ಹಿಂದಿ ಕಿರುತೆರೆ ವಲಯದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಜನಪ್ರಿಯ ಹಿಂದಿ ಧಾರಾವಾಹಿ ’ಉತ್ತರಣ್’ ಖ್ಯಾತಿಯ ನಟಿ ಟೀನಾ ದತ್ತಾ ಈ ಆರೋಪ ಮಾಡಿದ್ದಾರೆ. ’ದಾಯಾನ್’ ಹಿಂದಿ ಸೀರಿಯಲ್ ಚಿತ್ರೀಕರಣ ಸಂದರ್ಭದಲ್ಲಿ ನಟ ಮೋಹಿತ್ ಮಲ್ಹೋತ್ರಾ ತಮ್ಮೊಂದಿಗೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀನಾ ಆರೋಪಿಸಿದ್ದಾರೆ. ಪದೇ ಪದೇ ನಟನಿಂದ ತಮಗೆ ಕಿರಿಕಿರಿಯಾಗುತ್ತಿತ್ತು ಎಂದಿರುವ ನಟಿ ಅಂತಿಮವಾಗಿ ಈ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಮ್ಮ ಪಾತ್ರವೇ ಹಾಗಿದೆ. ಅದರಂತೆ ತಾವು ನಡೆದುಕೊಳ್ಳುತ್ತಿರುವುದಾಗಿ ಮೋಹಿತ್ ಸಮರ್ಥಿಸಿಕೊಳ್ಳುತ್ತಾರೆ. ಕ್ಲಿಕ್ ನಿಕ್ಸಾನ್ ಸ್ಟುಡಿಯೋದಲ್ಲಿ ಹಾಸ್ಪಿಟಲ್ ಸೀನ್ ಚಿತ್ರಿಸುವಾಗ ಇದು ಶುರುವಾಗಿದ್ದು. ಸೆಟ್ನಲ್ಲಿದ್ದವರಿಗೂ ಇದು ಗೊತ್ತಾಗುತ್ತಿತ್ತು. ಆದರೂ ಮೋಹಿತ್ ನಿರ್ಲಜ್ಜತನದಿಂದ ವರ್ತಿಸುತ್ತಿದ್ದರು. ನಾನು ಇಲ್ಲಿಯವರೆಗೆ ರೊಮ್ಯಾಂಟಿಕ್ ಸೀನ್, ರೇಪ್ ಸೀನ್ಗಳಲ್ಲೂ ನಟಿಸಿದ್ದೇನೆ. ಆದರೆ ಇಂತಹ ಅನುಭವ ನನಗೆ ಯಾವತ್ತೂ ಆಗಿರಲಿಲ್ಲ ಎಂದು ಟೀನಾ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ರೂಪದಲ್ಲಿ ನಟ ಮೋಹಿತ್ ಒಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ತಾವು ನಟಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ವಿಡಿಯೋದಲ್ಲಿ ಅವರು ಹೇಳಿಕೊಂಡಿದ್ದಾರೆ. ಈ ಪ್ರಕರಣ ಈಗ ಧಾರಾವಾಹಿ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.