ಜ್ಞಾನ ವಿಜ್ಞಾನ ಯೋಗವೆನ್ನುವ ಭಗವದ್ಗೀತೆಯ ಏಳನೇ ಅಧ್ಯಾಯದಲ್ಲಿ ಶ್ರೀ ಕೃಷ್ಣ ಪರಮಾತ್ಮ ಭೂಮಿ, ನೀರು, ಆಕಾಶ, ಅಗ್ನಿ, ವಾಯು, ಬುದ್ದಿ, ಮನಸ್ಸು, ಅಹಂಕಾರ ಎಲ್ಲವೂ ನಾನೇ. ಸಕಲವೂ ನನ್ನ ಸ್ವರೂಪವೇʼʼ ಅಂತಾ ಹೀಗೆ ಹೇಳಿದ್ದಾನಂತೆ.

ಈ ಎಂಟು ಧಾತುಗಳಿಗೆ ಸಂಕೇತ ಚಿನ್ನ, ಬೆಳ್ಳಿ, ತಾಮ್ರ, ಸೀಸ, ಸತು, ಸಬರ, ಕಬ್ಬಿಣ ಮತ್ತು ಪಾದರಸ. ಈ ಎಂಟೂ ಲೋಹಗಳನ್ನು ಬಳಸಿ ಅಷ್ಟಧಾತು ವಿಗ್ರಹ ರೂಪುಗೊಂಡಿರುತ್ತೆ. ಇಂಥ ವಿಗ್ರಹಗಳಿಗೆ ಪ್ರತ್ಯೇಕವಾದ ಚೇತನ ಪ್ರಾಪ್ತವಾಗಿರುತ್ತದಂತೆ. ವಾಮ ಮಾರ್ಗದಲ್ಲಿ ಅದನ್ನು ದಕ್ಕಿಸಿಕೊಂಡು ತಮ್ಮ ಕಾಮ್ಯ ಕರ್ಮಕ್ಕೆ ಯಾರೂ ಬಳಸಲು ಸಾಧ್ಯವಿಲ್ಲ. ಅದನ್ನು ವಶ ಮಾಡಿಕೊಳ್ಳಬೇಕು ಅಂತಾ ಯಾರೇ ಬಯಸಿದರೂ ಅವರು ಮಣ್ಣುಪಾಲಾಗುತ್ತಾರೆ. ಅದಕ್ಕೆ ಮೇಲೆ ಕಣ್ಣಿಟ್ಟವರ  ಕುಲಗಳೆಲ್ಲಾ ಸರ್ವನಾಷವಾಗುತ್ತದೆ ಅನ್ನೋದು ನಂಬಿಕೆ!

ಇಂಥಾ ಅಮೂಲ್ಯ ವಸ್ತುವಿನ ಮೇಲೆ ತಾನೆ ದುಷ್ಟರು ಕಣ್ಣಿಡಲು ಸಾಧ್ಯ? ಇಲ್ಲೊಂದು ಪುರಾತನ ಅಷ್ಟಧಾತು ವಿಗ್ರಹ ಕಳ್ಳತನವಾಗಿರುತ್ತದೆ. ಅದು ರಾಜಕಾರಣಿ, ರೌಡಿ, ಡಾನ್‌ ಗಳ ಕೈ ದಾಟಿ ಕೋಟಿಗಟ್ಟಲೇ ವ್ಯವಹಾರ ಕುದುರಿಸಬೇಕು ಅನ್ನುವಷ್ಟರಲ್ಲಿ ಜಸ್ಟ್‌ ಮಿಸ್‌ ಆಗುತ್ತದೆ. ಅಸಲಿಯ ಜೊತೆಗೆ ನಕಲಿಯೂ ಸೇರಿಕೊಳ್ಳುತ್ತದೆ. ಅದು ಒಬ್ಬರಿಂದ ಮತ್ತೊಬ್ಬರ ಬಳಿಗೆ ಜರ್ನಿ ಆರಂಭಿಸುತ್ತದೆ. ಇದರ ಸುತ್ತಲೇ ಓಡುವ ಕತೆ ʻತೂತು ಮಡಿಕೆʼ ಚಿತ್ರದ್ದು.

ಒಂದು ಸ್ಲಂ, ಅಲ್ಲಿನ ಬಡತನ, ಬದುಕಿಗಾಗಿ ವೆರೈಟಿ ಕಸುಬು ಮಾಡುವ ಇಬ್ಬರು ಗೋಲ್ಮಾಲ್ ಹುಡುಗರು, ಟೀ ಅಂಗಡಿ ನಡೆಸುವ ಹುಡುಗಿ, ಒಬ್ಬ ರಾಜಕಾರಣಿ, ಅವನ ನಂಬಿಕಸ್ಥ ಭಂಟ, ಹಾದಿ ತಪ್ಪಿದ ಮಗ, ಬಾಳೆಹಣ್ಣು ವ್ಯಾಪಾರಿ – ಇಂಥ ಎಲ್ಲ ಎಲಿಮೆಂಟುಗಳನ್ನು ಒಟ್ಟು ಸೇರಿಸಿ, ಅವರ ಕೈಗೆ ಪುಟಾಣಿ ವಿಗ್ರಹ ಕೊಟ್ಟು ಅಚ್ಚುಕಟ್ಟಾಗಿ ಕಟ್ಟಿರುವ ಚಿತ್ರ ತೂತು ಮಡಿಕೆ. ಕನ್ನಡದಲ್ಲೇ ಸಾಕಷ್ಟು ಟ್ರಜರ್‌ ಹಂಟ್‌ ಸಿನಿಮಾಗಳು ಬಂದಿವೆ. ಆದರೆ ತೂತುಮಡಿಕೆ ಎಲ್ಲಕ್ಕಿಂತಾ ಭಿನ್ನವಾಗಿ ಮೂಡಿಬಂದಿದೆ. ಸಾಮಾನ್ಯಕ್ಕೆ ಸ್ಲಂ ಅಂದ ಕೂಡಲೇ ಬರಿಯ ರೌಡಿಸಂ ಮಾತ್ರ ತೋರಿಸಿ ಸುಮ್ಮನಾಗುತ್ತಾರೆ. ಇಲ್ಲಿ ಅಸಲೀ ಸ್ಲಂ ಅನಾವರಣಗೊಂಡಿದೆ. ಇಲ್ಲಿನ ಜನ, ಬದುಕಿನ ರೀತಿ, ಕಷ್ಟ, ಸಂಕಟಗಳನ್ನು ನೇರವಾಗಿ ತೆರೆದಿಟ್ಟಿದ್ದಾರೆ. ರಾಜಕಾರಣಿಯ ಜೊತೆಗಿದ್ದೂ ಬದುಕಿನ ಮಗ್ಗಲು ಬದಲಿಸಲು ಹೆಣಗಾಡುವ ಸಹಾಯಕ, ಅಪ್ಪ ರಾಜಕಾರಣದಲ್ಲಿ ದುಡಿದಿಟ್ಟಿದ್ದನ್ನು ಅನಾಮತ್ತಾಗಿ ಖರ್ಚು ಮಾಡಿಸುವ ಮಗ, ಹನಿ ಟ್ರ್ಯಾಪ್‌ ಮಾಡಿ ಸುಲಭವಾಗಿ ಕಾಸು ಮಾಡಲು ನಿಂತವನು, ಬಡತನದಲ್ಲಿ ಬೆಳೆದ ಮಕ್ಕಳ ಮನಸ್ಥಿತಿ ಎದುರಾಗುವ ಪರಿಸ್ಥಿತಿ… ಹೀಗೆ ಹತ್ತಾರು ಅಂಶಗಳನ್ನು ಸೇರಿಸಿ ಬಲಿಷ್ಟವಾಗಿ ಕಟ್ಟಿದ ಕಥೆ ಕೂಡಾ ತೂತು ಮಡಿಕೆಯಲ್ಲಿದೆ!

ನಿರ್ದೇಶನದ ಜೊತೆಗೆ ಹೀರೋ ಆಗಿ ಕಾಣಿಸಿಕೊಂಡಿರುವ ಚಂದ್ರ ಕೀರ್ತಿ ಮೊದಲ ಪ್ರಯತ್ನದಲ್ಲೇ ಚೆಂದದ ಪ್ರಾಡಕ್ಟ್‌ ತಯಾರು ಮಾಡಿದ್ದಾರೆ. ಸಿನಿಮಾ ಮೇಲೆ ಇವರಿಗಿರುವ ಹಿಡಿತಕ್ಕೆ ತೂತು ಮಡಿಕೆ ಸಾಕ್ಷಿಯಾಗಿದೆ. ಡುಮ್ಮ ಗಿರಿ ಹಾಸ್ಯ ಸಿನಿಮಾದ ತಾಕತ್ತು ಹೆಚ್ಚಿಸಿದೆ. ಹಾಗೆಯೇ ಪ್ರಮೋದ್‌ ಶೆಟ್ಟರು ಹೊಸ ಬಗೆಯಲ್ಲಿ ಕಾಣಿಸಿಕೊಂಡು ಇಷ್ಟವಾಗುತ್ತಾರೆ. ನಂದಗೋಪಾಲ್‌ ಮತ್ತು ಉಗ್ರಂ ಮಂಜು ‌ ಕಡಿಮೆ ದೃಶ್ಯಗಳಲ್ಲಿ ಹೆಚ್ಚು ಸ್ಕೋರ್‌ ಮಾಡುತ್ತಾರೆ. ಪಾವನಾ ಎಂದಿನಂತೆ ಪಾತ್ರದೊಳಗೆ ಇಳಿದುಬಿಟ್ಟಿದ್ದಾರೆ. ರಘು ನಿಡುವಳ್ಳಿ ಬರೆದ ಪವರ್‌ ಫುಲ್‌ ಸಂಭಾಷಣೆ ಪಾತ್ರಗಳ ತೂಕ ಹೆಚ್ಚಿಸಿದೆ. ನವೀನ್‌ ಚೆಲ್ಲ ಕ್ಯಾಮೆರಾ, ಬಳಸಿರುವ ಬಣ್ಣ ಚೆಂದ. ಸ್ವಾಮಿನಾಥನ್ ಹಿನ್ನೆಲೆ ಸಂಗೀತದಲ್ಲಿ ಹೊಸ ಪ್ರಯತ್ನಗಳನ್ನು ಮಾಡಿದ್ದಾರೆ. ಹುಡುಕಿದರೂ ಒಂದು ಬೇಡದ ದೃಶ್ಯ ಸಿಗದಂತೆ ಕತ್ತರಿಸಿರುವ ಉಜ್ವಲ್‌ ಚಂದ್ರ ಸಂಕಲನ ಪರ್ಫೆಕ್ಟ್.‌ ಇವರೆಲ್ಲರ ತಾಳ್ಮೆ, ಶ್ರಮದ  ಫಲವಾಗಿ ತೂತು ಮಡಿಕೆ ಎನ್ನುವ ಚೆಂದದ ಸಿನಿಮಾ ರೂಪುಗೊಂಡಿದೆ. ಪರಭಾಷೆಯಲ್ಲಿ ಇಂಥಾ ಚಿತ್ರಗಳು ಬಂದಾಗ ಕೊಂಡಾಡುವವರು ಸೇರಿದಂತೆ ಪ್ರತಿಯೊಬ್ಬರೂ ಒಮ್ಮೆ ನೋಡಬೇಕಾದ ಸಿನಿಮಾ ತೂತು ಮಡಿಕೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ರೋಚಕತೆಯ ಜೊತೆಗೆ ʻಗಿರ್ಕಿʼ ಹೊಡೆಸುವ ಸಿನಿಮಾ!

Previous article

ತಮಿಳು ನಟಿ ಸಾಯಿಪಲ್ಲವಿ ಕನ್ನಡದಲ್ಲಿ ಡಬ್ ಮಾಡಿದ್ದಾರೆ!

Next article

You may also like

Comments

Comments are closed.