ಭರ್ತಿ ಐದು ವರ್ಷ ಪ್ರಸಾರವಾದ ಪುಟ್ಗೌರಿ ಮದುವೆ ಸೀರಿಯಲ್ ಮೂಲಕವೇ ಪ್ರಸಿದ್ಧಿ ಪಡೆದುಕೊಂಡಿರುವವರು ರಂಜಿನಿ ರಾಘವನ್. ಆರಂಭದಿಂದ ಇಲ್ಲಿವರೆಗೂ ಸಾಂಪ್ರದಾಯಿಕ ಲುಕ್ಕು, ಉಡುಗೆ ತೊಟ್ಟು ಪುಟ್ಗೌರಿ ಎಂದೇ ಖ್ಯಾತರಾಗಿರುವ ರಂಜಿನಿ ಹೆಂಗಳೆಯರ ಪಾಲಿಗೆ ಮನೆ ಮಗಳು. ಅವರೀಗ ಟಕ್ಕರ್ ಚಿತ್ರದಲ್ಲಿ ಮನೋಜ್ಗೆ ನಾಯಕಿಯಾಗಿಯೂ ಅಭಿನಯಿಸುತ್ತಿದ್ದಾರೆ. ಇಂಥಾ ಪುಟ್ಗೌರಿಯ ಫೋಟೋ ಒಂದೀಗ ಟ್ರೋಲ್ ಪೇಜುಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಜನರೂ ಕೂಡಾ ಒಂಥರಾ ಶಾಕ್ ಮತ್ತು ಅಚ್ಚರಿ ಮಿಶ್ರಿತವಾದ ಗೊಂದಲದಲ್ಲಿದ್ದಾರೆ.
ಒಂದು ಕಡೆ ಮೈ ತುಂಬಾ ಸೀರೆ ಉಟ್ಟು ಲಕ್ಷಣವಾಗಿ ಪುಟ್ಗೌರಿಯಂತಿರೋ ರಂಜನಿ ರಾಘವನ್ ಮತ್ತು ಮತ್ತೊಂದು ಕಡೆ ರಂಜನಿ ಮಾಡ್ ಡ್ರೆಸ್ಸಿನಲ್ಲಿ ಬಿಂದಾಸಾಗಿ ಸಿಗರೇಟು ಸೇದುತ್ತಿರೋ ಫೋಟೋ… ಇದನ್ನಿಟ್ಟುಕೊಂಡೇ ಬಗೆ ಬಗೆಯಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ತುಂಬಾ ಈಗ ಈ ಫೋಟೋಗಳದ್ದೇ ಸದ್ದು!
ಇದನ್ನು ನೋಡಿದ ಜನರನೇಕರು ಇದೇನು ಕಥೆ ಅಂತ ಹೌಹಾರಿದ್ದಾರೆ. ಇನ್ನೂ ಕೆಲ ಮಂದಿ ಪುಟ್ ಗೌರಿಗೆ ನಿಜ ಜೀವನದಲ್ಲಿ ಇಂಥಾದ್ದೂ ಒಂದು ಶೇಡ್ ಇರಬಹುದೆಂದೂ ಅಂದುಕೊಂಡಿದ್ದಾರೆ. ಆದರೆ ಅಸಲೀ ವಿಚಾರ ಬೇರೆಯದ್ದೇ ಇದೆ. ರಂಜನಿ ಸಿಗರೇಟು ಸೇದುತ್ತಿರೋ ಫೋಟೋಗಳು ಟಕ್ಕರ್ ಚಿತ್ರದ್ದು. ಚಿತ್ರೀಕರಣದ ಈ ಫೋಟೋಗಳು ಅದು ಹೇಗೆ ಲೀಕ್ ಆದವು ಅಂತ ಹುಡುಕ ಹೋದರೆ ಟಕ್ಕರ್ ಚಿತ್ರದ ಅಸೋಸಿಯೇಟ್ ಡೈರೆಕ್ಟರ್ ಧನರಾಜ್ ಕಡೆಯಿಂದ ಈ ಫೋಟೋಗಳು ಸಿಕ್ಕಿವೆ ಎಂಬ ಮಾಹಿತಿ ಟ್ರೋಲ್ ಜಗತ್ತಿನ ಕಡೆಯಿಂದ ಸಿಗುತ್ತದೆ!
ಆದರೆ ಈ ದೃಶ್ಯವನ್ನು ಕಳೆದೊಂದು ತಿಂಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ನಿರ್ದೇಶಕ ರಘು ಶಾಸ್ತ್ರಿ ಚಿತ್ರೀಕರಿಸಿಕೊಂಡಿದ್ದರು. ರಂಜನಿ ರಾಘವನ್ ಹಿಂದೆಂದೂ ಸಿಗರೇಟು ಸೇದಿರಲಿಲ್ಲವಾದ್ದರಿಂದ ಬರೀ ಹೊಗೆ ಬರುವಂತೆ ಕೃತಕವಾಗಿ ತಯಾರಿಸಿ ಅವರ ಕೈಗೆ ಕೊಡಲಾಗಿತ್ತಂತೆ! ಆ ಸಮಯದಲ್ಲಿ ಯಾರಾದರೂ ಕ್ಯಾಪ್ಚರ್ ಮಾಡಿರುವ ಸಾಧ್ಯತೆಗಳೂ ಇವೆ. ಅದೆಲ್ಲ ಏನೇ ಆದರೂ ಈ ಮೂಲಕ ನಾಗೇಶ್ ಕೋಗಿಲು ಅವರು ನಿರ್ಮಿಸುತ್ತಿರುವ ಟಕ್ಕರ್ ಚಿತ್ರಕ್ಕೆ ಮತ್ತೊಂದು ಸುತ್ತಿನ ಪ್ರಚಾರವೂ ದೊರೆತಿದೆ. ಆದರೆ ಇದೀಗ ಟ್ರೋಲ್ ಮೂಲಕ ಜಾಹೀರಾಗಿರೋ ರಂಜನಿ ರಾಘವನ್ ಧೂಮಲೀಲೆಯ ಫೋಟೋಗಳು ಟಕ್ಕರ್ ಚಿತ್ರಕ್ಕೆ ಸಂಬಂಧಿಸಿದ್ದೆಂಬುದನ್ನು ಜನ ಅರ್ಥ ಮಾಡಿಕೊಂಡರೆ ಅಷ್ಟೇ ಸಾಕು!
#