ಸ್ನೇಹ ಮತ್ತು ಪ್ರೀತಿ ಇವೆರಡರ ನಡುವೆ ಬದುಕನ್ನು ಇಟ್ಟು, ಮೂರರಲ್ಲಿ ಯಾವುದು ಮುಖ್ಯ ಅಂತಾ ಕೇಳಿದರೆ ಹೇಗಿರುತ್ತೆ? ಅದಕ್ಕೆ ಉತ್ತರದಂತೆ ಮೂಡಿ ಬಂದಿರುವ ಸಿನಿಮಾ ದ ಚೆಕ್ ಮೇಟ್. ಅವರು ನಾಲ್ಕು ಜನ ಫ್ರೆಂಡ್ಸು. ಪ್ರತಿಯೊಬ್ಬರ ಲೈಫಲ್ಲೂ ಒಂದೊಂದು ಪ್ರೇಮಪ್ರಕರಣಗಳು ಘಟಿಸಿರುತ್ತವೆ. ಆ ಪ್ರೀತಿ ಮುರಿದುಬಿದ್ದಿರುತ್ತವೆ. ಅದನ್ನು ಲವ್ ಬ್ರೇಕಪ್ ಪಾರ್ಟಿಯ ಮೂಲಕ ಆಚರಿಸಲು ನಾಲ್ವರೂ ಒಂದು ಸೇರಿರುತ್ತಾರೆ. ಜೊತೆ ಸೇರಿ ಪಾರ್ಟಿ ಮಾಡಲು ಮುಂದಾದವರು ಮತ್ತೊಂದು ಗ್ಯಾಂಗ್ ಜೊತೆ ಕಿತ್ತಾಡಿಕೊಳ್ಳುತ್ತಾರೆ. ಆ ಕಿತ್ತಾಟ, ಬಡಿದಾಟಗಳು ಪಾರ್ಟಿಯನ್ನು ದೊಡ್ಡ ಬಂಗಲೆಯೊಂದಕ್ಕೆ ಶಿಫ್ಟ್ ಮಾಡಿಸಲು ಕಾರಣವಾಗುತ್ತದೆ. ಅಲ್ಲಿಂದ ಅಸಲೀ ‘ಆಟ’ ಕೂಡಾ ಶುರುವಾಗುತ್ತದೆ.
ಗೊತ್ತಿಲ್ಲದೇ ಮುಟ್ಟಿದ ಚೆಸ್ ಬೋರ್ಡು ಅಲ್ಲಿದ್ದವರ ಜೀವದ ಜೊತೆ ಗೇಮು ಆಡಲು ಪ್ರಾರಂಭಿಸುತ್ತದೆ. ಅಲ್ಲಿ ಬದುಕಿ ಉಳಿಯಬೇಕಾದವನು ಕೂಡಾ ಆಟವಾಡಲೇಬೇಕಾದದ್ದು ಅನಿವಾರ್ಯ. ಈ ಆಟದ ನಡುವೆ ಏನೆಲ್ಲಾ ಘಟನೆಗಳು ಜರುಗುತ್ತವೆ. ಯಾರು ತಪ್ಪಿಸಿಕೊಳ್ಳುತ್ತಾರೆ? ಕಾಪಾಡಲು ಬಂದವರು ಏನಾಗುತ್ತಾರೆ? ತಮ್ಮ ಪ್ರಾಣ ಉಳಿಸಿಕೊಳ್ಳುವುದೇ ಅಂತಿಮ ಟಾಸ್ಕ್ ಆದಾಗ ಸ್ನೇಹ ಮತ್ತು ಪ್ರೀತಿ ಕಿಮ್ಮತ್ತು ಉಳಿಸಿಕೊಳ್ಳತ್ತಾ ಅನ್ನೋದು ದ ಚೆಕ್ ಮೇಟ್ ಚಿತ್ರದ ತಿರುಳು.

ಹಾರರ್ ಜಾನರಿನ ಕತೆ, ಬಂಗಲೆ ಅಂದ ತಕ್ಷಣ ಇದು ಮಾಮೂಲಿ ಸಿನಿಮಾ ಅಂದುಕೊಳ್ಳಬೇಡಿ. ಚೆಕ್ ಮೇಟ್ ವಿಶೇಷ ಅನ್ನಿಸಿಕೊಳ್ಳೋದೇ ಇಲ್ಲಿ. ದೆವ್ವದ ಕತೆಯನ್ನು ತಂದು ಚೆಸ್ ಆಟದೊಂದಿಗೆ ಸಮೀಕರಿಸಿರುವ ಕಾನ್ಸೆಪ್ಟೇ ಮಜವಾಗಿದೆ. ಬುದ್ದಿವಂತರ ಆಟ ಅನ್ನಿಸಿಕೊಂಡಿರುವ ಚೆಸ್ ಆಟದಲ್ಲಿ `ಗೆದ್ದವನು ಮಾತ್ರ ಜೀವ ಉಳಿಸಿಕೊಳ್ಳುತ್ತಾನೆ’ ಅಂದಮೇಲೆ ಕ್ಷಣಕ್ಷಣಕ್ಕೂ ಕ್ಯೂರಿಯಾಸಿಟಿ ಹೆಚ್ಚುತ್ತಾ ಸಾಗುತ್ತದೆ. ನೋಡುಗರಿಗೆ ರೋಚಕ ಅನುಭವವನ್ನೂ ನೀಡುತ್ತದೆ.

ಭಾರತೀಶ ವಸಿಷ್ಠ ಹಾಗೂ ಸಂತೋಷ್ ಚಿಪ್ಪಾಡಿ ಇಬ್ಬರೂ ಸೇರಿ ನಿರ್ದೇಶಿಸಿರುವ ಈ ಚಿತ್ರ ಥ್ರಿಲ್ಲರ್ ಮತ್ತು ಹಾರರ್ ಜಾನರಿನ ಸಿನಿಮಾ ಪ್ರಿಯರಿಗೆ ಹೇಳಿಮಾಡಿಸಿದಂತಿದೆ. ಸ್ನೇಹಿತರ ನಡುವೆ ಆತಂಭವಾದ ಕಥೆಯಲ್ಲಿ ಪ್ರೇತವೊಂದರ ಆಟ ಏನೆಲ್ಲಾ ಅವಾಂತರ, ಅವಘಡಗಳಿಗೆ ಕಾರಣವಾಗುತ್ತದೆ ಎನ್ನುವ ವಿಚಾರವನ್ನು ನಿರ್ದೇಶಕದ್ವಯರು ಥ್ರಿಲ್ ಹುಟ್ಟಿಸುವಂತೆ ರೂಪಿಸಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ಮತ್ತು ಹಿನ್ನೆಲೆ ಸಂಗೀತ ಇಡೀ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಯಾವುದೇ ಜಾನರಿನ ಸಿನಿಮಾಗಳಿಗೆ ಸಲೀಸಾಗಿ ಸಂಗೀತ ಸಂಯೋಜಿಸುವ ತಾಕತ್ತು ಶಶಾಂಕ್ ಅವರಿಗೆ ಅನ್ನೋದಕ್ಕೆ ಚಕ್ ಮೇಟ್ ಗಿಂತಾ ಬೇರೆ ಉದಾಹರಣೆ ಬೇಕಿಲ್ಲ.
ರಂಜನ್ ಹಾಸನ್ ಕೂಡಾ ಕನ್ನಡದ ಮಟ್ಟಿಗೆ ಗಟ್ಟಿಯಾಗಿ ನೆಲೆನಿಲ್ಲಬಲ್ಲ ಹೀರೋ ಅನ್ನಿಸುವಷ್ಟರ ಮಟ್ಟಿಗೆ ಸಹಜವಾಗಿ ಅಭಿನಯಿಸಿದ್ದಾರೆ. ಪ್ರೀತೂ ಪೂಜಾ ಮಾತಿಲ್ಲದೆಯೂ ಎಲ್ಲರನ್ನೂ ಮೋಡಿ ಮಾಡುತ್ತಾರೆ. ಅಶ್ವಥ್ ನೀನಾಸಂ, ಮಜಾ ಟಾಕೀಸ್ ರಾಜಶೇಖರ್, ಸರ್ದಾರ್ ಸತ್ಯ, ಪ್ರದೀಪ್ ಪೂಜಾರಿ, ವಿಜಯ್ ಚೆಂಡೂರ್ ಮತ್ತು ವಿಶ್ವವಿಜೇತ್ ಕೂಡಾ ಪಾತ್ರವೇ ತಾವಾಗಿ ಅಭಿನಯಿಸಿದ್ದಾರೆ. ಕಾಕ್ರೋಚ್ ಸುಧಿಗೆ ತೀರಾ ಸಣ್ಣ ಪಾತ್ರ ನೀಡಿರೋದು ಯಾಕೆ ಅಂತಾ ಗೊತ್ತಿಲ್ಲ.
ಒಟ್ಟಾರೆ ದ ಚೆಕ್ ಮೇಟ್ ಸಿನಿಮಾ ಸೈಲೆಂಟಾಗಿ ಬಂದರೂ ಸೌಂಡು ಮಾಡುವಂತಿದೆ. ಇಂಥದ್ದೊಂದು ಕಥಾಹಂದರತ ಸಿನಿಮಾ ಇತ್ತೀಚೆಗೆ ಬಂದಿಲ್ಲವಾದ್ದರಿಂದ ಎಲ್ಲರೂ ಥೇಟರಿಗೆ ಹೋಗಿ ನೋಡಿ ಎಂಜಾಯ್ ಮಾಡಬಹುದು.
ಚಿತ್ರ : ದಿ ಚೆಕ್ ಮೇಟ್ ನಿರ್ದೇಶಕರು : ಭಾರತೀಶ ವಸಿಷ್ಠ , ಸಂತೋಷ್ ಚಿಪ್ಪಾಡಿ
ನಿರ್ಮಾಪಕ : ರಂಜನ್ ಹಾಸನ್
ಛಾಯಾಗ್ರಾಹಕ : ಸತೀಶ್ ರಾಜೇಂದ್ರನ್
ಸಂಗೀತ : ಶಶಾಂಕ್ ಶೇಷಗಿರಿ
ತಾರಾಗಣ : ರಂಜನ್ ಹಾಸನ್ , ಪ್ರೀತು ಪೂಜಾ, ವಿಜಯ್ ಚೆಂಡೂರ್, ಪ್ರದೀಪ್ ಪೂಜಾರಿ, ವಿಶ್ವವಿಜೇತ್, ಸರ್ದಾರ್ ಸತ್ಯ,ನೀನಾಸಂ ಅಶ್ವತ್ಥ್ ,
No Comment! Be the first one.