ಕನ್ನಡ ಚಿತ್ರರಂಗದಲ್ಲಿ ಉದಯಿಸಿರುವ ಅಪರೂಪದ ಕಥೆಗಾರ ಟಿ.ಕೆ. ದಯಾನಂದ. ಪತ್ರಕರ್ತ, ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದ ದಯಾನಂದ್ ಗೆ ಮೊದಲಿನಿಂದಲೂ ವಿಪರೀತ ಸಿನಿಮಾ ವ್ಯಾಮೋಹವಿತ್ತು. ಕ್ರಮೇಣ ಅದು ಚಿತ್ರರಂಗದಲ್ಲಿ ದುಡಿಯುವಂತೆ ಮಾಡಿತ್ತು. ಸಾಕಷ್ಟು ಸಿನಿಮಾಗಳ ಡಿಸ್ಕಷನ್ನುಗಳಲ್ಲಿ ಭಾಗಿಯಾಗುತ್ತಿದ್ದ ದಯಾನಂದ್ ʻಬೆಂಕಿ ಪಟ್ಣ ʼದ ಮೂಲಕ ನಿರ್ದೇಶಕರಾದರು. ಬೆಲ್ ಬಾಟಮ್ ಚಿತ್ರ ದಯಾನಂದ್‌ಗೆ ಕಥೆಗಾರನಾಗಿ ದೊಡ್ಡ ಹೆಸರು ಮತ್ತು ಗೆಲುವು ತಂದುಕೊಟ್ಟಿತು. ಇದೇ ಚಿತ್ರ ಈಗ ದಯಾನಂದ್ ಪರಭಾಷೆಗೆ ಎಂಟ್ರಿ ಕೊಡಲು ಕಾರಣವಾಗಿದೆ.
ದಯಾನಂದ್ ಈಗ ತೆಲುಗು ಚಿತ್ರವೊಂದರ ಸ್ಕ್ರಿಪ್ಟ್ ತಯಾರಿಸುವ ಕೆಲಸ ಒಪ್ಪಿದ್ದಾರೆ. ಸಾಮಾನ್ಯಕ್ಕೆ ನೆರೆಯ ಭಾಷೆಗಳ ಕಥೆಗಾರರನ್ನು ಕರೆತರುವುದು ಪುರಾತನ ಸಂಪ್ರದಾಯ. ಆದರೆ, ʻಇವರೇ ಬೇಕುʼ ಅಂಥಾ ಹಠ ಹಿಡಿದು, ಹುಡುಕಾಟ ನಡೆಸಿ, ಸಂಪರ್ಕ ಮಾಡಿದ ತೆಲುಗು ಚಿತ್ರತಂಡವೊಂದು ದಯಾನಂದ್‌ಗೆ ಮಹತ್ತರ ಜವಾಬ್ದಾರಿ ವಹಿಸಿದೆ.
ಆರ್ ಆರ್ ಆರ್ ಚಿತ್ರದ ಆಪರೇಟೀವ್ ಕ್ಯಾಮೆರಾಮನ್ ಒಬ್ಬರು ಮೊದಲಿಗೆ ದಯಾನಂದ್ ಅವರನ್ನು ಸಂಪರ್ಕಿಸಿದರು. ಮುಂಬೈನ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿರುವ ತೆಲುಗಿನ ಆ ಸಿನಿಮಾ ತಂಡ ಅದಾಗಲೇ ಒಂದು ಎಳೆಯನ್ನು ಸಿದ್ದಪಡಿಸಿಕೊಂಡಿದೆ. ಸರ್ವೈವಲ್ ಥ್ರಿಲ್ಲರ್ ಜಾನರಿನ ಈ ಕಥೆಯನ್ನು ದಯಾಗೆ ನೀಡಿ ಕಥಾವಿಸ್ತರಣೆ, ಸ್ಕ್ರೀನ್ ಪ್ಲೇ ಮತ್ತು ಒಂದು ವರ್ಷನ್ ಡೈಲಾಗ್ ಕೂಡಾ ರೆಡಿ ಮಾಡಿಕೊಡಲು ಹೇಳಿದೆ. ದಯಾನಂದ್ ಬರೆದ ಬೆಂಗಳೂರು ಕನ್ನಡ ತೆಲುಗನ್ನು ಅವರು ಹೈದ್ರಾಬಾದ್ ತೆಲುಗಿಗೆ ಬದಲಿಸಿಕೊಳ್ಳಲಿದ್ದಾರೆ. ಚಿರಂಜೀವಿ ಅವರ ಬಹುತೇಕ ಸಿನಿಮಾಗಳ ನಿರ್ಮಾಣ ಮೇಲ್ವಿಚಾರಣೆ ವಹಿಸುವ ವಾಕಡ ಅಪ್ಪಾರಾವ್ ಈ ಚಿತ್ರದ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಅಮೆರಿಕ ಮೂಲದ ನಿರ್ಮಾಪಕರ ಈ ಚಿತ್ರದ ತಾಂತ್ರಿಕ ವರ್ಗ, ಕಲಾವಿದರು ಯಾರು ಅನ್ನೋದೆಲ್ಲಾ ಇನ್ನಷ್ಟೇ ಹೊರಬರಬೇಕಿದೆ.
ನಮ್ಮ ಸಿನಿಮಾ ಮಂದಿ ತಮ್ಮ ಸಿನಿಮಾಗಳಿಗೆ ಕಥೆ ಬೇಕು ಅಂತಾ ತೆಲುಗು, ತಮಿಳರ ಮುಂದೆ ಸಾಲುಗಟ್ಟಿ ನಿಲ್ಲುವ ಹೊತ್ತಿನಲ್ಲಿ, ಅಲ್ಲಿನವರು ಬಂದು ನಮ್ಮ ಊರ ಪ್ರತಿಭೆಯನ್ನು ನಂಬಿ, ಒಳ್ಳೇ ಸಂಭಾವನೆ ನೀಡಿ ಕೆಲಸ ಒಪ್ಪಿಸಿರುವುದು ಖುಷಿಯ ವಿಚಾರ ಅಲ್ಲವೇ?
ಕಥೆ ಬರೆಯೋನಿಗೆ ಜೀವನದ ಕಷ್ಟ ಸುಖಗಳ ಬಗ್ಗೆ ಇಂಚಿಂಚೂ ಅನುಭವವಿರಬೇಕು. ಸಮಾಜಜ್ಞಾನ ಕೂಡಾ ಇರಬೇಕು. ದಯಾನಂದ್ ವಿಚಾರದಲ್ಲಿ ಇವೆಲ್ಲವೂ ಒಂಚೂರು ಹೆಚ್ಚೇ ಇದೆ. ಕಡು ಕಷ್ಟದ ಹಿನ್ನೆಲೆಯಿಂದ ಬಂದ ದಯಾನಂದ್ ಓದು ಮುಗಿಸಿ ಟೀವಿ ನೈನ್ ಚಾನೆಲ್ಲಿನಲ್ಲಿ ಡೆಸ್ಕ್ ಎಡಿಟರ್ ಆಗಿದ್ದವರು. ಅದರ ಜೊತೆಗೆ ಅಗ್ನಿ, ಲಂಕೇಶ್ ಸೇರಿದಂತೆ ಸಾಕಷ್ಟು ಪತ್ರಿಕೆಗಳಿಗೆ ಬರೆಯುತ್ತಿದ್ದವರು. ಜಗತ್ತಿನ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡಿ ಅದರ ಕುರಿತು ಬರೆಯುತ್ತಿದ್ದ ದಯಾನಂದ್ ತಳಸಮುದಾಯಗಳ ಅಧ್ಯಯನಗಳನ್ನು ಕುರಿತ ಸಾಕಷ್ಟು ಡಾಕ್ಯುಮೆಂಟರಿಗಳನ್ನೂ ತಯಾರಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಮ್ಯಾನ್ ಹೋಲ್ ಗಳಲ್ಲಿ ಇಳಿಯುವ ಸಫಾಯಿ ಕರ್ಮಚಾರಿಗಳ ಕುರಿತಾಗಿ ದಯಾನಂದ ಮಾಡಿರುವ ಸಂಶೋಧನೆಗಳು ಸಾಕಷ್ಟು. ಇವತ್ತೇನಾದರೂ ಸಫಾಯಿ ಕರ್ಮಚಾರಿಗಳ ಬದುಕಲ್ಲಿ ಬೆಳಕು ಕಾಣಿಸೋ ಸೂಚನೆ ಕಂಡಿದೆಯೆಂದರೆ ಅದಕ್ಕೆ ದಯಾನಂದ್ ಮಾಡಿರುವ ಆಧ್ಯಯನ ವರದಿಗಳ ಪಾತ್ರ ದೊಡ್ಡದು.
ಚಾಕು ಸಾಣೆ ಹಿಡಿಯೋರು, ಹಾವಾಡಿಗರು, ಕರಡಿ ಕುಣಿಸೋರು… ಹೀಗೆ ಬದುಕಿಗಾಗಿ ನಾನಾ ಕಸುಬುಗಳನ್ನು ಮಾಡುವ ಜನರ ಕುರಿತು ದಯಾನಂದ್ ಬರೆದ ‘ರಸ್ತೆನಕ್ಷತ್ರಗಳು’ ಪುಸ್ತಕ ಹೊಸ ಸಾಮಾನ್ಯ ಜನರಿಗೆ ಗೊತ್ತಿಲ್ಲದ ಹೊಸ ಲೋಕವನ್ನು ಪರಿಚಯಿಸುತ್ತದೆ. ಇವರ ನಾಯಿಬೇಟೆ ಕಥೆಗಾಗಿ ಪ್ರಜಾವಾಣಿಯ ಪ್ರತಿಷ್ಠಿತ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿತ್ತು. ವಿಜಯ ನೆಕ್ಸ್ಟ್ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಇವರ ಒಂದಾನೊಂದು ಊರಿನಲ್ಲಿ ಕಥೆ ಕೂಡಾ ಮೊದಲ ಕಥೆಯಾಗಿ ಆಯ್ಕೆಯಾಗಿತ್ತು. ಕಣ್ಣೆದುರೇ ನಡೆಯುತ್ತಿದ್ದರೂ ಯಾರೂ ಕಣ್ಣೆತ್ತಿನೋಡದ ವಿಚಾರಗಳನ್ನೇ ಕಥೆಗಳನ್ನಾಗಿಸಿ, ರೋಚಕವೆನ್ನುವಂತೆ ಬರೆಯೋದು ದಯಾನಂದ್ ಅವರಿಗೆ ಸಿದ್ದಿಸಿದೆ. ಬೆಲ್ ಬಾಟಮ್ ಮತ್ತು ಆಕ್ಟ್ 1978 ಸಿನಿಮಾಗಳ ಕಥೆ, ಚಿತ್ರಕತೆಗಳಲ್ಲಿ ಕೆಲಸ ಮಾಡಿರುವ ಕನ್ನಡದ ಹೆಮ್ಮೆಯ ಕಥೆಗಾರ ದಯಾನಂದ್ ಜಾಗತಿಕ ಮಟ್ಟದಲ್ಲಿ ಬೆಳೆದುನಿಲ್ಲಲಿ…
No Comment! Be the first one.