ಮಾಸ್ ಲುಕ್ಕಲ್ಲಿ ಮಿಂಚಿದರು ದರ್ಶನ್ ಸೋದರಳಿಯ ಮನೋಜ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್ ನಾಯಕನಾಗಿ ನಟಿಸಿರೋ ಚೊಚ್ಚಲ ಚಿತ್ರ ಟಕ್ಕರ್. ನಾಗೇಶ್ ಕೋಗಿಲು ನಿರ್ಮಾಣದ ಟಕ್ಕರ್ನ ಮಜಬೂತಾದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ನಿರ್ದೇಶಕ ದಿನಕರ್ ತೂಗುದೀಪ ಈ ಟೀಸರ್ ಅನ್ನು ಬಿಡುಗಡೆಗೊಳಿಸಿ ತಮ್ಮ ಅಳಿಯನ ಮೊದಲ ಚಿತ್ರಕ್ಕೆ ಶುಭ ಕೋರಿದ್ದಾರೆ.
ನೀನು ಟಕ್ಕರ್ ಕೊಡೋಕ್ ಬಂದಿರೋದು ಯಾರ್ ಜೊತೆ ಗೊತ್ತಾ? ದಾಸನ್ ಗರಡಿ ಹುಡುಗನ್ ಜೊತೆ ಎಂಬ ಮಾಸ್ ಡೈಲಾಗ್ ಮತ್ತು ಅದಕ್ಕೆ ತಕ್ಕುದಾದ ಮಾಸ್ ಸನ್ನಿವೇಶಗಳನ್ನೊಳಗೊಂಡಿರೋ ಟಕ್ಕರ್ ಟೀಸರ್ ನಿಜಕ್ಕೂ ಜಬರ್ದಸ್ತಾಗಿದೆ. ಈ ಮೂಲಕ ಮನೋಜ್ ಮೊದಲ ಚಿತ್ರದಲ್ಲಿಯೇ ಪಕ್ಕಾ ಆಕ್ಷನ್ ಅವತಾರದಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿರೋದೂ ಕೂಡಾ ಸ್ಪಷ್ಟವಾಗಿದೆ.
ಎಸ್ ಎಲ್ ಎನ್ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಹುಲಿರಾಯ ಖ್ಯಾತಿಯ ನಾಗೇಶ್ ಕೋಗಿಲು ಈ ಚಿತ್ರ ವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ರನ್ ಆಂಟನಿ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ರಘುಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿರುವ ಟಕ್ಕರ್ ನ ಟೀಸರ್ ಅನ್ನು ಬಿಡುಗಡೆಗೊಳಿಸಿರೋ ದಿನಕರ್ ತೂಗುದೀಪ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಆರಡಿಯ ಕಟ್ಟುಮಸ್ತಾದ ಮನೋಜ್ ಈ ಚಿತ್ರದ ಮೂಲಕ ಪಕ್ಕಾ ಆಕ್ಷನ್ ಹೀರೋ ಆಗಿ ಅಡಿಯಿರಿಸಲಿರೋ ಸೂಚನೆಗಳನ್ನೂ ಕೂಡಾ ಈ ಟೀಸರ್ ರವಾನಿಸಿದೆ. ಆಕ್ಷನ್ ಶೈಲಿಯ ಕಥಾ ಹಂದರ ಹೊಂದಿರೋ ಈ ಚಿತ್ರದಲ್ಲಿ ಪುಟ್ಟ ಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ಭಜರಂಗಿ ಲೋಕಿ ಸೇರಿದಂತೆ ಅನೇಕರು ಖಳರಾಗಿ ಅಬ್ಬರಿಸಿದ್ದಾರೆ.
ಇದೀಗ ಹೊರ ಬಂದಿರೋ ಟೀಸರ್ ಮೂಲಕವೇ ಟಕ್ಕರ್ ಸಕತ್ ಹವಾ ಸೃಷ್ಟಿಸೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಬಿಡುಗಡೆಯಾಗಿ ಸ್ವಲ್ಪ ಅವಧಿಯಲ್ಲಿಯೇ ವ್ಯಾಪಕ ಮೆಚ್ಚುಗೆ ಗಳಿಸಿಕೊಳ್ಳುತ್ತಿರೋ ಈ ಟೀಸರ್ ಚಿತ್ರತಂಡಕ್ಕೆ ಹೊಸಾ ಹುರುಪು ತುಂಬಿದೆ.