ಸ್ವಯಂಕೃಷಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೂಲಕ ಕೋಟಿ ಕೋಟಿ ವಂಚನೆ ಮಾಡಿದವನು, ಈ ಘನಕಾರ್ಯಕ್ಕಾಗಿಯೇ ಜೈಲು ಪಾಲಾಗಿದ್ದವನು ವೀರೇಂದ್ರ. ಸ್ವಯಂಕೃಷಿ ಅಂತೊಂದು ತಗಡು ಸಿನಿಮಾ ಮಾಡಿ ನಾಯಕನಾಗಿಯೂ ನಟಿಸಿದ್ದ ಇವನ ವಂಚನೆಯ ಪರಿಚಯ ಚಿತ್ರರಂಗಕ್ಕೂ ಇದೆ. ಆಘಾತಕರ ಸುದ್ದಿಯೆಂದರೆ, ಈ ವಂಚಕನೀಗ ಮತ್ತೆ ಗಾಂಧಿನಗರಕ್ಕೆ ಕಾಲಿಟ್ಟಿದ್ದಾನೆ!
2010ರ ಸುಮಾರಿನಿಂದಲೇ ವೀರೇಂದ್ರ ಬಾಬುವಿನ ದೋಖಾಬಾಜಿ ಪ್ರಕರಣಗಳು ಸದ್ದು ಮಾಡಿದ್ದವು. ಸ್ವಯಂಕೃಷಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮೂಲಕ ಕೋಟಿ ಕೋಟಿ ಸಂಗ್ರಹಿಸಿ ಆ ಹಣವನ್ನು ಬೇರೆ ಬೇರೆ ಉದ್ಯಮಗಳಿಗೆ ಹೂಡಿಕೆ ಮಾಡಿರೋದಾಗಿ ಹೇಳಿ ಕಮಿಷನ್ ಆಸೆಗೆ ಅದೆಷ್ಟೋ ಜನರನ್ನು ಮುಂಡಾಯಿಸಿದ್ದವನು ಈ ವೀರೇಂದ್ರ. ಇಂಥವನ ಮೇಲೆ ಅಖಂಡ ನೂರು ಕೋಟಿಗಳ ವಂಚನೆ ಆರೋಪವಿದೆ.
ಅದೆಷ್ಟೋ ಸಲ ಪೊಲೀಸರಿಂದ ತಪ್ಪಿಸಿಕೊಂಡಿದ್ದರೂ ವೀರೇಂದ್ರ ಕಡೆಗೂ ಸಿಕ್ಕಿಬಿದ್ದಿದ್ದ. ವರ್ಷಾತರಗಳ ಕಾಲ ಜೈಲಿನಲ್ಲೇ ಇದ್ದ. ಇಂಥವನು ಅದು ಹೇಗೆ ಹೊರ ಬಂದನೋ ಗೊತ್ತಿಲ್ಲ. ಜೈಲಿಂದ ಬಿಡುಗಡೆಯಾದೇಟಿಗೇ ವೀರೇಂದ್ರ ಗಾಂಧಿನಗರದಲ್ಲಿ ಹಾವಳಿಯಿಡುತ್ತಿದ್ದಾನಂತೆ. ಈ ಹಿಂದೆ ಕೊಳ್ಳೆ ಹೊಡೆದ ಕಾಸಲ್ಲಿಯೇ ಸ್ವಯಂಕೃಷಿ ಎಂಬ ಡಬ್ಬಾ ಸಿನಿಮಾ ಮಾಡಿದ್ದವನು ವೀರೇಂದ್ರ. ಇಂಥವನು ಈಗ ಅದ್ಯಾವ ಸಿನಿಮಾ ಮಾಡಿ ಇನ್ಯಾರನ್ನು ಮುಂಡಾಯಿಸಲು ಸ್ಕೀಮು ಹಾಕಿಕೊಂಡಿದ್ದಾನೋ ಯಾರಿಗೆ ಗೊತ್ತು?
Leave a Reply
You must be logged in to post a comment.