ತಮಿಳುನಾಡಿನಲ್ಲಿ ಸಿನಿಮಾಮಂದಿ ರಾಜಕೀಯಕ್ಕೆ ಬರೋದು ಹೊಸದೇನಲ್ಲ. ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾರಿಂದ ಆರಂಭಗೊಂಡು, ವಿಜಯಕಾಂತ್, ಶರತ್ ಕುಮಾರ್ ತನಕ ಸಾಕಷ್ಟು ಜನ ರಾಜಕಾರಣಕ್ಕಿಳಿದವರೇ. ಕಮಲಹಾಸನ್ ಈಗಾಗಲೇ ಪಕ್ಷ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ರಜನಿಕಾಂತ್ ಕೂಡಾ ಸಾಕಷ್ಟು ಗೊಂದಲಗಳ ಮಧ್ಯೆಯೂ ತಮ್ಮ ಪಕ್ಷವನ್ನು ಸ್ಥಾಪಿಸಿ, ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದಾರೆ. ರಜನಿ ಇತ್ತೀಚೆಗೆ ಸ್ಪೀಡಾಗಿ ಸಿನಿಮಾ ಮಾಡುತ್ತಿರೋದು ಕೂಡಾ ಮುಂಬರುವ ಎಲೆಕ್ಷನ್ನಿಗೆ ಪಾರ್ಟಿ ಫಂಡು ಹೊಂದಿಸಲು ಅನ್ನೋದು ಸಾಕಷ್ಟು ಜನರ ಅಭಿಪ್ರಾಯ!

ಜಯಲಲಿತಾ ಕಣ್ಮುಚ್ಚುವ ಮುಂಚೆಯೇ, ಆಕೆಯ ನಿರ್ಗಮನದ ಬಳಿಕ ಅವರ ಮಾನಸಪುತ್ರನಂತಿದ್ದ ತಲಾ ಅಜಿತ್ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಾರೆ ಅನ್ನೋ ಮಾತು ಕೇಳಿಬಂದಿತ್ತು. ಜಯಮ್ಮನ ಜೊತೆ ಅಜಿತ್ ಬಾಂಧವ್ಯವಿದ್ದಿದ್ದೇನೋ ನಿಜ.  ಆದರೆ ಆಕೆಯ ಅಂತಿಮ ದರ್ಶನ ಪಡೆಯಲೂ ಈತ ಬಾರದೇಹೋದ. ಅಭಿಮಾನಿ ಸಂಘ ಕೂಡಾ ಯಾರೂ ಕಟ್ಟಬಾರದು ಅಂತಾ ಆಜ್ಞಾಪಿಸಿರುವ, ಸಣ್ಣದೊಂದು ಸಭೆ ಸಮಾರಂಭಗಳಲ್ಲೂ ಭಾಗಿಯಾಗದ ವಿಕ್ಷಿಪ್ತ ಮನಸ್ಸಿನ, ಮೂಡಿ ಮನುಷ್ಯ ಅಜಿತ್. ಸಿನಿಮಾ, ಕಾರ್ ರೇಸು, ಇನ್ನೊಂದು ಮತ್ತೊಂದು ಅಂತಾ ತನ್ನದೇ ಲೋಕದಲ್ಲಿ ವಿಹರಿಸುವ ಅಜಿತ್ ರಾಜಕಾರಣಕ್ಕೆ ಸರಿಹೊಂದಲು ಸಾಧ್ಯವೇ ಇಲ್ಲ.

ಅನಾದಿಕಾಲದಿಂದಲೂ ಆಪ್ತಮಿತ್ರರಾಗಿರುವ ರಜನಿ ಮತ್ತು ಕಮಲ್ ತಲೆಗೊಂದು ಪಕ್ಷ ಕಟ್ಟಿಕೊಂಡು ಅಖಾಡಕ್ಕಿಳಿಯಲು ಅಣಿಯಾಗುತ್ತಿದ್ದರೆ, ಇತ್ತ ಇಳಯ ದಳಪತಿ ವಿಜಯ್ ಸದ್ದೇ ಇಲ್ಲದೆ  ತನ್ನ ಪಡೆಯನ್ನು ಎಲೆಕ್ಷನ್ನಿಗೆ ನಿಲ್ಲಿಸಿ ಜಯಭೇರಿ ಸಾಧಿಸಿದ್ದಾರೆ!

ಉಲಗನಾಯಕನ್ ಕಮಲ್ ಕಳೆದ ಲೋಕಸಭಾ ಚುನಾವಣೆಯಲ್ಲಿ ತಾವೇ ಸ್ಥಾಪಿಸಿರುವ ಮಕ್ಕಳ್ ನಿಧಿ ಮಯ್ಯಂ ಪಕ್ಷದಿಂದ ಹದಿನೆಂಟು ಜನರನ್ನು ಕಣಕ್ಕಿಳಿಸಿದ್ದರು. ಅದ್ಭುತ ನಟ, ಬುದ್ದಿವಂತ ಅನ್ನೋ ದಾಕ್ಷಿಣ್ಯವನ್ನೂ ಜನ ತೋರಲಿಲ್ಲ. ಪರಿಣಾಮವಾಗಿ ಕಮಲ್ ಹೆಸರನ್ನು ಉಳಿಸಲಾದರೂ ಒಬ್ಬ ಅಭ್ಯರ್ಥಿಯೂ ಗೆಲ್ಲಲಿಲ್ಲ. ಇದರಿಂದ ವಿಚಲಿತರಾದ ಕಮಲ್ ಇತ್ತೀಚೆಗೆ ನಡೆದ ಚೆನ್ನೈ ಕಾರ್ಪೊರೇಷನ್ ಕೌನ್ಸಿಲ್ ಚುನಾವಣೆಯಲ್ಲಿ ತನ್ನ ಪಕ್ಷದಿಂದ ಯಾರನ್ನೂ ನಿಲ್ಲಿಸಲಿಲ್ಲ.

ತಾನು ರಾಜಕಾರಣಕ್ಕೆ ಬರುತ್ತೀನಿ. ‘ನಾನು ಅಖಾಡಕ್ಕಿಳಿದರೆ ಗೆಲ್ಲೋದು ಗ್ಯಾರೆಂಟಿ ಎಂಬ ಯಾವ ಬಿಲ್ಡಪ್ ಡೈಲಾಗನ್ನೂ ಮಾತಾಡದ ವಿಜಯ್ ಸೈಲೆಂಟಾಗೇ ಸಾಧಿಸಿ ತೋರಿಸಿದ್ದಾನೆ. ಅದೇನೆಂದರೆ ವಿಜಯ್ ಪೀಪಲ್ ಮೂವ್ಮೆಂಟ್ ಎನ್ನುವ ಅಧಿಕೃತ ಅಭಿಮಾನಿ ಸಂಘವೊಂದಿದೆ. ಅದರ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಸೇರಿದಂತೆ ಹತ್ತು ಜನ ಚುನಾವಣೆಗೆ ಸ್ಪರ್ಧಿಸಿ ಅಷ್ಟೂ ಜನ ಗೆಲುವು ಗಳಿಸಿದ್ದಾರೆ.

ಅಲ್ಲಿಗೆ ವಿಜಯ್ ಯಾವುದೇ ಅಧಿಕೃತ ಘೋಷಣೆ ನೀಡದೆ, ಸದ್ದಿಲ್ಲದೇ ಬುಡ ಮಟ್ಟದಲ್ಲಿ ಕೆಲಸ ಮಾಡಿ ತನ್ನ ಬೇರು ಗಟ್ಟಿ ಮಾಡಿಕೊಳ್ಳುತ್ತಿದ್ದಾನೆ ಅನ್ನೋದು ನಿಜವಾಗಿದೆ.  ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ವಿಜಯ್ ಅಭಿಮಾನಿಗಳು ಚುನಾವಣೆಗೆ ಸ್ಪರ್ಧಿಸುತ್ತಾರೆ ಅನ್ನೋ ಮಾತು ಕೇಳಿಬರುತ್ತಿದೆ. ಅಲ್ಲಿಗೆ ವಿಜಯ್ ಸಿನಿಮಾ ಬದುಕಿನಲ್ಲಿ ಮಾತ್ರವಲ್ಲದೆ, ನಿಜಜೀವನದಲ್ಲೂ ದಳಪತಿಯಾಗಿ ಮೆರೆಯೋ ಕಾಲ ದೂರವಿಲ್ಲ ಎನ್ನುವಂತಾಗಿದೆ!

CG ARUN

ನಾನು ಮತ್ತು ಗುಂಡ ಬಗ್ಗೆ ನಿರ್ದೇಶಕ ಶ್ರೀನಿವಾಸ ತಿಮ್ಮಯ್ಯ ಏನಂತಾರೆ?

Previous article

You may also like

Comments

Leave a reply

Your email address will not be published. Required fields are marked *