ಸುಖಾಸುಮ್ಮನೆ ಪಾರ್ಟಿ ಮಾಡಿ ಹಣವನ್ನು ಪೋಲು ಮಾಡುವ ಮಂದಿಗೆ ಆ ಹಣ ಯಾರದ್ದು, ಯಾವುದಕ್ಕಾಗಿ ಇಟ್ಟದ್ದು, ಯಾರು ಸಂಪಾದಿಸದ್ದು, ಎಂಬ ಅರಿವಿದ್ದರೆ ಚೆಂದ. ಅಪ್ಪ ಮಗಳಿಗೋ, ಮಗನಿಗೋ ಓದಿ ಚೆಂದ ಉದ್ದಾರವಾಗಲಿ ಎಂದು ಬೆವರು ಸುರಿಸಿದ ದುಡ್ಡಿರಬಹುದು, ಇಲ್ಲ ಸ್ವತಃ ತಾನೇ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿ ಬಂದ ಹಣವಿರಬಹುದು, ತಾಯಿಯ ಒಡವೆಯನ್ನು ಮಾರಿದ ಹಣವಿರಲೂ ಬಹುದಲ್ಲದೇ. ಅಂತಹ ಹಿನ್ನೆಲೆಯನ್ನು ಇಟ್ಟುಕೊಂಡು ಹಣವನ್ನು ಸುಮ್ಮನೆ ಮತ್ತಾವುದೋ ಮಜಾ ಮಾಡುವ ಸಲುವಾಗಿ ವ್ಯರ್ಥ ಮಾಡಿದರೆ ಪರಮಾತ್ಮ ಮೆಚ್ಚಬಲ್ಲನೇ.. ಇರಲಿ ಖರ್ಚು ಮಾಡೋಣ. ಆದರೆ ನಾನು ಮಾಡುತ್ತಿರುವ ಖರ್ಚಿನ ಅರಿವಿರಬೇಕಲ್ಲವೇ. ಆ ಸಮಯಕ್ಕೆ ಆ ಖರ್ಚು ಅಗತ್ಯವೇ. ಅಗತ್ಯವಿದ್ದರೇ ಏಕೆ? ಖರ್ಚು ಮಾಡದಿದ್ದರೇ ಏನಾಗಬಹುದೆಂಬ ಅರಿವು ಬಾರದೇ ಉಳಿದಿರುತ್ತದೆಯೇ.. ದುಡಿದ ಹಣವನ್ನು ಖರ್ಚು ಮಾಡಲು ಹಿಂಜರಿದಾಗಲೇ ಆ ಹಣದ ಹಿಂದಿನ ಶ್ರಮದ ಅರಿವಾಗುವಂತದ್ದು. ಎಂಬಿತ್ಯಾದಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನದಲ್ಲಿ ನಾಳೆ ರಿಲೀಸ್ ಗೆ ರೆಡಿಯಾಗಿರುವ ತ್ರಯ ಸಿನಿಮಾವಿದೆ. ಹಾಗಂತ ಈ ಸಿನಿಮಾ ಯುವ ಸಮುದಾಯಕ್ಕೆ ಲೆಕ್ಚರ್ ಕೊಡುವ ಕೆಲಸವನ್ನು ಮಾಡುತ್ತಿಲ್ಲ. ನೀವು ಇಡುತ್ತಿರುವ ಹೆಜ್ಜೆಯ ಹಿನ್ನೆಲೆಯನ್ನು ಒಮ್ಮೆಯಾದರೂ ಪರಿಶೀಲಿಸಿ, ಅಕಸ್ಮಾತ್ ಪರಿಶೀಲಿಸದೇ ಉಳಿದಿದ್ದರೇ ಇಂತಹ ಸಮಸ್ಯೆಗಳನ್ನು ಎದುರಿಸಲೇಬೇಕಾಗಬಹುದೆಂಬ ತಿಳುವನ್ನು ಮೂಡಿಸುವ ಪ್ರಯತ್ನವನ್ನು ತ್ರಯ ಮಾಡುತ್ತಿದೆ ಅಷ್ಟೇ.
ಪಾರ್ಟಿ ಮಾಡುವ ನೆಪದಲ್ಲಿ ಆದ ಅವಘಡದಿಂದ ಹೋದ ಪ್ರಾಣದ ಹಿಂದಿನ ಕಥೆಯನ್ನು ಮನರಂಜನಾತ್ಮಕವಾಗಿ, ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಯುವ ಸಮುದಾಯಕ್ಕೆ ಬೋರಾಗದಂತೆ ಹೇಳುವ ಪ್ರಯತ್ನವನ್ನು ತ್ರಯ ತಂಡ ಮಾಡುತ್ತಿದೆ. ತಮಿಳಿನಲ್ಲಿ ಸಾಕಷ್ಟು ಬೆವರು ಹರಿಸಿದ್ದ ಕೃಷ್ಣ ಸಾಯಿ ಚೊಚ್ಚಲ ಬಾರಿಗೆ ತ್ರಯ ಸಿನಿಮಾದ ಮೂಲಕ ಕನ್ನಡಕ್ಕೂ ಪದಾರ್ಪಣೆ ಮಾಡಿದ್ದಾರೆ. ಇನ್ನು ಸಂಯುಕ್ತಾ ಹೊರನಾಡು ವಿಶೇಷ ಪಾತ್ರದಲ್ಲಿ ತ್ರಯದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಪಾತ್ರವೆಂತದ್ದು ಎಂಬುದನ್ನು ಮಾತ್ರ ಚಿತ್ರತಂಡ ಬಿಟ್ಟುಕೊಡದೇ ಸಿನಿಮಾ ನೋಡಲು ಬನ್ನಿ ತಿಳಿಯುತ್ತದೆ ಎಂದು ಜಾಣ ಉತ್ತರವನ್ನೇ ನೀಡುತ್ತದೆ. ತ್ರಯ ಸಿನಿಮಾ 2 ಸ್ಟೇಟ್ಸ್ ಬ್ಯಾನರ್ ನಲ್ಲಿ ನಿರ್ಮಾಣ ವಾಗುತ್ತಿದ್ದು, ಕುಶಾಲ್ ಮಹಾಜನ್ ಮತ್ತು ರಾಜ್ ಆನಂದ್ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ವಿಶೇಷವೆಂದರೆ ನಿರ್ಮಾಪಕರ ಬದುಕಿನಲ್ಲಾದ ಘಟನೆಯೊಂದರ ಎಳೆಯನ್ನಿಟ್ಟುಕೊಂಡು ಹೆಣೆದ ಕಥೆ ತ್ರಯ ಆಗಿರುವುದು ವಿಶೇಷವಾಗಿದೆ. ತ್ರಯಕ್ಕೆ ಯತೀಶ್ ಮಹದೇವ್ ಸಂಗೀತ ಸಂಯೋಜನೆ ಮಾಡಿದ್ದು, ಆರ್.ಕೆ.ಪ್ರತಾಪ್ ಛಾಯಾಗ್ರಹಣ ಮಾಡಿದ್ದಾರೆ. ಇನ್ನು ತ್ರಯದಲ್ಲಿ ಶಂಕರ್ ಶ್ರೀಹರಿ, ರಜನಿ ಭಾರದ್ವಜ್, ಮದನ್ ಗೌಡ, ನಿಮಿಶಾ, ಅಮೋಘ್ ರಾಹುಲ್, ನೀತು ಬಾಲ, ಕೃಷ್ಣ ಹೆಬ್ಬಾಳೆ, ಮಂದೀಪ್ ರೈ, ವಿಜಯ್ ಚೆಂಡೂರ್ ಇದ್ದಾರೆ. ನಾಳೆ ರಾಜ್ಯದಾಂದ್ಯಂತ ಸಿನಿಮಾ ರಿಲೀಸ್ ಆಗಲಿದ್ದು, ವೀಕೆಂಡ್ ನಲ್ಲಿ ಪಾರ್ಟಿ ಮಾಡುವ ಮೂಡಿನಲ್ಲಿರುವವರೊಮ್ಮೆ ಬಂದು ತ್ರಯ ನೋಡಿಕೊಂಡು ಪಾರ್ಟಿ ಮಾಡಲು ಮನಸ್ಸುಮಾಡಿ.
No Comment! Be the first one.