ಸರಿಸುಮಾರು ಹದಿನೆಂಟು ವರ್ಷಗಳ ಹಿಂದೆ ಟಿ.ಎನ್. ಸೀತಾರಾಮ್ ಅವರ ಜೊತೆ ಸಹ ನಿರ್ದೇಶಕರಾಗಿ, ಸಂಚಿಕೆ ನಿರ್ದೇಶಕರಾಗಿ ಧಾರಾವಾಹಿಗಳಿಗೆ ಕೆಲಸ ಮಾಡಿದ್ದವರು ಮಧುಚಂದ್ರ. ನಂತರ ಸಿನಿಮಾ ನಿರ್ದೇಶನಕ್ಕೂ ಬಂದು ಸೈಬರ್ ಯುಗದೊಳ್ ನವಯುಗ ಮಧುರ ಪ್ರೇಮ ಕಾವ್ಯ, ವಾಸ್ಕೋಡಗಾಮ ಮತ್ತು ಮೊನ್ನೆ ಮೊನ್ನೆ ತೆರೆಗೆ ಬಂದ ರವಿ ಹಿಸ್ಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಸದ್ಯ ಮಧುಚಂದ್ರ ಮತ್ತೊಂದು ಸಿನಿಮಾವನ್ನು ಆರಂಭಿಸುತ್ತಿದ್ದಾರೆ. ಇದಕ್ಕೆ ಟಾಕಿಂಗ್ ಸ್ಟಾರ್ ಅನ್ನೋ ಹೆಸರಿಟ್ಟಿದ್ದಾರೆ. ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಲಿದ್ದಾರೆ.
ಮಧುಚಂದ್ರ ಮಾಸ್ಟರ್ ಪೀಸ್ ಚಿತ್ರದ ನಿರ್ದೇಶಕ, ಕನ್ನಡದ ಖ್ಯಾತ ಸಂಭಾಷಣೆಕಾರ ಮಂಜು ಮಾಂಡವ್ಯ ಅವರ ಸಹೋದರ ಕೂಡಾ ಹೌದು. ಹಾಯ್ ಬೆಂಗಳೂರ್ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ಆಕಾಶಬುಟ್ಟಿ’ ಎನ್ನುವ ಅಂಕಣ ಬರೆಯುವ ಮೂಲಕವೇ ಹೆಸರಾಗಿದ್ದ ಹೆಚ್.ಡಿ. ಸುನೀತಾ ಅವರ ಪತಿ ಇದೇ ಮಧುಚಂದ್ರ. ಎಲ್ಲ ಅಂದುಕೊಂಡಂತೇ ಆಗಿದ್ದರೆ ವಾಸ್ಕೋಡಗಾಮಾ ಚಿತ್ರದಲ್ಲಿ ಉಪೇಂದ್ರ ಅಭಿನಯಿಸಿ, ಮಧುಚಂದ್ರ ಇಷ್ಟೊತ್ತಿಗೆ ಕನ್ನಡ ‘ಖ್ಯಾತ ನಿರ್ದೇಶಕ’ ಎನ್ನುವ ಪಟ್ಟ ಪಡೆಯಬೇಕಿತ್ತು. ಆದರೆ ಆ ಸಿನಿಮಾದಲ್ಲಿ ಕಿಶೋರ್ ಹೀರೋ ನಟಿಸುವಂತಾಗಿತ್ತು. ಕಿಶೋರ್ಗೆ ಹೀರೋ ಆಗಿ ಮಾರ್ಕೆಟ್ ಇಲ್ಲದ ಕಾರಣಕ್ಕೋ ಏನೋ ಸಿನಿಮಾ ಮಲಗಿಬಿಟ್ಟಿತು. ಮೊದಲ ಬಾರಿಗೆ ನಿರ್ದೇಶಿಸಿದ್ದ ಸೈಬರ್ ಯುಗದ ಮಧುರ ಪ್ರೇಮ ಕಾವ್ಯ ಕೂಡಾ ಪ್ರಚಾರದ ಕೊರತೆಯಿಂದ ಕಂಗಾಲಾಗಿತ್ತು. ಈಗಷ್ಟೇ ತೆರೆಗೆ ಬಂದಿರುವ ರವಿ ಹಿಸ್ಟರಿಯಲ್ಲಿ ಮಧುಚಂದ್ರರ ಬಗ್ಗೆ ಒಳ್ಳೇ ಮಾತುಗಳು ಕೇಳಿಬರುತ್ತಿದೆ.
ಕೆಲವೊಮ್ಮೆ ಹಾಗೇ… ನಿರ್ದೇಶಕ ಪ್ರತಿಭಾವಂತನಾಗಿದ್ದರೂ, ಹೊಸ ಪ್ರಯತ್ನಗಳಿಗೆ ಕೈ ಹಾಕಿದರೂ ಅದು ಜನಕ್ಕೆ ತಲುಪುವಷ್ಟರಲ್ಲಿ ಫೇಲ್ಯೂರ್ ಅನ್ನಿಸಿಕೊಂಡುಬಿಟ್ಟಿರುತ್ತದೆ. ಒಂದಿಷ್ಟು ಹೆಸರು ಮಾಡಿರುವ ಸ್ಟಾರುಗಳ ಸಾಥ್ ಇದ್ದಾಗ ಸಿನಿಮಾ ಗೆದ್ದು ಹೆಸರಾಗುತ್ತದೆ. ಮಧುಚಂದ್ರ ಸತತ ಮೂರು ಪ್ರಯತ್ನ ಮಾಡಿ, ನಾಲ್ಕನೇ ಪ್ರಯತ್ನಕ್ಕೆ ಮುಖ್ಯವಾಹಿನಿಗೆ ಬರುವ ಸೂಚನೆ ನೀಡಿದ್ದಾರೆ. ಟಾಕಿಂಗ್ ಸ್ಟಾರ್ ಅದನ್ನು ನೆರವೇರಿಸಲಿ…
No Comment! Be the first one.