ಸಿನಿಮಾವೊಂದು ಬಿಡುಗಡೆಯಾಗಿ ಸೂಪರ್ ಹಿಟ್ ಅನ್ನಿಸಿಕೊಂಡಮೇಲೆ ಅದರ ದ್ವಿತೀಯ ಭಾಗ ಕೂಡಾ ಚಾಲನೆಗೊಳ್ಳುವುದು ವಾಡಿಕೆ. ಇನ್ನು ಕೆಲವೊಮ್ಮೆ ಚಿತ್ರೀಕರಣ ಸಂದರ್ಭದಲ್ಲಿ ಅಂದುಕೊಂಡಿದ್ದಕ್ಕಿಂತಾ ಹೆಚ್ಚು ದೀರ್ಘವಾಗುತ್ತಾ ಸಾಗಿದರೆ, ಅದನ್ನು ಎರಡು ಭಾಗಗಳನ್ನಾಗಿ ವಿಭಾಗಿಸುತ್ತಾರೆ. ಎಷ್ಟೋ ಸಲ ಕಥೆ ಮೊದಲ ಭಾಗದಲ್ಲಿ ಮುಗಿದೇ ಇರುವುದಿಲ್ಲ. ಮುಂದಿವರೆದ ಅಧ್ಯಾಯದಲ್ಲಿ ನಿರೀಕ್ಷಿಸಿ ಎಂದು ಬರೆದಿರುತ್ತಾರೆ. ಮೊದಲ ಭಾಗವನ್ನೇ ಜನ ಸ್ವೀಕರಿಸದೇ ಹೋದಾಗ ಎರಡನೇ ಅಧ್ಯಾಯದ ಕತೆ ಅಲ್ಲಿಗೇ ಮುಕ್ತಾಯವಾಗುತ್ತದೆ. ಮೊದಲೇ ಚಾಪ್ಟರ್-೧ ಅಂತಾ ನಮೂದಿಸಿ, ಅಂದುಕೊಂದಂತೆ ಅಚ್ಚುಕಟ್ಟಾಗಿ ಸಿನಿಮಾ ಮಾಡಿ, ಗೆದ್ದು ಎರಡನೇ ಅಧ್ಯಾಯಕ್ಕೆ ಕೈಯಿಟ್ಟಿದ್ದು ಕೆ.ಜಿ.ಎಫ್. ಚಿತ್ರತಂಡ. ಈಗ ಮತ್ತೊಂದು ಸಿನಿಮಾ ತಂಡ ಎರಡೂ ಚಾಪ್ಟರುಗಳನ್ನು ಒಮ್ಮೆಲೇ ಚಿತ್ರೀಕರಿಸಿ, ಒಂದರ ನಂತರ ಒಂದನ್ನು ತೆರೆಗರ್ಪಿಸುವ ಹೊಸಾ ಪ್ಲಾನು ಮಾಡಿದೆ.

ಅದು ತೋತಾಪುರಿ!

ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮಹೋನ್ನತ ಪ್ರತಿಭೆಗಳ ಸಮಾಗಮವಾಗಿದೆ. ಹೊಸತನ, ಕ್ರಿಯಾಶೀಲತೆಗಳಿಂದ ಮನಗೆದ್ದ ನಿರ್ದೇಶಕ ವಿಜಯಪ್ರಸಾದ್, ತಮ್ಮ ನಟನೆಯಿಂದಲೇ ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ಜಗ್ಗೇಶ್, ನಟಿಸಿದ ಪ್ರತಿಯೊಂದು ಸಿನಿಮಾದಲ್ಲೂ ತನ್ನ ಇರುವಿಕೆಯನ್ನು ಸಾಬೀತು ಮಾಡುತ್ತಾ ಬರುತ್ತಿರುವ ನಾಯಕನಟಿ ಅದಿತಿ ಪ್ರಭುದೇವ, ಡಾಲಿಯಾಗಿ ಮೆರೆಯುತ್ತಿರುವ ಧನಂಜಯ – ಹೀಗೆ ತೋತಾಪುರಿಯ ರುಚಿ ಹೆಚ್ಚಿಸಲು ಬೇಕಾದ ಎಲ್ಲ ಕಲಾವಿದರೂ ಇಲ್ಲಿದ್ದಾರೆ. ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿರುವ ಕಲಾವಿದರ ಸಂಖ್ಯೆ ಏನಿಲ್ಲವೆಂದರೂ ಎಂಭತ್ತಕ್ಕೂ ಅಧಿಕವಾಗಿದೆ.

ಜೊತೆಗೆ ಖರ್ಚಾದ ದುಡ್ಡಿನ ಕಡೆ ಲೆಕ್ಕವಿಡದೆ, ಸಿನಿಮಾಗೆ ಬೇಕಿರುವ ಸಕಲವನ್ನೂ ಧಾರೆಯೆರೆಯುವ ಧೀಮಂತ ನಿರ್ಮಾಪಕ ಕೆ.ಎ. ಸುರೇಶ್ ತೋತಾಪುರಿಯ ನಿರ್ಮಾಪಕರಾಗಿದ್ದಾರೆ. ಏನೇನೂ ಇಲ್ಲದ ಸಂದರ್ಭಗಳಲ್ಲಿ, ಎಂತೆಂಥದ್ದೋ ಸಮಸ್ಯೆಗಳ ಮಧ್ಯೆಯೇ ಅದ್ಭುತ ಸಿನಿಮಾಗಳನ್ನು ಕೊಟ್ಟವರು ವಿಜಯ ಪ್ರಸಾದ್, ಈಗ ಎಲ್ಲವನ್ನೂ ಸಲೀಸಾಗಿ ಪೂರೈಸುವ ಪ್ರೊಡ್ಯೂಸರ್ ಸಿಕ್ಕಿರುವಾಗ ಯಾವ ಮಟ್ಟಕ್ಕೆ ಸಿನಿಮಾ ಕಟ್ಟಿರುತ್ತಾರೆ ಅನ್ನೋದನ್ನು ಊಹೆ ಮಾಡಬಹುದು. ಗೋವಿಂದಾಯ ನಮಃ, ಶ್ರಾವಣಿ ಸುಬ್ರಹ್ಮಣ್ಯ, ಶಿವಲಿಂಗ, ರಾಜು ಕನ್ನಡ ಮೀಡಿಯಂನಂತಾ ದೊಡ್ಡ ಸಿನಿಮಾಗಳನ್ನು ನಿರ್ಮಿಸಿದವರು ಕೆ.ಎ.ಸುರೇಶ್. ವ್ಯಾಪಾರೀ ದೃಷ್ಟಿಯಿಂದ ಮಾತ್ರವಲ್ಲದೆ, ಸಿನಿಮಾ ಮೇಲೆ ಅಪಾರವಾದ ಪ್ರೀತಿ ಹೊಂದಿರುವ ಸುರೇಶ್ ತಾವು ನಿರ್ಮಿಸಿದ ಸಿನಿಮಾಗಳ ಪಬ್ಲಿಸಿಟಿಯನ್ನೂ ಅದ್ಧೂರಿಯಾಗೇ ಮಾಡುತ್ತಾ ಬಂದವರು. ಇವೆಲ್ಲವನ್ನೂ ಗಮನಿಸಿ ಹೇಳೋದಾದರೆ, ತೋತಾಪುರಿಯ ಘಮ ಈ ರಾಜ್ಯವನ್ನು ಧಾಟಿ ಜಗತ್ತಿನೆಲ್ಲೆಡೆ ಪಸರಿಸೋದು ಗ್ಯಾರೆಂಟಿ!

ಈಗಾಗಲೇ ತೋತಾಪುರಿ ಚಿತ್ರಕ್ಕಾಗಿ ನೂರೈವತ್ತಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಬೆಂಗಳೂರು, ಮೈಸೂರು, ಬನ್ನೂರು, ಶ್ರೀರಂಗಪಟ್ಟಣ, ಕೊಡಗು ಸೇರಿದಂತೆ ಹಲವಾರು ಲೊಕೇಷನ್ನುಗಳಲ್ಲಿ ತೋತಾಪುರಿ ಚಿತ್ರೀಕರಣಗೊಂಡಿದೆ. ಮೊದಲ ಚಾಪ್ಟರ್ ಸಂಪೂರ್ಣಗೊಂಡಿದ್ದು, ಬಿಡುಗಡೆಗೂ ತಯಾರಾಗಿದೆ. ಇನ್ನು ಮೂವತ್ತು ಪರ್ಸೆಂಟ್ ಕೆಲಸ ಮುಗಿದರೆ ಎರಡನೇ ಚಾಪ್ಟರ್ ಕೂಡಾ ಕಂಪ್ಲೀಟ್ ಆಗುತ್ತದೆ.

ಕೊರೋನಾ ಕಾಟ ಕೊನೆಯಾಗುತ್ತಿದ್ದಂತೇ ಎರಡನೇ ಅಧ್ಯಾಯದ ಕೆಲಸವನ್ನೂ ಮುಗಿಸಿ, ಏಕಕಾಲದಲ್ಲಿ ಎರಡೂ ಭಾಗಗಳನ್ನು ಸೆನ್ಸಾರ್ ಮಾಡಿಸಿ, ಮೂರು ತಿಂಗಳ ಅಂತರದಲ್ಲಿ ರಿಲೀಸ್ ಮಾಡುವ ಪ್ಲಾನು  ಚಿತ್ರತಂಡದ್ದಾಗಿದೆ. ಅನೂಪ್ ಸಿಳೀನ್ ಸಂಗೀತ, ಸುರೇಶ್ ಅರಸ್ ಸಂಕಲನ, ನಿರಂಜನ್ ಬಾಬು ಛಾಯಾಗ್ರಹಣವಿರುವ ತೋತಾಪುರಿಯ ಚಾಪ್ಟರ್-೧ ಜೂನ್-ಜುಲೈ ಹೊತ್ತಿಗೆ ಪರದೆಮೇಲೆ ತೆರೆದುಕೊಳ್ಳಲಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕಾರ್ಮಿಕರ ಕೈ ಹಿಡಿದರು ನಿಖಿಲ್ ಕುಮಾರ್!

Previous article

ಸಂಕಷ್ಟದಲ್ಲಿರುವವರ ನೆರವಿಗೆ ನಿಂತರು ರಾಹುಲ್ ಐನಾಪುರ

Next article

You may also like

Comments

Leave a reply

Your email address will not be published. Required fields are marked *