ನೆನ್ನೆಯಷ್ಟೇ ತಮಿಳರ ಪುತ್ತಾಂಡು ಆರಂಭವಾಗಿದೆ. ನಮ್ಮವರಿಗೆ ಚಾಂದ್ರಮಾನ ಯುಗಾದಿ ಹೇಗೆ ಹೊಸ ವರ್ಷವೋ, ಹಾಗೆ ತಮಿಳಿನ ಜನಕ್ಕೆ ಸೌರಮಾನ ಯುಗಾದಿ ವರ್ಷದ ಆರಂಭ. ಹಿಂದಿನ ದಿನವೇ ಹಣ್ಣು, ತರಕಾರಿ, ಹೂಗಳಿಂದ ವಿಷುಕಣಿಯನ್ನು ಅಲಂಕರಿಸಿಡುವುದು, ಬೆಳಿಗ್ಗೆ ಎದ್ದು ದೀಪ ಬೆಳಗಿಸಿ ಅದನ್ನು ಕನ್ನಡಿಯಲ್ಲಿ ನೋಡುವುದು ಅಲ್ಲಿನ ಸಂಪ್ರದಾಯ. ಕರೋನಾ ಕಾಟದಿಂದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮೂಗು ಬಾಯಿಗೆ ಮಾಸ್ಕ್ ಹಾಕಿಕೊಂಡು ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಜಗತ್ತಿನೆಲ್ಲೆಡೆ ಇರುವ ತಮಿಳು ಮಂದಿಗೆ ಸೂಪರ್ ಸ್ಟಾರ್ ರಜನಿಕಾಂತ್ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. “ಇಲ್ಲಿರುವ ನಿಮ್ಮ ಕುಟುಬಂದವರು, ಆತ್ಮೀಯರಿಗೆ ದೂರದ ದೇಶದಲ್ಲಿ ಬದುಕುತ್ತಿರುವ ನಿಮ್ಮ ಬಗ್ಗೆಯೇ ಕಾಳಜಿ ಮತ್ತು ಚಿಂತೆಯಾಗಿದೆ. ನೀವು ಯಾವೆಲ್ಲಾ ದೇಶದಲ್ಲಿ ಜೀವನ ಸಾಗಿಸುತ್ತಿದ್ದೀರೋ, ಆಯಾ ದೇಶದ ಸರ್ಕಾರಗಳು ವಿಧಿಸಿರುವ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಆ ಮೂಲಕ ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ಅದೇ ನೀವು ನಿಮ್ಮವರಿಗೆ ನೀಡುವ ಈ ಹೊಸ ವರ್ಷದ ದೊಡ್ಡ ಉಡುಗೊರೆ. ಎಲ್ಲರೂ ಆರೋಗ್ಯವಂತರಾಗಿ ಬಾಳಿರಿ” ಎಂಬ ಮಾತುಗಳನ್ನಾಡಿ, ಆ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ತಲೈವಾ ಅಪ್ ಲೋಡ್ ಮಾಡಿದ್ದಾರೆ.
ಯಾರು ತಾನೆ ಊಹಿಸಿದ್ದರು ಇಡೀ ಜಗತ್ತೇ ಇಂಥದ್ದೊಂದು ಕೆಟ್ಟ ದಿನಗಳನ್ನು ಸಂಧಿಸುತ್ತದೆ ಅಂತಾ. ಪ್ರಪಂಚದ ಎಲ್ಲ ಹಬ್ಬಗಳೂ ಈ ಸಲ ಮಂಕಾಗಿವೆ. ತಮ್ಮ ನಂಬಿಕೆ, ಆಚರಣೆಗಳನ್ನೆಲ್ಲಾ ಮಾಸ್ಕು, ಸ್ಯಾನಿಟೈಸರುಗಳು ಆವರಿಸಿಕೊಂಡಿವೆ. ಇಷ್ಟದೇವತೆಗಳ ಗರ್ಭಗುಡಿ ಬಾಗಿಲುಮುಚ್ಚಿವೆ. ಈ ಕರೋನಾ ಕಂಟಕ ಆದಷ್ಟು ಬೇಗ ತೊಲಗಬೇಕೆಂದರೆ ಪ್ರತಿಯೊಬ್ಬರೂ ಮನೆಯೊಳಗೇ ಬಂಧಿಯಾಗಬೇಕಿರುವ ಅನಿವಾರ್ಯತೆ ಇದೆ!