ತಮಿಳು ನಟ ಸೂರ್ಯ ಅಭಿನಯದ ‘ಎನ್ಜಿಕೆ’ ತಮಿಳು ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಸೆಲ್ವರಾಘವನ್ ನಿರ್ದೇಶನದ ಈ ಚಿತ್ರದ ಟ್ರೈಲರ್ ನಟನ ಅಭಿಮಾನಿ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಅವರು ಚಿತ್ರದ ಬಿಡುಗಡೆ ಎದುರುನೋಡುತ್ತಿದ್ದಾರೆ. ಈ ಮಧ್ಯೆ ಅವರ ನೂತನ ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ. ಇದು ಸೂರ್ಯ ಅಭಿನಯದ 38ನೇ ಚಿತ್ರವಾಗಲಿದೆ. ಇದೊಂದು ಬಯೋಪಿಕ್ ಎನ್ನಲಾಗಿದ್ದು, ಸೂರ್ಯ ಅವರ ‘2ಡಿ ಎಂಟರ್ಟೇನ್ಮೆಂಟ್’ ಬ್ಯಾನರ್ನಲ್ಲೇ ಚಿತ್ರ ನಿರ್ಮಾಣವಾಗಲಿದೆ ಎನ್ನುವುದು ವಿಶೇಷ.
‘ಇರುಧಿ ಸುತ್ರು’ ತಮಿಳು ಸಿನಿಮಾ ಖ್ಯಾತಿಯ ಸುಧಾ ಕೊಂಗಾರಾ ಅವರು ಸೂರ್ಯ ನಟನೆಯ ಬಯೋಪಿಕ್ ನಿರ್ದೇಶಿಸುವ ಸಾಧ್ಯತೆಗಳಿವೆ. ಭಾರತೀಯ ಸೈನ್ಯದ ಮಾಜಿ ಕ್ಯಾಪ್ಟನ್, ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆಯ ಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಜೀವನ-ಸಾಧನೆಯ ಚಿತ್ರವಿದು ಎಂದು ಹೇಳಲಾಗುತ್ತಿದೆ. ಚಿತ್ರದ ಬಗ್ಗೆ ಅಧಿಕೃತ ಘೋಷಣೆಯಿನ್ನೂ ಹೊರಬೀಳಬೇಕು. ಈ ಮಧ್ಯೆ ಸೂರ್ಯ ‘ಕಾಪ್ಪಾನ್’ ತಮಿಳು ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರದಲ್ಲಿ ಅವರು ಎನ್ಎಸ್ಜಿ ಕಮ್ಯಾಂಡೋ ಪಾತ್ರದಲ್ಲಿ ನಟಿಸುತ್ತಿದ್ದು, ಮೋಹನ್ ಲಾಲ್ ಮತ್ತು ಆರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ.
No Comment! Be the first one.