ಸೃಜನ್ ಲೋಕೇಶ್ ನಾಯಕನಟನಾಗಿ ನಟಿಸಿರುವ ಸಿನಿಮಾ ಎಲ್ಲಿದ್ದೆ ಇಲ್ಲಿತನಕ. ಸೃಜನ್ ಈ ವರೆಗೆ ಒಂದಷ್ಟು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿರಬಹುದು. ಆದರೆ ಅವೆಲ್ಲಕ್ಕಿಂತಾ ತೀರಾ ಹೊಸ ಬಗೆಯಲ್ಲಿ, ಪ್ರತಿಯೊಬ್ಬರೂ ನೋಡಬಹುದಾದ, ಪಕ್ಕಾ ಮನರಂಜನೆಯ ಸಿನಿಮಾವಾಗಿ ಮೂಡಿಬಂದಿರೋದು ಎಲ್ಲಿದ್ದೆ ಇಲ್ಲೀತನಕ.


ಈ ಚಿತ್ರವನ್ನು ನಿರ್ದೇಶಿಸಿರುವ ತೇಜಸ್ವಿ ಅವರಿಗೆ ಇದು ಮೊದಲ ಸಿನಿಮಾ. ಆದರೆ ರಂಗಭೂಮಿ, ಕಿರುತೆರೆ ಮತ್ತು ಚಿತ್ರರಂಗಕ್ಕೆ ತೇಜಸ್ವಿ ಹಳಬರು. ಸರಿಸುಮಾರು ಹದಿನಾರು ವರ್ಷಗಳ ಹಿಂದೆ ಬದುಕನ್ನರಸಿ ಬೆಂಗಳೂರಿಗೆ ಬಂದವರು ತೇಜಸ್ವಿ. ಮೂಲತಃ ಕೊಳ್ಳೇಗಾಲದವರಾದ ತೇಜಸ್ವಿ ಆ ನೆಲದ ಸೂಕ್ಷ್ಮ ಕದಲಿಕೆಗಳಿಗೆ ಕಣ್ಣಾಗುತ್ತಾ ಬೆಳೆದವರು. ಪ್ರೈಮರಿ ಸ್ಕೂಲಿನಲ್ಲಿದ್ದಾಗಲೇ ಬಾಲಮಂಗಳ, ಚಂಪಕ ಪತ್ರಿಕೆಗಲ್ಲಿ ಬರುತ್ತಿದ್ದ ಕತೆಗಳನ್ನು ಓದಿ, ಜೊತೆಗಿದ್ದ ಹುಡುಗರನ್ನು ಸೇರಿಸಿಕೊಂಡು ಅದನ್ನು ನಾಟಕಗಳನ್ನಾಗಿ ರೂಪಿಸುತ್ತಿದ್ದವರು. ಬಹುಶಃ ಆ ಕಾಲಕ್ಕೇ ತೇಜಸ್ವಿಯವರೊಳಗೊಬ್ಬ ನಿರ್ದೇಶಕ ಜನ್ಮವೆತ್ತಿರಬಹುದು. ಇವರ ತಂದೆ ನಾಗಭೂಷಣ್ ಸಣ್ಣ ಮಟ್ಟದ ವ್ಯಾಪಾರ ನಡೆಸುತ್ತಿದ್ದವರು. ಪಿಯೂಸಿ ಮುಗಿಸೋ ಹೊತ್ತಿಗೇ ಮನೆಯಲ್ಲಿ ಭೀಕರ ಆರ್ಥಿಕ ಸಂಕಷ್ಟ. ಡಿಗ್ರಿಗೆ ಸೇರಿದರೂ ಫೀಸು ಕಟ್ಟಲು ಸಾಧ್ಯವಾಗದೇ ಓದನ್ನು ಅರ್ಧಕ್ಕೇ ನಿಲ್ಲಿಸಿದವರು. ತಿಂಗಳಿಗೆ ಎರಡು ಮೂರು ಸಾವಿರದಷ್ಟು ಸಂಪಾದನೆಯನ್ನಾದರೂ ಮಾಡಿದರೆ ಬದುಕು ಮಗ್ಗುಲು ಬದಲಿಸಬಹುದು ಅನ್ನೋ ಬಯಕೆಯಿಂದ ಬೆಂಗಳೂರಿಗೆ ಬಂದಿದ್ದರು.


ಸಾಮಾನ್ಯವಾಗಿ ಊರುಬಿಟ್ಟು ಬರುವ ಪ್ರತಿಭೆಗಳಿಗೆ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕೆನ್ನುವ ತವಕವಿರುತ್ತದೆ. ಆದರೆ ತೇಜಸ್ವಿಗೆ ತಾನು ಸಿನಿಮಾರಂಗ ಸೇರಬೇಕು, ನಿರ್ದೇಶಕನಾಗಬೇಕು ಎಂಬಿತ್ಯಾದಿ ಯಾವುದೇ ಬಯಕೆಗಳಿರಲಿಲ್ಲ. ಆದರೆ, ಇವರಲ್ಲಿದ್ದ ಅದಮ್ಯ ಉತ್ಸಾಹ, ಪ್ರತಿಭೆ ಸಾಂಸ್ಕೃತಿಕ ಜಗತ್ತಿನ ಮುಖ್ಯವಾಹಿನಿಗೆ ಕರೆತಂದು ನಿಲ್ಲಿಸಿತ್ತು.


ಕೊಳ್ಳೇಗಾಲದಿಂದ ಬೆಂಗಳೂರಿಗೆ ಬಂದಿಳಿದ ಹೊಸತರಲ್ಲೇ ತೇಜಸ್ವಿ ಅವರಿಗೆ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುತ್ತಿದ್ದ ಹಾಗೂ ನಾಟಕಕಾರರಾಗಿಯೂ ಹೆಸರು ಮಾಡಿದ್ದ ಬಸವರಾಜ ಸೂಳೇರಿಪಾಳ್ಯ ಯಾನೆ ಪಚ್ಚಿ ಅವರ ಪರಿಚಯವಾಗಿತ್ತು. ಬರವಣಿಗೆಯಲ್ಲಿದ್ದ ಆಸಕ್ತಿ, ಇವರ ಚುರುಕುತನವನ್ನು ನೋಡಿದ ಅವರು ‘ನೀನೂ ಬರಿ’ ಅಂದಿದ್ದರು. ಪಚ್ಚಿಯವರೊಂದಿಗೆ ಒಂದೆರಡು ದೂರದರ್ಶನದ ಧಾರಾವಾಹಿಗಳಿಗೆ ತೇಜಸ್ವಿ ಬರವಣಿಗೆ ಮಾಡುತ್ತಿದ್ದರು. ಅದನ್ನು ನೋಡಿದ ನಿರ್ದೇಶಕರೊಬ್ಬರು ಕರೆದು ತಮ್ಮ ಧಾರಾವಾಹಿಗಳ ರೈಟರ್ ಆಗಿ ಕೆಲಸ ನೀಡಿದ್ದರು. ನಟನೆಯಲ್ಲೂ ಒಲವಿದ್ದ ಕಾರಣ ‘ಸಮುದಾಯ’ ರಂಗತಂಡದಲ್ಲೂ ಎರಡು ವರ್ಷ ಸಕ್ರಿಯರಾಗಿದ್ದರು. ಹೀಗೆ ರಂಗಭೂಮಿ, ಕಿರುತೆರೆ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಾ ಸಾಗಿದ ತೇಜಸ್ವಿ ಸುನಿಲ್ ಕುಮಾರ್ ಜೆ.ಕೆ. ಅವರೊಟ್ಟಿಗೆ ಆರೇಳು ವರ್ಷಗಳ ಕಾಲ ಸಂಚಿಕೆ ನಿರ್ದೇಶಕರಾಗಿದ್ದರು. ನಂತರ ಶೃತಿ ನಾಯ್ಡು ಅವರ ದೇವಿ ಧಾರಾವಾಹಿ ಸೇರಿದಂತೆ ಕಿರುತೆರೆಯಲ್ಲಿ ಸರಿಸುಮಾರು ಮೂರು ಸಾವಿರ ಎಪಿಸೋಡುಗಳಿಗೆ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದರು. ಈ ನಡುವೆ ಚಿ.ಗುರುದತ್ ನಿರ್ದೇಶಿಸಿದ್ದ, ಸುದೀಪ್ ಮತ್ತು ರಮ್ಯಾ ನಟನೆಯ ಕಿಚ್ಚ ಹುಚ್ಚ ಸಿನಿಮಾಗೆ ಕೋ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದರು.


೨೦೧೧ರ ಹೊತ್ತಿಗೆ ತೇಜಸ್ವಿ ಅವರಿಗೆ ಸೃಜನ್ ಲೋಕೇಶ್ ಸಂಪರ್ಕಕ್ಕೆ ಬಂದಿದ್ದರು. ‘ಕಿಚನ್ ಕಿಲಾಡಿ’ ಎನ್ನುವ ಟೀವಿ ಶೋ ಒಂದರಲ್ಲಿ ತೇಜಸ್ವಿ ಅವರ ನಿರ್ದೇಶನದಲ್ಲಿ ಸೃಜನ್ ಟಿವಿ ಪರದೆಮೇಲೆ ಕಾಣಿಸಿಕೊಂಡಿದ್ದರು. ಆ ಶೋ ಮುಗಿಯೋ ಹೊತ್ತಿಗೆ ‘ನಾವೇ ಒಂದು ಪ್ರೊಡಕ್ಷನ್ ಮಾಡೋಣ’ ಎನ್ನುವ ಆಲೋಚನೆ ಸೃಜನ್’ಗೆ ಮೂಡಿತ್ತು. ಆಗ ಶುರುವಾಗಿದ್ದೇ ಲೋಕೇಶ್ ಪ್ರೊಡಕ್ಷನ್ಸ್. ಈ ಸಂಸ್ಥೆಯಲ್ಲಿ ತಯಾರಾದ ಮಜಾಟಾಕೀಸ್ ಒಳಗೊಂಡಂತೆ ಎಲ್ಲ ಟೀವಿ ಶೋಗಳು, ಧಾರಾವಾಹಿಗಳಿಗೆ ತೇಜಸ್ವಿ ಕ್ರಿಯೇಟೀವ್ ಡೈರೆಕ್ಟರ್ ಆಗಿ ಕೆಲಸ ಮಾಡಿದರು. ಏಳೆಂಟು ವರ್ಷಗಳ ನಿರಂತರ ಒಡನಾಟದಿಂದ ಸೃಜನ್‌ರನ್ನು ಸಂಪೂರ್ಣ ಅರಿತುಕೊಳ್ಳುವಂತಾಗಿತ್ತು. ದೊಡ್ಡ ಪರದೆ ಮೇಲೆ ಸೃಜನ್ ಅವರನ್ನು ಹೇಗೆ ತೋರಿಸಬಹುದು ಎನ್ನುವ ಕರಾರುವಕ್ಕಾದ ಐಡಿಯಾ ಕೂಡಾ ತೇಜಸ್ವಿ ಅವರಿಗೆ ದಕ್ಕಿತ್ತು. ಇದೆಲ್ಲದರ ಪ್ರತಿಫಲವೆನ್ನುವಂತೆ ಲೋಕೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ಶಕ್ತಿಯುತವಾದ್ದೊಂದು ಸಿನಿಮಾ ರೂಪುಗೊಂಡಿದೆ. ತೇಜಸ್ವಿ ಎತೆಂಥದ್ದೋ ಸಿನಿಮಾಗಳನ್ನು ಮಾಡುವುದಿದ್ದರೆ ಯಾವತ್ತೋ ಮಾಡಿ ಮುಗಿಸಬಹುದಿತ್ತು. ಆದರೆ ಬಲು ಆಸ್ಥೆಯಿಂದ ನಿರ್ದೇಶನದಲ್ಲಿ ಪಳಗಿಕೊಂಡು, ಅಗಾಧ ನಿರೀಕ್ಷೆಗಳೊಂದಿಗೆ ‘ಎಲ್ಲಿದ್ದೆ ಇಲ್ಲಿತನಕ’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾದ ಕುರಿತಾಗಿ ಎಲ್ಲೆಡೆ ಕುತೂಹಲ ಸೃಷ್ಟಿಯಾಗಿವೆ. ಹಾಡುಗಳು ಹಿಟ್ ಆಗಿವೆ. ಈಗ ಬಿಡುಗಡೆಗೊಂಡಿರುವ ವಿಡಿಯೋ ಸಾಂಗ್ ಅನ್ನು ಕೂಡಾ ಜನ ಅಪಾರವಾಗಿ ಮೆಚ್ಚಿದ್ದಾರೆ.

ಎಲ್ಲ ಅಂದುಕೊಂಡಂತೇ ಆದರೆ ಅಕ್ಟೋಬರ್ ಹೊತ್ತಿಗೆ ಎಲ್ಲಿದ್ದೆ ಇಲ್ಲಿತನಕ ಪರದೆಮೇಲೆ ಅರಳಿಕೊಳ್ಳಲಿದೆ. ಈ ಚಿತ್ರದ ಮೂಲಕ ಹೀರೋ ಸೃಜನ್, ನಿರ್ದೇಶಕ ತೇಜಸ್ವಿ ಸೇರಿದಂತೆ ಎಲ್ಲರೂ ದೊಡ್ಡ ಮಟ್ಟದಲ್ಲಿ ಗೆದ್ದು ಇಲ್ಲೇ ಇರಲಿ ಕೊನೆತನಕ!

CG ARUN

ಉಪ್ಪಿ ಸಿನಿಮಾದ ಟೈಟಲ್ ಏನು ಗೊತ್ತಾ?

Previous article

ನಿಮ್ಮ ಮನೆ ನಾಯಿಯ ಕುರಿತು ಕಾಡುವ ಕತೆಯಿದೆಯಾ?

Next article

You may also like

Comments

Leave a reply

Your email address will not be published. Required fields are marked *