ಮಹಾವಿಷ್ಣು ಭೂಲೋಕಕ್ಕೆ ಬಂದು ತೆರಳೋ ಮುನ್ನ ಲೋಕಕಲ್ಯಾಣದ ಉದ್ದೇಶಕ್ಕಾಗಿ ಬುಡಬುಡಕೆ ಜನಾಂಗವನ್ನು ಬಿಟ್ಟುಹೋದನಂತೆ. ಈ ಬುಡಬುಡಕೆ ಜನಾಂಗದಲ್ಲಿ ಸಿದ್ಧಿ ಪಡೆದ ವ್ಯಕ್ತಿ ತನ್ನ ಅತೀಂದ್ರಿಯ ಶಕ್ತಿಯ ಮೂಲಕ ಹಾಲಕ್ಕಿಯ ನುಡಿಯನ್ನು ಆಲಿಸಿ ಭವಿಷ್ಯವನ್ನು ತಿಳಿದುಕೊಳ್ಳುತ್ತಾನಂತೆ. ಹಿಂದೆ ವಾಸ್ಕೋಡಿಗಾಮ ಕಂಡು ಹಿಡಿದ ದಾರಿ ಹಿಡಿದು ಬಂದ ಫ್ರೆಂಚರು ಡಚ್ಚರು ಮುಂತಾದವರು ಭಾರತದ ದೇವಾಲಯಗಳನ್ನು ಲೂಟಿ ಮಾಡಿದ್ದರಂತೆ. ಅದನ್ನು ಬ್ರಿಟಿಷರ ಕಾಲದಲ್ಲಿ ಇತಿಹಾಸಕಾರ ಮತ್ತು ಸ್ವತಃ ಆರ್ಕಿಯಾಲಜಿಸ್ಟ್ ಆಗಿದ್ದ ಎಡ್ವರ್ಡ್ ವಿಲಿಯಮ್ ಬುಲ್ ಎಂಬಾತ ಮೊಗಲರು ದೋಚಿದ್ದನ್ನು ತಿಳಿಯುವ ಕುತೂಹಲದಿಂದ ವಿಷ್ಣುವಿನ ದೇವಾಲಯವೊಂದನ್ನು ತಲಾಷು ಮಾಡುತ್ತಿದ್ದ ಸಂದರ್ಭದಲ್ಲಿ ಆತನ ಕಣ್ಣಿಗೆ ಸಿದ್ದಿ ಪಡೆದಿದ್ದ ಬುಡಬುಡಕೆ ವ್ಯಕ್ತಿಯೊಬ್ಬ ಗೋಚರಿಸಿದ್ದನಂತೆ.
ಆತನನ್ನು ಹಿಂಬಾಲಿಸಿದಾಗ ಈ ಅಧಿಕಾರಿಗೆ ರೈಸ್ ಪುಲ್ಲರ್ ವಸ್ತುವೊಂದು ದೊರಕಿತ್ತಂತೆ. ಇದನ್ನು ಬಳಸಿ ಜಗತ್ತಿನಾದ್ಯಂತ ಇಂಗ್ಲೆಂಡ್ ವಸಾಹತುಗಳನ್ನು ಸ್ತಾಪಿಸುತ್ತಾ ಬಂದರಂತೆ. ಅದನ್ನು ಎರಡನೇ ಮಹಾ ಯುದ್ಧದಲ್ಲಿ ಅಣುಬಾಂಬ್ ಆಗಿ ಬಳಸಿಕೊಂಡಿದ್ದರಿಂದ ಮತ್ತೆ ಇಂಗ್ಲೆಂಡ್ ವಸಾಹತುಗಳನ್ನು ಕಳೆದುಕೊಳ್ಳಬೇಕಾಯಿತಂತೆ. ಹೀಗೆ ತಲೆತಲಾಂತರದಿಂದ ಬುಡಬುಕೆ ಜನಾಂಗ, ಹಾಲಕ್ಕಿ ನುಡಿ, ರೈಸ್ ಪುಲ್ಲಿಂಗ್, ಅದನ್ನು ಪಡೆದು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಮುಗಿಬಿದ್ದವರ ಕತೆ ಮುಂದುವರೆಯುತ್ತಾ ಬಂದಿದೆ.
ಇಂಥದ್ದೇ ನಂಬಿಕೆ, ಆಚರಣೆ, ಲೋಕಕಲ್ಯಾಣಕ್ಕೆಂದು ಇರುವ ಶಕ್ತಿಯ ದುರುಪಯೋಗಕ್ಕೆ ಬಿದ್ದವರ ದುರಾಸೆ, ಹೀನಕೃತ್ಯಗಳು ಮತ್ತು ಅದಕ್ಕೆ ಬಲಿಪಶುಗಳಾಗುತ್ತಿರುವ ಬುಡಬುಡಕೆ ಜನಾಂಗದ ಒಳಬಾಧೆಗಳನ್ನು `ತಾರಕಾಸುರ’ ಎಂಬ ಕಮರ್ಷಿಯಲ್ ಸಿನಿಮಾದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಯಾಕೆಂದರೆ ಇತಿಹಾಸದಲ್ಲಿ ನಡೆದಂತಾ ಘಟನೆಗಳು ಇಲ್ಲೂ ಜರುಗುತ್ತವೆ. ತನ್ನ ಮಗಳ ಶವವನ್ನು ತನ್ನ ತಂತ್ರ ಸಾಧನೆಗಾಗಿ ಬಳಸಿಕೊಂಡರು ಎನ್ನುವ ಕಾರಣಕ್ಕಾಗಿ ಒಂದು ಊರಿನಲ್ಲಿ ನೆಲೆನಿಂತ ಬುಡಬುಡಕೆ ಜನಾಂಗದವರನ್ನು ಜೀವಂತ ಸುಟ್ಟು, ಮಿಕ್ಕವರನ್ನು ಊರು ಬಿಟ್ಟುಹೋಗಿ ದಿಕ್ಕಾಪಾಗುವಂತೆ ಮಾಡಿರುತ್ತಾನೆ. ಆವಾಗ ಅದೇ ಜನಾಂಗ ಮತ್ತವರ ತಂತ್ರ ವಿದ್ಯೆಯಿಂದ ತನಗೆ ಅಪಾರ ಸಂಪತ್ತು ಗಳಿಕೆಯಾಗುತ್ತದೆ ಅನ್ನೋದು ಗೊತ್ತಾಗುತ್ತದರೋ ಅದೇ ಜನರ ಬೆನ್ನುಬೀಳುತ್ತಾನೆ.
ಸಿನಿಮಾದ ಹೀರೋ ಕಾರ್ತಿಕೇಯ ಅಲಿಯಾಸ್ ಕಾರ್ಬನ್ ಕೂಡಾ ಸಿದ್ಧಿ ಪಡೆದ ಬುಡಬುಕೆ ಜನಾಂಗದವನು. ಊರ ಶ್ರೀಮಂತ ಕಾಳಿಂಗನ ಕಾಟದಿಂದ ತಪ್ಪಿಸಿಕೊಂಡು ಸಿಟಿ ಸೇರೋ ಈತ ಬೇರೊಂದು ಲೋಕಕ್ಕೆ ಒಗ್ಗಿಕೊಂಡು, ಕೆಲಸ, ಹುಡುಗಿ ಅಂತಾ ಬ್ಯುಸಿಯಾಗಿರುತ್ತಾನೆ. ಈ ಮಧ್ಯೆ ಪ್ರೀತಿಯ ವಿಚಾರದಲ್ಲಿ ಏನೇನೋ ಏರುಪೇರುಗಳಾಗುತ್ತವೆ. ಪರಿಸ್ಥಿತಿ ಮತ್ತವನ್ನು ಹಳೆಯ ತಂತ್ರವಿದ್ಯೆಯತ್ತ ಎಳೆದೊಯ್ಯುತ್ತದೆ. ಬೇಡವೆಂದು ಬಿಟ್ಟುಬಂದ ಹಾಲಕ್ಕಿ ನುಡಿ, ಜೋಡಿ ಜೀವದ ಹೆಣ, ಬೆತ್ತಲೆ ಪೂಜೆಗಳೆಲ್ಲಾ ಮರುಕಳಿಸುತ್ತವೆ. ತನ್ನವರನ್ನು ಕೊಂದವನಿಗಾಗಿ ತಯಾರಾದ ಆ ಪೂಜೆ ಫಲಪ್ರದವಾಗುತ್ತದಾ? ತಾನು ಪ್ರೀತಿಸಿದ ಹುಡುಗಿ ಮತ್ತೆ ಈತನಿಗೆ ಯಾವ ರೂಪದಲ್ಲಿ ಎದುರಾಗುತ್ತಾಳೆ? ಎಂಬೆಲ್ಲಾ ಕುತೂಲಹಗಳು ನೋಡುಗರಿಗೆ ಹೊಸಾ ಅನುಭವ ನೀಡುತ್ತವೆ.
ಬಹುಶಃ ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಯಾರು ಮುಟ್ಟದ ಕಥಾವಸ್ತು `ತಾರಕಾಸುರ’ ಚಿತ್ರದ್ದು. ಈ ಹಿಂದೆ ಇದೇ ನಿರ್ದೇಶಕ ಬಂಡಿಯಪ್ಪ `ರಥಾವರ’ದಲ್ಲಿ ಮಂಗಳಮುಖಿಯರ ವಿಚಿತ್ರ ಜಗತ್ತನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದರು. ಈ ಬಾರಿ ಬುಡಬುಡಕೆ ಜನಾಂಗದವರ ವಿಚಾರವನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಇತಿಹಾಸವನ್ನು ಹೇಳುತ್ತಲೇ ವಾಸ್ತವದ ಜೊತೆಗೆ ಕಮರ್ಷಿಯಲ್ ಕತೆಯನ್ನು ಬೆರೆಸಿರುವುದು ಬಂಡಿಯಪ್ಪನವರ ಜಾಣ್ಮೆ. ಈ ಚಿತ್ರದ ಹೀರೋ ವೈಭವ್ ಹೊಸಬನಾದರೂ ಸಾಹಸ ದೃಷ್ಯಗಳಲ್ಲಿ ರೋಚಕವಾಗಿ ಅಭಿನಯಿಸಿದ್ದಾರೆ. ನಾಯಕಿ ಮಾನ್ವಿತಾ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ. ತೆರೆಮೇಲೆ ಈಕೆ ಇನ್ನೊಂಚೂರು ಕಾಣಿಸಿಕೊಳ್ಳಬೇಕಿತ್ತು ಅನ್ನೋದು ನೋಡುಗರ ಕೊರಗಾಗಿರಬಹುದು.
ಖಳನಾಯಕನಾಗಿ ನಟಿಸಿರುವ ಡ್ಯಾನಿ ಸಫಾನಿ ನಿಜಕ್ಕೂ ಭಯ ಹುಟ್ಟಿಸುತ್ತಾರೆ. ಆದರೆ ಅವರ ಪಾತ್ರಕ್ಕೆ ಇನ್ನೂ ಖಡಕ್ಕು ದನಿಯನ್ನು ಬಳಸಬೇಕಿತ್ತು. ಒಟ್ಟಾರೆ ಸಿನಿಮಾದಲ್ಲಿ ಸಾಹಸದೃಶ್ಯಗಳು ಹೆಚ್ಚು ಶಕ್ತಿಯುತವಾಗಿವೆ. ಸಾಧು ಕೋಕಿಲಾ ಹಾಸ್ಯ ಸನ್ನಿವೇಶಗಳೂ ಸಶಕ್ತವಾಗಿವೆ. ನಾಯಕ ನಟ ವೈಭವ್ ಹೊಡೆದಾಟಗಳಲ್ಲಿ ಮಾತ್ರವಲ್ಲದೆ ಡ್ಯಾನ್ಸ್ ಮಾಡಿಯೂ ಮೋಡಿ ಮಾಡುತ್ತಾರೆ.
#
No Comment! Be the first one.