ಟ್ರೇಲರ್ ನೋಡುತ್ತಿದ್ದಂತೆಯೇ, ಅದೊಂದು ಪ್ರಶ್ನೆ ಬರುವುದು ಖಂಡಿತಾ. ‘ತೂತು ಮಡಿಕೆ’ ಎಂಬ ಹೆಸರಿಗೂ, ಕಾಣೆಯಾದ ವಿಗ್ರಹಕ್ಕೂ ಏನು ಸಂಬಂಧ ಎಂದನಿಸುವುದು ನಿಜ. ಆದರೆ, ಚಂದ್ರಕೀರ್ತಿ ಈ ಪ್ರಶ್ನೆಗೆ ಉತ್ತರಿಸುವುದಿಲ್ಲ. ಹೇಗೂ ಚಿತ್ರ ಜುಲೈ 08ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತದಲ್ಲ, ಆಗ ನೀವೇ ನೋಡಿಕೊಂಡು ಬಿಡಿ ಎಂದು ಕಣ್ಣು ಹೊಡೆಯುತ್ತಾರೆ.

ಅವರಂತೂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಬರೀ ನಿರ್ದೇಶನವಷ್ಟೇ ಅಲ್ಲ, ಚಿತ್ರದ ಕಥೆ-ಚಿತ್ರಕಥೆ ಬರೆದು ಹೀರೋ ಆಗಿಯೂ ನಟಿಸಿರುವ ಅವರು, ಈ ಚಿತ್ರವು ತಮಗೊಂದು ದೊಡ್ಡ ಬ್ರೇಕ್ ನೀಡಬಹುದು ಎಂದು ಕಾಯುತ್ತಿದ್ದಾರೆ.

‘ತೂತು ಮಡಿಕೆ’ ಕುರಿತು ಮಾತನಾಡುವ ಚಂದ್ರಕೀರ್ತಿ, ‘ಮೂರು ವರ್ಷದಿಂದ ಸಿನಿಮಾ ಮುಗಿಸಿ ಬಿಡುಗಡೆಗೆ ಎದುರು ನೋಡುತ್ತಿದ್ದೇವೆ. ಒಂದೊಂದು ಹಂತವೂ ಕನಸಾಗಿರುತ್ತದೆ. ಕನ್ನಡ ಚಿತ್ರರಂಗಕ್ಕೆ ಬಹಳ ಆಸೆಪಟ್ಟು ಬಂದೆ. ಹಲವು ಕಿರುಚಿತ್ರ, ನಾಟಕಗಳ ನಂತ್ರ ಒಂದೊಂದೇ ಅವಕಾಶ ಸಿಕ್ತಿದ್ದವು, ಆದರೆ, ಮಾಡಿದ ಸಿನಿಮಾಗಳು ರಿಲೀಸ್ ಆಗ್ತಿರಲಿಲ್ಲ. ನಮ್ಮ ಬಳಿ ಇರುವ ರಿಸೋರ್ಸ್ ಮೂಲಕ ಸಿನಿಮಾ ಶುರು ಮಾಡಿದೆವು. ಹೊಸ ನಿರ್ದೇಶಕನಿಗೆ ನಿರ್ಮಾಪಕರು ಸಿಗುವುದು ಕಷ್ಟದ ಕೆಲಸ, ಆದರೆ, ನಮಗೆ ನಿರ್ಮಾಪಕರೇ ನಮ್ ಆಫೀಸ್ ಗೆ ಬಂದು ಸಿನಿಮಾ ಕಥೆ ಕೇಳಿ ಇಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಈಗ ಸಿನಿಮಾ ಜುಲೈ 8ಕ್ಕೆ ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ ಹಾರೈಸಬೇಕು’ ಎನ್ನುತ್ತಾರೆ ಅವರು.

ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಸಹ ಚಿತ್ರದ ಬಗ್ಗೆ ಒಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ‘ದುಡ್ಡು ಇಲ್ಲದವನಿಗೆ ದುಡ್ಡು ಮಾಡಬೇಕು, ದುಡ್ಡು ಮಾಡಿದವ್ನು ಇನ್ನೂ ಹೆಚ್ಚು ದುಡ್ಡು ಮಾಡ್ಬೇಕು. ಎಂಬ ಆಸೆಯ ಕುರಿತ ಚಿತ್ರ ಇದು ಎಂದು ಟ್ರೇಲರ್ ನೋಡಿದರೆ ಅನಿಸುತ್ತದೆ. ಹೊಸಬರ ಜೊತೆ ಕೆಲಸ ಮಾಡುತ್ತಾ, ಹೊಸತನ ಕಲಿಯುತ್ತಾ ನನ್ನಿಂದ ನಿಮ್ಮ ಸಿನಿಮಾ ಸಹಾಯವಾಗಿದೆ ಎಂದು ತಿಳಿದುಕೊಳ್ಳುತ್ತೇನೆ’ ಎನ್ನುತ್ತಾರೆ.

ಸ್ವಾರ್ಥ, ದುರಾಸೆ ಸುತ್ತಾ ಸಾಗುವ ಈ ಚಿತ್ರದಲ್ಲಿ ಚಂದ್ರಕೀರ್ತಿಗೆ ನಾಯಕಿಯಾಗಿ ‘ಗೊಂಬೆಗಳ’ ಲವ್ ಖ್ಯಾತಿಯ ಪಾವನಾ ಗೌಡ ಅಭಿನಯಿಸಿದ್ದಾರೆ. ಉಳಿದಂತೆ ‘ಉಗ್ರಂ’ ಮಂಜು, ಗಿರೀಶ್ ಶಿವಣ್ಣ, ಶಂಕರ್ ಅಶ್ವತ್ಥ್, ಸಿತಾರಾ ನರೇಶ್ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ‘ತೂತುಮಡಿಕೆ’ ಚಿತ್ರವನ್ನು ಸರ್ವತಾ ಸಿನಿ ಗ್ಯಾರೇಜ್ ಬ್ಯಾನರ್ ನಡಿ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ನಿರ್ಮಿಸಿದ್ದು, ನವೀನ್ ಚಲ್ಲ ಛಾಯಾಗ್ರಾಹಣ, ಹಾಗೂ ಉಜ್ವಲ್ ಚಂದ್ರ ಸಂಕಲನವಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಹೆಣ್ಮಕ್ಕಳು ಬ್ಲಾಕ್ಮೇಲ್ ಮಾಡುವುದಕ್ಕೆ ಬಳಸಿಕೊಂಡರು!

Previous article

ಗಿರ್ಕಿ ಸುತ್ತ ಇಷ್ಟೆಲ್ಲಾ ಇದೆ!

Next article

You may also like

Comments

Comments are closed.