ದೇವರು ಮನುಷ್ಯನನ್ನು ಒಂದಷ್ಟು ನಿರ್ಧಿಷ್ಟ ಕಾರಣಕ್ಕೋಸ್ಕರ ಸೃಷ್ಟಿ ಮಾಡಿದ. ಅದನ್ನು ಅರ್ಥ ಮಾಡಿಕೊಳ್ಳದ ನಾವು ಸುಮ್ಮನೇ ಬಂದೇ ಪುಟ್ಟ ಹೋದ ಪುಟ್ಟ ಅಂತಾ ಜೀವಿಸ್ತೀವಿ. ನೀವೆಲ್ಲಾ ನಿಮ್ಮದೇ ಆದ ಇತಿಹಾಸವನ್ನು ಈ ಭೂಮಿ ಮೇಲೆ ಸೃಷ್ಟಿ ಮಾಡಬೇಕು. ದೊಡ್ಡ ಮನುಷ್ಯರಾಗಿ ಬೆಳೀಬೇಕು ಎನ್ನುವ ಹಿನ್ನೆಲೆ ಧ್ವನಿಯೊಂದಿಗೆ ಆರಂಭಗೊಳ್ಳುವ ಕತೆ ಟಾಮ್‌ ಅಂಡ್‌ ಜೆರ್ರಿಯದ್ದು. ಎಲ್ಲರಿಗೂ ಕಾಲಿದ್ರೂ ಕಾರಲ್ಲಿ ಯಾಕೆ ಓಡಾಡ್ತಾರೆ ಎನ್ನುವ ಹುಡುಗನ ಪ್ರಶ್ನೆಗೆ ಕಾಲಲ್ಲಿ ಓಡಾಡೋನನ್ನು ಮನುಷ್ಯ ಅಂತಾರೆ, ಅದೇ ಕಾರಲ್ಲಿ ಓಡಾಡಿದರೆ ದೊಡ್ಡ ಮನ್ಷ ಅಂತಾರೆ… ಪುಟಾಣಿ ಹೀರೋ ಕೇಳುವ ಪ್ರಶ್ನೆಗೆ ತಿಳಿದವರಿಂದ ಇಂಥದ್ದೊಂದು ಉತ್ತರ ಸಿಕ್ಕಿರುತ್ತದೆ. ಆವತ್ತೇ ಆತ ದೊಡ್ಡ ಮನುಷ್ಯನಾಗಿ ಬೆಳೀಬೇಕು ಎನ್ನುವ ಕನಸು ಕಂಡಿರುತ್ತಾನೆ.

– ಅದು ಅನಾಥಾಶ್ರಮ. ಅಲ್ಲಿ ಬೆಳೆಯುತ್ತಿದ್ದ ಹುಡುಗ-ಹುಡುಗಿಯನ್ನು ಪ್ರತ್ಯೇಕವಾಗಿ ಇಬ್ಬರು ದತ್ತು ಪಡೆದು ಹೋಗಿರುತ್ತಾರೆ. ಮುಂದೆ ಅವರಿಬ್ಬರೂ ಬೆಳೆದು ದೊಡ್ಡವರಾಗಿ ಒಬ್ಬರನ್ನೊಬ್ಬರು ಸಂಧಿಸುತ್ತಾರೆ. ಪರಸ್ಪರರಿಗೆ ಅದು ಗೊತ್ತಾದೋದು ಸ್ವಲ್ಪ ಲೇಟು ಅಷ್ಟೇ.

ಒಬ್ಬರಿಗೊಬ್ಬರು ವಿರುದ್ಧ ದಿಕ್ಕಿನಲ್ಲಿ ಚಿಂತಿಸುವ ಜೋಡಿ. ಅವನಿಗೆ ಹಣ ಸಂಪಾದಿಸಿ ದೊಡ್ಡ ಮನ್ಷನಾಗುವ ಬಯಕೆ. ಅವಳದ್ದು ಇರುವುದೆಲ್ಲವನ್ನು ಬಿಟ್ಟು ಇರದುದರೆಡೆಗೆ ತುಡಿಯುವ ಮನಸ್ಥಿತಿ. ಮಧ್ಯಮವರ್ಗದ ಜೀವನಕ್ಕೆ ತನ್ನನ್ನು ತಾನು ಒಗ್ಗಿಸಿಕೊಂಡು, ಎಲ್ಲದಕ್ಕೂ ಕಾದು ಪಡೆಯುವ ಬಡತನವನ್ನು ಎಂಜಾಯ್‌ ಮಾಡಬೇಕು ಎನ್ನುದು ಅವಳ ಥಿಯರಿ. ಜಗತ್ತಿನ ಕಣ್ಣಿನಲ್ಲಿ ವಿಚಿತ್ರವಾಗಿ ಚಿಂತಿಸುವ ಮೆಂಟ್ಲು ಹುಡುಗಿ. ಕಷ್ಟದಲ್ಲಿದ್ದವರನ್ನು ಕೈ ಹಿಡಿಯೋದು, ಎನ್.ಜಿ.ಓ.ದಲ್ಲಿ ಕೆಲಸ ಮಾಡೋದು ಅವಳ ಪ್ರವೃತ್ತಿ. ಹುಡುಗ ಕಂಪನಿಯೊಂದರಲ್ಲಿ ಮೆಕಾನಿಕ್.‌

ಈ ಇಬ್ಬರೂ ಜೊತೆಯಾಗೋದು ಸಿಟಿ ಬಸ್ಸಿನಲ್ಲಿ. ಆ ಬಸ್ಸಿನಲ್ಲಿ ನಿತ್ಯವೂ ಪ್ರಯಾಣಿಸುವ ಪ್ರಯಾಣಿಕರು, ಅವರ  ಬದುಕಿನ ಜೊತೆಗೆ ಬೆರೆತು ಹೋದ ಕಂಡಕ್ಟರು. ದಿನವೂ ಏರ್ಪಡುವ ಯಾವುದಾದರೂ ಒಂದು ಟಾಪಿಕ್ಕಿನ ಚರ್ಚಾಸ್ಪರ್ಧೆಯಲ್ಲಿ ನಾಯಕ-ನಾಯಕಿ ಕೂಡಾ ಸೇರಿಕೊಳ್ಳುತ್ತಾರೆ. ಈ ಚರ್ಚೆ ಬಸ್ಸಿಗೆ ಮಾತ್ರ ಸೀಮಿತವಾಗುವುದಿಲ್ಲ. ಸಿನಿಮಾದ ಬಹುತೇಕ ದೃಶ್ಯಗಳು ಡಿಬೇಟ್‌ ಕಾಂಪಿಟೇಶನ್‌ ಥರಾ ಸಾಗುತ್ತದೆ. ಜಗತ್ತಿನಲ್ಲಿ ಉತ್ತರ ಸಿಗದೆ ಕೊಳೆಯುತ್ತಿರುವ ಹತ್ತು ಹಲವು ಪ್ರಶ್ನೆಗಳಿಗೆ ಒಂದೇ ಗುಕ್ಕಿನಲ್ಲಿ ನಿರ್ದೇಶಕರು ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ವೈರುಧ್ಯಗಳನ್ನೆಲ್ಲಾ ಒಂದು ಕಡೆ ಗುಡ್ಡೆ ಹಾಕಿದ್ದಾರೆ. ಬಿಡಿಬಿಡಿಯಾಗಿ ನೋಡಿದಾಗ ನಿಜ ಅನ್ನಿಸುತ್ತಾದರೂ, ಪೂರ್ತಿ ಸಿನಿಮಾ ಅದೇ ಧಾಟಿಯಲ್ಲಿ ಸಾಗೋದು ಜೀರ್ಣಿಸಿಕೊಳ್ಳಲು ಕಷ್ಟವೆನಿಸುತ್ತದೆ.

ಹಾಗಂತ ಟಾಮ್‌ ಅಂಡ್‌ ಜೆರಿಯಲ್ಲಿ ಬರಿಯ ಫಿಲಾಸಫಿ ಮಾತ್ರವಲ್ಲ, ರಾಜಕೀಯ, ಏರಿಯಾ ರೌಡಿಸಮ್ಮು, ಮದರ್‌ ಸೆಂಟಿಮೆಂಟುಗಳೂ ಇವೆ. ಆದರೆ ಅವೆಲ್ಲವನ್ನೂ ಅಮೂರ್ತ ಮಾತುಗಳು ನುಂಗಿಹಾಕಿವೆ.

  • ಅದು ನಿಮಗೆ ಗೊತ್ತಿಲ್ಲ ಅಂತಾ ನನಗೊತ್ತು
  • ದೇವ್ರಾಣೆ ನನಗೂ ಗೊತ್ತಿಲ್ಲ… ಗೊತ್ತಿದ್ರೂ ಗೊತ್ತಾಗದ ಥರಾ ಇರ್ತೀವಿ.. ಗೊತ್ತಾದ್ಮೇಲೆ ಗೊತ್ತಾಗದಂತೆ ನಮಗೇನೂ ಗೊತ್ತಿರ್ಲಿಲ್ಲ ಅಂತೀವಿ..
  • ಗೊತ್ತಿಲ್ಲ ಅನ್ನೋದು ಗೊತ್ತಿರೋದಕ್ಕಿಂತಾ ಶ್ರೇಷ್ಟ…
  • ಗೊತ್ತಾಗೋ ಆಸೆ ಹುಟ್ಟೋದು ನಮಗೆ ಏನೂ ಗೊತ್ತಿಲ್ಲ ಅನ್ನೋದ್‌ ಗೊತ್ತಾದ್ಮೇಲೆ.. ಗೊತ್ತಿಲ್ದೇ ಇರೋದ್‌ ಗೊತ್ತಾಗೋದೇ ಜೀವನ. ಗೊತ್ತಾದ್ಮೇಲೆ ಗೊತ್ತಿಲ್ದೇ ಇರೋ ಥರಾ ಬದುಕೋದು ಕಷ್ಟ… ಇದು ಚಿತ್ರದ ಕೊನೆಯ ಸಂಭಾಷಣೆ ಅಷ್ಟೇ. ಇಂಥಾ ಫಿಲಾಸಫಿಯ ಮಾತುಗಳು ಟಾಮ್‌ ಅಂಡ್‌ ಜೆರಿಯ ತುಂಬಾ ಲಾಟು ಲಾಟು ತುಂಬಿಹೋಗಿವೆ.

ಸಿನಿಮಾವನ್ನು ಹೊಸ ಬಗೆಯಲ್ಲಿ ಹೇಳಬೇಕು ನಿಜ. ಹಾಗಂತ, ತೀರಾ ಮಾತಿನಲ್ಲೇ ಮನೆ ಕಟ್ಟಿ, ನಿಶ್ಯಬ್ದಕ್ಕೆ ಜಾಗವೇ ಇಲ್ಲದಂತೆ ಮಾಡುವ ಅನಿವಾರ್ಯವಿರಲಿಲ್ಲ. ಈ ಹಿಂದಿನ ಪತ್ರಿಕಾಗೋಷ್ಟಿಗಳಲ್ಲಿ ನಿರ್ದೇಶಕ ವಿನಯ್‌ ದೇವಗಂಗೆ ಮಾತು ಕೇಳಿ ಈತ ಬುದ್ದಿವಂತ ಅಂತಲೇ ಅಂದುಕೊಂಡಿದ್ದರು. ಸಿನಿಮಾ ನೋಡಿದಮೇಲೆ ಇವರು ಅತೀ ಬುದ್ದಿವಂತ ಅನ್ನೋದು ಖಾತ್ರಿಯಾಗಿದೆ.

ಏನೇ ಇರಲಿ, ಈ ಚಿತ್ರದ ಮೂಲಕ ಗಂಟು ಮೂಟೆ ಹುಡುಗ ನಿಶ್ಚಿತ್‌ ಹೀರೋ ಆಗಿ ಕಾಲಿಟ್ಟಿದ್ದಾನೆ. ಈತನ ಆಯ್ಕೆ ಸರಿಯಾಗಿದ್ದೇ ಆದಲ್ಲಿ ಕನ್ನಡಕ್ಕೊಬ್ಬ ಪಕ್ಕಾ ಮಾಸ್‌ ಹೀರೋ ಆಗಿ ನಿಲ್ಲೋದು ನಿಜ. ಜೋಡಿಹಕ್ಕಿ ಸೀರಿಯಲ್‌ ಹುಡುಗಿ ಚೈತ್ರಾ ರಾವ್‌  ಲೀಲಾಜಾಲವಾಗಿ ನಟಿಸುವ ಶಕ್ತಿ ಹೊಂದಿದ್ದಾಳೆ. ಸಾಧು ಕೋಕಿಲ ಅವರ ಅಣ್ಣ ಲಯೇಂದ್ರ ಮಗ  ಮ್ಯಾಥ್ಯೂಸ್‌ ಮನು ಈ ಸಿನಿಮಾಗೆ ಮ್ಯೂಸಿಕ್‌ ನೀಡಿದ್ದಾನೆ. ನಿಜಕ್ಕೂ ಕನ್ನಡದ ಅದ್ಭುತ ಪ್ರತಿಭೆಗಳಲ್ಲಿ ಈತ ಕೂಡಾ ಒಬ್ಬ. ಹಾಯಾಗಿದೆ ಎದೆಯೊಗಳಗೆ ಎನ್ನುವ ಹಾಡಿಗೆ ಈತ ನೀಡಿರುವ ಟ್ಯೂನು ಮತ್ತು ಸ್ವತಃ ತಾನೇ ಬರೆದಿರುವ ಲಿರುಕ್ಕು ಸಾಕು ಈತನ ತಾಕತ್ತು ಎಂಥಾದ್ದು ಅನ್ನೋದನ್ನು ಜಾಹೀರು ಮಾಡಲು. ಸಾಲದ್ದಕ್ಕೆ ಮ್ಯಾಥ್ಯೂಸ್‌ ಸಣ್ಣದೊಂದು ಪಾತ್ರದಲ್ಲೂ ಅಚ್ಚುಕಟ್ಟಾಗಿ ನಟಿಸಿದ್ದಾನೆ. ಕನ್ನಡದ ಶ್ರೇಷ್ಟ ನಟರ ಸಾಲಿನಲ್ಲಿರುವ ಸಂಪತ್‌ ಕುಮಾರ್‌ ಕೂಡಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಟಿಕ್‌ ಟಾಕ್‌ ರವಿ ಪಾತ್ರದಲ್ಲಿ ನಟಿಸುರವ ಶೇಖರ್‌ ಇವತ್ತಲ್ಲಾ ನಾಳೆ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಪಡೆಯೋದು ಗ್ಯಾರೆಂಟಿ.

ಒಟ್ಟಾರೆಯಾಗಿ, ಓಶೋ-ಸದ್ಗುರು ಥರದ ತತ್ವಶಾಸ್ತ್ರಜ್ಞರು, ಆಧ್ಯಾತ್ಮ ಚಿಂತಕರನ್ನೆಲ್ಲಾ ಒಟ್ಟೊಟ್ಟಿಗೆ ಕೂರಿಸಿ ಮಾತಿಗೆ ಬಿಟ್ಟರೆ ಎಂಥಾ ಅನುಭವಾಗುತ್ತದೋ ʻಟಾಮ್‌ ಅಂಡ್‌ ಜೆರಿಯನ್ನು ನೋಡಿಬಂದವರಲ್ಲೂಅದೇ ಭಾವ ಮೂಡುತ್ತದೆ. ಸಾಧ್ಯವಾದರೆ ಒಮ್ಮೆ ನೋಡಿಬನ್ನಿ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಏಕ್‌ ಲವ್‌ ಯಾದಲ್ಲಿ ಎಣ್ಣೆ ಹಾಡು!

Previous article

11:11 ಚಿತ್ರದ ಶೀರ್ಷಿಕೆ ಅನಾವಣಗೊಳಿಸಿದ ಮೆಘಾಸ್ಟಾರ್ ಚಿರಂಜೀವಿ

Next article

You may also like

Comments

Leave a reply

Your email address will not be published. Required fields are marked *