ಟೀಸರ್ ಮೂಲಕವೇ ‘ನೀನ್ ಟಕ್ಕರ್ ಕೊಡೋಕ್ ಬಂದಿರೋದು ಯಾರ್ ಜೊತೆ ಗೊತ್ತಾ? ದಾಸನ್ ಗರಡಿ ಹುಡುಗನ ಜೊತೆ’ ಅನ್ನೋ, ಮಾಸ್ ಡೈಲಾಗ್ ನಿಂದ ಮಾಸ್ ಅಭಿಮಾನಿಗಳಿಗೆ ಇದ್ಯಾರಪ್ಪ! ಅಂತ ಕಣ್ಣಗಲಿಸಿ ನೋಡುವಂತಹ ಮಟ್ಟಿಗೆ ಕ್ರೇಜ್ ಹುಟ್ಟಿದೆ. ತಮ್ಮ ಚೊಚ್ಚಲ ಚಿತ್ರದಲ್ಲಿಯೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಹಾಕುತ್ತಿರುವ ನವ ನಟ ಮನೋಜ್. ಮೇಲಾಗಿ ಇವರು ದರ್ಶನ್ ಅವರ ಕುಟುಂಬದವರೇ ಆಗಿರೋದು ಚಿತ್ರರಂಗಕ್ಕೆ ಮೊದಲ ಅಟೆಂಡೆನ್ಸ್ ಹಾಕಲು ಹೊರಟಿರುವ ಮನೋಜ್ ಗೆ ಪ್ಲಸ್ ಪಾಯಿಂಟ್.
ಮನೋಜ್ ನಟಿಸುತ್ತಿರುವ ಟಕ್ಕರ್ ಸಿನಿಮಾ ಇತ್ತೀಚಿಗೆ ತನ್ನ ಮೊದಲ ಟೀಸರ್ ಅನ್ನು ದರ್ಶನ್ ತಮ್ಮ ದಿನಕರ್ ತೂಗುದೀಪ ಅವರಿಂದಲೇ ಲೋಕಾರ್ಪಣೆಗೊಳಿಸಿತ್ತು. ಇನ್ನು ದರ್ಶನ್ ಅವರೇ ಸ್ವತಃ ಟಕ್ಕರ್ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಟೀಸರ್ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಸಿನಿಮಾವನ್ನು ರಿಲೀಸ್ ಮಾಡುವ ಕುರಿತಾಗಿಯೂ ಸಲಹೆ ಸೂಚನೆಗಳನ್ನು ಯಜಮಾನ ನೀಡಿದ್ದಾಗಿಯೂ ನಿರ್ಮಾಪಕ ನಾಗೇಶ್ ಕೋಗಿಲು ಹರ್ಷ ವ್ಯಕ್ತಪಡಿಸಿದರು.
ಅಳಿಯನಿಗೆ ಮಾವ ಏನಂದ್ರು..
ಟೀಸರ್ ವೀಕ್ಷಿಸಿದ ನಂತರ ದರ್ಶನ್, ಅಳಿಯ ಮನೋಜ್ ಜತೆ ಮಾತನಾಡುತ್ತಾ, ನಿರ್ಮಾಪಕರು ನಿನ್ನನ್ನು ನಂಬಿ ಹಣ ಹೂಡಿರುತ್ತಾರೆ. ಪ್ರತಿ ಹಂತದಲ್ಲೂ ಅವರಿಗೆ ಸಾಥ್ ಕೊಡಬೇಕು. ನಿರ್ಮಾಪಕರ ಹಿತ ಕಾಯಬೇಕಿರುವುದು ನಿನ್ನ ರೆಸ್ಪಾನ್ಸಿಬಿಲಿಟಿ. ನಿನ್ನ ಹಾಗೂ ನಿರ್ಮಾಪಕರ ಸ್ನೇಹ ಬಾಂದವ್ಯ ಟಕ್ಕರ್ ಗೆ ಕೊನೆಯಾಗಬಾರದು. ಟಕ್ಕರ್ ರಿಲೀಸ್ ನಂತರವೂ ಅವರೊಂದಿಗೆ ಸಾಕಷ್ಟು ಸಿನಿಮಾಗಳನ್ನು ಮಾಡಬೇಕು ಎಂದು ಮನೋಜ್ ಗೆ ತಿಳಿ ಹೇಳಿದರು.
ಇನ್ನು ಟಕ್ಕರ್ ಸಿನಿಮಾವನ್ನು ಎಸ್ ಎಲ್ ಎನ್ ಕ್ರಿಯೇಷನ್ಸ್ ನಲ್ಲಿ ನಾಗೇಶ್ ಕೋಗಿಲು ನಿರ್ಮಾಣ ಮಾಡುತ್ತಿದ್ದು, ವಿ. ರಘು ಶಾಸ್ತ್ರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ದಾಸನ ಗರಡಿಯಿಂದ ಮುಗುಮ್ಮಾಗಿ ಬಣ್ಣದ ಲೋಕದ ಸಾಕಷ್ಟು ಸೀಕ್ರೆಟ್ ಗಳನ್ನು ಕಲಿತು ಟಕ್ಕರ್ ಕೊಡಲು ಬರುತ್ತಿರುವ ಮನೋಜ್ ಸಿನಿಮಾ ಯಶಸ್ವಿಯಾಗಲೆಂದು ‘ಸಿನಿ ಬಜ್’ ಹಾರೈಸುತ್ತದೆ.