ವಿಶ್ವರೂಪಿ, ಉಲಗನಾಯಗನ್ ಮುಂತಾದ ಬಿರುದುಗಳನ್ನು ಪಡೆದಿರುವ ನಟ ಕಮಲ ಹಾಸನ್. ಅತ್ಯದ್ಭುತ ಅನ್ನಿಸುವ ಸಿನಿಮಾಗಳನ್ನು ನೀಡಿ ಭಾರತೀಯ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವರಲ್ಲೊಬ್ಬ. ಇತ್ತೀಚೆಗೆ ರಾಜಕಾರಣ, ರಿಯಾಲಿಟಿ ಶೋ ಅದೂ ಇದೂ ಅಂತಾ ಬ್ಯುಸಿಯಾಗಿರೋ ಕಮಲ್ ಮತ್ತೆ ತಮ್ಮ ಹಳೇ ಫಾರ್ಮಿಗೆ ಮರಳುವ ಮನಸು ಮಾಡಿದಂತಿದೆ. ತಾವು ಈ ಹಿಂದೆ ನಟಿಸಿ, ಸೂಪರ್ ಹಿಟ್ ಅನ್ನಿಸಿಕೊಂಡಿದ್ದ ಸಿನಿಮಾಗಳ ಕಥೆಯನ್ನು ಬೆಳೆಸಿ, ಅದರ ಮುಂದುವರೆದ ಭಾಗಗಳನ್ನು ತೆರೆಗೆ ತರುವ ಪ್ರಯತ್ನಕ್ಕೆ ಕಮಲ್ ಹೆಚ್ಚು ಮುತುವರ್ಜಿ ನೀಡುತ್ತಿದ್ದಾರೆ.

ಸರಿಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ಶಂಕರ್ ನಿರ್ದೇಶನದಲ್ಲಿ ಬಿಡುಗಡೆಯಾಗಿ ದೊಡ್ಡ ಹೆಸರು ಮಾಡಿದ್ದ ಇಂಡಿಯನ್ ಸಿನಿಮಾದ ಮುಂದುವರಿದ ಭಾಗ ಇಂಡಿಯನ್-೨ ಚಿತ್ರೀಕರಣ ಹಂತದಲ್ಲಿದೆ. ಇದಾಗುತ್ತಿದ್ದಂತೇ ತಲೈವನ್ ಇರುಕಿಂಡ್ರಾನ್ ಎನ್ನುವ ಸಿನಿಮಾವನ್ನು ಆರಂಭಿಸುವ ಪ್ಲಾನು ಕಮಲ್ ಹಾಸನ್ ಅವರದ್ದು. 1992ರಲ್ಲಿ ಬಿಡುಗಡೆಯಾಗಿದ್ದ ಥೇವರ್ ಮಗನ್ ಚಿತ್ರ ಬಾಕ್ಸಾಫೀಸ್ ಲೂಟಿ ಮಾಡಿತ್ತು. ತಮಿಳು ಚಿತ್ರರಂಗದ ಮೇರು ನಟ ಶಿವಾಜಿ ಗಣೇಶನ್ ಮತ್ತು ಕಮಲ್ ಬಹುಕಾಲದ ನಂತರ ಒಟ್ಟಿಗೇ ನಟಿಸಿದ್ದ ಚಿತ್ರವದು. ಈ ಸಿನಿಮಾದಲ್ಲಿ ಶಿವಾಜಿ ಮತ್ತು ಕಮಲ್ ಅಪ್ಪ ಮಕ್ಕಳಾಗಿ ಕಾಣಿಸಿಕೊಂಡಿದ್ದರು. ಇದೇ ಸಿನಿಮಾ 2006ರಲ್ಲಿ ಕನ್ನಡದಲ್ಲಿ ರಿಮೇಕ್ ಆಗಿತ್ತು. ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ರಿಯಲ್ ಸ್ಟಾರ್ ಉಪ್ಪಿ ನಟನೆಯ ಈ ಚಿತ್ರ ʻತಂದೆಗೆ ತಕ್ಕ ಮಗʼ ಹೆಸರಿನಲ್ಲಿ ತೆರೆಗೆ ಬಂದಿತ್ತು. ಈಗಿನ ವಿಚಾರವೇನೆಂದರೆ, ಕಮಲ್ ನಟಿಸಲಿರುವ ಮುಂದಿನ ಸಿನಿಮಾ ತಲೈವರ್ ಇರುಕಿಂಡ್ರಾನ್ (ನಾಯಕ ಇದ್ದಾನೆ) ಸಿನಿಮಾ ಇದೇ ಥೇವರ್ ಮಗನ್ ಚಿತ್ರದ ಮುಂದುವರೆದ ಭಾಗವಾಗಿದೆ.

ಆ ಚಿತ್ರದಲ್ಲಿ ನಟಿ ರೇವತಿ, ಕಾಮಿಡಿ ಕಲಾವಿದ ವಡಿವೇಲು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶಿವಾಜಿ ಗಣೇಶನ್ ಅವರ ಪಾತ್ರ ಆ ಚಿತ್ರದಲ್ಲೇ ಕೊನೆಯೂ ಆಗಿತ್ತು. ಈಗ ರೇವತಿ ಮತ್ತು ವಡಿವೇಲು ಪಾತ್ರಗಳು ಕೂಡಾ ಮುಂದುವರೆಯಲಿದ್ದು, ಈ ಹಿಂದೆ ಕಮಲ್ ಜೊತೆಗೆ ವಿಶ್ವರೂಪಂ ಮತ್ತು ರಮೇಶ್ ಅರವಿಂದ್ ನಿರ್ದೇಶನದ ಉತ್ತಮ ವಿಲನ್ ಸಿನಿಮಾಗಳಲ್ಲಿ ನಟಿಸಿ ಪರದೆ ಹಂಚಿಕೊಂಡಿದ್ದ ಆಂಡ್ರಿಯಾ ಮತ್ತು ಪೂಜಾ ಕುಮಾರ್ ಕೂಡಾ ಈ ಚಿತ್ರದ ಭಾಗವಾಗಲಿದ್ದಾರಂತೆ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮಾಸ್ಟರ್ ಮನಸು!

Previous article

ಜೋಡಿ ಜೀವ @ ಜಾಲಿ ಮೂಡ್!

Next article

You may also like

Comments

Leave a reply

Your email address will not be published. Required fields are marked *