ಕಳೆದ ಮೂರ್ನಾಲ್ಕು ದಿನಗಳಿಂದ ಜಗ್ಗೇಶ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅದರ ನಡುವೆಯೂ ತೋತಾಪುರಿ ಸಿನಿಮಾದ ಚಿತ್ರೀಕರಣದಲ್ಲಿ ನವರಸನಾಯಕ ಬ್ಯುಸಿಯಾಗಿದ್ದಾರೆ.
ಮುಸ್ಲಿಂ ಹುಡುಗಿಯೊಂದಿಗೆ ಮದುವೆಯಾಗುವ ದೃಶ್ಯದಲ್ಲಿ ಜಗ್ಗೇಶ್ ಇಂದು ಅಭಿನಯಿಸಿದರು. ಅದಿತಿ ಪ್ರಭುದೇವಾ ಜೊತೆ ಆರತಕ್ಷತೆಯ ದೃಶ್ಯಕ್ಕಾಗಿ ನೂರಾರು ಜನ ಸಹಕಲಾವಿದರು ಸೇರಿದಂತೆ ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಮುಂತಾದವರು ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನಿರ್ಮಾಪಕ ಕೆ.ಎ. ಸುರೇಶ್ ದೊಡ್ಡ ಬಜೆಟ್ಟನ್ನು ಈ ಚಿತ್ರಕ್ಕಾಗಿ ವ್ಯಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮಹೋನ್ನತ ಪ್ರತಿಭೆಗಳ ಸಮಾಗಮವಾಗಿದೆ.
ಹೊಸತನ, ಕ್ರಿಯಾಶೀಲತೆಗಳಿಂದ ಮನಗೆದ್ದ ನಿರ್ದೇಶಕ ವಿಜಯಪ್ರಸಾದ್, ತಮ್ಮ ನಟನೆಯಿಂದಲೇ ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ಜಗ್ಗೇಶ್, ನಟಿಸಿದ ಪ್ರತಿಯೊಂದು ಸಿನಿಮಾದಲ್ಲೂ ತನ್ನ ಇರುವಿಕೆಯನ್ನು ಸಾಬೀತು ಮಾಡುತ್ತಾ ಬರುತ್ತಿರುವ ನಾಯಕನಟಿ ಅದಿತಿ ಪ್ರಭುದೇವ, ಡಾಲಿಯಾಗಿ ಮೆರೆಯುತ್ತಿರುವ ಧನಂಜಯ – ಹೀಗೆ ತೋತಾಪುರಿಯ ರುಚಿ ಹೆಚ್ಚಿಸಲು ಬೇಕಾದ ಎಲ್ಲ ಕಲಾವಿದರೂ ಇಲ್ಲಿದ್ದಾರೆ. ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿರುವ ಕಲಾವಿದರ ಸಂಖ್ಯೆ ಏನಿಲ್ಲವೆಂದರೂ ಎಂಭತ್ತಕ್ಕೂ ಅಧಿಕವಾಗಿದೆ.
ಏನೇನೂ ಇಲ್ಲದ ಸಂದರ್ಭಗಳಲ್ಲಿ, ಎಂತೆಂಥದ್ದೋ ಸಮಸ್ಯೆಗಳ ಮಧ್ಯೆಯೇ ಅದ್ಭುತ ಸಿನಿಮಾಗಳನ್ನು ಕೊಟ್ಟವರು ವಿಜಯ ಪ್ರಸಾದ್, ಈಗ ಎಲ್ಲವನ್ನೂ ಸಲೀಸಾಗಿ ಪೂರೈಸುವ ಪ್ರೊಡ್ಯೂಸರ್ ಸಿಕ್ಕಿರುವಾಗ ಯಾವ ಮಟ್ಟಕ್ಕೆ ಸಿನಿಮಾ ಕಟ್ಟಿರುತ್ತಾರೆ ಅನ್ನೋದನ್ನು ಊಹೆ ಮಾಡಬಹುದು. ಗೋವಿಂದಾಯ ನಮಃ, ಶ್ರಾವಣಿ ಸುಬ್ರಹ್ಮಣ್ಯ, ಶಿವಲಿಂಗ, ರಾಜು ಕನ್ನಡ ಮೀಡಿಯಂನಂತಾ ದೊಡ್ಡ ಸಿನಿಮಾಗಳನ್ನು ನಿರ್ಮಿಸಿದವರು ಕೆ.ಎ.ಸುರೇಶ್. ವ್ಯಾಪಾರೀ ದೃಷ್ಟಿಯಿಂದ ಮಾತ್ರವಲ್ಲದೆ, ಸಿನಿಮಾ ಮೇಲೆ ಅಪಾರವಾದ ಪ್ರೀತಿ ಹೊಂದಿರುವ ಸುರೇಶ್ ತಾವು ನಿರ್ಮಿಸಿದ ಸಿನಿಮಾಗಳ ಪಬ್ಲಿಸಿಟಿಯನ್ನೂ ಅದ್ಧೂರಿಯಾಗೇ ಮಾಡುತ್ತಾ ಬಂದವರು. ಇವೆಲ್ಲವನ್ನೂ ಗಮನಿಸಿ ಹೇಳೋದಾದರೆ, ತೋತಾಪುರಿಯ ಘಮ ಈ ರಾಜ್ಯವನ್ನು ಧಾಟಿ ಜಗತ್ತಿನೆಲ್ಲೆಡೆ ಪಸರಿಸೋದು ಗ್ಯಾರೆಂಟಿ!
ಈಗಾಗಲೇ ತೋತಾಪುರಿ ಚಿತ್ರಕ್ಕಾಗಿ ನೂರೈವತ್ತಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಬೆಂಗಳೂರು, ಮೈಸೂರು, ಬನ್ನೂರು, ಶ್ರೀರಂಗಪಟ್ಟಣ, ಕೊಡಗು ಸೇರಿದಂತೆ ಹಲವಾರು ಲೊಕೇಷನ್ನುಗಳಲ್ಲಿ ತೋತಾಪುರಿ ಚಿತ್ರೀಕರಣಗೊಂಡಿದೆ. ಅನೂಪ್ ಸಿಳೀನ್ ಸಂಗೀತ, ಸುರೇಶ್ ಅರಸ್ ಸಂಕಲನ, ನಿರಂಜನ್ ಬಾಬು ಛಾಯಾಗ್ರಹಣವಿರುವ ತೋತಾಪುರಿ ಆದಷ್ಟು ಬೇಗ ಪರದೆಮೇಲೆ ತೆರೆದುಕೊಳ್ಳಲಿದೆ.
No Comment! Be the first one.