ʼಸಂಘರ್ಷʼದ ಹುಡುಗಿಯ ಸಿನಿಮಾ ಯಾನ ಶುರು…!

ಚೆಂದನೆಯ ಕಥೆ ಹೊಂದಿರುವ ಲಾಂಗ್‌ ಡ್ರೈವ್‌ ಮೂಲಕ ನನ್ನ ಸಿನಿಮಾ ಜರ್ನಿ ಆರಂಭವಾಗಿದೆ. ನಾನು ಯಾವ ಥರದ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಅಂತಾ ಬಯಸಿದ್ದೆನೋ ಅದೇ ರೀತಿಯ ರೋಲ್‌ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ. ನಿರ್ದೇಶಕ ಶ್ರೀರಾಜ್‌ ನಿಜಕ್ಕೂ ಪ್ರತಿಭಾವಂತ. ಅವರ ಮೊದಲ ಸಿನಿಮಾದಲ್ಲಿ ನಾನು ಭಾಗವಾಗಿರುವುದರ ಬಗ್ಗೆ ನನನಗೆ ಖುಷಿ ಇದೆ. ಛಾಯಾಗ್ರಾಹಕ ಕಿಟ್ಟಿ ಕೌಶಿಕ್‌ ಅವರಂತೂ ನನ್ನನ್ನು ತುಂಬಾ ಮುದ್ದಾಗಿ ತೋರಿಸಿದ್ದಾರೆ. ನನ್ನ ಮೊದಲ ಸಿನಿಮಾಗೇ ಇಂಥ ಕ್ರಿಯಾಶೀಲ ತಂಡ ದೊರೆತಿದ್ದೇ ನನ್ನ ಪಾಲಿನ ಹೆಮ್ಮೆ…

ಸರಿಸುಮಾರು ಐದೂವರೆ ವರ್ಷಗಳ ಹಿಂದೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸೌಭಾಗ್ಯವತಿ ಎನ್ನುವ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಸೀರಿಯಲ್ಲಿನ ಲೀಡ್‌ ರೋಲಿನಲ್ಲಿ ಕಾಣಿಸಿಕೊಂಡದ್ದವರು ತೇಜಸ್ವಿನಿ ಶೇಖರ್.‌  ಆ ಧಾರಾವಾಹಿಯ ನಿರ್ದೇಶಕರು ತೇಜಸ್ವಿನಿಯ ಫೋಟೋ ನೋಡಿ, ಕರೆದು ಅವಕಾಶ ನೀಡಿದ್ದರು. ಹಾಗೆ ಶುರುವಾದ ಸೀರಿಯಲ್‌ ಪಯಣ ತೇಜಸ್ವಿನಿಗೆ ತಮಿಳು ತೆಲುಗಿನ ಕಿರುತೆರೆ ಕ್ಷೇತ್ರಗಳಲ್ಲೂ ಕಾಲಿಡುವಂತೆ ಮಾಡಿತ್ತು. ತಮಿಳಿನ  ವಲ್ಲಿ, ಮುಳ್ಳುಂ ಮಲರುಂ, ಪೊಣ್ಣುಕ್ಕು ತಂಗ ಮನಸ್ಸು ಧಾರಾವಾಹಿಗಳಲ್ಲಿ ತೇಜಸ್ವಿನಿ ಪಾತ್ರ ಪೋಷಣೆ ಮಾಡಿದರು. ತೆಲುಗು ಧಾರಾವಾಹಿಯಲ್ಲೂ ಉತ್ತಮ ಹೆಸರು ಬರುವಂತಾಯಿತು.

ಮತ್ತೆ ಮಹಾನದಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮರುಪ್ರವೇಶ ನೀಡಿದ ತೇಜಸ್ವಿನಿ ಮಧುಬಾಲ, ನೀಲಿ, ಕಾವೇರಿ, ಸಂಘರ್ಷದಂಥಾ ಧಾರಾವಾಹಿಗಳಲ್ಲಿ ನಟನೆ ಮುಂದುವರೆಸಿದರು. ಧಾರಾವಾಹಿ ಕ್ಷೇತ್ರಕ್ಕೆ ಕಾಲಿಟ್ಟದಿನದಿಂದ ಒಂದಾದ ಮೇಲೊಂದರಂತೆ ಅವಕಾಶ ಬರುತ್ತಲೇ ಇವೆ. ಈ ನಡುವೆ ಸಾಕಷ್ಟು ಸಿನಿಮಾಗಳ ಆಫರ್‌ ಬಂದರೂ ಸೀರಿಯಲ್ಲುಗಳಲ್ಲೇ ಬ್ಯುಸಿ ಇದ್ದಿದ್ದರಿಂದ ತೇಜಸ್ವಿನಿ ಬಂದ ಛಾನ್ಸುಗಳೆಲ್ಲವನ್ನೂ ರೆಜೆಕ್ಟ್‌ ಮಾಡಿದ್ದೇ ಹೆಚ್ಚು.

ಈ ನಡುವೆ, ಇತ್ತೀಚೆಗೆ ಲಾಕ್‌ ಡೌನ್‌ ಸಂದರ್ಭದಲ್ಲಿ ಸಂಘರ್ಷ ಧಾರಾವಾಹಿಯ ಆರಂಭದ ದಿನ ಪ್ರಚಾರಕ್ಕೆಂದು ಫೇಸ್‌ ಬುಕ್‌ ಲೈವ್‌ ನಲ್ಲಿ ಮಾತಾಡಿದ್ದರು. ಇದನ್ನು ನೋಡಿದ ಯುವ ನಿರ್ದೇಶಕ ಶ್ರೀರಾಜ್‌ ತಮ್ಮ ʻಲಾಂಗ್‌ ಡ್ರೈವ್‌ʼ ಸಿನಿಮಾದ ಹೀರೋಯಿನ್ನಾಗಿ ನಟಿಸುತ್ತೀರಾ ಅಂದ ಕೇಳಿದ್ದರು. ಕಥೆ ಕೇಳಿದ ತೇಜಸ್ವಿನಿಗೆ ಈ ಸಿನಿಮಾ ತಾವು ನಾಯಕಿಯಾಗಿ ಪಾದಾರ್ಪಣೆ ಮಾಡಲು ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದರು. ಆ ಮೂಲಕ ತೇಜಸ್ವಿನಿ ನಾಯಕನಟಿಯಾಗಿ ಪಯಣ ಆರಂಭಿಸಿದ್ದಾರೆ.

ಮೂಲತಃ ಹಾಸನದವರಾದ ತೇಜಸ್ವಿನಿ ಮೈಸೂರಿನವರು. ಇವರ ತಂದೆ ವೈದ್ಯರಾಗಿದ್ದಾರೆ. ಮೈಸೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿದ ತೇಜಸ್ವಿನಿ ಹಾಸನದಲ್ಲಿ ಕಾಲೇಜಿಗೆ ಸೇರಿದ್ದರು. ಆ ಸಂದರ್ಭದಲ್ಲೇ ಕಿರುತೆರೆಯಲ್ಲಿ ಛಾನ್ಸು ಗಿಟ್ಟಿತ್ತು. ಮೊದಮೊದಲಿಗೆ ಮಗಳು ನಟನೆಗೆ ಸೇರುವುದು ಮನೆಯವರಿಗೆ ಇಷ್ಟವಿರಲಿಲ್ಲ. ಒಲ್ಲದ ಮನಸ್ಸಿನಲ್ಲೇ ಸಮ್ಮತಿಸಿದ್ದರು. ಯಾವಾಗ ತೆರೆಮೇಲೆ ತೇಜಸ್ವಿನಿ ಕಾಣಿಸಿಕೊಂಡರೋ? ನೋಡಿದವರೆಲ್ಲಾ ಮನೆಮಗಳಂತೆ ಒಪ್ಪಿಕೊಂಡರೋ? ಆಗ ಮನೆಯಲ್ಲಿ ಕೂಡಾ ಸಂತಸ ಪಡುವಂತಾಯಿತು.

ʻʻನಾನು ಈ ಇಂಡಸ್ಟ್ರಿಗೆ ಕಾಲಿಡುತ್ತೇನೆ, ಇಷ್ಟೆಲ್ಲಾ ಅವಕಾಶ ಪಡೆಯುತ್ತೇನೆಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಎಲ್ಲವೂ ತಾನಾಗಿಯೇ ನನಗೆ ದಕ್ಕಿದೆ. ನನ್ನ ಪ್ರೀತಿಪಾತ್ರರೆಲ್ಲರಿಗೂ ನನ್ನ ಬಗ್ಗೆ ಅಪಾರ ಗೌರವವಿದೆ. ಈಗ ಸಿನಿಮಾರಂದಲ್ಲಿ ನಾಯಕಿಯಾಗಿ ನೆಲೆ ನಿಲ್ಲಬೇಕೆನ್ನುವ ಬಯಕೆ ನನ್ನೊಳಗೆ ಮೂಡಿದೆ. ಹಾಗಂತ ಬಂದ ಅವಕಾಶಗಳನ್ನೆಲ್ಲಾ ಒಪ್ಪಿದ್ದಿದ್ದರೆ ಇಷ್ಟೊತ್ತಿ ಸಾಕಷ್ಟು ಚಿತ್ರಗಳಾಗಿರುತ್ತಿತ್ತು. ಉತ್ತಮ ಪಾತ್ರಗಳನ್ನಷ್ಟೇ ಒಪ್ಪಬೇಕೆನ್ನುವುದು ನನ್ನ ಮನಸ್ಥಿತಿ. ಲಾಂಗ್‌ ಡ್ರೈವ್‌ ನನ್ನ ಸಿನಿಮಾ ಜರ್ನಿಗೆ ಒಂದೊಳ್ಳೆ ಮುನ್ನುಡಿಯಾಗುತ್ತದೆ ಅನ್ನೋ ನಂಬಿಕೆ ನನ್ನದು.ʼʼ ಇದು ತೇಜಸ್ವಿನಿ ಅಂತರಾಳದ ಮಾತು.

ಕನ್ನಡ ಚಿತ್ರರಂಗದಲ್ಲಿ ನಾಯಕಿಯರ ಕೊರತೆ ಎದ್ದುಕಾಣುತ್ತಿದೆ. ಹೀರೋಯಿನ್ನಾಗಿ ನೆಲೆ ನಿಲ್ಲಲು ಬೇಕಿರುವ ಸೌಂದರ್ಯ, ಪ್ರತಿಭೆ ಎಲ್ಲವೂ ಇರುವ ತೇಜಸ್ವಿನಿ ಈ ಕ್ಷೇತ್ರದಲ್ಲಿ ಬೆಳೆದುನಿಲ್ಲಲಿ…


Posted

in

by

Tags:

Comments

Leave a Reply