ತನಿಖೆ ಎಂಬ ಪದವನ್ನು ಪೊಲೀಸ್ ಸ್ಟೇಷನ್ನಿನಲ್ಲಿಯೇ ಹೆಚ್ಚಾಗಿ ಕೇಳುವ ಕಾಲವೊಂದಿತ್ತು. ಈಗೀಗ ಕೊಲೆ ಪ್ರಕರಣಗಳ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತಿದ್ದಂತೆ ಸುದ್ದಿ ವಾಹಿನಿಗಳಲ್ಲಿ ಆ ಪದ ದೇವರ ನಾಮವಾಗಿಬಿಟ್ಟಿದೆ. ಅಪರಾಧಗಳ ಕುರಿತಾದ ಸುದ್ದಿಗಳನ್ನು ಹೇಳುವಾಗ ಆ ಪದವನ್ನು ಬಳಸದಿದ್ದರೆ ಹೇಗೆ. ಸದ್ಯ ಗಾಂಧಿನಗರದಲ್ಲಿ ಇಂತಹುದೇ ತನಿಖೆಯೊಂದು ಶುರುವಾಗಿದೆ. ಆದರೆ ಈ ತನಿಖೆಯನ್ನು ಪೊಲೀಸರಿಂದಾಗದೇ ಸ್ಯಾಂಡಲ್ ವುಡ್ ನ ಮಂದಿ ಮಾಡುತ್ತಿದ್ಧಾರೆ. ಯೆಸ್.. ತನಿಖೆ ಎಂಬ ಹೆಸರಿನ ಸಿನಿಮಾವೊಂದು ರೆಡಿಯಾಗಿದ್ದು, ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.
ಹಲವು ದಶಕಗಳ ಹಿಂದೆ ಕನಕಪುರದಲ್ಲಿ ನಡೆದ ಸತ್ಯಘಟನೆಯ ಎಳೆಯಿಟ್ಟುಕೊಂಡು ತನಿಖೆಯ ಕಥೆಯನ್ನು ರೆಡಿಮಾಡಲಾಗಿದೆಯಂತೆ. ಪ್ರಪಂಚವನ್ನು ನೆಗೇಟಿವ್ ಆಗಿ ನೋಡುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕ ಸಿಕ್ಕವರನ್ನು ಕಾರಣವಿಲ್ಲದೇ ಮರ್ಡರ್ ಮಾಡುತ್ತಿರುತ್ತಾನೆ. ಕೊನೆಗೆ ಅವನ ಮನಸ್ಸು ಪರಿವರ್ತನೆಯಾಗಿ ಸನ್ಮಾಗದಲ್ಲಿ ನಡೆಯಲು ಆರಂಭಿಸುತ್ತಾನೆ. ಆದರೆ ಆತ ಮಾಡಿದ ಕೊಲೆಗಳ ಲೆಕ್ಕಪುಕ್ಕವಿಡಿದು ಹೋದ ಪೊಲೀಸರಿಗೆ ಅದನ್ನು ಭೇದಿಸುವುದೇ ತಲೆನೋವಾಗಿರುತ್ತದೆ. ಆ ಕೊಲೆಗಳನ್ನು ಮಾಡಿದ ಆತ ಯಾರು? ಏನಾದ ಎಂಬುದೇ ತನಿಖೆಯ ಕಥೆ. ಜಿ.ಎಸ್. ಕಲಿಗೌಡ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಸ್ವತಃ ಅವರೇ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದಾರೆ. ಆರ್. ಡಿ. ಅನಿಲ್ ತನಿಖೆಯ ನಾಯಕನಾಗಿದ್ದು, ಸಹ ನಿರ್ಮಾಪಕನಾಗಿಯೂ ಕಲಿಗೌಡರಿಗೆ ಸಾಥ್ ಕೊಟ್ಟಿದ್ದಾರೆ. ಇನ್ನು ಅನಿಲ್ ಗೆ ನಾಯಕಿಯಾಗಿ ಚಂದನಾ ಜತೆಯಾಗಿದ್ದಾರೆ. ಉಳಿದಂತೆ ಮುನಿರಾಜು, ಗುಲ್ಷನ್, ನಿಖಿತ್, ರವಿ, ಅಪ್ಪ ಬಡಿಗಾರ್, ಕಲ್ಕೆರೆ ಗಂಗಾಧರ್, ಗೋಪಿ ತನಿಖೆಯ ತಾರಾಗಣದಲ್ಲಿದ್ದಾರೆ. ಇನ್ನು ಕ್ರಿಸ್ಟೋಫರ್ ಲೀ ಸಂಗೀತ, ಶ್ಯಾಮ್ ಸಿಂಧನೂರು ಛಾಯಾಗ್ರಹಣ ಚಿತ್ರಕ್ಕಿದೆ.