ಎಸ್.ಎಲ್.ಎನ್ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಾಗೇಶ ಕೋಗಿಲು ಅವರು ನಿರ್ಮಿಸಿರುವ ಚಿತ್ರ ಟಕ್ಕರ್. ಸಿನಿಮಾ ಇದೇ ಮೇ 6ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ಮನೋಜ್ ಕುಮಾರ್ ನಾಯಕನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸದ್ಯ ಚಿತ್ರತಂಡ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಬೆಂಗಳೂರಿನ ಪ್ರತಿಷ್ಠಿತ ಮೇಘನಾ ಫುಡ್ಸ್ ಹೊಟೇಲ್ ಟಕ್ಕರ್ ಚಿತ್ರತಂಡವನ್ನು ಇಫ್ತಿಯಾರ್ ಕೂಟಕ್ಕೆ ಆಹ್ವಾನಿಸಿತ್ತು. ಮೇಘನಾ ಫುಡ್ಸ್ ಬೆಂಳೂರಿನಲ್ಲಿ ಸುಮಾರು ಎಂಟು ಶಾಖೆಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್ ಸಿಟಿ ಶಾಖೆಯಲ್ಲಿ ಈ ಇಫ್ತಿಯಾರ್ ಕೂಟವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಮನೋಜ್ ಅವರಿಗೆ ಇಸ್ಲಾಮಿಕ್ ಶೈಲಿಯ ಸಾಂಪ್ರದಾಯಿಕ ಪೇಟ, ಶಾಲು ತೊಡಿಸಿ, ಉಡಿಗೊರೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ನಟ ಮನೋಜ್ ಮಾತನಾಡುತ್ತಾ ʻʻಮುದಾಬಿರ್ ಮತ್ತು ಮೇಘನಾ ಫುಡ್ಸ್ ಸಂಸ್ಥೆಯ ಸದಸ್ಯರ ನೀಡಿರುವ ಪ್ರೀತಿ, ಗೌರವವನ್ನು ನಾನು ಎಂದೂ ಮರೆಯೋದಿಲ್ಲ. ನಾನು ಹುಟ್ಟಿದ್ದು ಮೈಸೂರಿನ ಮಂಡಿ ಮೊಹಲ್ಲಾದಲ್ಲಿ. ನಂತರ ಬೆಳೆದಿದ್ದ ಬೆಂಗಳೂರಿನ ಜಯನಗರದಲ್ಲಿ. ಎರಡೂ ಕಡೆ ನಾನು ಮುಸ್ಲಿಂ ಬಾಂಧವರೊಂದಿಗೆ ಬೆಳೆದವನು. ಎಲ್ಲ ಧರ್ಮದವರೊಂದಿಗೂ ನಾನು ಒಡನಾಟ, ಸ್ನೇಹ ಹೊಂದಿದ್ದೇನೆ. ಅದರಲ್ಲೂ ನನ್ನ ನೆಚ್ಚಿನ ಮುಸಲ್ಮಾನ ಸ್ನೇಹಿತರು ತೋರುವ ಪ್ರೀತಿ ಇದೆಯಲ್ಲಾ? ಅದು ನಿಜಕ್ಕೂ ದೊಡ್ಡದು. ಇವರೆಲ್ಲರ ಪ್ರೀತಿಯನ್ನು ಯಾವತ್ತಿಗೂ ಹೀಗೇ ಉಳಿಸಿಕೊಳ್ಳುತ್ತೇನೆ.ʼʼ ಎಂದು ಹೇಳಿದರು.
ಇಫ್ತಿಯಾರ್ ಕೂಟದಲ್ಲಿ ಟಕ್ಕರ್ ಚಿತ್ರದ ನಿರ್ಮಾಪಕ ನಾಗೇಶ್ ಕೋಗಿಲು, ನಿರ್ದೇಶಕ ರಘು ಶಾಸ್ತ್ರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಇಡೀ ಜಗತ್ತನ್ನು ನಲುಗುವಂತೆ ಮಾಡಿರುವ, ಅದರಲ್ಲೂ ಹೆಣ್ಣುಮಕ್ಕಳನ್ನು ಹಿಂಡುತ್ತಿರುವ ಸೈಬರ್ ಕ್ರೈಂ ಸುತ್ತ ಹೆಣೆದಿರುವ ಕತೆಯನ್ನು ರೋಚಕವಾಗಿ ಹಿಡಿದಿಟ್ಟಿರುವ ಚಿತ್ರ ಟಕ್ಕರ್. ಭಜರಂಗಿ ಖ್ಯಾತಿಯ ಸೌರವ್ ಲೋಕಿ ಇಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ವಿಲಿಯಮ್ಸ್ ಡೇವಿಡ್ ಟಕ್ಕರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಲಾಗಿದೆ. ಪುಟ್ಟಗೌರಿಯಾಗಿ ಎಂಟ್ರಿ ಕೊಟ್ಟು ಸದ್ಯ ಕನ್ನಡತಿಯಾಗಿ ಮನೆಮಾತಾಗಿರುವ ರಂಜನಿ ರಾಘವನ್ ಮನೋಜ್ ಕುಮಾರ್ ಜೋಡಿಯಾಗಿ ನಟಿಸಿದ್ದಾರೆ.
ಟಕ್ಕರ್ ಚಿತ್ರದಲ್ಲಿ ಸಾಕಷ್ಟು ಕಲಾವಿದರ ದಂಡೇ ಇದೆ. ಸಾಧು ಕೋಕಿಲಾ, ಅಶ್ವಿನ್ ಹಾಸನ್, ಆದಿ, ಕಾಮಿಡಿ ಕಿಲಾಡಿ ನಯನಾ, ಕುರಿ ಸುನಿಲ್, ಜೈಜಗದೀಶ್, ಈಟಿವಿ ಶ್ರೀಧರ್, ಹಿರಿಯ ನಟಿ ಸುಮಿತ್ರಾ ಸೇರಿದಂತೆ ಇನ್ನೂ ಅನೇಕಲ ಕಲಾವಿದರು ಟಕ್ಕರ್ ಚಿತ್ರದ ಭಾಗವಾಗಿದ್ಧಾರೆ. ಹೀರೋ ಇಂಟ್ರಡಕ್ಷನ್ ಹಾಡಿಗೆ ಹೆಚ್.ಎಂ.ಟಿ.ಯಲ್ಲಿ ವಿಶೇಷ ಸೆಟ್ ಕೂಡಾ ಹಾಕಲಾಗಿತ್ತು. ಮಲೇಶಿಯಾ, ಮೈಸೂರು, ಬೆಂಗಳೂರು ಸೇರಿದಂತೆ ಸಾಕಷ್ಟು ಕಡೆ ಚಿತ್ರೀಕರಣ ನಡೆಸಲಾಗಿದೆ.
Comments