ತರುಣ್ ಒಂಚೂರು ಸ್ಥಿತಿವಂತರ ಮನೆ ಹುಡುಗ. ಹೀಗಾಗಿ ಸಿನಿಮಾದಿಂದ ಸದ್ಯ ದೂರವಾಗಿದ್ದರೂ ಬದುಕಿಗೇನೂ ತತ್ವಾರವಿಲ್ಲ. ಆದರೆ ಇದೇ ರೀತಿ ಕನಸಿಟ್ಟುಕೊಂಡು ಸಿನಿಮಾ ರಂಗಕ್ಕೆ ಬಂದವರು, ಇಲ್ಲಿ ನೆಲೆ ಕಂಡುಕೊಳ್ಳಲಾರದ ಎಷ್ಟು ಜನ ಇಲ್ಲ? ಅವರ ಬದುಕೆಲ್ಲ ಹೇಗೆ?
ಇಸವಿ ಎರಡು ಸಾವಿರದ ನಂತರ ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋಗಳು ಬೇಕು ಎನ್ನುವ ಕೂಗು ಕೇಳಿಬರುತ್ತಿತ್ತು. ಆ ಹೊತ್ತಿನಲ್ಲೇ ಒಂದಷ್ಟು ಜನ ಏಳೇ ಹುಡುಗರೂ ಪರಿಚಯವಾದರು. ಅದರಲ್ಲಿ ಪ್ರಮುಖನಾಗಿದ್ದವನು ತರುಣ್ ಚಂದ್ರ. ಪ್ರಕಾಶ್ ನಿರ್ದೇಶನದ ಖುಷಿ ಸಿನಿಮಾದಲ್ಲಿ ವಿಜಯರಾಘವೇಂದ್ರ ಜೊತೆಗೆ ತರುಣ್ ಕೂಡಾ ಒನ್ ಆಫ್ ದಿ ಹೀರೋ ಅನಿಸಿಕೊಂಡಿದ್ದ. ಆ ನಂತರ ಗೆಳೆಯ ಚಿತ್ರದಲ್ಲಿ ಪ್ರಜ್ವಲ್ ಜೊತೆ ಕಾಣಿಸಿಕೊಂಡ. ಈ ಬಂಧನದಲ್ಲಿ ವಿಷ್ಣುವರ್ಧನ್ ಅವರೊಟ್ಟಿಗೆ ನಟಿಸುವ ಅವಕಾಶ ಕೂಡಾ ದೊರೆಯಿತು. ಲವ್ ಗುರು ಸಿನಿಮಾದಿಂದ ಪೂರ್ಣ ಪ್ರಮಾಣದ ಹೀರೋ ಕೂಡಾ ಆದ ತರುಣ್ ಹನಿ ಹನಿ, ಪರಿಚಯ, ಸೀನ, ಗಾನ ಬಜಾನಾ, ನಾನಲ್ಲ, ಅಚ್ಚುಮೆಚ್ಚು, ಪದೇ ಪದೇ, ಸ್ನೇಹಿತರು, ಘರ್ಷಣೆ ಮುಂತಾದ ಸಿನಿಮಾಗಳಲ್ಲಿ ವರ್ಷಕ್ಕೆ ಒಂದು ಎರಡು ಸಿನಿಮಾಗಳಂತೆ ನಟಿಸುತ್ತಾ ಬಂದ. ಈ ನಡುವೆ ಪಳ್ಳಿದ್ದರಿ ವಯಸ್ಸು ಪದಹರೆ ಅಂತೊಂದು ತೆಲುಗು ಸಿನಿಮಾದಲ್ಲೂ ತರುಣ್ ಹೀರೋ ಆಗಿ ಅಭಿನಯಿಸಿದ್ದ. ಮುದ್ದು ಮುದ್ದಾಗಿದ್ದ ಈ ಹುಡುಗನನ್ನು ಕಂಡು ಅಗಣಿತ ಸಂಖ್ಯೆಯ ಹೆಣ್ಣುಮಕ್ಕಳು ಫಿದಾ ಆಗಿದ್ದರು. ಸಿನಿಮಾಗಳ ಆಯ್ಕೆ ಸರಿಯಾಗಿದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಈ ನಟ ಬೇರೆಯದ್ದೇ ಲೆವೆಲ್ಲಿನಲ್ಲಿರುತ್ತಿದ್ದ.
ಅದೆಂಥದ್ದೋ ಗೋವಾ ಅನ್ನೋ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿತ್ತು. ಯಾವತ್ತೋ ಶುರುವಾಗಿದ್ದ ಆ ಚಿತ್ರ ತೆರೆಗೆ ಬರುವಷ್ಟರಲ್ಲಿ ವರ್ಷಗಳೇ ಉರುಳಿದ್ದವು. ಕೋಮಲ್, ಶ್ರೀಕಿ ಮತ್ತು ಈ ತರುಣ್ ಚಂದ್ರ ಮೂವರಿಗೂ ಅದೇನು ಹಣೆಬರಹ ಕೆಟ್ಟಿತ್ತೋ? ಈ ಸಿನಿಮಾದಲ್ಲಿ ನಟಿಸಿದ ನಂತರ ಮೂವರೂ ದಿಕ್ಕಾಪಾಲಾಗಿಬಿಟ್ಟರು. ಸ್ಟಾರ್ ವರ್ಚಸ್ಸು ಪಡೆದಿದ್ದ ಕೋಮಲ್ ಸಿನಿಮಾಗಳಿಲ್ಲದೆ ಕಂಗಾಲಾಗಿಬಿಟ್ಟರು. ಒಲವೇ ಮಂದಾರದ ಮೂಲಕ ಭರವಸೆ ಹುಟ್ಟಿಸಿದ್ದ ಶ್ರೀಕಿ ಸಣ್ಣ ಪುಟ್ಟ ಸಿನಿಮಾಗಳಿಗೆ ಸೀಮಿತನಾದರೆ, ತರುಣ್ ಚಂದ್ರ ಮಂಗಮಾಯವಾಗಿಬಿಟ್ಟ!
ತರುಣ್ ತಮ್ಮ ಪಾತ್ರಗಳಲ್ಲಿ ತೀರಾ ಪರ್ಫೆಕ್ಷನ್ ಬಯಸುತ್ತಿದ್ದ. ಸಿಗುತ್ತಿದ್ದ ನಿರ್ದೇಶಕರು ಮತ್ತು ಪಾತ್ರಗಳು ಕೆಲವೊಮ್ಮೆ ಈತನಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಗೆಳೆಯ ಮತ್ತು ಲವ್ ಗುರು ಬಿಟ್ಟರೆ ತರುಣ್’ಗೆ ಹೆಸರು ತಂದುಕೊಟ್ಟ ಸಿನಿಮಾಗಳೂ ಕಡಿಮೆಯೇ. ಪರಿಚಯ ಸೇರಿದಂತೆ ತರುಣ್ ಅಭಿನಯಿಸಿದ ಒಂದಷ್ಟು ಸಿನಿಮಾಗಳ ಹಾಡುಗಳು ಸೂಪರ್ ಹಿಟ್ ಅನಿಸಿಕೊಂಡರೂ ಸಿನಿಮಾಗಳು ನಿಲ್ಲದಂತಾದವು.
ಹೆಚ್ಚೂ ಕಮ್ಮಿ ತರುಣ್ ಜೊತೆ ಜೊತೆಗೇ ಹೀರೋಗಳಾಗಿ ಚಿತ್ರರಂಗಕ್ಕೆ ಬಂದ ವಿಜಯ ರಾಘವೇಂದ್ರ, ಪ್ರಜ್ವಲ್ ದೇವರಾಜ್, ಅಜಯ್ ರಾವ್ ಮುಂತಾದವರು ಬ್ಯುಸೀ ನಟರೆನಿಸಿಕೊಂಡಿದ್ದಾರೆ. ಸೋಲು ಗೆಲುವುಗಳೇನೇ ಇದ್ದರೂ ಅವಕಾಶಕ್ಕಂತೂ ಯಾವತ್ತೂ ಕೊರತೆಯಾಗಿಲ್ಲ. ಇವರೆಲ್ಲಾ ಸಿನಿಮಾಗೆ ಬರುವ ಹೊತ್ತಿಗೆ ಇನ್ನೂ ಸೀರಿಯಲ್ಲುಗಳಲ್ಲಿ ನಟಿಸುತ್ತಿದ್ದ ಯಶ್ ಇವತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಹೀರೋ ಎನಿಸಿಕೊಂಡಾಗಿದೆ. ಆದರೆ ಪ್ರತಿಭೆ, ಲಕ್ಷಣ ಎಲ್ಲವೂ ಇದ್ದ ತರುಣ್ ಚಂದ್ರ ಎಲ್ಲಿ ಕಳೆದುಹೋದ?
ಮೂಲಗಳ ಪ್ರಕಾರ ತರುಣ್ ಈಗ ಸಿನಿಮಾ ಚಿತ್ರೀಕರಣಕ್ಕೆ ಬೇಕಾದ ಕ್ಯಾಮೆರಾ ಸಲಕರಣೆಗಳನ್ನು ಬಾಡಿಗೆಗೆ ನೀಡುವ ವ್ಯವಹಾರ ನಡೆಸುತ್ತಿದ್ದಾರಂತೆ. ಮೊದಲು ಸದಾಶಿವನಗರದಲ್ಲಿದ್ದವರು ಈಗ ಯಲಹಂಕಕ್ಕೆ ಶಿಫ್ಟ್ ಆಗಿದ್ದಾರೆ ಅನ್ನೋ ಮಾಹಿತಿಯಿದೆ. ತರುಣ್ ಒಂಚೂರು ಸ್ಥಿತಿವಂತರ ಮನೆ ಹುಡುಗ. ಹೀಗಾಗಿ ಸಿನಿಮಾದಿಂದ ಸದ್ಯ ದೂರವಾಗಿದ್ದರೂ ಬದುಕಿಗೇನೂ ತತ್ವಾರವಿಲ್ಲ. ಆದರೆ ಇದೇ ರೀತಿ ಕನಸಿಟ್ಟುಕೊಂಡು ಸಿನಿಮಾ ರಂಗಕ್ಕೆ ಬಂದವರು, ಇಲ್ಲಿ ನೆಲೆ ಕಂಡುಕೊಳ್ಳಲಾರದ ಎಷ್ಟು ಜನ ಇಲ್ಲ? ಅವರ ಬದುಕೆಲ್ಲ ಹೇಗೆ? ಅಂತಾ ಯೋಚಿಸಿದರೇನೆ ಆತಂಕವಾಗುತ್ತದೆ!