ಈ ಹಿಂದೆ ಜಿಗರ್ ಥಂಡಾ ಎಂಬ ರಗಡ್ ಚಿತ್ರವೊಂದನ್ನು ನಿರ್ದೇಶನ ಮಾಡುವ ಮೂಲಕವೇ ಕನ್ನಡ ಚಿತ್ರ ರಂಗದಲ್ಲಿ ಸಂಚಲನ ಉಂಟುಮಾಡಿದ್ದವರು ಶಿವಗಣೇಶ್. ಹೃದಯದಲಿ ಇದೇನಿದು, ಅಖಾಡ ಮುಂತಾದ ಚಿತ್ರಗಳನ್ನೂ ನಿರ್ದೇಶನ ಮಾಡಿರುವ ಅವರ ನಾಲಕ್ಕನೇ ಚಿತ್ರ ತ್ರಾಟಕ!
ಈ ಚಿತ್ರದ ಬಗ್ಗೆ ಪ್ರೇಕ್ಷಕರು ಗಮನ ಕೇಂದ್ರೀಕರಿಸಲು ನಾನಾ ಕಾರಣಗಳಿದ್ದಾವೆ. ಅದರಲ್ಲಿ ಪ್ರಧಾನವಾದದ್ದು ವಿಭಿನ್ನವಾದ ಶೀರ್ಷಿಕೆ. ಅದೇನೋ ವಿಕ್ಷಿಪ್ತ ನಿಗೂಢವನ್ನು ತನ್ನೊಳಗೆ ಬಚ್ಚಿಟ್ಟುಕೊಂಡಂತಿರೋ ತ್ರಾಟಕ ಅಂದ್ರೇನು ಅಂತೊಂದು ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ನಿರ್ದೇಶಕರ ಕಡೆಯಿಂದಲೇ ಅದೀಗ ಪರಿಹಾರವಾಗಿದೆ. ಅಂದಹಾಗೆ ಈ ಹೆಸರಿನ ಅರ್ಥಕ್ಕೂ ಇಡೀ ಚಿತ್ರದ ಕಥೆಗೂ ಕನೆಕ್ಷನ್ನುಗಳಿವೆ. ತ್ರಾಟಕ ಅಂದರೆ ಯೋಗ ವಿದ್ಯೆಯಲ್ಲಿ ಏಕಾಗ್ರತೆ ಸಾಧಿಸೋ ಒಂದು ವಿಧಾನವಂತೆ!
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ರಮ್ಯ ಚೈತ್ರ ಕಾಲ, ಅಖಾಡ ಮತ್ತು ತಾರೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ರಾಹುಲ್ ಐನಾಪುರ ಈ ಚಿತ್ರವನ್ನು ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿದ್ದಾರೆ. ಅವರು ಈ ಚಿತ್ರದಲ್ಲಿ ಎಂಥಾದ್ದೇ ಅಪರಾಧ ಪ್ರಕರಣವನ್ನಾದರೂ ಬೆನ್ನತ್ತಿ ರಹಸ್ಯ ಜಾಹೀರು ಮಾಡುವ ಸಿಸಿಬಿ ಎಸಿಪಿಯಾಗಿ ನಟಿಸಿದ್ದಾರೆ. ನಾಯಕ ಇಲ್ಲಿ ತನ್ನ ವೃತ್ತಿಯ ಒತ್ತಡಗಳನ್ನು ಮೀರಿಕೊಂಡು ಅಪರಾಧ ಪ್ರಕರಣಗಳನ್ನು ಭೇದಿಸಲು ತ್ರಾಟಕ ವಿದ್ಯೆಯ ಮೊರೆ ಹೋಗುವ ಅಂಶಗಳಿದ್ದಾವಂತೆ. ಆದ್ದರಿಂದಲೇ ಈ ಚಿತ್ರಕ್ಕೆ ಅದೇ ಹೆಸರನ್ನಿಡಲಾಗಿದೆ.
ಬಹು ಕಾಲದಿಂದಲೂ ಒಂದೊಳ್ಳೆ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡಬೇಕೆಂಬ ಕನಸು ಹೊಂದಿಕದ್ದ ರಾಹುಲ್ ಭಾರೀ ತಯಾರಿ ಮಾಡಿಕೊಂಡೇ ಈ ಚಿತ್ರವನ್ನು ರೂಪಿಸಿದ್ದಾರೆ. ಪ್ರಸಿದ್ಧ ರಂಗ ಕಲಾವಿದ, ಮೈಮ್ ನಿರ್ದೇಶಕ ವಾಲ್ಟರ್ ಡಿಸೋಜಾ ಅವರಿಂದ ಪ್ರತೀ ಕಲಾವಿದರಿಗೂ ತರಬೇತಿ ಕೊಡಿಸಿರೋದು ಬಹು ಮುಖ್ಯವಾದ ಅಂಶ. ಇನ್ನು ಅಖಂಡ ಹತ್ತು ವರ್ಷಗಳ ಹಿಂದ ಒರಟ ಐ ಲವ್ ಯೂ ಚಿತ್ರದಲ್ಲಿ ನಟಿಸಿ ಕಣ್ಮರೆಯಾಗಿದ್ದ ಹೃದಯಾ ಈ ಚಿತ್ರದ ಮೂಲಕ ನಾಯಕಿಯಾಗಿ ರೀ ಎಂಟ್ರಿ ಕೊಟ್ಟಿದ್ದಾರೆ.
ವಿನೋದ್ ಭಾರತಿ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಮತ್ತು ಶಿವಕುಮಾರ್ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಭವಾನಿ ಪ್ಕಾಶ್, ನಂದಗೋಪಾಲ, ಅದ್ವಿಕ್ ಜಯರಾಂ, ನಿಖಿತಾ ಮುಂತಾದವರು ನಟಿಸಿದ್ದಾರೆ. ದಿನೇ ದಿನೇ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆಯನ್ನು ಗಟ್ಟಿಗೊಳಿಸುತ್ತಾ ಸಾಗುತ್ತಿರುವ ಈ ಚಿತ್ರ ತೆರೆ ಕಾಣುವ ಕ್ಷಣಗಳು ಹತ್ತಿರಾಗಿವೆ.
#