ಇತ್ತೀಚಿಗಷ್ಟೇ ಹೃದಯಾಘಾತದಿಂದ ನಿಧನ ಹೊಂದಿದ ಸುಷ್ಮಾ ಸ್ವರಾಜ್ ಅವರಿಗಾಗಿ ರಾಷ್ಟ್ರದಾದ್ಯಂತ ಸಂತಾಪ ಮತ್ತು ಶೋಕಾಚರಣೆಯನ್ನು ಆಚರಿಸಲಾಗುತ್ತಿದೆ. ಇವರ ಸಾವಿಗೆ ಬಾಲಿವುಡ್ ತಾರೆಯರು ಸಹ ಸಂತಾಪ ಸೂಚಿಸಿದ್ದು, ಸುಷ್ಮಾ ಸ್ವರಾಜ್ ಅವರ ಬಯೋಪಿಕ್ ಬರಲಿದೆ ಎಂಬ ಸುದ್ದಿಯೂ ಬಿ ಟೌನ್ ನಲ್ಲಿ ಹರಿದಾಡುತ್ತಿದೆ. ಈತನ್ಮಧ್ಯೆ ಬಾಲಿವುಡ್ ನಟಿ ತಾಪ್ಸಿ ಪನ್ನು ಸುಷ್ಮಾ ಸ್ವರಾಜ್ ಬಯೋಪಿಕ್ ನಲ್ಲಿ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದೇನೆ ಎಂದು ಸ್ವತಃ ಹೇಳಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ತಾಪ್ಸಿ, ಸುಷ್ಮಾ ಸ್ವರಾಜ್ ಅವರ ಬಯೋಪಿಕ್ನಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದರೆ ನಾನು ಕೈಬಿಡುವುದಿಲ್ಲ. ಅಂತಹ ಲೆಜೆಂಡ್ ಬಯೋಪಿಕ್ನಲ್ಲಿ ಯಾರು ತಾನೆ ನಟಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಸುಷ್ಮಾ ಸ್ವರಾಜ್ ಅವರ ಭಾಷಣ ಸ್ಮರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ತಾಪ್ಸಿ, ನಾನು ಅವರ ಅಭಿಮಾನಿ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.