ಟಕ್ಕರ್ ಚಿತ್ರದ ಮೂಲಕ ತೂಗುದೀಪ ವಂಶದ ಮತ್ತೊಂದು ಕುಡಿ ನಾಯಕನಟನಾಗಿ ಎಂಟ್ರಿಯಾಗುತ್ತಿದೆ. ತಮ್ಮ ಮಾವ ದರ್ಶನ್ ಅವರ ಬದುಕಿನ ಎಲ್ಲ ಏರಿಳಿತಗಳನ್ನೂ ನೋಡುತ್ತಾ ಅದರಿಂದ ಸ್ಫೂರ್ತಿ ಪಡೆಯುತ್ತಲೇ ಬೆಳೆದವರು ಮನೋಜ್. ದರ್ಶನ್ ಎಂತೆಂಥಾ ಕಷ್ಟಗಳನ್ನು ಅನುಭವಿಸಿ ಈ ಮಟ್ಟಕ್ಕೇರಿದ್ದಾರೆಂಬ ಅರಿವಿರುವ ಮನೋಜ್ ಸ್ವಪ್ರಯತ್ನದಿಂದಲೇ ಮೇಲೆದ್ದು ನಿಲ್ಲಬೇಕೆಂಬ ಮನಸ್ಥಿತಿಯ ಸ್ವಾಭಿಮಾನಿ. ನಟನಾಗಬೇಕೆಂಬ ಬಯಕೆಯಿಂದ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಲೇ, ನಿರಾಸೆಗಳಿಗೆ ಕುಗ್ಗದೆ ಸಾಗಿ ಬಂದಿರೋ ಮನೋಜ್ ಅವರ ಎಲ್ಲ ಪರಿಶ್ರಮಗಳಿಗೂ ಈ ವರ್ಷ ಫಲ ಸಿಗುವ ಲಕ್ಷಣಗಳಿವೆ. ಇದರ ಮುನ್ಸೂಚನೆ ಎನ್ನುವಂತೆ ಮೊನ್ನೆಯಷ್ಟೇ ದರ್ಶನ್ ಬಿಡುಗಡೆ ಮಾಡಿದ ಟಕ್ಕರ್ ಚಿತ್ರದ ಹಾಡುಗಳು ಮತ್ತು ಟೀಸರ್ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ನಮ್ಮ ಮಾವ ಗರಡಿಯಲ್ಲಿ ಕುಸ್ತಿ ಕಲಿಸುವ ಉಸ್ತಾದ್ ಇದ್ದಂತೆ. ಅವರ ಮಾರ್ಗದರ್ಶನದಲ್ಲಿ, ಅವರು ಸೂಚಿಸಿದ ಮಾರ್ಗದಲ್ಲಿ ಹೆಜ್ಜೆ ಇಡುತ್ತೇನೆ. ನಾನು ಯಾವುದೇ ತೀರ್ಮಾನಕ್ಕೆ ಬರುವ ಮುಂಚೆ ದರ್ಶನ್ ಮತ್ತು ದಿನಕರ್ ಅವರ ಅನುಮತಿ ಪಡೆದೇ ಮುಂದಡಿ ಇಡೋದು ಅಂತಾ ಆರಂಭದಿಂದಲೂ ಹೇಳಿಕೊಂಡೇ ಬಂದಿದ್ದರು. ಇದನ್ನು ಸಾಕ್ಷೀಕರಿಸುವಂತೆ ಮೊನ್ನೆ ಟಕ್ಕರ್ ಟೀಸರ್ ರಿಲೀಸ್ ಸಮಾರಂಭದಲ್ಲಿ ದರ್ಶನ್ ‘ಮನೋಜ್ ಬೇರೆ ಯಾರೂ ಅಲ್ಲ. ನನ್ನ ಅಕ್ಕನ ಮಗ. ನನ್ನ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾನೆ. ಸಾಕಷ್ಟು ಪ್ರಯತ್ನ ಮಾಡುತ್ತಲೇ ಬಂದಿದ್ದಾನೆ. ಈಗ ಟಕ್ಕರ್ ಸಿನಿಮಾ ಉತ್ತಮ ರೀತಿಯಲ್ಲಿ ಬಂದಿದೆ. ಮನೋಜ್’ಗೆ ಒಳ್ಳೇದಾಗಲಿ’ ಅಂತಾ ಖುದ್ದು ದಾಸ ಹರಸಿದ್ದಾರೆ. ಸಾಮಾನ್ಯವಾಗಿ ದರ್ಶನ್ ತಮ್ಮದೇ ಸಿನಿಮಾಗಳ ಸಮಾರಂಭಗಳು ನಡೆದಾಗ ಒಂದು ಕಡೆ ಕೂರೋದಿಲ್ಲ. ಇಡೀ ಪ್ರೋಗ್ರಾಮು ಮುಗಿಯೋ ತನಕ ನಿಂತೇ ಇರುತ್ತಾರೆ. ಮೊನ್ನೆ ಟಕ್ಕರ್ ಸಿನಿಮಾದ ಆಡಿಯೋ ಬಿಡುಗಡೆಗೆ ಆಗಮಿಸಿದ್ದ ಯಜಮಾನ ಅತಿಥಿಯಂತೆ ನಡೆದುಕೊಳ್ಳದೇ ಥೇಟು ಮನೆ ಒಡೆಯನಂತೆ ಓಡಾಡಿದ್ದು ಅಲ್ಲಿದ್ದವರಿಗೆಲ್ಲಾ ಆಶ್ಚರ್ಯ ಹುಟ್ಟಿಸಿತು. ಕಾರ್ಯಕ್ರಮದ ನಡುವಿನಲ್ಲೊಮ್ಮೆ ಮನೋಜ್ ಕಡೆ ತಿರುಗಿ ‘ಮಗನೇ’ ಅಂದಿದ್ದು ನೋಡಿ ದರ್ಶನ್ ಅವರಿಗೆ ಮನೋಜ್ ಮೇಲಿರುವ ಪ್ರೀತಿ ಎಂಥಾದ್ದು ಎಂಬುದರ ಪರಿಚಯವಾಯಿತು.
ಒಟ್ಟಾರೆ ಮನೆ ಹುಡುಗನ ಸಿನಿಮಾಗೆ ದರ್ಶನ್ ಮನಸೋ ಇಚ್ಛೆ ಸಹಕರಿಸಿ, ಸಾಥ್ ನೀಡುತ್ತಿದ್ದಾರೆ. ದರ್ಶನ್ ಅವರ ಈ ದೊಡ್ಡ ಗುಣ ನಿಜಕ್ಕೂ ಎಲ್ಲರಿಗೂ ಮಾದರಿಯಾಗುವಂಥದ್ದು.