ಅಕ್ಕ ಎಂಬ ಧಾರಾವಾಹಿಯ ಮೂಲಕ ಕಿರುತೆರೆ ಜಗತ್ತಿನ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದವರು ಅನುಪಮಾ ಗೌಡ. ಈ ಧಾರಾವಾಹಿಯ ಡಬಲ್ ರೋಲ್ ನಲ್ಲಿ ಮಿಂಚಿದ್ದ ಅನುಪಮಾ ಅದೆಂಥಾ ಸವಾಲಿನ ಪಾತ್ರಗಳಿಗಾದರೂ ಜೀವ ತುಂಬಬಲ್ಲ ಕಲಾವಿದೆ ಅನ್ನೋದನ್ನೂ ಸಾಬೀತುಗೊಳಿಸಿದ್ದರು. ಈ ಹುಡುಗಿ ಹಿರಿತೆರೆಗೆ ಬಂದರೂ ನಾಯಕಿಯಾಗಿ ನೆಲೆಗೊಳ್ಳುತ್ತಾಳೆಂದು ಪ್ರೇಕ್ಷಕರೂ ಅಂದುಕೊಂಡಿದ್ದರು. ಇಂಥಾ ಅನುಪಮಾ ಇದೀಗ ಆ ಕರಾಳ ರಾತ್ರಿಯ ನಂತರ ತ್ರಯಂಬಕಂ ಚಿತ್ರದ ನಾಯಕಿಯಾಗಿ ಪ್ರೇಕ್ಷಕರೆದುರು ನಿಲ್ಲಲು ರೆಡಿಯಾಗಿದ್ದಾರೆ.
ದಯಾಳ್ ಪದ್ಮನಾಭನ್ ನಿರ್ದೇಶನದ ಆ ಕರಾಳ ರಾತ್ರಿ ಚಿತ್ರದಲ್ಲಿಯೂ ನಾಯಕಿಯಾಗಿದ್ದ ಅನುಪಮಾ ತ್ರಯಂಬಕಂನಲ್ಲಿಯೂ ಬಹು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ದಯಾಳ್ ನಿರ್ದೇಶನದ ಎರಡನೇ ಚಿತ್ರದಲ್ಲಿಯೂ ಅವರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅನುಪಮಾ ಹೇಳೋ ಪ್ರಕಾರವಾಗಿ ನೋಡೋದಾದರೆ ಆ ಕರಾಳ ರಾತ್ರಿಗಿಂತಲೂ ತ್ರಯಂಬಕಂ ಪಾತ್ರ ಭಿನ್ನ ಮತ್ತು ಸವಾಲಿನದ್ದು!
ತ್ರಯಂಬಕಂನಲ್ಲಿ ಉದ್ದುದ್ದದ ಡೈಲಾಗುಗಳಿವೆಯಂತೆ. ಅದನ್ನು ಸಹಜವಾಗಿ ದಾಟಿಸಲು ಆರಂಭದಲ್ಲಿ ಅನುಪಮಾ ತಿಣುಕಾಡಿದ್ದರಂತೆ. ಅದರಲ್ಲಿಯೂ ವಿಶೇಷವಾಗಿ ರಾಘವೇಂದ್ರ ರಾಜ್ ಕುಮಾರ್ ಅವರ ಜೊತೆ ನಟಿಸಿದ್ದೇ ಅನುಪಮಾ ಪಾಲಿಗೆ ವಿಶೇಷ. ರಾಘಣ್ಣ ಮತ್ತು ಅನುಪಮಾ ಮಾತಾಡಿಕೊಂಡು, ಚರ್ಚಿಸಿಯೇ ಪ್ರತೀ ಸೀನುಗಳಿಗೂ ತಯಾರಾಗುತ್ತಿದ್ದರಂತೆ. ಖುದ್ದು ರಾಘಣ್ಣನೇ ತನ್ನ ನಟನೆಯ ಬಗ್ಗೆ ಅಭಿಪ್ರಾಯವನ್ನೂ ಕೇಳುತ್ತಿದ್ದರಂತೆ. ಅಷ್ಟು ಸೀನಿಯರ್ ನಟನಾದರೂ ಯಾವುದೇ ಹಮ್ಮುಬಿಮ್ಮಿಲ್ಲದ ರಾಘಣ್ಣನ ವ್ಯಕ್ತಿತ್ವವೇ ತನ್ನ ಪಾತ್ರವನ್ನು ಪರಿಣಾಮಕಾರಿಯಾಗಿಸಿದೆ ಎಂಬುದು ಅನುಪಮಾ ಅಭಿಪ್ರಾಯ.
ಇನ್ನು ದಯಾಳ್ ನಿರ್ದೇಶನದ ವಿಚಾರದಲ್ಲಿ ಅವರದ್ದೇ ಆದ ಒಂದಷ್ಟು ರೀತಿ ರಿವಾಜುಗಳನ್ನು ರೂಢಿಸಿಕೊಂಡಿದ್ದಾರೆ. ಯಾವುದೇ ಪಾತ್ರಕ್ಕಾದರೂ ಕಲಾವಿದರು ಪ್ರಿಪೇರ್ ಆಗಿ ಹೋಗೋದನ್ನವರು ಇಷ್ಟಪಡುವುದಿಲ್ಲ. ಸ್ಪಾಟಲ್ಲಿಯೇ ಸೀನೊಂದನ್ನು ವಿವರಿಸಿ ನಟನೆ ತೆಗೆದುಕೊಳ್ಳುತ್ತಾರೆ. ಪರ್ತಕರ್ತೆಯಾಗಿಯೂ ನಟಿಸಿರೋ ಅನುಪಮಾ ಆ ಪಾತ್ರಕ್ಕೂ ಕೂಡಾ ತಯಾರಿಯನ್ನೇನೂ ನಡೆಸಿಲ್ಲ. ಆ ಸೀನು ಎಂಥಾ ಭಾವ ಬೇಡುತ್ತದೋ ಅದನ್ನು ಕೊಟ್ಟು ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರಂತೆ.
ಒಟ್ಟಾರೆಯಾಗಿ ಅನುಪಮಾ ಪಾಲಿಗೆ ತ್ರಯಂಬಕಂ ಒಂದು ಅದ್ಭುತ ಅನುಭವ. ಅಂಥಾದ್ದೇ ಅನುಭವ ಚಿತ್ರ ನೋಡಿದ ಪ್ರತಿಯೊಬ್ಬರದ್ದೂ ಆಗಿರುತ್ತದೆ ಎಂಬ ಭರವಸೆ ಅವರಲ್ಲಿದೆ.
No Comment! Be the first one.