‘೧೭೯೫ರ ಕಾಲಘಟ್ಟ’ ಎಂದು ಕತ್ತಲಲ್ಲಿ ಶುರುವಾಗುವ ಟ್ರ್ರೈಲರ್ನಲ್ಲಿ ಬುಲೆಟ್ಟುಗಳ ಮಳೆ, ಬೆಂಕಿಯ ನಾಲಿಗೆಗೆ ಬೆದರಿ ಓಡುವ ಭಾರತೀಯರು. ಗಾಳಿಯಲ್ಲಿ ಖಡ್ಗ ತೂರಿ ಕೈಲಿ ಹಿಡಿಯುತ್ತ ಸಮರಕಲಿಯಂತೆ ಬ್ರಿಟಿಷರ ವಿರುದ್ಧ ರೋಷಾಗ್ನಿ ಉಗುಳುವ ಅಮಿತಾಬ್, ಪರಂಗಿಗಳಿಗೆ ಸಿಂಹಸ್ವಪ್ನವಾಗುವ ಅಜಾದ್, ಬ್ರಿಟಿಷರ ಏಜೆಂಟನಾಗಿ ಅಮಿತಾಬ್ ಗುಂಪಿಗೆ ಸೇರುವ ದೋಖೆಬಾಜ್, ಪುಡಿಗಳ್ಳ ಅಮೀರ್….. ಬೆಂಕಿ, ಬುಲೆಟ್ಟುಗಳ ನಡುವೆ ಪಡ್ಡೆಗಳ ಎದೆಗೆ ಕಿಚ್ಚುಹಚ್ಚುವ ಸಪೂರ ಸೊಂಟದ ಸುಂದರಿ ಕತ್ರೀನಾ…..
೩.೩೮ ನಿಮಿಷಗಳ ಟ್ರೈಲರ್ನಲ್ಲಿ ನಮಗೆ ದಕ್ಕುವ ಚಿತ್ರಕತೆಯ ಎಳೆ ಇಷ್ಟು. ಈ ಕಾರಣಕ್ಕೇ ಇವತ್ತು ಯಶ ಚೋಪ್ರಾ ಬ್ಯಾನರಿನ ‘ಥಗ್ಸ್ ಆಫ್ ಹಿಂದೊಸ್ಥಾನ್’ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಚಿತ್ರತಂಡ ಇಲ್ಲಿವರೆಗೆ ಚಿತ್ರಕತೆಯ ಬಗ್ಗೆ ಹೇಳಿಲ್ಲವಾದರೂ, ಕತೆಯ ಪ್ಲಾಟ್ ಬಹಿರಂಗವಾಗಿದ್ದು, ಇದೊಂದು ಬ್ರಿಟಿಷರ ವಿರುದ್ಧ ವಿಭಿನ್ನ ಸಂಗ್ರಾಮ ಹೂಡಿದ ಠಕ್ಕರು (ಥಗ್ಸ್) ಎಂಬ ಕಳ್ಳರು, ಕೊಲೆಗಡುಕರ ಗುಂಪಿನ ಕತೆಯಾಗಿದೆ. ಈ ಒಂದು ಎಳೆಯೆ ಚಿತ್ರಕತೆ ವಿಶಿಷ್ಟವಾಗಿದೆ ಎಂಬುದಕ್ಕೆ ಸಾಕ್ಷಿಯೂ ಆಗಿದೆ.
ಪೈರೇಟ್ಸ್ ಆಫ್ ಕೆರೆಬಿಯನ್ ಛಾಯೆಯೇ?
ಅಮಿರ್ಖಾನ್ ಮಾರುದ್ದದ ಕೂದಲು ಬಿಟ್ಟು, ತಲೆಗೊಂದು ಹ್ಯಾಟು ಧರಿಸಿ, ಕುದುರೆ ಮೇಲೆ ಕುಳಿತು ತರಾವರಿ ನಗೆ ಬೀರುತ್ತಿರುವ ಸ್ಟಿಲ್ ಬಿಡುಗಡೆಗೊಂಡಾಗ, ಈ ಸಿನಿಮಾ ಹಾಲಿವುಡ್ನ ಸೂಪರ್ಹಿಟ್ ಚಿತ್ರ ‘ಪೈರೇಟ್ಸ್ ಆಫ್ ದಿ ಕೆರೆಬಿಯನ್’ ಛಾಯೆ ಹೊಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಯಿತು. ಆದರೆ ಈಗ ಟ್ರೈಲರ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ೧೭೯೫ರ ಕಾಲಘಟ್ಟದ ಸ್ವಾತಂತ್ರ್ಯ ಸಂಗ್ರಾಮದಸುತ್ತ ಹೆಣೆದ ‘ಫಿಕ್ಷನ್’ ಇದು ಎಂಬುದು ಮನದಟ್ಟಾಗುತ್ತದೆ.
‘ಕನ್ಫೆಕ್ಷನ್ ಆಫ್ ಎ ಥಗ್’ ಕಾದಂಬರಿ ಆಧಾರಿತವೇ?
ಥಗ್ ಎಂಬಪದ ಬಂದಾಕ್ಷಣ ಬ್ರಿಟಿಷ್ ಅಧಿಕಾರಿ ಫಿಲಿಪ್ ಮಡೋಸ್ ಟೇಲರ್ ಬರೆದ ‘ಕನ್ಫೆಕ್ಷನ್ ಆಫ್ ಎ ಥಗ್’ ಕಾದಂರಿಗೂ ಇದಕ್ಕೂ ಸಂಬಂಧವಿರಬಹುದೇ ಎಂಬ ಅನಿಸಿಕೆಯೂ ಮೂಡುತ್ತದೆ. ‘ಠಕ್ಕನೊಬ್ಬನ ಆತ್ಮಚರಿತ್ರೆ’ ಎಂದು ಇದು ಕನ್ನಡಕ್ಕೂ ಅನುವಾದಗೊಂಡಿದೆ. ಆದರೆ ಇದರಲ್ಲಿ ‘ಥಗ್’ ಸಂಸ್ಕೃತಿಗೆ ಸೇರಿದ ಠಕ್ಕನೊಬ್ಬನ ವೃತ್ತಾಂತವೇ ಮುಖ್ಯವಾಗಿದ್ದು, ಸ್ವಾತಂತ್ರ್ಯಸಮರದ ಪ್ರಸ್ತಾಪ ಮುಖ್ಯವಾಗಿಲ್ಲ.
ಹಂಪಿ ಕನ್ನಡ ವಿವಿಯ ಸಂಶೋಧಕ ಅರುಣ ಜೋಳದಕೂಡ್ಲಿಗಿ, ‘ಹೊಟ್ಟೆಪಾಡಿಗೆ ಕಳ್ಳತನ ಅವಲಂಬಿಸಿದ್ದ ಗುಂಪುಗಳು ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಳ್ಳದಂತೆ ತಡೆಯಲು ಬ್ರಿಟಿಷರು ಉಪಾಯ ಹೂಡಿ, ಇಂತಹ ಗುಂಪು, ಸಮುದಾಯಗಳನ್ನು ‘ಕ್ರಿಮಿನಲ್ ಟ್ರೈಬ್ಸ್’ಎಂದು ಕರೆದು, ಅವರನ್ನು ಮುಖ್ಯವಾಹಿನಿಯಿಂದ ದೂರ ಇಡುವ ಕುತಂತ್ರ ಮಾಡಿದರು’ ಎಂದು ವಿವರಿಸುತ್ತಾರೆ.
ಸದ್ಯಕ್ಕೆ ಇತಿಹಾಸ ಏನೇ ಇರಲಿ, ಥಗ್ಸ್ ಸಿನಿಮಾ ಭಾರಿ ಕುತೂಹಲ ಮೂಡಿಸಿರುವುದಂತೂ ಸತ್ಯ. ಈ ಸಿನಿಮಾಕ್ಕಾಗಿ ಅಮಿತಾಬ್ ಕತ್ತಿವರಸೆ ಕಲಿತಿದ್ದಾರೆ. ಫರಂಗಿ ಮಲ್ಹಾ ಎಂಬ ವಿಶಿಷ್ಟ ಪಾತ್ರಕ್ಕಾಗಿ ಅಮೀರ್ ಮೂಗಿಗೆ ಚುಚ್ಚಿಸಿಕೊಂಡು, ನತ್ತು ಹಾಕಿಕೊಂಡಿದ್ದಾರೆ.
ಧೂಮ್-೩ ಖ್ಯಾತಿಯ ವಿಜಯಕೃಷ್ಣ ಆಚಾರ್ಯ ಕತೆ, ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ‘ದಂಗಲ್’ ಪ್ರತಿಭೆ ಫಾತಿಮಾ ಸನಾ ಶೇಖ್, ಬಿಲ್ಲು-ಬಾಣ ಹಿಡಿದ ‘ಠಕ್ಕಿ’ಯಾಗಿ ಕಾಣಿಸಿಕೊಂಡಿದ್ದಾಳೆ.
ಟ್ರೈಲರ್ ಬಿಡುಗಡೆಯಾದ ಮೊದಲ ೨೪ ಗಂಟೆಯಲ್ಲಿ ೩೫ ಲಕ್ಷ ಜನ ವೀಕ್ಷಿಸಿದ್ದಾರೆ. ಸಿನಿಮಾಸಕ್ತರ ಕುತೂಹಲ ತಣಿಯಲು ನವೆಂಬರ್ ೮ರವರೆಗೆ ಕಾಯಬೇಕು.
-ಪಿ.ಕೆ. ಮಲ್ಲನಗೌಡರ್
#
No Comment! Be the first one.