ಮೇಣದಬತ್ತಿಯ ಬೆಳಕನ್ನು ಒಂದೇ ಸಮನೆ ನೋಡುವ ಯೋಗವಿಧಾನದ ಹೆಸರು `ತ್ರಾಟಕ’. ಇದಕ್ಕೂ ಸಿನಿಮಾಗೂ ಏನು ಸಂಬಂಧ? ಪಾರ್ಷಿಯಲ್ ಸಿಸರ್ ಕಾಂಪ್ಲೆಂಕ್ಸ್ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಪೊಲೀಸ್ ಅಧಿಕಾರಿಯನ್ನು ಗುಣ ಮಾಡಲು ವೈದ್ಯೆ ಹೀರೋಯಿನ್ನು ಈ ತ್ರಾಟಕ ವಿದ್ಯೆಯನ್ನು ಬಳಸುತ್ತಿರುತ್ತಾಳೆ. ಹಾಗೆಂದ ಮಾತ್ರಕ್ಕೆ ಇದು ಖಾಯಿಲೆ ಮತ್ತು ಅದನ್ನು ಗುಣಪಡಿಸುವ ಕಥೆಯನ್ನು ಹೊಂದಿದ ಸಿನಿಮಾವಲ್ಲ. ಇದು ಸಿನಿಮಾದಲ್ಲಿರುವ ಒಂದಂಶವಷ್ಟೇ.
ಸಿನಿಮಾ ಆರಂಭವಾಗುವುದೇ ಕೊಲೆಯೊಂದರ ಮೂಲಕ. ಆನಂತರವೂ ಒಂದರ ಹಿಂದೊಂದು ಸರಣಿ ಹತ್ಯೆ ನಡೆಯುತ್ತಲೇ ಇರುತ್ತದೆ. ಸಿನಿಮಾದ ಮೊದಲ ಭಾಗದಲ್ಲಿ ಪೊಲೀಸ್ ಅಧಿಕಾರಿ (ರಾಹುಲ್ ಐನಾಪುರ್) ಕೊಲೆಗಳನ್ನು ಬೇಧಿಸಲು ಹೆಣಗಾಡುತ್ತಿರುತ್ತಾನೆ. ತಾನೇ ಒಬ್ಬ ಮನೋರೋಗಿಯಾಗಿದ್ದರೂ ಎಂಥಾ ಪಾತಕ ಪ್ರಕರಣವನ್ನೂ ಕಂಡುಹಿಡಿಯುವ ತೀಕ್ಷ್ಣಮತಿಯನ್ನೂ ಹೊಂದಿರುತ್ತಾನೆ. ಹೀಗಿರುವಾಗ ತನ್ನ ಸ್ವಂತ ಸಹೋದರನೇ ಕೊಲೆಯಾಗಿರುತ್ತಾನೆ. ಆ ಪ್ರಕರಣದ ತನಿಖೆ ಕೂಡಾ ಈತನೇ ಕೈಗೆತ್ತಿಕೊಂಡಿರುತ್ತಾನೆ. ಇನ್ನೇನು ಕೊಲೆಗಾರನ ಸುಳಿವು ಸಿಕ್ಕಿತು ಅನ್ನುವಷ್ಟರಲ್ಲಿ ಮತ್ತೊಂದು ಕೊಲೆ ನಡೆದುಹೋಗಿರುತ್ತದೆ. ಯಾರು ಹೀಗೆ ಸರಣಿ ಕೊಲೆಗಳನ್ನು ಮಾಡುತ್ತಿರೋದು ಮಾತ್ರ ನಿಗೂಢವಾಗೇ ಉಳಿದಿರುತ್ತದೆ. ಯಾರ್ಯಾರ ಮೇಲೋ ಅನುಮಾನ ಆರಂಭಗೊಂಡು ಕಡೆಗೆ ಇರುವ ಮೂವರಲ್ಲೇ ಯಾರೋ ಒಬ್ಬರು ಅನ್ನುವಷ್ಟರ ಮಟ್ಟಿಗೆ ಬಂದು ನಿಲ್ಲುತ್ತದೆ. ಈ ನಡುವೆ ಮಾದಕ ವಸ್ತುಗಳ ಜಾಲ, ಪೊಲೀಸ್ ಇಲಾಖೆಯ ಲೋಪ, ಗಂಡ-ಹೆಂಡಿರ ನಡುವಿನ ಗುಪ್ತ ಸಮಸ್ಯೆಗಳು ಸೇರಿಂದಂತೆ ನಾನಾ ರೀತಿಯ ವಿಚಾರಗಳು ಬಂದುಹೋಗುತ್ತವೆ.
ಸಿನಿಮಾ ಆರಂಭವಾಗಿ ಮುಗಿಯೋತನಕ ಪ್ರತಿಕ್ಷಣವೂ ಮುಂದೇನು ಅಂತಾ ಗೊತ್ತಾಗದಂತೆ ನಿರೂಪಿಸಿರೋದು ನಿರ್ದೇಶಕ ಶಿವಗಣೇಶ್ ಬುದ್ಧಿವಂತಿಕೆ. ವಿನೋದ್ಭಾರತಿ ಕ್ಯಾಮೆರಾ ಕೆಲಸ ಕೂಡಾ ನಿರ್ದೇಶಕರ ಕಲ್ಪನೆಯನ್ನು ಯಥಾವತ್ತು ತೆರೆಗೆ ತರುವಲ್ಲಿ ಗೆದ್ದಿದೆ.
ಲೇಡಿ ಕಾಪ್ ಪಾತ್ರವನ್ನು ನಿಭಾಯಿಸಿರುವ ಭವಾನಿ ಪ್ರಕಾಶ್ ಎಂಟ್ರಿಯ ನಂತರ ಕತೆ ಬೇರೆಯದ್ದೇ ಆಯಾಮವನ್ನು ತೆರೆದುಕೊಳ್ಳುತ್ತದೆ. ಭವಾನಿ ಅವರ ನಟನೆ ಕೂಡಾ ಅಷ್ಟೇ ಖಡಕ್ಕಾಗಿದೆ. ನಾಯಕಿ ಹೃದಯಾ ಬಹುಕಾಲದ ಗ್ಯಾಪ್ ನಂತರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರೂ ಮಾಗಿದ ನಟನೆಯನ್ನು ನೀಡಿದ್ದಾರೆ. ಈ ಸಿನಿಮಾದ ಮೂಲಕ ರಾಹುಲ್ ಐನಾಪುರ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಶಕ್ತಿಶಾಲಿ ನಟ ಅನ್ನೋದು ಸಾಬೀತಾಗಿದೆ. ಇನ್ನು ಯಶ್ ಶೆಟ್ಟಿ, ಅಜಿತ್ ಜೈರಾಜ್ ಕೂಡಾ ಶಕ್ತಿಮೀರಿದ ಪರಿಶ್ರಮ ಹಾಕಿ ನಟಿಸಿದ್ದಾರೆ. ಒಟ್ಟಾರೆ ತ್ರಾಟಕ ಭಿನ್ನ ಬಗೆಯ ಸಿನಿಮಾ ಅನ್ನಿಸಿಕೊಂಡಿದೆ. ಧಾರಾಳವಾಗಿ ಕಾಸು ಕೊಟ್ಟು ಟಿಕೇಟು ಪಡೆದು ನೋಡಬಹುದಾದ ಚಿತ್ರ ಕೂಡಾ ಇದಾಗಿದೆ.
#
No Comment! Be the first one.