ಭಾರತದಂತಾ ದೇಶದಲ್ಲಿ ಸದ್ಯ ಅತ್ಯಂತ ಕೆಟ್ಟ ವಾತಾವರಣವಿದೆ. ಈ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಬರ್ತಿಂದ ಹಿಡಿದು ಡೆತ್ತಿನ ತನಕ ಜಾತಿಯೇ ಎಲ್ಲವನ್ನೂ ನಿಭಾಯಿಸುತ್ತದೆ. ಕೋಮುದ್ವೇಷದ ಖಾಯಿಲೆ ದೇಶವನ್ನು ಕೊರೋನಾಗಿಂತಾ ಹೆಚ್ಚು ಹೈರಾಣು ಮಾಡಿದೆ. ಸಿನಿಮಾಗಳಲ್ಲಂತೂ ಜಾತಿ, ಧರ್ಮಗಳ ಬಗ್ಗೆ ಮಾತಾಡುವುದೇ ಮಹಾಪರಾಧ ಅಂತಾ ಅಂದುಕೊಂಡವರೂ ಇದ್ದಾರೆ. ಇಂಥವರ ನಡುವೆ ಕೋಮು ವಿಷ ಬೀಜ ಬಿತ್ತುವವರನ್ನು ನೇರಾನೇರ ಅಣಕ ಮಾಡುವುದೆಂದರೆ ಸುಮ್ಮನೇ ಮಾತಲ್ಲ. ನಿರ್ದೇಶಕ ವಿಜಯ ಪ್ರಸಾದ್ ಅಂಥದ್ದೊಂದು ಪ್ರಯತ್ನ ಮಾಡಿದ್ದಾರೆ. ಚೇಷ್ಟೆ, ಹಾಸ್ಯ, ಪೋಲಿತನಗಳನ್ನೆಲ್ಲಾ ಮಾತುಗಳಲ್ಲಿ ಮಿಕ್ಸ್ ಮಾಡಿ ಹೊಸ ಥರದ ಸಿನಿಮಾವೊಂದನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಧರ್ಮಾಂಧರಿಗೆ ತಿವಿದು ಪ್ರೇಕ್ಷಕ ಧಣಿಗಳನ್ನು ನಗಿಸಿದ್ದಾರೆ. ಅದನ್ನೇ ತೋತಾಪುರಿ ಅಂದಿದ್ದಾರೆ!
ವಸುದೈವ ಕುಟುಂಬಕಂ ಎನ್ನುವ ರಾಷ್ಟ್ರೀಯತೆಯ ಪರಿಕಲ್ಪನೆಯನ್ನಿಟ್ಟುಕೊಂಡು ತೋತಾಪುರಿಯನ್ನು ನಿರೂಪಿಸಿದ್ದಾರೆ. ಮುಸ್ಲಿಮರು, ಕ್ರಿಶ್ಚಿಯನ್ನರು ರಾಯರ ಮಠಕ್ಕೆ ಬರಬಾರದಾ? ಎನ್ನುವುದು ತೋತಾಪುರಿ ಸಿನಿಮಾದ ಮೂಲ ಧಾತು. ಮುಸಲ್ಮಾನ ಹೆಣ್ಣುಮಗಳು ಮಠದಲ್ಲಿ ವೀಣೆ ನುಡಿಸಬಾರದು ಎನ್ನುವ ಕರ್ಮಠರ ತೀರ್ಮಾನಕ್ಕೆ ಎದುರಾಗಿ ಮಠದ ಸ್ವಾಮಿಗಳು ತೆಗೆದುಕೊಳ್ಳುವ ಕ್ರಾಂತಿಕಾರಕ ತೀರ್ಮಾನ ಗಮನ ಸೆಳೆಯುತ್ತದೆ. ಹಾಗೆಯೇ ಕೆಳಜಾತಿ ಹೆಣ್ಣುಮಕ್ಕಳನ್ನು ಮನೆಗೆಲಸಕ್ಕೆ ಬಳಸಿಕೊಳ್ಳುವವರು ಎಷ್ಟೆಲ್ಲಾ ಶೋಷಣೆ ಮಾಡುತ್ತಾರೆ ಅನ್ನೋದನ್ನು ವರ್ಣಿಸಿದ್ದಾರೆ. ಮುಟ್ಟಾದ ಮಹಿಳೆ ಅನುಭವಿಸುವ ಯಾತನೆಗಳನ್ನೆಲ್ಲಾ ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿದಂತೆ ತೆರೆದಿಟ್ಟಿದ್ದಾರೆ. ಸಿನಿಮಾ ಶುರುವಿನಿಂದ ಕೊನೆಯ ತನಕ ನಗಿಸುವ ಮಾತುಗಳ ಜೊತೆಗೆ ಅಲ್ಲಲ್ಲಿ ಕಾಡುವ ಅಂಶಗಳನ್ನೂ ಪೋಣಿಸಿದ್ದಾರೆ.
ಗಂಭೀರ ವಿಚಾರಗಳನ್ನು ತಮ್ಮ ವಿಡಂಬನೆಯ ಮಾತುಗಳ ಮೂಲಕ ವಿಜಯ ಪ್ರಸಾದ್ ಹೇಳಿದ್ದಾರೆ. ಹಾಗಂತಾ ಇಲ್ಲಿ ವಿಸ್ತಾರವಾದ ಕಥೆ, ಚಿತ್ರಕತೆಯಾಗಲೀ ಇಲ್ಲ. ತಮಾಷೆ ಪ್ರಸಂಗಗಳನ್ನು ಜೋಡಿಸಿ, ಅದರ ನಡುವೆ ಧರ್ಮ, ಕರ್ಮಗಳನ್ನೆಲ್ಲಾ ಸೇರಿಸಿ ಪಕ್ಕಾ ಮನರಂಜನೆಯ ಸಿನಿಮಾವನ್ನು ವಿಜಯ ಪ್ರಸಾದ್ ಕಟ್ಟಿದ್ದಾರೆ.
ಈರೇಗೌಡ, ಶಕೀಲಾ ಬಾನು, ದೊನ್ನೆ ರಂಗಮ್ಮ ಮತ್ತು ನಂಜಮ್ಮನ ಪಾತ್ರಗಳ ಸುತ್ತ ತೋತಾಪುರಿಯ ಪ್ರಸಂಗಗಳು ಸುತ್ತುತ್ತವೆ. ಸಿಕ್ಕಾಪಟ್ಟೆ ಪಾತ್ರಗಳು ಇಲ್ಲಿವೆಯಾದರೂ ಅವೆಲ್ಲಾ ಬಹುಶಃ ಭಾಗ-೨ರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದು.
ಲೇಡೀಸ್ ಟೈಲರ್ ಈರೇಗೌಡನಾಗಿ ಜಗ್ಗೇಶ್ ಮಜಾ ಕೊಡುತ್ತಾರೆ. ಬಹುತೇಕ ದೃಶ್ಯಗಳಲ್ಲಿ ಕಾಣಸಿಗುವ ನಂಜಮ್ಮನ ಪಾತ್ರಧಾರಿ ಹೇಮಾ ದತ್ ಚಿತ್ರದ ಪ್ರಧಾನ ಆಕರ್ಷಣೆ. ನಗಿಸುವುದರ ಜೊತೆ ಅಳಿಸಿ ಭಾವುಕತೆಗೆ ದೂಡುವ ಹೇಮಾ ನಟನೆ ಗ್ರೇಟ್. ಒಂದು ದೃಶ್ಯದಲ್ಲಿ ಬಂದರೂ ಮೋಹನ್ ಜುನೇಜ ನೆನಪಿನಲ್ಲುಳಿದುಬಿಡುತ್ತಾರೆ. ಸಿಸ್ಟರ್ ವಿಕ್ಟೋರಿಯಾ ಮತ್ತು ನಾರಾಯಣ ಪಿಳ್ಳೈ ಈಗ ಬರಬಹುದು ಆಗ ಬರಬಹುದು ಅಂತಾ ಕಾದವರಿಗೆ ಡೈರೆಕ್ಟ್ರು ಮ್ಯಾಂಗೋ ಫ್ಲೇವರ್ ಚಾಕ್ಲೇಟ್ ಕೊಟ್ಟಿದ್ದಾರೆ. ತೋತಾಪುರಿ ಭಾಗ-೨ರಲ್ಲಿ ಇವರಿಬ್ಬರ ಟ್ರ್ಯಾಕು ಪ್ರಮುಖವಾಗಿರಲಿದೆ ಎನ್ನುವ ಸೂಚನೆಯನ್ನಷ್ಟೇ ನೀಡಿ ಸಮಾಧಾನಿಸಿದ್ದಾರೆ!
ಮನರಂಜನೆಯ ಸಿನಿಮಾಗಾಗಿ ಕಾದು ಕುಂತವರೆಲ್ಲಾ ತಕ್ಷಣಕ್ಕೆ ಹೋಗಿ ತೋರಾಪುರಿಯನ್ನು ಸವಿಯಬಹುದು.
No Comment! Be the first one.