹೋಗಿ ಮುಂಬೈ ಸೇರಿದವನು. ಏಳು ವರ್ಷಗಳ ನಂತರ ಮತ್ತೆ ಮನೆಗೆ ಆಗಮಿಸುತ್ತಿದ್ದಾನೆ. ಮನೆಮಂದಿಯೆಲ್ಲಾ ಬಂದವನನ್ನು ಆರತಿ ಮಾಡಿ ಒಳಗಡೆ ಕರೆಡುಕೊಳ್ಳಲು ಕಾಯುತ್ತಾ ನಿಂತಿದ್ದಾರೆ. ಈಗ ಬಂತು ಆಗ ಬಂತು ಅಂತಾ ಕಾದವರ ಮುಂದೆ ಕಡೆಗೂ ಟ್ಯಾಕ್ಸಿ ಬಂದು ನಿಲ್ಲುತ್ತದೆ. ‘ಅಪ್ಪ ಬರ್ತಾರೆ, ಗಂಡ ಬರ್ತಾನೆ ಅಂತಾ ಕಾದವರ ಎದುರು ಪ್ರತ್ಯಕ್ಷವಾಗೋದು ಮೈತುಂಬ ಸೀರೆಯುಟ್ಟ, ಒಪ್ಪವಾಗಿ ಬಾಚಿದ ತಲೆಯ, ಹಣೆ ಕುಂಕುಮ, ಬಣ್ಣ ಮೆತ್ತಿದ ತುಟಿಗಳ ದೊಡ್ಡ ಗಾತ್ರದ ಹೆಂಗಸು!
ಊರುಬಿಟ್ಟವನು ಲಿಂಗಪರಿವರ್ತನೆ ಮಾಡಿಸಿಕೊಂಡು ಮಂಗಳಮುಖಿಯಾಗಿರುತ್ತಾನೆ. ಹಾಗೆ ಮಾರ್ಪಾಟು ಹೊಂದಿದವನು ತನ್ನವರನ್ನು ನೋಡಲು ಬಂದು ನಿಂತಿರುತ್ತಾನೆ.
ಕಥೆ-2
ಅವಳು ಮನೆಯವರ ಇಷ್ಟದಂತೆ ಮದುವೆಯಾದ ಹುಡುಗಿ. ಗಂಡ ಸಿನಿಮಾ ಹೀರೋ ಆಗಬಯಸಿದವನು. ನಟನೆ ಕಲಿಕೆಗಾಗಿ ಎರಡು ಗಂಟೆ ಹೊರಹೋಗಿರುತ್ತಾನೆ. ಆ ಸಂದರ್ಭದಲ್ಲೇ ಹುಡುಗಿಯ ಮಾಜಿ ಪ್ರಿಯಕರ ಕಾಲ್ ಮಾಡುತ್ತಾನೆ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡವನಂತೆ ಮಾತಾಡುತ್ತಾನೆ. ಎಷ್ಟಾದರೂ ಕಾಲೇಜು ಲವ್ವು, ಹಳೆಯದೆಲ್ಲಾ ನೆನಪಾದಂತಾಗಿ “ಚಿಂತೆ ಮಾಡಬೇಡ. ನನ್ನ ಮನೆಗೆ ಬಾ.. ಗಂಡ ಹೊರಗೆ ಹೋಗಿದ್ದಾನೆ. ಅವನು ಬರುವಷ್ಟರಲ್ಲಿ ನಿನ್ನನ್ನು ಸಮಾಧಾನಿಸಿ ಬಿಡುತ್ತೇನೆ ಎಂದು ಕರೆಯುತ್ತಾಳೆ. ಇಷ್ಟೆಲ್ಲಾ ಫೋನ್ ಸಂಭಾಷಣೆಯ ನಂತರ ದೃಶ್ಯ ಶುರುವಾಗುತ್ತದ. ಮಂಚದ ಮೇಲಿನ ನರಳಾಟದ ಸದ್ದು ನಿಲ್ಲುತ್ತದೆ. ಸಮೃದ್ಧವಾದ್ದೊಂದು ಸಂಭೋಗದ ಸುಖ ನೀಡಿದ ತೃಪ್ತಿ ಈಕೆಯದ್ದು. ಮನೋವ್ಯಾಕುಲದಿಂದ ಕಂಗಾಲಾಗಿದ್ದವನು ಹಾಗೇ ಹಾಸಿಗೆಗೆ ಒರಗುತ್ತಾನೆ. ಇವಳು ಮತ್ತೆ ಎಬ್ಬಿಸೋ ಪ್ರಯತ್ನ ಮಾಡುತ್ತಾಳೆ. ಅತಿಯಾದ ದುಃಖದಲ್ಲಿದ್ದವನಿಗೆ ಸುಖದ ತೀವ್ರತೆ ತಡೆದುಕೊಳ್ಳಲು ಸಾಧ್ಯವಾಗದ ಕಾರಣವೋ ಏನೋ? ಚೆಲ್ಲಾಟ ಮುಗಿಸಿದವನು ಹಾಗೇ ಉಸಿರುಚೆಲ್ಲಿ ಮತ್ತೆಂದೂ ಅಲ್ಲಾಡದಂತೆ ಮಲಗಿಬಿಟ್ಟಿರುತ್ತಾನೆ. ಅಪಾರ್ಟ್ಮೆಂಟಿನ ಆ ರೂಮಿನಿಂದ ಇಣುಕಿದರೆ ಗಂಡ ಕ್ಲಾಸು ಮುಗಿಸಿ ಮನೆಗೆ ವಾಪಾಸು ಬರುತ್ತಿರುತ್ತಾನೆ…
ಕಥೆ-3
ಸ್ಲಂನಂಥಾ ಪ್ರದೇಶ. ನಾಲ್ಕು ಜನ ಹುಡುಗರು ಶಾಲೆಯ ನೆಪ ಹೇಳಿ ಮತ್ತೊಬ್ಬ ಗೆಳೆಯನ ಮನೆಯಲ್ಲಿ ಪಾರ್ಟಿ ಅರೇಂಜು ಮಾಡಿಕೊಳ್ಳುತ್ತಾರೆ. ದೇವರ ಸಿನಿಮಾ ನೋಡೋದು ಆ ಕೂಟದ ಮುಖ್ಯ ಉದ್ದೇಶ. ಮುಂಬಾಗಿಲಿನಿಂದ ಬೀಗ ಹಾಕಿ, ಕೀಲಿಯನ್ನು ಪಕ್ಕದ ಮನೆಗೆ ಕೊಟ್ಟು, ಬ್ಯಾಕ್ ಡೋರಿಂದ ಎಂಟ್ರಿ ಕೊಟ್ಟು ಮತ್ತೆ ಎಲ್ಲರೂ ಮನೆ ಒಳ ಸೇರುತ್ತಾರೆ. ಬರೋದಾರಿಯಲ್ಲಿ ಸಿಡಿ ಅಂಗಡಿಯಿಂದ ದೇಹವಿಜ್ಞಾನಕ್ಕೆ ಸಂಬಂಧಿಸಿದ ಸಿಡಿಯನ್ನು ತಂದಿರುತ್ತಾರೆ. ಅದನ್ನು ಪ್ಲೇಯರಿಗೆ ಹಾಕುತ್ತಾರೆ. ದೃಶ್ಯ ಆರಂಭವಾಗುತ್ತದೆ. ಸೆರಗು ಜಾರಿಸಿದವಳ ಬೆನ್ನ ಮೇಲೆ ಕಡುಗಪ್ಪು ಮಚ್ಚೆ. ಹುಡುಗರ ಮುಖದಲ್ಲಿ ಆಶ್ಚರ್ಯ, ಗಾಬರಿ. ಆ ಸೆಕ್ಸು ಸಿನಿಮಾ ನೋಡಲು ಬಂದ ನಾಲ್ಕು ಜನ ಹುಡುಗರ ಪೈಕಿ ಒಬ್ಬನಂತೂ ಕೋಪದಿಂದ ಕೈಲಿದ್ದ ಬಾಟಲಿಯನ್ನು ಎಸೆದು ಟೀವಿ ಒಡೆದುಹಾಕುತ್ತಾನೆ. ಯಾಕೆಂದರೆ, ಟೀವಿಯಲ್ಲಿ ಪ್ರತ್ಯಕ್ಷವಾದವವಳು ಅವನ ತಾಯಿ!
– ಹೀಗೆ ಬಿಡಿಬಿಡಿಯಾಗಿ ತೆರೆದುಕೊಳ್ಳುವ ಮೂರು ವಿಚಿತ್ರ ಕಥೆಗಳು, ಒಂದಕ್ಕೊಂದು ಸೂತ್ರ ಸಂಬಂಧವಿಲ್ಲದಂತೆ ಬಂದು ಹೋಗುತ್ತಿರುತ್ತವೆ. ಕಡೆಗೆ ಮೂರೂ ಕತೆಗಳು ಒಂದೇ ಬಿಂದುವಿನಲ್ಲಿ ಕೂಡಿಕೊಳ್ಳುತ್ತವೆ. ಈ ತಮಿಳು ಸಿನಿಮಾದ ಹೆಸರು ಸೂಪರ್ ಡಿಲಕ್ಸ್.
ಇಲ್ಲಿ ಸ್ಟಾರ್ ನಟ ವಿಜಯ್ ಸೇದುಪತಿ ಮಂಗಳಮುಖಿಯಾಗಿ ನಟಿಸಿದ್ದಾನೆ. ರಮ್ಯಾ ಕೃಷ್ಣ ವಯಸ್ಕರ ಸಿನಿಮಾದ ನಾಯಕಿಯಾಗಿಯೂ, ವಯಸ್ಸಿಗೆ ಬಂದ ಹುಡುಗನ ತಾಯಿಯಾಗಿಯೂ, ಖ್ಯಾತ ನಟಿ ಸಮಂತಾ ಗಂಡ ಇಲ್ಲದ ಸಮಯದಲ್ಲಿ ಸ್ನೇಹಿತನನ್ನು ಕರೆದು ಮಲಗಿಸಿಕೊಳ್ಳುವಂತಾ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಾಗಿದ್ದಿದ್ದರೆ ಇಂಥಾ ಸಿನಿಮಾವನ್ನು ಮಾಡಲು ಸ್ಟಾರ್ಗಳು ಇಮೇಜು ಅಡ್ಡ ಬರುತ್ತದೆ ಅನ್ನುತ್ತಿದ್ದರೇನೋ. ಆದರೆ ಸೂಪರ್ ಡಿಲಕ್ಸ್ನಲ್ಲಿ ಪಾತ್ರ ನಿಭಾಯಿಸಿರುವ ಪ್ರತಿಯೊಬ್ಬರೂ ಇಮೇಜನ್ನು ಕಿತ್ತೆಸೆದು ಅಪ್ಪಟ ಕಲಾವಿದರಂತೆ ಪಾತ್ರ ಪೋಷಿಸಿದ್ದಾರೆ.
ತ್ಯಾಗರಾಜನ್ ಕುಮಾರರಾಜ ನಿರ್ದೇಶನದ ಈ ಸಿನಿಮಾ ನೋಡುಗರನ್ನು ಬೇರೊಂದು ಜಗತ್ತಿಗೆ ಕರೆದುಕೊಂಡು ಹೋಗಿ ನಿಲ್ಲಿಸಿಬಿಡುತ್ತದೆ.
No Comment! Be the first one.