ಸದ್ಯ ಸ್ಯಾಂಡಲ್ವುಡ್ನಲ್ಲಿ ವೈರಲ್ ಆಗ್ತಿರೋ ಒಂದು ಪದ ಅಂದ್ರೆ ಅದು ಡ್ರಗ್ಸ್. ಈ ಬಾರಿ ಮತ್ತೆ ಸ್ಯಾಂಡಲ್ ವುಡ್ ಡ್ರಗ್ಸ್ ಅಂತಾ ಸದ್ದು ಮಾಡ್ತಿದೆ. ಡ್ರಗ್ಸ್ ನಂಟು ಈ ಬಾರಿ ನಿರ್ದೇಶಕ ಜಯತೀರ್ಥ ಅವರನ್ನು ಹುಡುಕಿಕೊಂಡು ಬಂದಿದೆ. ಹೌದಾ! ಅಂತಾ ಹುಬ್ಬೇರಿಸಬೇಡಿ. ಯಾಕಂದ್ರೆ ಈ ಬಾರಿ ಡ್ರಗ್ಸ್ ಸ್ಯಾಂಡಲ್ವುಡ್ನಲ್ಲಿ ಸಕಾರಾತ್ಮಕವಾಗಿ ಸುದ್ದಿ ಮಾಡ್ತಿದೆ. ನಿರ್ದೇಶಕ ಜಯತೀರ್ಥ ಅವರು ಡ್ರಗ್ಸ್ ಕುರಿತಾದ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯ ‘ಡೈರೆಕ್ಷನ್ ಇನ್ ಫಿಲಂ ಮೇಕಿಂಗ್’ ಸಿನಿಮಾ ವಿದ್ಯಾರ್ಥಿಗಳಿಗಾಗಿ ಮಾಡಿರುವ ಕಿರುಚಿತ್ರ ಇದಾಗಿದೆ.
ಟೆಂಟ್ ಸಿನಿಮಾ ಶಾಲೆ
ಟೆಂಟ್ ಸಿನಿಮಾ ಶಾಲೆಯು ಪ್ರತಿವರ್ಷ ಸಿನಿಮಾಸಕ್ತ ವಿದ್ಯಾರ್ಥಿಗಳಿಗಾಗಿ ‘ಡೈರೆಕ್ಷನ್ ಇನ್ ಫಿಲಂ ಮೇಕಿಂಗ್ ಕೋರ್ಸ್’ ನಡೆಸುತ್ತದೆ. 6 ತಿಂಗಳ ಥಿಯರಿ ಕಲಿಕೆಯ ನಂತರ, ಪ್ರಾಯೋಗಿಕವಾಗಿ ಕಿರುಚಿತ್ರ ತಯಾರಿಸಲಾಗುತ್ತದೆ. ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ ಜಯತೀರ್ಥ, ನಿರ್ದೇಶಕ ಆದರ್ಶ್ ಈಶ್ವರಪ್ಪ ಮತ್ತು ಅಭಯ್ ಸಿಂಹ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಿನಿ ಪಾಠವನ್ನು ಕಲಿಯುತ್ತಾರೆ. ಚಿತ್ರಕಥೆ ರಚನೆ, ನಿರ್ದೇಶನ, ಛಾಯಾಗ್ರಹಣ, ಸಂಕಲನ ಮತ್ತು ಅಭಿನಯ ಸೇರಿದಂತೆ ಸಿನಿಮಾದ ಎಲ್ಲಾ ವಿಭಾಗಗಳ ಕಲಿಕೆಗೆ ಅವಕಾಶವಿದೆ. ಆ ನಂತರದಲ್ಲಿ ವಿದ್ಯಾರ್ಥಿಗಳೆಲ್ಲರೂ ಸೇರಿ ಕಿರುಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರಾಯೋಗಿಕ ಕಲಿಕೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಸಿನಿ ಪಾಠ ಶಾಲೆ
ಕೆಲವು ವರ್ಷಗಳ ಹಿಂದೆ ಸಿನಿಮಾಗಳಲ್ಲಿ ಕೆಲಸ ಮಾಡಲು ಸಿನಿಮಾ ತಂಡಗಳ ಜೊತೆಗೆ ಸೇರಿ ಕೆಲಸ ಕಲಿತು ನಂತರ ಇಂಡಿಪೆಂಡೆಂಟ್ ಆಗಿ ಕೆಲಸ ನಿರ್ವಹಿಸುವ ಪದ್ಧತಿ ಸ್ಯಾಂಡಲ್ವುಡ್ನಲ್ಲಿತ್ತು. ಆದರೆ ಈಗ ಸಿನಿಮಾ ಶಾಲೆಗಳ ಪರಂಪರೆ ಆರಂಭವಾಗಿದ್ದು, ಯುವ ಸಮುದಾಯಕ್ಕೆ ಸಿನಿಮಾದ ಬಗ್ಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿದೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಸಿನಿಮಾ ಬಗ್ಗೆ ಇರುವ ಆಸಕ್ತಿಯನ್ನು ಒರೆಗೆ ಹಚ್ಚಲು ನೆರವಾಗುತ್ತಿದೆ. ತರಬೇತಿಗಳು ಮುಗಿಯುವ ಹೊತ್ತಿಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಿನಿಮಾ ಕ್ಷೇತ್ರದ ಬೇಸಿಕ್ ವಿಷಯಗಳನ್ನು ಕರಗತ ಮಾಡಿಕೊಂಡಿರುತ್ತಾರೆ. ಅದರಲ್ಲೂ ಕಿರುಚಿತ್ರ ನಿರ್ಮಾಣ ಹಂತದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿ ಇರುವ ಕ್ಷೇತ್ರಗಳ ಬಗ್ಗೆ ತಿಳಿಯಲು ಅನುಕೂಲಕರ. ಇಂತಹ ಪೂರ್ವ ಸಿದ್ಧತೆಗಳು ಸಿನಿಮಾಸಕ್ತ ವಿದ್ಯಾರ್ಥಿಗಳಿಗೆ ನೆರವಾಗುತ್ತವೆ.
ಸುದ್ದಿಗಳು ಅನ್ನೋ ನಶೆಯೇ ಸಬ್ಜೆಕ್ಟ್
ಡ್ರಗ್ಸ್ ಕೇವಲ ಸಿನಿಮಾ ಸೆಲೆಬ್ರಿಟಿಗಳನ್ನು ಹೇಗೆ ಬಾಧಿಸುತ್ತಿದೆ ಎನ್ನುವಂತಹ ಸ್ಯಾಂಡಲ್ವುಡ್ ಡಿಫೆಂಡ್ ಮಾಡಿಕೊಳ್ಳುವಂಥ ವಿಷಯಗಳಿಗೆ ಆದ್ಯತೆ ನೀಡಿಲ್ಲ. ಬದಲಿಗೆ ಡ್ರಗ್ಸ್ ಎಲ್ಲೆಲ್ಲಿ ಹರಡಿಕೊಂಡಿದೆ? ಮುಖ್ಯವಾಗಿ ಸುದ್ದಿ ವಾಹಿನಿಗಳಿಗೆ ಡ್ರಗ್ಸ್ ಏರಿಸುತ್ತಿರುವ ನಶೆ ಎಂಥದ್ದು? ಡ್ರಗ್ಸ್ ಎನ್ನುವ ಸಾಮಾಜಿಕ ಪಿಡುಗನ್ನು ಬದಲಿಸುವ ಬದಲಿಗೆ ಸುದ್ದಿವಾಹಿನಿಗಳು ಅದನ್ನು ಬಿಂಬಿಸಿದ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.
‘ಬ್ಯೂಟಿಫುಲ್ ಮನಸ್ಸುಗಳು ಸಿನಿಮಾಗಳಲ್ಲಿ ಮಾಧ್ಯಮಗಳ ಬಗ್ಗೆ ಚರ್ಚೆ ಮಾಡಲಾಗಿತ್ತು. ಆದ್ರೆ ಅಲ್ಲೂ ಕೂಡ ಒಂದಷ್ಟು ಸೀಮಿತತೆ ಇತ್ತು. ಆದ್ರೆ ಈ ಕಿರುಚಿತ್ರದಲ್ಲಿ ಅಂತಹ ಯಾವುದೇ ಬಂಧನಗಳಿಲ್ಲದೇ, ಅನಿಸಿದ್ದನ್ನು ಅನಿಸಿದ ಹಾಗೆಯೇ ಹೇಳಿದ್ದೇವೆ. ಅಲ್ಲದೇ ಮಾಧ್ಯಮಗಳ ಹೊಣೆಗಾರಿಕೆ ಹೇಗಿರಬೇಕು ಅನ್ನೋ ಸಾಮಾನ್ಯ ನಾಗರೀಕನ ಧ್ವನಿಯಾಗಿ ಈ ಕಿರುಚಿತ್ರ ರೂಪುಗೊಂಡಿದೆ ‘ ಎಂದು ಕಿರುಚಿತ್ರದ ಕಥಾಹಂದರವನ್ನು ಬಿಡಿಸುತ್ತಾರೆ ನಿರ್ದೇಶಕ ಜಯತೀರ್ಥ.
ಕಿರುಚಿತ್ರದ ಹಿಂದಿನ ಟ್ರಿವಿಯ
ಇನ್ನೂ ಈ ಕಿರುಚಿತ್ರ ಮೂಡಿಬಂದ ಬಗೆಯನ್ನ ಜಯತೀರ್ಥರವರು ವಿವರಿಸೋದು ಹೀಗೆ. ಈ ಕಿರುಚಿತ್ರದ ಚಿತ್ರಕಥೆ ಸಿದ್ಧ ಮಾಡಿರುವುದು ಟೆಂಟ್ ಸಿನಿಮಾದ ವಿದ್ಯಾರ್ಥಿಗಳು. ಟೆಂಟ್ ಸಿನಿಮಾದ ವಿದ್ಯಾರ್ಥಿಗಳು ಮತ್ತು ಆನ್ಲೈನ್ ಚಿತ್ರಕಥಾ ರಚನೆ ಕಾರ್ಯಗಾರದ ವಿದ್ಯಾರ್ಥಿಗಳೊಟ್ಟಿಗೆ ಜಯತೀರ್ಥರವರು ಚರ್ಚೆ ನಡೆಸಿದ್ದಾರೆ. ಡ್ರಗ್ಸ್ ಎನ್ನುವ ವಿಷಯವನ್ನು ಕೊಟ್ಟ ಕೂಡಲೇ ಪ್ರತಿ ವಿದ್ಯಾರ್ಥಿಗಳು ಒಂದೊಂದು ಕಥೆಯನ್ನು ಹೇಳಿದ್ದಾರೆ. ಆದರೆ ಜಯತೀರ್ಥರವರು ಅಂತಿಮವಾಗಿ ಆಯ್ಕೆ ಮಾಡಿದ್ದು ವಿದ್ಯಾರ್ಥಿ ಧನುಷ್ ಹೇಳಿದ ಸಣ್ಣ ಎಳೆ .
ಡ್ರಗ್ ನಶೆಯಲ್ಲಿ ತೇಲಿದ ಮೀಡಿಯಾ!
ಮೀಡಿಯಾ ಅನ್ನೋದು ಡ್ರಗ್. ಡ್ರಗ್ಸ್ ವಿಷಯ ತೆಗೆದುಕೊಂಡು ಯಾರನ್ನೋ ಹಳಿಯುವುದು, ಯಾರೋ ವ್ಯಕ್ತಿಯ ತೇಜೋವಧೆ ಮಾಡುವುದು, ಇದು ಡ್ರಗ್ಗಿಂತಲೂ ದೊಡ್ಡ ವಿಷ. ಬ್ರೇಕಿಂಗ್ ನ್ಯೂಸ್ ಅನ್ನೋದು ಅದಕ್ಕಿಂತ ದೊಡ್ಡ ನಶೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಯೊಬ್ಬರು ಆಲೋಚನೆ ಮಾಡಿದ್ದು ಜಯತೀರ್ಥರವರನ್ನು ಇಂಪ್ರೆಸ್ ಮಾಡಿತು. ಇದರ ಮೇಲೆ ಪಾತ್ರಗಳ ವಿಸ್ತರಣೆ, ಸೆಟ್ ಸಿದ್ಧತೆ, ಕಿರುಚಿತ್ರದ ರೂಪುರೇಷೆಗಳನ್ನು ಜಯತೀರ್ಥರವರು ನೀಡಿದರು. ಜೊತೆಗೆ ವಿದ್ಯಾರ್ಥಿಗಳು ಸಹಾ ಈ ಕಥೆಯನ್ನು ವಿಸ್ತರಿಸುವಲ್ಲಿ ತಮ್ಮ ಐಡಿಯಾಗಳನ್ನು ಧಾರೆ ಎರೆದಿದ್ದಾರೆ. ಹೀಗೆ ಸಿದ್ಧವಾದ ಕಥೆಯನ್ನು ಡೈರೆಕ್ಷನ್ ಡಿಪಾರ್ಟ್ಮೆಂಟ್ನ ಧನುಷ್ ಮತ್ತು ಸ್ಕ್ರಿಪ್ಟ್ ಮೇಕಿಂಗ್ ವಿದ್ಯಾರ್ಥಿನಿ ನವ್ಯಶ್ರೀ ಫೈನಲ್ ಡ್ರಾಫ್ಟ್ ರೆಡಿ ಮಾಡಿದ್ದಾರೆ. ಪ್ರಸ್ತುತ ನವ್ಯಶ್ರೀ ಎಫ್ ಎಂ ರೈನ್ ಬೋ ನಲ್ಲಿ ಆರ್ ಜೆ ಆಗಿದ್ದು, ತಮ್ಮ ಕ್ರಿಯಾಶೀಲತೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಟೆಂಟ್ ಸಿನಿಮಾ ಆನ್ಲೈನ್ ಸ್ಕ್ರಿಪ್ಟಿಂಗ್ ಕ್ಲಾಸ್ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ಚಿತ್ರಕಥೆ ಮೇಕಿಂಗ್ ತರಬೇತಿ
‘ ಜಯತೀರ್ಥ ಸರ್ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಟೆಂಟ್ ಸಿನಿಮಾದ ಆನ್ಲೈನ್ ಸ್ಕ್ರಿಪ್ಟಿಂಗ್ ತರಗತಿಗಳಲ್ಲಿ ನಾನು ಭಾಗವಹಿಸಿದ್ದೆ. ಅಲ್ಲಿ ಕಲಿತಿದ್ದನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲು ಕಿರುಚಿತ್ರ ನೆರವಾಯ್ತು. ಫೈನಲ್ ಡ್ರಾಫ್ಟ್ ರೆಡಿ ಆದ ಮೇಲೆ, ಅದರಲ್ಲಿ ಸಾಕಷ್ಟು ವಿಷಯಗಳು ಕಟ್ ಆಯ್ತು. ಕೆಲವೊಂದು ಡೈಲಾಗ್ಗಳು ಶಾರ್ಪ್ ಆಯ್ತು. ಇದೆಲ್ಲವನ್ನೂ ಜಯತೀರ್ಥ ಸರ್ ಶೂಟಿಂಗ್ ಸ್ಪಾಟ್ನಲ್ಲೇ ಡಿಸೈಡ್ ಮಾಡ್ತಿದ್ರು. ಹೊಸಬಳಾಗಿ ಇದೆಲ್ಲವನ್ನೂ ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಆದರೆ ಕಿರುಚಿತ್ರ ಚೆನ್ನಾಗಿ ಮೂಡಿಬಂದಿದೆ ಅನ್ನೋ ಸಂತೃಪ್ತಿ ಇದೆ. ಮುಖ್ಯವಾಗಿ ಸಿನಿಮಾ ಮೇಕಿಂಗ್ ಸ್ಟೂಡೆಂಟ್ಸ್ ಜೊತೆಗೆ ನನ್ನ ಹೆಸರನ್ನು ಉಲ್ಲೇಖಿಸಿ ನನಗೊಂದು ಐಡೆಂಟಿಟಿ ಕೊಟ್ಟ ನಿರ್ದೇಶಕರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ನಾಗತಿಹಳ್ಳಿ ಚಂದ್ರಶೇಖರ್ ಸರ್ ಅವರು ತರಗತಿಗಳಲ್ಲಿ ಕಲಿಸಿದ ಸಂಭಾಷಣೆ ಮತ್ತು ಕಥಾವಿಸ್ತರಣೆಯ ಟೆಕ್ನಿಕ್ಗಳು ನನಗೆ ಇಲ್ಲಿ ಸಂಪೂರ್ಣ ನೆರವಿಗೆ ಬಂದಿತು’ ಎಂದು ನೆನೆಯುತ್ತಾರೆ.
ಬಜೆಟ್ನಲ್ಲೇನೂ ಕಾಂಪ್ರಮೈಸ್ ಇಲ್ಲ
‘ಇನ್ನೂ ಕಿರುಚಿತ್ರ ನಿರ್ಮಾಣ ಬಿಗ್ ಬಜೆಟ್ ಸಿನಿಮಾಗಳಿಗಿಂತ ಭಿನ್ನವಾಗಿಲ್ಲ. ತುಂಬಾ ಕಾಂಪ್ರಮೈಸ್ ಮಾಡಿಲ್ಲ. ಮೂರು ಕ್ಯಾಮರ ಬಳಕೆ ಮಾಡಲಾಗಿದೆ. ಲೈಟಿಂಗ್, ಟ್ರ್ಯಾಕ್ ಎಲ್ಲವನ್ನು ಬಳಕೆ ಮಾಡಿದ್ದೇವೆ. ಡಬ್ಬಿಂಗ್ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಫೀಚರ್ ಸಿನಿಮಾದ ಅನುಭವ ನೀಡುತ್ತೆ’ ಜೊತೆಗೆ ವಿದ್ಯಾರ್ಥಿಗಳೇ ಸಿನಿಮಾಗೆ ಡಬ್ಬಿಂಗ್ ಮಾಡುವ ಮೂಲಕ ಅದರ ಅರಿವನ್ನು ತಮ್ಮದಾಗಿಸಿಕೊಂಡಿದ್ದಾರೆ ‘ ಎನ್ನುತ್ತಾರೆ ಬೆಲ್ಬಾಟಂ ನಿರ್ದೇಶಕ.
ವಿದ್ಯಾರ್ಥಿಗಳು ಅಂದ್ರೆ ತಾಜಾತನ
‘ಟೆಂಟ್ ಸಿನಿಮಾ ಶಾಲೆಯ ಅಭಿನಯ ತರಗತಿಯ ವಿದ್ಯಾರ್ಥಿಗಳು ಇದರಲ್ಲಿ ನಟಿಸಿದ್ರು. ವಿದ್ಯಾರ್ಥಿಗಳ ತಲೆಯಲ್ಲಿ ಒಂದು ಬೀಜ ಬಿತ್ತಿದ್ದೇವೆ. ಅದು ಹೆಮ್ಮರವಾಗಿ ಈ ಕಲೆಯನ್ನೇ ತಮ್ಮ ಜೀವನದಲ್ಲಿ ಬಳಸಿಕೊಂಡು ಹೋಗುತ್ತಾರೆ. ವಿದ್ಯಾರ್ಥಿಗಳ ಜೊತೆಗೆ ಕೆಲಸ ಮಾಡುವುದು ಯಾವಾಗಲೂ ತಾಜಾತನದ ಅನುಭವ. ಅನುಕರಣೆ ಇರಲ್ಲ. ಪ್ರೇಕ್ಷಕರಿಗೆ ಇಷ್ಟವಾಗುತ್ತೋ ಇಲ್ಲವೋ?! ಅನ್ನುವ ಅಡೆ ತಡೆ ಬಿಟ್ಟು ಮುಕ್ತವಾಗಿ ಅಭಿವ್ಯಕ್ತಿಸುವ ಅವಕಾಶ ಈ ಕಿರುಚಿತ್ರದಿಂದ ಲಭ್ಯವಾಯ್ತು. ಅನ್ನಿಸಿದ್ದನ್ನು ಕಾರಿದ್ದೇವೆ. ಕಥೆ ವಿಚಾರದಲ್ಲಿ ಇಲ್ಲಿಯೇ ಮುಕ್ತ ಅವಕಾಶವಿತ್ತು. ನಾನು ಬಹಳಷ್ಟು ವರ್ಷಗಳ ನಂತರ ಕಿರುಚಿತ್ರ ಮಾಡಿರುವುದು ವೈಯಕ್ತಿಕವಾಗಿ ಖುಷಿ ಕೊಟ್ಟಿದೆ’ ಅನ್ನೋದು ಜಯತೀರ್ಥ ಅವರ ಅನಿಸಿಕೆ. ಬಹಳ ವರ್ಷಗಳ ಹಿಂದೆ ಜಯತೀರ್ಥ ಅವರು ನಿರ್ದೇಶಿಸಿದ ‘ಹಸಿವು’ ಕಿರುಚಿತ್ರ ಅವರನ್ನು ವಿಭಿನ್ನವಾಗಿ ಪರಿಚಯಿಸಿತ್ತು.
ಹೊಸ ವಿದ್ಯಾರ್ಥಿಗಳು, ಹೊಸ ಸವಾಲುಗಳು
‘ ಪ್ರತಿಬ್ಯಾಚ್ನಲ್ಲೂ ಬರುವ ವಿದ್ಯಾರ್ಥಿಗಳು ಭಿನ್ನವಾಗಿರ್ತಾರೆ. ಇದಕ್ಕೆ ಸಿಲಬಸ್ ಆಚೆಗೆ ಅವರನ್ನು ತೆಗೆದುಕೊಂಡು ಹೋಗ್ತೀನಿ. ನಾನು ಅತಿಥಿ ಉಪನ್ಯಾಸಕ ಆಗಿರುವುದರಿಂದ ಸಾಧ್ಯವಾದಷ್ಟು ವಿಷಯಗಳನ್ನು ನನ್ನ ಅನುಭವದ ಮೂಲಕ ಹಂಚಿಕೊಳ್ಳುವುದೇ ನನಗೆ ರಿಫ್ರೆಶ್. ವಿದ್ಯಾರ್ಥಿಗಳೊಟ್ಟಿಗೆ ಚರ್ಚಿಸುವಾಗ, ಅವರ ದೃಷ್ಟಿಕೋನದ ಬಗ್ಗೆಯೂ ಅಚ್ಚರಿ ಮೂಡುತ್ತದೆ. ಕೆಲವೊಮ್ಮೆ ಅದನ್ನೂ ಕೂಡ ನಾನು ಅಳವಡಿಸಿಕೊಂಡು ರಿಫ್ರೆಶ್ ಆಗ್ತೀನಿ. ಮೊದಲು ವಿದ್ಯಾರ್ಥಿಗಳಿಗೆ ಬೇಕಂತಲೇ ನಿರಾಶೆಗೊಳಿಸುವೆ. ಕನ್ನಡ ಇಂಡಸ್ಟ್ರಿಯಲ್ಲಿ ಈಗಾಗಲೇ ಸಾಕಷ್ಟು ನಿರ್ದೇಶಕರು, ನಟರು ಎಲ್ಲಾ ವಿಧಾನಗಳನ್ನು ತಿಳಿಸಿಕೊಟ್ಟಿದ್ದಾರೆ. ಇಲ್ಲಿ ನಿಮ್ಮ ಅಗತ್ಯತೆ ಏನು? ಎಂದು ಪ್ರಶ್ನಿಸುತ್ತೇನೆ. ಆ ನಂತರ ಯಾರೇ ಬಂದಿರಲಿ, ಎಷ್ಟೇ ಆಲೋಚನೆಗಳಿರಲಿ. ಆದ್ರೆ ನೀವು ಅಪ್ಡೇಟ್ ಆಗಿ ಇಂದಿನ ನಿಮ್ಮ ದೃಷ್ಟಿಕೋನದಲ್ಲಿ ಸೃಷ್ಟಿಸುವ ಚಿತ್ರಗಳು ಜನಮಾನಸದಲ್ಲಿ ಉಳಿಯುತ್ತವೆ. ಫ್ರೆಶ್ ಆಲೋಚನೆಗಳು, ಟ್ರೆಂಡ್ಗಳ ಬಗ್ಗೆ ಅರಿವು ಮತ್ತು ಅಧ್ಯಯನವಿರಲಿ ಅನ್ನೋ ಚಿಕ್ಕ ಸಲಹೆ ಕೂಡ ನೀಡುತ್ತೇನೆ ‘ ಎನ್ನುತ್ತಾರೆ ನಿರ್ದೇಶಕ ಜಯತೀರ್ಥರವರು.
ಅನನುಭವಿಗಳೇ ಒಳ್ಳೆಯದನ್ನು ಕೊಟ್ಟಿರುವುದು
‘ಅನುಭವ ಅನ್ನುವುದು ಇಲ್ಲಿ ಕೆಲಸಕ್ಕೆ ಬರಲ್ಲ, ತಾಂತ್ರಿಕವಾಗಿ ಅನುಕೂಲವಾಗುತ್ತದೆ. ಅನನುಭವಿಗಳೇ ಫ್ರೆಶ್ ಮೂವಿ ಕೊಟ್ಟಿರುವುದು. ಒಲವೇ ಮಂದಾರ ಸಿನಿಮಾವನ್ನು ನಾನು ಕೊಟ್ಟಿದ್ದಕ್ಕೆ ಪ್ರಶಂಸೆ ಬಂತು. ಅದಕ್ಕೆ ಕಾರಣ ಅನುಭವ ಇಲ್ಲದಿರುವುದು. ನನ್ನಲ್ಲಿ ಫ್ರೆಶ್ ಅನುಭವವಿತ್ತು. ಅನುಭವ ಹಳೆಯ ಆಲೋಚನೆಗಳನ್ನೇ ಕೊಡುತ್ತೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತೇನೆ. ಚಿತ್ರರಂಗ ವಿದ್ಯಾರ್ಥಿಗಳಿಗೆ ಅನಿವಾರ್ಯ ಆಗಬಾರದು, ವಿದ್ಯಾರ್ಥಿಗಳು ಚಿತ್ರರಂಗಕ್ಕೆ ಅನಿವಾರ್ಯವಾಗಬೇಕು’ ಎನ್ನುವುದು ಜಯತೀರ್ಥರ ಅನಿಸಿಕೆ.
ಟೆಂಟ್ ಸಿನಿಮಾ ಶಾಲೆಯಿಂದ ಭರವಸೆ
ಮೈಸೂರಿನ ಧನುಷ್ ರಂಗಾಯಣದ ಅಂಗಳದಲ್ಲಿ ಪಳಗಿದವರು. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಿನಿಮಾ ಶಾಲೆ ಬಹಳ ಮುಖ್ಯ ಅನ್ನೋದನ್ನ ಅರಿತು, ಸ್ನೇಹಿತರ ಸಲಹೆ ಮೇರೆಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಾರಥ್ಯದ ಟೆಂಟ್ ಸಿನಿಮಾ ಶಾಲೆಗೆ ಸೇರಿದರು. ಸಿನಿಮಾ ಚಿತ್ರಕಥೆ ಮತ್ತು ನಿರ್ದೇಶನದ ಬಗ್ಗೆ ಒಲವಿಟ್ಟುಕೊಂಡಿರುವ ಧನುಷ್ ಆ ನಿಟ್ಟಿನಲ್ಲಿಯೇ ತಮ್ಮ ಆಲೋಚನೆಗಳಲ್ಲಿ ಹೊಸತನವನ್ನು ಮೆರೆದಿದ್ದಾರೆ. ಡ್ರಗ್ಸ್ ನ ವಿವಿಧ ಆಯಾಮಗಳನ್ನು ಚಿಂತಿಸಿ, ಕಿರುಚಿತ್ರಕ್ಕೆ ಒಂದು ಎಳೆಯ ಕಥೆ ನೀಡಿದ್ದಾರೆ.
ಕಿರುಚಿತ್ರ ಸಿನಿಮಾ ಕನಸ್ಸಿಗೆ ಧೈರ್ಯ ತುಂಬಿದೆ
ಅದೇ ಆತ್ಮವಿಶ್ವಾಸದಲ್ಲಿ ಮಾತನಾಡಿದ ಧನುಷ್, ‘ ಬಹುತೇಕ ಒಳಾಂಗಾಣದಲ್ಲಿ ಚಿತ್ರೀಕರಿಸಿದ್ದೇವೆ. ಜಯತೀರ್ಥ ಸರ್ 15 ಪುಟದ ಚಿತ್ರಕಥೆಯನ್ನು 11 ಪುಟಕ್ಕೆ ಇಳಿಸಿದರು. ಇದು ಚಿತ್ರಕಥೆಯ ಬಗ್ಗೆ ಇದ್ದ ಎಷ್ಟೋ ಅನುಮಾನಗಳನ್ನು ಬಗೆಹರಿಸಿದವು. ಇದೊಂದು ಫೀಚರ್ ಸಿನಿಮಾದಂತೆ ಫೀಲ್ ಆಯ್ತು. ಇದು ಕಿರುಚಿತ್ರ ಅನಿಸಲೇ ಇಲ್ಲ. ಸಿನಿಮಾದ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿರುವುದು ಬಹಳ ಅಡ್ವಾಂಟೇಜ್. ಕಿರುಚಿತ್ರದಲ್ಲಿ ಜಯತೀರ್ಥ ಸರ್ಗೆ ಅಸಿಸ್ಟ್ ಕೂಡ ಮಾಡಿದ್ದೇನೆ. ಎಡಿಟಿಂಗ್ನಲ್ಲೂ ತೊಡಗಿಸಿಕೊಂಡಿದ್ದೇನೆ. ಪ್ರಾಯೋಗಿಕವಾಗಿ ಕಿರುಚಿತ್ರದಲ್ಲಿ ತೊಡಗಿಸಿಕೊಂಡ ಮೇಲೆ ಧೈರ್ಯ ಹೆಚ್ಚಾಗಿದೆ’ ಎನ್ನುತ್ತಾರೆ.
ಸಿನಿಮಾ ಸ್ಕೂಲ್ ಬೇಕು
‘ ಸಿನಿಮಾ ಶಾಲೆಗೆ ಸೇರುವ ಮುನ್ನ ನಾಟಕ ಬರೆದು, ನಿರ್ದೇಶಿಸಿದ್ದ, ಅಭಿನಯಿಸಿದ್ದ ಅನುಭವವಿತ್ತು. ಪುಣೆ, ಚೆನೈ ಫಿಲಂ ಇನ್ಸಿಟ್ಯೂಟ್ ನೋಡಿದ್ದೆ. ಆದರೆ ಅದು ದುಬಾರಿ ಎನಿಸಿತ್ತು. ಕರ್ನಾಟಕದ ಟೆಂಟ್ ಸಿನಿಮಾ ಶಾಲೆ ಬೆಸ್ಟ್ ಅನ್ನೋದನ್ನ ಸ್ನೇಹಿತ ಇನ್ಸ್ಟಾಗ್ರಾಂನಲ್ಲಿ ತೋರಿಸಿದ್ದೇ ಇಲ್ಲಿಗೆ ಬರಲು ಕಾರಣವಾಯ್ತು. ಸಿನಿಮಾ ಶಾಲೆಗೆ ಸೇರಿದ ಕೂಡಲೇ ನಾವು ಡೈರೆಕ್ಟರ್ ಆಗಿಬಿಟ್ಟೆವು ಅನ್ನೋ ಮನೋಭಾವ ಒಳ್ಳೆಯದಲ್ಲ. ನಮಗೆ ಬೇಸಿಕ್ಸ್ ತಲೆಯಲ್ಲಿರಬೇಕು. ದೊಡ್ಡ ಚಿತ್ರತಂಡವೊಂದು ಈ ಕಥೆ ನಿರ್ದೇಶನ ಮಾಡು ಎಂದು ಹೇಳಿದಾಗ ಅದನ್ನು ಮಾಡುವಷ್ಟು ಸಾಮರ್ಥ್ಯ ನನಗಿರಬೇಕು. ಅದಕ್ಕೆ ಸಿನಿಮಾ ಶಾಲೆಗಳು ನೆರವಾಗುತ್ತದೆ. ಸುಮ್ಮನೇ ಹುಮ್ಮಸಿದ್ದು, ದೊಡ್ಡ ದೊಡ್ಡ ನಿರ್ದೇಶಕರ ಬಳಿ ಕೆಲಸ ಮಾಡುತ್ತಾ ಸಕ್ಸಸ್ ಆಗಲಿಲ್ಲ ಅಂತಾ ಕೊರಗುವುದರಲ್ಲಿ ಅರ್ಥವಿಲ್ಲ. ಈ ರೀತಿ ನಿರ್ಧಾರಗಳನ್ನು ಮಾಡಿ ಸೋತವರ ಉದಾಹರಣೆಗಳನ್ನೂ ಕೂಡ ಟೆಂಟ್ ಸಿನಿಮಾ ತಿಳಿಸಿಕೊಟ್ಟಿದೆ. ಈ ರೀತಿ ನೀವು ಆಗಬೇಡಿ ಎನ್ನುವ ವಾಸ್ತವನ್ನು ಪರಿಚಯ ಮಾಡಿಸಿದ್ದಾರೆ’. ಎಂದು ವಿನಮ್ರರಾಗುತ್ತಾರೆ ಧನುಷ್.
ಲಾಯರ್ ವೃತ್ತಿಯಿಂದ ಸ್ಕ್ರಿಪ್ಟಿಂಗ್ ಕ್ಷೇತ್ರದವರೆಗೆ
‘ ಆನ್ಲೈನ್ ಸ್ಕ್ರಿಪ್ಟ್ ಕ್ಲಾಸ್ನಲ್ಲಿ ಭಾಗವಹಿಸಿದ್ದ ನಾನು, ಚಿತ್ರಕಥೆ ರಚನೆಯ ಪ್ರಾಯೋಗಿಕ ಅಂಶಗಳನ್ನು ತಿಳಿದುಕೊಳ್ಳಲು ಉತ್ಸುಕಳಾಗಿದ್ದೆ. ಯಾವುದೇ ಕಥೆ ಸಿನಿಮಾವಾಗುವ ಮುನ್ನ ಅದು ಸಾಕಷ್ಟು ಚರ್ಚೆಗೆ ಒಳಪಡುತ್ತದೆ. ಅದಕ್ಕಿರುವ ಎಲ್ಲಾ ಆಯಾಮಗಳ ಚರ್ಚೆ ನಡೆಯುತ್ತದೆ ಅನ್ನೋದು ತಿಳಿದುಕೊಂಡೆ. ಅದರಲ್ಲೂ ಜಯತೀರ್ಥ ಸರ್ ಮುಗಿಯದ ಪುಸ್ತಕವಿದ್ದಂತೆ. ಅವರ ಅಪರಿಮಿತ ತಿಳಿವಳಿಕೆಗೆ ಹ್ಯಾಟ್ಸಾಫ್. ಸುಲಭದಲ್ಲಿ ಯಾವುದನ್ನೂ ಒಪ್ಪುವುದಿಲ್ಲ. ನಮ್ಮ ಆಲೋಚನೆಗೆ ಬಹಳ ಕೆಲಸ ಕೊಡುತ್ತಾರೆ. ಇದೇ ಕಾರಣಕ್ಕೆ ನಮಗೆ ಕ್ವಾಲಿಟಿ ಹೇಗಿರಬೇಕು ಅನ್ನೋ ಮಾನದಂಡ ಸಿಗುತ್ತದೆ’ ಎನ್ನುತ್ತಾರೆ ಆನ್ಲೈನ್ ಸ್ಕ್ರಿಪ್ಟಿಂಗ್ ಕ್ಲಾಸ್ನ ವಿದ್ಯಾರ್ಥಿನಿ ನಂದಿನಿ. ನಂದಿನಿಯವರು ವೃತ್ತಿಯಲ್ಲಿ ಲಾಯರ್ ಆಗಿದ್ದವರು. ಸದ್ಯ ಗೃಹಿಣಿಯಾಗಿದ್ದು, ಸ್ಕ್ರಿಪ್ಟ್ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಟೆಂಟ್ ಸಿನಿಮಾದ ಆನ್ಲೈನ್ ಚಿತ್ರಕಥಾ ರಚನೆ ಕಾರ್ಯಗಾರ ಹೊಸ ಭರವಸೆ ತುಂಬಿದೆ ಎನ್ನುತ್ತಾರೆ.
ಸಿನಿಮಾ ವಿದ್ಯಾರ್ಥಿಗಳ ಭರವಸೆ ‘ ಟೆಂಟ್ ಸಿನಿಮಾ ಶಾಲೆ ‘
ಇನ್ನೂ ‘ ಅಭಿನಯ, ನಿರ್ದೇಶನ ಮತ್ತು ಸ್ಕ್ರಿಪ್ಟ್ ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ಟೆಂಟ್ ಸಿನಿಮಾ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಅನುಭವಿ ನಿರ್ದೇಶಕರಿಂದ ಸಿನಿಮಾದ ಸ್ಟ್ರಕ್ಚರ್ ಮತ್ತು ಪ್ಯಾಟರ್ನ್ಗಳನ್ನು ಕಲಿಯಲು ಅವಕಾಶವಿದೆ. ಆ ಮೂಲಕ ಆತ್ಮವಿಶ್ವಾಸದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ. ಇನ್ನೂ ನಮ್ಮ ಟೆಂಟ್ ಸಿನಿಮಾ ಶಾಲೆಯಲ್ಲಿ ಅತ್ಯುತ್ತಮ ಸ್ಟುಡಿಯೋ ಸೆಟ್ ಅಪ್ ಇದ್ದು, ಚಿತ್ರೀಕರಣಕ್ಕೆ ಅನುಕೂಲವಾಗುವಂಥ ಸ್ಥಳಾವಕಾಶವಿದೆ. ಜೊತೆಗೆ ಚಿತ್ರರಂಗದ ಅನುಭವಿ ಟೆಕ್ನಿಷಿಯನ್ಸ್ ಪ್ರಾಯೋಗಿಕ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುತ್ತಾರೆ. ಆ ಮೂಲಕ ಒಂದು ಸಂಪೂರ್ಣ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಸಿನಿಮಾ ವಿದ್ಯಾರ್ಥಿಗಳಿಗೆ ಸಿಕ್ಕಂತಾಗುತ್ತದೆ. ಈ ಪ್ರಾಯೋಗಿಕ ಅನುಭವ ಅವರನ್ನು ಸಿನಿಮಾ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡುವಲ್ಲಿ ಸಹಕಾರಿಯಾಗಿದೆ ‘ ಎನ್ನುತ್ತಾರೆ ಟೆಂಟ್ ಸಿನಿಮಾ ಸಿಇಒ ಶೋಭಾ ಸಿ.ಎಸ್.
ಟೆಂಟ್ ಸಿನಿಮಾ ಯ್ಯೂಟ್ಯೂಬ್ ಚಾನೆಲ್ನಲ್ಲಿ ಪ್ರದರ್ಶನ
ಸ್ಯಾಂಡಲ್ವುಡ್ನ ಟ್ರೆಂಡ್ ಸೆಟರ್ ನಿರ್ದೇಶಕರುಗಳಾದ , ನಾಗತಿಹಳ್ಳಿ ಚಂದ್ರಶೇಖರ್ ಅವರ ಸಾರಥ್ಯ, ಜಯತೀರ್ಥ ಮತ್ತು ಆದರ್ಶ್ ಈಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಟೆಂಟ್ ಸಿನಿಮಾ ವಿದ್ಯಾರ್ಥಿಗಳು ಸ್ಟ್ಕ್ರಿಪ್ಟ್, ಅಭಿನಯ ಮತ್ತು ನಿರ್ದೇಶನದಲ್ಲಿ ತೊಡಗಿಸಿಕೊಂಡು ತಯಾರಿಸಿರುವ ‘ಟೇಕ್ ಎ ಬ್ರೇಕ್’ ಕಿರುಚಿತ್ರ ಎಲ್ಲರಿಗೂ ಭರವಸೆ ಮೂಡಿಸಿದೆ. ಇದೇ ಗುರುವಾರ ನವೆಂಬರ್ 12 ರಂದು ‘ಟೇಕ್ ಎ ಬ್ರೇಕ್’ ಕಿರುಚಿತ್ರವನ್ನು ನಟ, ನಿರ್ದೇಶಕರಾದ ಶಿವಮಣಿಯವರು ಟೆಂಟ್ ಸಿನಿಮಾ ಯ್ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಹಿಂದಿನ ಬ್ಯಾಚ್ ನ ಹಲವಾರು ಕಿರುಚಿತ್ರಗಳು ಟೆಂಟ್ ಸಿನಿಮಾ ಯ್ಯೂಟ್ಯೂಬ್ ಚಾನೆಲ್ನಲ್ಲಿದ್ದು ಸಿನಿಮಾಸಕ್ತರ ಗಮನ ಸೆಳೆದಿದೆ.
ಅಭಿನಯ ತರಗತಿಗಳಿಗೆ ಡಿಮ್ಯಾಂಡ್
ಇನ್ನೂ ನಿರ್ದೇಶನದ ಜೊತೆಗೆ ಅಭಿನಯಾಸಕ್ತ ವಿದ್ಯಾರ್ಥಿಗಳಿಗೂ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಟೆಂಟ್ ಸಿನಿಮಾ ಶಾಲೆಯ ಅಭಿನಯ ತರಗತಿಗಳಿಗೆ ಭಾರೀ ಡಿಮ್ಯಾಂಡ್ ಇದೆ . ಕಲಾವಿದರಾಗಬೇಕು ಎನ್ನುವವರಿಗೆ ನಟನೆಯ ವಿಶೇಷ ತರಗತಿಗಳಿವೆ. ಧ್ವನಿ ಏರಿಳಿತ, ಪಾತ್ರಗಳ ಮ್ಯಾನರಿಸಮ್, ಫೇಶಿಯಲ್ ಎಕ್ಸ್ಪ್ರೆಷನ್ಸ್ ಗಳಂತಹ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಟೆಂಟ್ ಸಿನಿಮಾ ಶಾಲೆಯಿಂದ ಹೊರಬಂದ ಹಲವಾರು ವಿದ್ಯಾರ್ಥಿಗಳು ಕಿರುತೆರೆಯಲ್ಲಿ ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸಿ ಭರವಸೆ ಮೂಡಿಸಿದ್ದಾರೆ. ಜನಪ್ರಿಯ ಗೀತಾ ಧಾರಾವಾಹಿಯ ನಾಯಕ ಧನುಷ್(ವಿಜಯ್), ಯಾರಿವಳು ಧಾರಾವಾಹಿ ಖ್ಯಾತಿಯ ಐಶ್ವರ್ಯ, ಗಿಣಿರಾಮ ಸೀರಿಯಲ್ನ ವರುಣ್ ಹೆಗ್ಡೆ ಯಂತಹ ಯುವ ಕಲಾವಿದರನ್ನು ಹುರಿಗೊಳಿಸಿದ ಹೆಮ್ಮೆ ಟೆಂಟ್ ಸಿನಿಮಾ ಶಾಲೆಗಿದೆ.
No Comment! Be the first one.