ಕೊರೋನಾ ಸಂಕಷ್ಟಕ್ಕೆ ಇಡೀ ಜಗತ್ತು ತತ್ತರಿಸಿದೆ. ಚಿತ್ರರಂಗ ಕೂಡಾ ಅಪಾರ ನಷ್ಟ ಅನುಭವಿಸಿದೆ. ಎಲ್ಲ ಅಂದುಕೊಂಡಂತೇ ಆಗಿದ್ದರೆ ಮೊದಲ ಲಾಕ್ ಡೌನ್ ಗೂ ಮುಂಚೆಯೇ ಬಿಡುಗಡೆಯಾಗಬೇಕಿದ್ದ ಸಿನಿಮಾ ಟಕ್ಕರ್. ಸತತ ಎರಡು ಬಾರಿ ಟಕ್ಕರ್ ಚಿತ್ರದ ಬಿಡುಗಡೆಗೆ ಕೋವಿಡ್ ಅಡ್ಡಗಾಲಾಗಿತ್ತು. ಸದ್ಯ ಕೊರೋನಾ ಸಮಸ್ಯೆ ಬಹುತೇಕ ಬಗೆಹರಿದಿದೆ. ಏಕಾಏಕಿ ನೂರಾರು ಚಿತ್ರಗಳು ಕ್ಯೂ ನಿಂತಿರೋದರಿಂದ ಥೇಟರ್ ಸಮಸ್ಯೆ ಕೂಡಾ ಎದುರಾಗಿದೆ. ಈ ನಡುವೆ ʻಟಕ್ಕರ್ʼ ಚಿತ್ರವನ್ನು ವ್ಯವಸ್ಥಿತವಾಗಿ ತೆರೆಗೆ ತರಲು ನಿರ್ಮಾಪಕ ನಾಗೇಶ್ ಕೋಗಿಲು ತೀರ್ಮಾನಿಸಿದ್ದಾರೆ.
ಮನೋಜ್ ಕುಮಾರ್ ಮತ್ತು ರಂಜನಿ ರಾಘವನ್ ಜೊತೆಯಾಗಿ ನಟಿಸಿರುವ ಸಿನಿಮಾ ʻಟಕ್ಕರ್ʼ. ಇಡೀ ಜಗತ್ತನ್ನು ಅಲುಗಾಡಿಸಿರುವ, ಹೆಣ್ಣುಮಕ್ಕಳ ನಿದ್ದೆಗೆಡಿಸಿರುವ ಸೈಬರ್ ಕ್ರೈಂ ಟಕ್ಕರ್ ಚಿತ್ರದ ಕಥಾವಸ್ತು. ಥ್ರಿಲ್ಲರ್ ಅಂಶಗಳ ಜೊತೆಗೆ ಭರ್ಜರಿ ಆಕ್ಷನ್, ಚೆಂದದ ಹಾಡುಗಳು ಕೂಡಾ ಟಕ್ಕರ್ ಚಿತ್ರದ ಭಾಗವಾಗಿವೆ. ಈಗಾಗಲೇ ಬಿಡುಗಡೆಯಾಗಿರುವ ಡ್ಯುಯೆಟ್ ಸಾಂಗ್ ಕೇಳುಗರನ್ನು ಸೆಳೆದಿದೆ. ಟೈಟಲ್ ಸಾಂಗ್ ಸೇರಿದಂತೆ ಉಳಿದ ಎರಡು ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಜೊತೆಗೆ ಟ್ರೇಲರ್ ಕೂಡಾ ಶೀಘ್ರದಲ್ಲೇ ಹೊರಬರಲಿದೆ. ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕ ನಾಗೇಶ್ ಕೋಗಿಲು ಅವರು ಯೋಜನೆ ರೂಪಿಸುತ್ತಿದ್ದಾರೆ.
ಮಲೇಶಿಯಾದಲ್ಲಿ ಒಂದು ಹಾಡನ್ನು ಚಿತ್ರೀಕರಿಸಿದ್ದು ಉಳಿದ ಭಾಗದ ಚಿತ್ರೀಕರಣ ಬೆಂಗಳೂರು, ಮೈಸೂರಿನಲ್ಲಿ ಶೂಟ್ ಮಾಡಲಾಗಿದೆ. ವಿ. ರಘುಶಾಸ್ರ್ತಿಅವರ ನಿರ್ದೇಶನದ ಈ ಚಿತ್ರಕ್ಕೆ ಕದ್ರಿ ಮಣಿಕಾಂತ್ ಅವರ ಸಂಗೀತ, ಡಾ. ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಗುರುರಾಜ್ ದೇಸಾಯಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಸುದೀಪ್ ಅವರ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ವಿಲಿಯಮ್ಸ್ ಡೇವಿಡ್ ಟಕ್ಕರ್ ಚಿತ್ರಕ್ಕೂ ಕ್ಯಾಮೆರಾ ಹಿಡಿದಿರುವುದು ವಿಶೇಷ.
ಮನೋಜ್ ಕುಮಾರ್ ಮತ್ತು ರಂಜನಿ ರಾಘವನ್, ಕೆ.ಎಸ್. ಶ್ರೀಧರ್, ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಖ್ಯಾತಿಯ ಸೌರವ್ ಲೋಕಿ, ಸಾಧು ಕೋಕಿಲಾ, ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ಕುರಿ ಸುನಿಲ್, ಕಾಮಿಡಿ ಕಿಲಾಡಿ ನಯನಾ, ಪ್ರವೀಣ್, ಜೈಜಗದೀಶ್ ಮುಂತಾದವರ ತಾರಾಬಳಗವಿದೆ. ಈ ಹಿಂದೆ ಹುಲಿರಾಯ ಚಿತ್ರವನ್ನು ನಿರ್ಮಿಸಿದ್ದ ಕೆ.ಎನ್. ನಾಗೇಶ್ ಕೋಗಿಲು ಅವರು ಎಸ್.ಎಲ್.ಎನ್. ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
Comments