ಕನ್ನಡದ ಬಹುತೇಕ ಹೆಸರಾಂತ ಸಾಹಿತಿಗಳ, ಮೌಲಿಕ ಕೃತಿಗಳನ್ನು ತೆರೆದು, ಒಂದು ಪುಟ ತಿರುವಿದರೆ, ಆರಂಭದ ಟೆಕ್ನಿಕಲ್ ಪೇಜಿನಲ್ಲಿ ಮುದ್ರಣ : ‘ಸ್ವ್ಯಾನ್ ಪ್ರಿಂಟರ‍್ಸ್’ ಎಂದಿರುತ್ತದೆ. ಗುಣಮಟ್ಟದ ಕಾರಣಕ್ಕೇ ಹೆಸರಾಗಿರುವ ಈ ಮುದ್ರಣಾಲಯದ ಮುಂದಾಳು ಕೃಷ್ಣಮೂರ್ತಿ. ಸಾಹಿತ್ಯವಲಯದಲ್ಲಿ ಸ್ವ್ಯಾನ್ ಕಿಟ್ಟಿ ಅಂತಲೇ ಫೇಮಸ್ಸು. ಪ್ರಿಂಟಿಂಗ್ ಉದ್ಯಮದ ಜೊತೆಗೆ ಹಳೆಯ ಕ್ಯಾಮೆರಾಗಳು, ಆರಂಭ ಕಾಲದ ರೇಡಿಯೋಗಳು, ಪುರಾತನ ದೀಪಗಳು. ಹಳೇ ಕಾಯಿನ್ಸು – ಇವೆಲ್ಲವನ್ನೂ ಸಂಗ್ರಹಿಸುವ ಹವ್ಯಾಸವಿಟ್ಟುಕೊಂಡಿದ್ದಾರೆ. ಆರ್ಡರ್ ಕೊಟ್ಟ ಪುಸ್ತಕಗಳನ್ನು ಕೃಷ್ಣಮೂರ್ತಿ ಎಷ್ಟು ಆಕರ್ಷಕವಾಗಿ ಮುದ್ರಿಸಿಕೊಡುತ್ತಾರೋ, ಅಷ್ಟೇ ಚೆಂದಗೆ ಬರೆಯಬಲ್ಲರು. ಡಾ.ರಾಜ್ ಕುಮಾರ್ ಬದುಕಿದ್ದಾಗ ಅವರೊಟ್ಟಿಗೊಂದು ಫೋಟೋ ತೆಗೆಸಿಕೊಳ್ಳಬೇಕು ಅಂತಾ ಎಷ್ಟೋ ಜನ ಕನಸು ಕಂಡಿದ್ದರಲ್ಲಾ? ಅವರುಗಳಲ್ಲಿ ಕೃಷ್ಣಮೂರ್ತಿ ಕೂಡಾ ಒಬ್ಬರು. ಸ್ವತಃ ಸ್ವ್ಯಾನ್ ಕೃಷ್ಣಮೂರ್ತಿ ಅಣ್ಣಾವ್ರ ಕುರಿತಾಗಿ ತಮ್ಮ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ…

ಕರ್ನಾಟಕ ರತ್ನ ,ಡಾ. ರಾಜಕುಮಾರ್ ಅವರಿಗೆ ಕನ್ನಡನಾಡಿನಲ್ಲಿ ಇರುವ ಅಸಂಖ್ಯಾತ  ಅಭಿಮಾನಿಗಳಲ್ಲಿ ನಾನು ಒಬ್ಬ . ಅವರನ್ನು ಒಮ್ಮೆ ಹತ್ತಿರದಿಂದ ನೋಡಿ, ಸ್ಪರ್ಶಿಸಿ,  ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆ ಎಲ್ಲರಂತೆ ನನ್ನಲ್ಲೂ ಇತ್ತು. ಚಿಕ್ಕವಯಸ್ಸಿನಲ್ಲಿ ಅವರನ್ನು ಹತ್ತಿರದಿಂದ ನೋಡುವ ಅವಕಾಶ ಒದಗಿ ಬಂದಿತ್ತಾದರೂ, ಫೋಟೋ ತೆಗೆಸಿಕೊಳ್ಳುವ ಆಸೆ ಈಡೇರಲೇ ಇಲ್ಲ…

೧೯೮೮ ರಲ್ಲಿ ನಾನು ಚಿತ್ರದುರ್ಗ ದಲ್ಲಿ ಏಳನೇ ತರಗತಿ ಓದುತ್ತಿದ್ದಾಗ ನಮ್ಮ ಅಜ್ಜನ ಮನೆ ಕೆ.ಇ.ಬಿ ಕ್ವಾಟ್ರಸ್  ಮುಖ್ಯ ದ್ವಾರದ ಎದುರಿಗೆ ಇತ್ತು . ಕೆ.ಇ.ಬಿ ಕ್ವಾಟ್ರಸ್ ಬಹಳ ವಿಶಾಲವಾಗಿದ್ದು ಪ್ರತಿ ಮನೆಯ ಮುಂದೆ ೨ – ೩ ಮರಗಳು, ಸಾಲು ಮನೆಗಳ ಮುಂದೆ ಒಂದು ದೊಡ್ಡ ಮೈದಾನ ಹಾಗೂ ಒಂದು ಬದಿ ಸುಸಜ್ಜಿತವಾದ ಪ್ರವಾಸಿ ಮಂದಿರವು (ಉuesಣ house) ನ್ಯಾಷನಲ್ ಹೈವೇಗೆ ಹೊಂದಿಕೊಂಡಂತೆ ಇತ್ತು. ಕ್ವಾಟ್ರಸ್ ನಲ್ಲಿ  ಮರಗಳು ಜಾಸ್ತಿ ಇದ್ದಿದ್ದರಿಂದ ಸುತ್ತಮುತ್ತಲಿನ ಮಕ್ಕಳು ಎಲ್ಲಾ ಸೇರಿ ಅಲ್ಲೇ ನಮ್ಮ ಮಂಗಾಟಗಳನ್ನು ಆಡುತ್ತಿದ್ದೆವು . ಒಂದು ದಿನ ಹೀಗೆ ಆಟ ಆಡುವಾಗ ಗೆಸ್ಟ್ ಹೌಸ್ ನ ಮೇಟಿಯ ಮಗ ನಮ್ಮ ಸ್ನೇಹಿತ ಓಡಿಬಂದು ನಮ್ಮ ಗೆಸ್ಟ್ ಹೌಸ್ ಗೆ ಡಾ. ರಾಜಕುಮಾರ್ ಬಂದಿದ್ದಾರೆ ಎಂದು ಹೇಳಿದ. ಸುಳ್ಳು ಹೇಳಬೇಡ  ಹೋಗಾ..ಎಂದು ಅವನ ಮಾತು ಯಾರು ನಂಬದೇ ನಮ್ಮ ಪಾಡಿಗೆ ನಾವು ಆಡಿಕೊಂಡಿದ್ದೆವು . ನಂತರ ಅವನು  ಆಣೆ ಪ್ರಮಾಣ ಹಾಕಿದಮೇಲೆ ನಂಬಿದೆವು. ಆ ವಯಸ್ಸಿಗೆ ಅವರ ಕಟ್ಟಾ ಅಭಿಮಾನಿಗಳಾಗಿದ್ದ ನಮಗೆ ಅವರನ್ನು ಹತ್ತಿರದಿಂದ ನೋಡುವ ಆಸೆ ಹೆಚ್ಚಾಯಿತು. ಎಲ್ಲರೂ ಗುಂಪು ಕಟ್ಟಿಕೊಂಡು ಗೆಸ್ಟ್ ಹೌಸ್ ನ ಬಳಿಗೆ ಹೋದರೆ ಅಲ್ಲಿ ಕಾವಲಿದ್ದ ಪೊಲೀಸ್.. ಏನ್ರೋ, ಯಾಕೋ ಈ ಕಡೆ ಬಂದ್ರೀ ಎಂದು ಗದರಿದರು .ಅವರನ್ನು ನೋಡಿ ಹೆದರಿದೆವಾದರೂ ಧೈರ್ಯ ಮಾಡಿ ಅಣ್ಣಾವ್ರನ್ನ ನೋಡಬೇಕು ಎಂದು ಮೆಲುದನಿಯಲ್ಲೇ ಕೇಳಿಕೊಂಡೆವು. ತಕ್ಷಣ ಅವರು ಯಾರು ಹೇಳಿದ್ದು ನಿಮಗೆ, ಅಣ್ಣಾವ್ರು ಇಲ್ಲಿ ಇಲ್ಲ, ಅವರು ಆಗಲೇ ಹೊರಟು ಹೋದ್ರು ಸುಮ್ಮನೆ ಆಟವಾಡಿಕೊ ಹೋಗ್ರೋ ಎಂದು ಗದರಿದರು. ನಾವು ಚಿಕ್ಕ ವಯಸ್ಸಿನಿಂದ ಅದೇ ಕಾಂಪೌಂಡಲ್ಲಿ ಆಡಿ ಬೆಳೆದವರು ಅಲ್ಲಿನ ಕಳ್ಳಮಾರ್ಗಗಳ  ಬಗ್ಗೆ ನಮಗೆ ಹೇಳಿಕೊಡಬೇಕೇ…!  ಗೆಸ್ಟ್ ಹೌಸ್ ಹಿಂದಿನ ಕಾಂಪೌಂಡ್ ಹತ್ತೀ ಕೆಳಗೆ ಜಿಗಿದು ಗೆಸ್ಟ್ ಹೌಸ್ ನ ಹಿಂದಿನ ಬಾಗಿಲು ತಲುಪಿದೆವು . ನಮ್ಮನ್ನು ನೋಡಿದ ನಮ್ಮ ಸ್ನೇಹಿತನ ಅಪ್ಪ ಮೇಟಿಯು ಲೋ ಇಲ್ಲಿ ಯಾಕ್ರೋ ಬಂದ್ರಿ ಯಾರನ್ನೂ ಒಳಗೆ ಬಿಡುವ ಹಾಗೆ ಇಲ್ಲ . ಸ್ವಲ್ಪ ಹೊತ್ತು ಇರಿ ಅಣ್ಣ ಅವರು ವಿಶ್ರಾಂತಿ ಮುಗಿದು ರೆಡಿ ಆಗ್ತಾ ಇದ್ದಾರೆ ಹೊರಗೆ ಹೊರಡುವ ಸಮಯ ನೋಡಿ ಹೇಳ್ತೀನಿ, ಆಗ ಮುಂದೆ  ಬಾಗಿಲ ಬಳಿ ಬರ್ತಾರೆ ಅಲ್ಲಿ ದೂರದಲ್ಲಿ ನಿಂತು ನೋಡುವಂತ್ರಿ.. ಎಂದರು. ಸ್ವಲ್ಪ ಸಮಾಧಾನದ ಉತ್ತರ ಸಿಕ್ಕಂತಾಯ್ತು.

ಸ್ವಲ್ಪ ಸಮಯದ ನಂತರ ಮೇಟಿಯು ಇನ್ನೇನು ಅಣ್ಣವರು ಹೊರಗಡೆ ಹೋಗ್ತಾ ಇದ್ದಾರೆ ಮುಂದೆ ಇರುವ ಗೇಟ್ ಬಳಿ ಹೋಗಿ ದೂರದಲ್ಲಿ ನಿಂತು ನೋಡಿ. ಹತ್ತಿರಕ್ಕೆ ಹೋಗಬೇಡಿ ಪೋಲಿಸ್ ನವರು  ಬೈಯುತ್ತಾರೆ ಎಂದು ಮುಂದಕ್ಕೆ ಕಳಿಸಿದರು.  ತಕ್ಷಣ ಮುಂದೆ ಹೋಗಿ ಒಂದು ದೊಡ್ಡ ಗೋಡೆಯ  ಹಿಂದೆ  ಅವಿತುಕೊಂಡು  ಅಣ್ಣಾವ್ರನ್ನು ನೋಡಲು ಅಣಿಯಾಗುತ್ತಿದೆವು. ಅಲ್ಲೇ ಗೆಸ್ಟ್ ಹೌಸ್ ನಲ್ಲಿ   ನಮಗೆ ಪರಿಚಯವಿದ್ದ ನಾಯಿಯೊಂದು ನಮ್ಮನ್ನು ನೋಡಿ ಬೌ ಬೌ ಎಂದು ಬಾಲ ಅಲ್ಲಾಡಿಸುತ್ತ ನಮ್ಮ ಬಳಿಗೆ ಓಡಿ ಬಂತು. ಇದನ್ನು ಗಮನಿಸಿದ ಪೊಲೀಸರು ಯಾರೋ ಒಳಗೆ ಬಂದಿದ್ದಾರೆ ಎಂಬ ಗುಮಾನಿಯಿಂದ  ನಾವು ಅವಿತುಕೊಂಡಿದ್ದ ಕಡೆ  ನಮ್ಮನ್ನು ಹುಡುಕಿಕೊಂಡು ಬಂದು ನಮ್ಮನ್ನು ನೋಡಿ ಲೇ ಹುಡುಗ್ರಾ ಆಗಲೇ ಹೇಳಿದ್ರೂ ಮತ್ತೆ ಬಂದಿದ್ದೀರಲ್ಲೋ ಎಂದು  ಹೆದರಿಸಿ ಗೇಟ್ ಇಂದ ಹೊರಗೆ ಕಳುಹಿಸಿ ಗೇಟ್ ಹಾಕುತ್ತಿರುವಾಗಲೇ ಹೊರಗೆ ಬಂದ ಅಣ್ಣವರು ಜೋರಾಗಿ ಮಾತನಾಡುತ್ತಿದ್ದ ಪೊಲೀಸ್ ನವರ ಕಡೆ ನೋಡಿ ಏನು ಏನು ಎಂದು ನಾವುಗಳಿದ್ದ ಗೇಟ್ ಕಡೆ ಬಂದೇಬಿಟ್ಟರು. ಬಿಳಿ ಶರ್ಟು ಬಿಳಿ ಪಂಚೆಯಲ್ಲಿ ನಗು ಮುಖದಲ್ಲಿ ಗಾಂಭೀರ್ಯ ನಡುಗೆಯೊಂದಿಗೆ  ನಮ್ಮ ಕಡೆ ಬರುವುದು ನೋಡಿ ಸಾಕ್ಷಾತ್ ದೇವರೇ ಧರೆಗೆ ಇಳಿದು ಬಂದಷ್ಟು  ಸಂತೋಷ.  ಬಂದವರೇ ಪೋಲಿಸ್ ನವರಿಗೆ ಸಮಾಧಾನ ಮತ್ತು ಮೆಲು ದನಿಯಲ್ಲಿ  ಇರಲಿಬಿಡಿ ಮಕ್ಕಳು, ಅವರನ್ನು ಒಳಗೆ ಬಿಡಿ ಎಂದು ಗೇಟ್ ತೆಗೆಸಿ  ಒಳಗೆ ಕರೆಸಿಕೊಂಡು, ಏನ್ರಪ್ಪಾ… ಎಂದು ನಮ್ಮನ್ನು ಮಾತನಾಡಿಸುತ್ತಾ, ಅವರ ಚಾಲಕನನ್ನು ಕೂಗಿ ಕಾರ್ ನಲ್ಲಿ ಇದ್ದ ಸ್ವೀಟ್ ಬಾಕ್ಸ್ ತರಿಸಿ ಎಲ್ಲರ ಹೆಸರು ಕೇಳಿ, ಕೈ ಕುಲುಕಿ  ಒಂದೊಂದು ಸ್ವೀಟ್ ಕೊಟ್ಟು ತಲೆ ಬೆನ್ನು ಸವರುತ್ತಾ ಮಾತನಾಡಿಸಿದರು . ಆ ಸಮಯದಲ್ಲಿ ನಮಗಾದ ರೋಮಾಂಚನವನ್ನು ಸಹಿಸಲಾಗದೆ, ನಮ್ಮ ಗುಂಪಿನಲ್ಲಿದ್ದ ಒಬ್ಬ ಡಾ. ರಾಜಕುಮಾರ್ ಅವರಿಗೆ ಎಂದು ಕೂಗಿದ. ನಾವೆಲ್ಲರೂ ಅವನ ಧ್ವನಿಗೆ ಧ್ವನಿಗೂಡಿಸಿ ಜೈಕಾರ ಹಾಕಲು ಶುರು ಮಾಡಿದೆವು. ಅಣ್ಣಾವ್ರು ಕಿರುನಗೆಯೊಂದಿಗೆ ಕಾರ್ ಹತ್ತಿ ನಮಗೆಲ್ಲಾ ಟಾಟಾ ಮಾಡುತ್ತಾ ಮುಂದಿನ ಪ್ರಯಾಣ ಬೆಳೆಸಿದರು…

ರಾಜಣ್ಣನವರು ಚಿತ್ರದುರ್ಗದಿಂದ ಮುಂದೆ ಯಾವುದೋ ಒಂದು ಊರಿಗೆ ಕಾರ್ಯಕ್ರಮಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಹೈವೇಗೆ ಹೊಂದಿಕೊಂಡಿದ್ದ ಈ ಗೆಸ್ಟ್ ಹೌಸ್ ನಲ್ಲಿ ಸ್ವಲ್ಪ ವಿಶ್ರಾಂತಿಗೆಂದು ಅಲ್ಲಿ ಉಳಿದಿದ್ದರು. ಆದರೆ ಈಗಿನ  ತರಹ ನ್ಯಾಷನಲ್ ಹೈವೇ ಸರಾಗವಾಗಿ ಇಷ್ಟಗಲ  ೮ ಪಥಗಳ ರಸ್ತೆ ಇರಲಿಲ್ಲ. ಡಬಲ್ ರೋಡ್  ಅಷ್ಟೇ, ಮಧ್ಯ ಡಿವೈಡರ್ ಕೂಡ ಇರಲಿಲ್ಲ. ಬಹಳ ಅಪಾಯಕಾರಿ ರಸ್ತೆ . ಚಿತ್ರದುರ್ಗ ದಿಂದ ಬೆಂಗಳೂರಿಗೆ ಪ್ರಯಾಣ ೮ – ೯ ತಾಸು.(ಈಗ ಕೇವಲ ೩ಗಂಟೆ) ಆಗುತ್ತಿತ್ತು. ಅದು ಸರಾಗವಾಗಿ ಸಾಗಿದರೆ . ಮಾರ್ಗ  ಮಧ್ಯ ಎಲ್ಲಾದರೂ ಅಪಘಾತವಾಗಿ ರೋಡ್ ಜಾಮ್ ಆದರಂತೂ ಶಿವನೇ ಗತಿ. ಕೆಲವು ಬಾರಿ ದಿನಗಟ್ಟಲೆ ಜಾಮ್ ಆಗಿದ್ದುಂಟು.

ಅಣ್ಣಾವ್ರು ಅಮೋಘವಾದ ನಟನೆ ಮತ್ತು ಸುಮಧುರ ಕಂಠದಿಂದ ಎಷ್ಟು ಅಭಿಮಾನಗಳ ಮನಸ್ಸು ಗೆದ್ದಿದ್ದರೋ  ಅಷ್ಟೇ ಅಭಿಮಾನಿಗಳನ್ನು ಅವರ ನಿಜ ಜೀವನದಲ್ಲಿ ಅಳವಡಿಸಿಕೊಂಡಿದ್ದ  ಸರಳತೆ, ಕನ್ನಡ ನಾಡು ನುಡಿ ಜಲ ಸಮಸ್ಯೆಗಳಿಗೆ ಮುಂದೆ ನಿಂತು  ಸ್ಪಂದಿಸುತ್ತಿದ್ದ  ರೀತಿ ಮತ್ತು  ಅವರ ಭಾಷಾ ಪ್ರೇಮದ ಮೂಲಕವೂ ಅಷ್ಟೇ  ಅಭಿಮಾನಿಗಳನ್ನು ಸಂಪಾದಿಸಿದರು.   ನಾನು ನಮ್ಮ ಗಿರೀಶಣ್ಣ, ಅಣ್ಣಾವ್ರ ಸಿನಿಮಾಗಳನ್ನ ಎಷ್ಟು ಹಚ್ಚಿಕೊಂಡಿದ್ದೆವು ಅಂದರೆ, ಒಂದು ಬಾರಿ ಗಿರೀಶಣ್ಣನಿಗೆ ಹೆಣ್ಣು ನೋಡಲು ಹಾಸನಕ್ಕೆ ಹೋಗ ಬೇಕಾಗಿ ಬಂತು. ಮಾರ್ಗಮಧ್ಯದಲ್ಲಿ ಕಡೂರಿನ ಒಂದು ಚಿತ್ರಮಂದಿರದಲ್ಲಿ ಅಣ್ಣಾವ್ರ ಹಳೆ ಚಿತ್ರ ಪ್ರದರ್ಶನದ ಕಟೌಟ್ ಗಳನ್ನು ನೋಡಿ ಮನಸ್ಸು ತಡೆಯದೆ ಕಾರು ಅಲ್ಲೇ ನಿಲ್ಲಿಸಿ ಪಕ್ಕದ S.T.Dಬೂತ್ ಇಂದ ಹೆಣ್ಣಿನ ಕಡೆಯವರಿಗೆ ಕರೆಮಾಡಿ, ಮಾರ್ಗಮಧ್ಯದಲ್ಲಿ ಕಾರ್ ಕೆಟ್ಟುಹೋಗಿ ಕೈ ಕೊಟ್ಟು ಬಿಟ್ಟಿದೆ ಹೆಣ್ಣು ನೋಡಲು ನಾಳೆ ಬರುತ್ತೇವೆ ಎಂದು ಸುಳ್ಳು ಹೇಳಿ ಅಣ್ಣಾವ್ರ ಚಿತ್ರ ನೋಡಲು ಹೋಗಿದ್ದೆವು  . ಈಗಲೂ ಟಿವಿಯಲ್ಲಿ ಅಣ್ಣಾವ್ರ ಚಿತ್ರ ಬರುವುದು ನೋಡಿದರೆ ಅದು ಎಷ್ಟು ಬಾರಿ ನೋಡಿದರು ಪರವಾಗಿಲ್ಲ ಪೂರ್ತಿ ನೋಡದೆ ಬಿಡುವುದಿಲ್ಲ. ಮುಂದೆ ಉದ್ಯೋಗ ಹರಸಿ ಬೆಂಗಳೂರಿಗೆ ಬಂದು ಅದರಲ್ಲೂ ಮುದ್ರಣ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಯಾವುದಾದರೂ ಪುಸ್ತಕ ಬಿಡುಗಡೆಗೆ ಅಣ್ಣಾವ್ರು ಬಂದರೆ ಅವರ ಜೊತೆ ಒಂದು ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆ ಈಡೇರಲೇ ಇಲ್ಲ. ಮುಂದೆ ಅವರು ವಿಧಿವಶರಾಗಿ  ಮೂರ್ನಾಲ್ಕು ತಿಂಗಳಾದ  ಮೇಲೆ ೨೦೦೬ ರಲ್ಲಿ ಸುಂದರ ಪ್ರಕಾಶನದಿಂದ  ’ಕನ್ನಡ  ಕಲಾ ಕಂಠೀರವ ಡಾ . ರಾಜಕುಮಾರ್’ ಎಂಬ ಪುಸ್ತಕ ಮುದ್ರಣ ಮಾಡಿ ಅದರ ಬಿಡುಗಡೆ ಸಮಾರಂಭದಲ್ಲಿ ಅಣ್ಣನವರ ಧರ್ಮಪತ್ನಿ ಶ್ರೀಮತಿ  ಪಾರ್ವತಮ್ಮ ಮತ್ತು ಮಗ ರಾಘಣ್ಣ ನವರಿಂದ ಸನ್ಮಾನ ಮಾಡಿಸಿಕೊಂಡು ಫೋಟೋ ತೆಗೆಸಿಕೊಳ್ಳುವ ಅವಕಾಶ ಒದಗಿಬಂದು ಸ್ವಲ್ಪ ಸಮಾಧಾನ ಪಡುವಂತಾಯಿತು .

CG ARUN

ನಿಸ್ವಾರ್ಥ ಸೇವೆ ಅಂದರೆ ಇದಲ್ಲವಾ?

Previous article

ಮಾಧ್ಯಮಗಳ ಮುಖ್ಯಸ್ಥರೇ ಈ ಪ್ರಶ್ನೆಗಳಿಗಾದ್ರೂ  ಸತ್ಯ, ಪ್ರಾಮಾಣಿಕತೆ, ವಸ್ತುನಿಷ್ಠ ಉತ್ತರ ನೀಡುವಿರಾ?

Next article

You may also like

Comments

Leave a reply

Your email address will not be published. Required fields are marked *