ರಂಜನಿ ರಾಘವನ್ ಮೊಟ್ಟ ಮೊದಲ ಕಾದಂಬರಿಯೊಂದನ್ನು ಬರೆದು ಮುಗಿಸಿದ್ದಾರೆ. ಸ್ವೈಪ್ ರೈಟ್ ಹೆಸರಿನ ಈ ಕಾದಂಬರಿಗೆ ವಿಶೇಷವಾದ ಟ್ಯಾಗ್ ಲೈನ್ ಕೂಡ ಇದೆ. ಏನಿರಬಹುದು ಆ ಅಡಿಬರಹ ಅಂತಾ ಊಹೆ ಮಾಡಿದವರಿಗೆ ಹೊಸ ಪುಸ್ತಕ ಬಹುಮಾನವಾಗಿ ಕೊಡಲಾಗುವುದು. ಅಂದಹಾಗೆ, ಬಹುರೂಪಿಯಿಂದಲೇ ಈ ಕೃತಿ ಕೂಡಾ ಹೊರಬರುತ್ತಿದೆ. ಇದೇ ಡಿಸೆಂಬರ್ 7ರಂದು ಯೋಗರಾಜ್ ಭಟ್ ಮತ್ತು ಕವಿರಾಜ್ ರಂಜನಿಯ ಕಾದಂಬರಿಯನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ಮೊದಲೆಲ್ಲಾ ʻಪುಟ್ ಗೌರಿʼ ಅಂತಾನೇ ಫೇಮಸ್ಸಾಗಿದ್ದವರು ನಟಿ ರಂಜನಿ ರಾಘವನ್. ಕೇವಲ ಒಂದು ಧಾರಾವಾಹಿ, ಅದರ ನಟನೆ, ಅದರಿಂದಲೇ ಹುಟ್ಟಿಕೊಂಡ ಜನಪಪ್ರಿಯತೆಯಲ್ಲೇ ಸವೆದುಹೋಗಬಾರದು ಅನ್ನೋದು ಇವರ ಅಭಿಪ್ರಾಯ. ಇಂಥದ್ದೊಂದು ಫೀಲು ಮನಸೊಳಗೆ ಹುಟ್ಟದಿದ್ದರೆ, ಬಹುಶಃ ಮತ್ತೊಂದು ಗೆಲುವನ್ನು ಎದುರುಗೊಳ್ಳೋದು ಯಾವುದೇ ಕಲಾವಿದರಿಗೆ ಕಷ್ಟಸಾಧ್ಯ. ಈಗ ರಂಜನಿ ಪುಟ್ಟ ಗೌರಿ ಇಮೇಜಿನಿಂದ ಹೊರಬಂದು ʻಕನ್ನಡತಿಯಾಗಿʼ ಜಗತ್ಪ್ರಸಿದ್ಧಿಯಾದವರು. ಬರಹಾರ್ತಿಯಾಗಿಯೂ ಈಗ ರಂಜನಿ ಸಖತ್ ಫೇಮಸ್ಸಾಗಿದ್ದಾರೆ. ಬಹುರೂಪಿ ಪ್ರಕಟಿಸಿರುವ ಇವರ ಕತೆ ಡಬ್ಬಿ ಪುಸ್ತಕದ ಹತ್ತು ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿ ದಾಖಲೆ ನಿರ್ಮಿಸಿದೆ. ಸದ್ಯ ರಂಜನಿ ರಾಘವನ್ ಮೊಟ್ಟ ಮೊದಲ ಕಾದಂಬರಿಯೊಂದನ್ನು ಬರೆದು ಮುಗಿಸಿದ್ದಾರೆ. ಸ್ವೈಪ್ ರೈಟ್ ಹೆಸರಿನ ಈ ಕಾದಂಬರಿಗೆ ವಿಶೇಷವಾದ ಟ್ಯಾಗ್ ಲೈನ್ ಕೂಡ ಇದೆ. ಏನಿರಬಹುದು ಆ ಅಡಿಬರಹ ಅಂತಾ ಊಹೆ ಮಾಡಿದವರಿಗೆ ಹೊಸ ಪುಸ್ತಕ ಬಹುಮಾನವಾಗಿ ಕೊಡಲಾಗುವುದು. ಅಂದಹಾಗೆ, ಬಹುರೂಪಿಯಿಂದಲೇ ಈ ಕೃತಿ ಕೂಡಾ ಹೊರಬರುತ್ತಿದೆ. ಇದೇ ಡಿಸೆಂಬರ್ 7ರಂದು ಯೋಗರಾಜ್ ಭಟ್ ಮತ್ತು ಕವಿರಾಜ್ ರಂಜನಿಯ ಕಾದಂಬರಿಯನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ರಂಜನಿ ರಾಘವನ್ ನಟನೆಯ ಜೊತೆಗೇ ಅಪಾರವಾಗಿ ಓದುವ ಹವ್ಯಾಸ ಮೈಗೂಡಿಸಿಕೊಂಡವರು. ನಾಲ್ಕನೇ ಕ್ಲಾಸಿನ ಬೇಸಿಗೆ ರಜೆಯಲ್ಲಿ ಮನೆಯಲ್ಲಿ ಕೂತಿದ್ದ ರಂಜನಿ ಕೈಗೆ ಅವರಪ್ಪ ಪುಸ್ತಕವೊಂದನ್ನು ತಂದುಕೊಟ್ಟಿದ್ದರು. ಅದು ಅನುಪಮಾ ನಿರಂಜನರ ʻದಿನಕ್ಕೊಂದು ಕತೆʼ. ಈ ಪುಸ್ತಕದಿಂದ ಶುರುವಾದ ರಂಜನಿಯ ಓದುವ ಹುಚ್ಚು ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು ಸೇರಿದಂತೆ ಕನ್ನಡದ ಸಾಕಷ್ಟು ಬರಹಗಾರನ್ನು ಪರಿಚಯಿಸಿತ್ತು ; ಓದುವ ರುಚಿಯನ್ನೂ ಹತ್ತಿಸಿತ್ತು. ತಾವೇ ನಟಿಸಿ, ನಿರ್ಮಿಸಿದ್ದ ಇಷ್ಟದೇವತೆ ಧಾರಾವಾಹಿ ಮೂಲಕ ರಂಜನಿ ಸ್ವತಃ ಸ್ಕ್ರಿಪ್ಟ್ ರೈಟರ್ ಆಗಿಯೂ ಪರಿಚಯಗೊಂಡರು. ಧಾರಾವಾಹಿ, ಸೀರಿಯಲ್ಲು, ಸಿನಿಮಾ – ಹೀಗೆ ಹಂತ ಹಂತವಾಗಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಕನ್ನಡತಿ ಈಗ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.

ಹಿರಿಯ ಪತ್ರಕರ್ತ, ಬರಹಗಾರ ಜಿ.ಎನ್. ಮೋಹನ್ ಸಾರಥ್ಯದ ಜಾಲತಾಣ ಅವಧಿ. ಕನಸುಗಳ ಬೆಂಬತ್ತಿ ನಡೆಯುತ್ತಾ, ಸಾಹಿತ್ಯ ಲೋಕದ ಅಚ್ಛರಿಯಾಗಿಯೇ ಉಳಿದಿರುವ ʻಅವಧಿʼ ವೆಬ್ ಮ್ಯಾಗಜ಼ೀನ್ ಗಾಗಿ, ಲಾಕ್ ಡೌನ್ ಕಾಲದಲ್ಲಿ ರಂಜನಿ ಕಥಾಸರಣಿ ಬರೆಯಲು ಶುರು ಮಾಡಿದ್ದರು. ಅದು ಅಪಾರ ಜನಪ್ರಿಯತೆಯನ್ನೂ ಪಡೆಯಿತು. ನಂತರ ʻಬಹುರೂಪಿʼ ಪ್ರಕಾಶನ ಆ ಕಥೆಗಳನ್ನೆಲ್ಲ ಒಟ್ಟುಮಾಡಿ ʻಕತೆ ಡಬ್ಬಿʼಯಾಗಿ ಪ್ರಕಟಿಸಿತು. ರಂಜನಿ ಕತೆ ಡಬ್ಬಿ ರಿಲೀಸಿಗೆ ಮುಂಚೆಯೇ ದಾಖಲೆ ಪ್ರಮಾಣದಲ್ಲಿ ಆನ್ ಲೈನ್ ಬುಕಿಂಗ್ ಪಡೆದಿತ್ತು. ಸದ್ಯ ಕತೆ ಡಬ್ಬಿ ಕನ್ನಡದ ಬೆಸ್ಟ್ ಸೆಲ್ಲರ್ ಕೃತಿಗಳ ಲಿಸ್ಟಿನಲ್ಲಿ ಸೇರಿಕೊಂಡಿದೆ. ಓದಿನ ಅಭಿರುಚಿ ಇರುವವರ ಜೊತೆಗೆ ಹೊಸ ಓದುಗರನ್ನೂ ತಲುಪಿದ್ದು ಕತೆ ಡಬ್ಬಿಯ ಗೆಲುವು. ಸೀರಿಯಲ್ ಇಂಡಸ್ಟ್ರಿಯಲ್ಲಿ ತಮ್ಮ ಧಾರಾವಾಹಿಗಳ ಮೂಲಕ ದಾಖಲೆ ಸೃಷ್ಟಿಸಿರುವ, ಅಗಣಿತ ಅಭಿಮಾನಿಗಳನ್ನು ಹೊಂದಿರುವ, ಸಿನಿಮಾಗಳಲ್ಲೂ ಹೆಸರು ಮಾಡಿರುವ ರಂಜನಿ ಸಾಹಿತ್ಯ ಲೋಕದಲ್ಲೂ ತಮ್ಮದೇ ಆದ ಕ್ರೇಜ಼ು ಸೃಷ್ಟಿಸಿಕೊಂಡಿದ್ದಾರೆ. ಸೈಪ್ ರೈಟ್ ನಲ್ಲಿ ಏನೆಲ್ಲಾ ಇರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ರಂಜನಿಯ ಮೊಟ್ಟ ಮೊದಲ ಕಾದಂಬರಿ ಎಲ್ಲರಿಗೂ ರುಚಿಸುವಂತಾಗಲಿ…