ಈ ವರ್ಷ ಪ್ರಾರಂಭವಾಗುವುದಕ್ಕೆ ಮುನ್ನ ಕನ್ನಡ ಚಿತ್ರರಂಗದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಇದು ಚಿತ್ರರಂಗದ ಪಾಲಿಗೆ ಬಹಳ ಮಹತ್ವದ ವರ್ಷವಾಗಿತ್ತು. ‘ಕೆಜಿಎಫ್ 2’, ‘ವಿಕ್ರಾಂತ್ ರೋಣ’, ‘777 ಚಾರ್ಲಿ’, ಜೇಮ್ಸ್, ಅವತಾರ ಪುರುಷ ಸೇರಿದಂತೆ ಒಂದಿಷ್ಟು ನಿರೀಕ್ಷೆಯ ಚಿತ್ರಗಳು ಬಿಡುಗಡೆಗೆ ಕಾದಿದ್ದವು. ಅವೆಲ್ಲವೂ ದೊಡ್ಡ ಬಜೆಟ್ ಚಿತ್ರಗಳಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಮಟ್ಟದ ಚಿತ್ರಗಳು. ಹಾಗಾಗಿ, ಈ ಚಿತ್ರಗಳು ಏನಾಗಬಹುದು ಎಂದು ಎಲ್ಲರಿಗೂ ಕುತೂಹಲವಿತ್ತು.
ಈಗ 2022 ಮುಗಿಯುತ್ತಾ ಬಂದಿದೆ. ಈ ವರ್ಷ ಹೇಗಿತ್ತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಕನ್ನಡ ಚಿತ್ರರಂಗಕ್ಕೆ ಈ ವರ್ಷ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುತ್ತಿವೆ. ಕನ್ನಡ ಚಿತ್ರರಂಗವನ್ನು ಎಲ್ಲರೂ ಕಡೆಗಣಿಸುತ್ತಿದ್ದಂತಹ ದಿನಗಳಲ್ಲಿ, ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಮತ್ತೊಮ್ಮೆ ಸುದ್ದಿ ಮಾಡುತ್ತಿವೆ. ಅದಕ್ಕೆ ಕಾರಣ, ಕೆಲವು ಅದ್ಭುತ ಯಶಸ್ಸುಗಳು.
ಈ ಯಶಸ್ಸುಗಳಿಂದ ಕನ್ನಡ ಚಿತ್ರರಂಗದ ಮೇಲೆ ನಿರೀಕ್ಷೆಗಳು ಹೆಚ್ಚಾಗಿರುವುದರ ಜೊತೆಗೆ ಮುಂದೆ ಎಂಥ ಚಿತ್ರಗಳು ಬರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ದೀಪಾವಳಿಯ ಸಂದರ್ಭದಲ್ಲಿ ಕನ್ನಡ ಚಿತ್ರರಂಗವನ್ನು ಮತ್ತು ಮುಂಬರುವ ಚಿತ್ರಗಳನ್ನು ಗಮನಿಸಿದರೆ, ಇದರಲ್ಲಿ ದೇಶದ ಗಮನಸೆಳೆಯುವ ಚಿತ್ರಗಳ ಜೊತೆಗೆ ಒಂದಿಷ್ಟು ವಿಭಿನ್ನ ತರಹದ ಚಿತ್ರಗಳು ಪ್ರೇಕ್ಷಕರನ್ನು ರಂಜಿಸುವುದಕ್ಕೆ ರೆಡಿಯಾಗಿವೆ. ಮುಂದಿನ ಆರು ತಿಂಗಳುಗಳ ಕಾಲ ನಿರೀಕ್ಷೆ ಹೆಚ್ಚಿಸಿರುವ 15 ಚಿತ್ರಗಳ ಪಟ್ಟಿ ಇಲ್ಲಿದೆ.

ಗಂಧದ ಗುಡಿ – ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಇದು. ಕನ್ನಡದ ನಾಡು, ನುಡಿ, ಪರಿಸರ ಮತ್ತು ಹೆಗ್ಗಳಿಕೆಗಳನ್ನು ಸಾರುವ ಈ ಚಿತ್ರದಲ್ಲಿ ಪುನೀತ್, ನಟ ಪುನೀತ್ ಆಗಿಯೇ ಕಾಣಿಸಿಕೊಂಡಿದ್ದು, ತಮ್ಮ ಪಿಆರ್ಕೆ ಪ್ರೊಡಕ್ಷನ್ಸ್ನಡಿ ನಿರ್ಮಿಸಿದ್ದಾರೆ. ಚಿತ್ರ ಅ. 28ರಂದು ಬಿಡುಗಡೆಯಾಗುತ್ತಿದೆ.

ಬನಾರಸ್ – ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮಗ ಝೈದ್ ಖಾನ್ ಅಭಿನಯದ ಮೊದಲ ಚಿತ್ರ ಇದು. ಜಯತೀರ್ಥ ನಿರ್ದೇಶನದ ಈ ಚಿತ್ರ ಟೈಮ್ ಟ್ರಾವಲ್ ಕುರಿತದ್ದಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ನ.4ರಂದು ಬಿಡುಗಡೆಯಾಗುತ್ತಿದೆ.

ದಿಲ್ ಪಸಂದ್ – ಡಾರ್ಲಿಂಗ್ ಕೃಷ್ಣ ಅಭಿನಯದ ಈ ಚಿತ್ರ ನ.11ರಂದು ಬಿಡುಗಡೆಯಾಗುತ್ತಿದೆ. ಇದೊಂದು ಕಾಮಿಡಿ ಮನರಂಜನಾತ್ಮಕ ಸಿನಿಮಾವಾಗಿದ್ದು, ಕೃಷ್ಣಗೆ ಮೇಘಾ ಶೆಟ್ಟಿ ಮತ್ತು ನಿಶ್ವಿಕಾ ನಾಯ್ಡು ನಾಯಕಿಯರಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅಜಯ್ ರಾವ್ ಅವರದ್ದೊಂದು ವಿಶೇಷ ಪಾತ್ರವೂ ಇದೆ.

ರಾಣಾ – ‘ಪಡ್ಡೆಹುಲಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಶ್ರೇಯಸ್ ಅಭಿನಯದ ಯಾವೊಂದು ಚಿತ್ರ ಸಹ ಆ ನಂತರ ಬಿಡುಗಡೆಯಾಗಿರಲಿಲ್ಲ. ನ.11ರಂದು ಶ್ರೇಯಸ್ ಅಭಿನಯದ ಎರಡನೇ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡಿದ್ದಾರೆ.

ತ್ರಿಬ್ಬಲ್ ರೈಡಿಂಗ್ – ಈ ವರ್ಷ ಈಗಾಗಲೇ ‘ಗಾಳಿಪಟ 2’ ಮೂಲಕ ದೊಡ್ಡ ಯಶಸ್ಸು ಕಂಡಿರುವ ಗಣೇಶ್ ಅಭಿನಯದ ಇನ್ನೊಂದು ಚಿತ್ರ ಇದು. ಇದೊಂದು ರೊಮ್ಯಾಂಟಿಕ್ ಕಾಮಿಡಿಯಾಗಿದ್ದು, ಅವರಿಗೆ ಮೂವರು ನಾಯಕಿಯರಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗದಿದ್ದರೂ, ನ.11ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕ್ರಾಂತಿ – ‘ರಾಬರ್ಟ್’ ಬಿಡುಗಡೆಯಾಗಿ ಒಂದೂವರೆ ವರ್ಷಗಳ ನಂತರ ಬಿಡಗುಡೆಯಾಗುತ್ತಿರುವ ದರ್ಶನ್ ಅಭಿನಯದ ಚಿತ್ರ ಇದು. ಕನ್ನಡ ಶಾಲೆಗಳನ್ನು ಉಳಿಸುವ ಕಥೆ ಈ ಚಿತ್ರದಲ್ಲಿ ರವಿಚಂದ್ರನ್, ಸುಮಲತಾ, ರಶ್ಮಿಕಾ ಸೇರಿದಂತೆ ದೊಡ್ಡ ತಾರಾಗಣವಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ರೆಮೋ – ‘ರೋಗ್’ ಎಂಬ ಸಿನಿಮಾದ ನಂತರ ಇಶಾನ್ ಅಭಿನಯಿಸುತ್ತಿರುವ ಎರಡನೆಯ ಕನ್ನಡ ಚಿತ್ರ ರೆಮೋ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರ ಮೂರು ವರ್ಷಗಳ ಹಿಂದೆಯೇ ಸೆಟ್ಟೇರಿದ್ದು, ಕೊರೋನಾದಿಂದ ತಡವಾಗಿ ನ. 25ಕ್ಕೆ ಬಿಡುಗಡೆಯಾಗುತ್ತಿದೆ. ಅದ್ಧೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿ.

ಕಬ್ಜ – ತನ್ನ ಅದ್ಧೂರಿ ಮೇಕಿಂಗ್ನಿಂದ ‘ಕೆಜಿಎಫ್’ ಶೈಲಿಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆರ್ ಚಂದ್ರು ನಿರ್ದೇಶನದ ಉಪೇಂದ್ರ ಮತ್ತು ಸುದೀಪ್ ಅಭಿನಯದ ‘ಕಬ್ಜ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗದಿದ್ದರೂ ಡಿಸೆಂಬರ್ನಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿದೆ.

ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ – ಈಗಾಗಲೇ ಧನಂಜಯ್ ಈ ವರ್ಷ ಸಾಕಷ್ಟು ವಿಭಿನ್ನ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಈ ಪಟ್ಟಿಯಲ್ಲಿ ಕೊನೆಯ ಚಿತ್ರ ಎಂದರೆ ಅದು ಜಮಾಲಿಗುಡ್ಡ. 80ರ ದಶಕದ ಕಾಲಘಟ್ಟದಲ್ಲಿ ನಡೆಯುವ ಈ ಕಥೆಗೆ ಅದಿತಿ ಪ್ರಭುದೇವ ನಾಯಕಿ.

ಬ್ಯಾಡ್ ಮ್ಯಾನರ್ಸ್ – ಅಭಿಷೇಕ್ ಅಂಬರೀಷ್ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಈ ಚಿತ್ರದ ನಿರ್ದೇಶಕರು ಸೂರಿ. ಈ ಕಾಂಬಿನೇಷನ್ನಿಂದಾಗಿಯೇ ಚಿತ್ರ ವಿಶೇಷ ಕುತೂಹಲ ಹುಟ್ಟುಹಾಕಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಡಿಸೆಂಬರ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ವೇದ – ಶಿವರಾಜ್ಕುಮಾರ್ ಮತ್ತು ಹರ್ಷ ಕಾಂಬಿನೇಷನ್ನ ಚಿತ್ರಗಳೆಂದರೆ, ಅಲ್ಲಿ ನಿರೀಕ್ಷೆ ಜಾಸ್ತಿ. ಏಕೆಂದರೆ, ಈ ಕಾಂಬೋದಿಂದ ಬಂದ ‘ಭಜರಂಗಿ’, ‘ವಜ್ರಕಾಯ’, ‘ಭಜರಂಗಿ 2’ ಚಿತ್ರಗಳು ಪ್ರೇಕ್ಷಕರ ನಿರೀಕ್ಷೆಗೆ ಮೋಸ ಮಾಡಿಲ್ಲ. ಈಗ 1960ರ ದಶಕದ ಒಂದು ಕಥೆಯೊಂದಿಗೆ ಅವರಿಬ್ಬರೂ ವಾಪಸ್ಸಾಗಿದ್ದು, ಈ ಚಿತ್ರ ಡಿಸೆಂಬರ್ 23ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶಿವಾಜಿ ಸುರತ್ಕಲ್ 2 – ಬಹುಶಃ ಕರೊನಾ ಇರದಿದ್ದರೆ, ರಮೇಶ್ ಅರವಿಂದ್ ಅಭಿನಯದ ಮರ್ಡರ್ ಮಿಸ್ಟ್ರಿ ‘ಶಿವಾಜಿ ಸುರತ್ಕಲ್’ ಇನ್ನೂ ದೊಡ್ಡ ಹಿಟ್ ಆಗುತ್ತಿತ್ತೇನೋ? ಆದರೆ, ಕರೊನಾದಿಂದ ಓಟ ಸ್ವಲ್ಪ ಕುಂಠಿತವಾಯಿತು. ಈಗ ರಮೇಶ್, ಈ ಚಿತ್ರದ ಇನ್ನೊಂದು ಭಾಗದೊಂದಿಗೆ ಮತ್ತು ಇನ್ನೊಂದು ವಿಶಿಷ್ಟ ಕೇಸ್ನೊಂದಿಗೆ ವಾಪಸ್ಸಾಗುತ್ತಿದ್ದು, ಜನವರಿಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

ಸಪ್ತ ಸಾಗರದಾಚೆ ಎಲ್ಲೋ – ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ವರ್ಷದ ಕೊನೆಯ ಚಿತ್ರವಾಗಿ ರಕ್ಷಿತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರೀಕರಣ ಇನ್ನೂ ಮುಗಿಯದ ಕಾರಣ, ಮುಂದಿನ ವರ್ಷದ ಪ್ರೇಮಿಗಳ ದಿನದಂದು ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಮಾರ್ಟಿನ್ – ಧ್ರುವ ಸರ್ಜಾ ಅಭಿನಯದ ಈ ಚಿತ್ರ ಸೆ. 30ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರೀಕರಣ ವಿಳಂಬವಾದ ಕಾರಣ, ಈ ಚಿತ್ರ ಮುಂದಿನ ಯುಗಾದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಎ.ಪಿ. ಅರ್ಜುನ್ ನಿರ್ದೇಶನದ ಈ ಚಿತ್ರವು ಇನ್ನೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಇದರಲ್ಲಿ ಧ್ರುವ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹದಿನೈದು ಸಿನಿಮಾಗಳು ಮಾತ್ರವಲ್ಲದೆ, ಪ್ರಥಮ್ ಅಭಿನಯದ ನಟಭಯಂಕರ, ಶ್ರೀನಗರ ಕಿಟ್ಟಿ ಅವರ ಗೌಳಿ, ಮಾಫಿಯಾ, ಸೋಮು ಸೌಂಡ್ ಇಂಜಿನಿಯರ್, ಅಬ್ಬರ, ಲಂಕಾಸುರ, ಯೆಲ್ಲೋ ಗ್ಯಾಂಗ್ಸ್ ಮುಂತಾದ ಸಿನಿಮಾಗಳು ಒಂದು ಮಟ್ಟಿಗಿನ ನಿರೀಕ್ಷೆ ಹುಟ್ಟಿಸಿವೆ. ಇವೆಲ್ಲಾ ಯಾವಾಗ ತೆರೆಗೆ ಬರಬಹುದು ಎನ್ನುವ ನಿಖರ ಮಾಹಿತಿ ಇಲ್ಲ. ಇಷ್ಟು ಮಾತ್ರವಲ್ಲದೆ ಸೈಲೆಂಟಾಗಿ ಬಂದು ದೊಡ್ಡ ಸದ್ದು ಮಾಡುವ ಚಿತ್ರಗಳೂ ತೆರೆಗೆ ಬರಬಹುದು. ಒಟ್ಟಾರೆ ಬರುವ ಯುಗಾದಿ ಹೊತ್ತಿಗೆ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಗೆಲುವಿನ ಚಿಗುರು ಕಾಣಿಸಿಕೊಳ್ಳೋದು ಖಂಡಿತಾ…
No Comment! Be the first one.