ಅಖಂಡ ಐದು ಸಾವಿರ ವರ್ಷಗಳ ಹಿಂದಿನ ರಹಸ್ಯವೊಂದಕ್ಕೆ ಕನೆಕ್ಟ್ ಆಗೋ ಆಧುನಿಕ ಕಥೆಯೆಂದರೇನೇ ಕುತೂಹಲ ನಿಗಿ ನಿಗಿಸೋ ವಿಚಾರ. ಅಂಥಾ ಆಯಸ್ಕಾಂತೀಯ ಗುಣದ ಕಥೆಯ ಮೂಲಕವೇ ಸದ್ದು ಮಾಡುತ್ತಾ ಸಾಗಿ ಬಂದಿರೋ ತ್ರಯಂಬಕಂ ಚಿತ್ರವೀಗ ಬಿಡುಗಡೆಗೊಂಡಿದೆ. ಇದುವರೆಗೂ ಸೂಕ್ಷ್ಮ ಕಥಾ ಹಂದರಗಳಿಗೇ ದೃಶ್ಯದ ಚೌಕಟ್ಟು ಹೊದಿಸುತ್ತಾ ಪ್ರೇಕ್ಷಕರನ್ನು ತಲುಪಿಕೊಂಡಿರೋ ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಈ ಚಿತ್ರವೂ ಮೂಡಿ ಬಂದಿದೆ. ಕನ್ನಡದ ಮಟ್ಟಿಗೆ ತೀರಾ ಅಪರೂಪದ ಈ ಕಥೆಯನ್ನು ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿ ಬಿಟ್ಟಿದ್ದಾರೆ.
ಈ ಹಿಂದೆ ಆ ಕರಾಳ ರಾತ್ರಿ ಮತ್ತು ಪುಟ 109ರಂಥಾ ಚಿತ್ರಗಳ ಮೂಲಕವೇ ನಿರ್ದೇಶಕರಾಗಿ ವಿಶೇಷ ಸ್ಥಾನಮಾನಗಳನ್ನು ಗಿಟ್ಟಿಸಿಕೊಂಡಿರುವವರು ದಯಾಳ್ ಪದ್ಮನಾಭನ್. ಈವರೆಗೂ ಅವರು ಕಲಾತ್ಮಕ ಪ್ರಾಕಾರದಲ್ಲಿಯೇ ಸಾಗಿ ಬಂದಿದ್ದರೂ ಕೂಡಾ ಸಾಮಾನ್ಯ ಪ್ರೇಕ್ಷಕರನ್ನೂ ತಲುಪಿಕೊಂಡಿದ್ದಾರೆ. ತ್ರಯಂಬಕಂ ಚಿತ್ರದ ಮೂಲಕ ಅವರು ಕಮರ್ಶಿಯಲ್ ಜಾಡಿನಲ್ಲಿ ಹೆಜ್ಜೆಯಿಟ್ಟಿದ್ದಾರೆ. ಈ ಆರಂಭಿಕ ಯಾನಕ್ಕೇ ಭರ್ಜರಿ ಗೆಲುವಿನ ಸಾಥ್ ಸಿಗುವ ಸೂಚನೆಗಳೇ ದಟ್ಟವಾಗಿವೆ.
ಇದು ಒಂದರೆಕ್ಷಣವೂ ಪ್ರೇಕ್ಷಕರನ್ನು ಆಚೀಚೆ ಅಲ್ಲಾಡದಂತೆ ಸಾಗುವ ರೋಚಕ ಕಥೆ ಹೊಂದಿರುವ ಚಿತ್ರ. ಅಪ್ಪ, ಮಗಳು, ಗೆಳೆಯ ಮತ್ತು ಒಂದಷ್ಟು ಪಾತ್ರಗಳ ಸುತ್ತಾ ಸುತ್ತೋ ಈ ಚಿತ್ರ ಬೇರೆಯದ್ದೇ ರೋಚಕ ಜಗತ್ತಿನಲ್ಲಿ ನೋಡುಗರನ್ನು ಥ್ರಿಲ್ಲಿಂಗ್ ಯಾನ ಹೊರಡಿಸುತ್ತೆ. ಓರ್ವ ಪ್ರೀತಿ ತುಂಬಿದ ಅಪ್ಪನಾಗಿ ರಾಘವೇಂದ್ರ ರಾಜ್ ಕುಮಾರ್ ಭರ್ಜರಿಯಾಗಿಯೇ ರೀ ಎಂಟ್ರಿ ಕೊಟ್ಟಿದ್ದಾರೆ. ಮಗಳಾಗಿ ದ್ವಿಪಾತ್ರದಲ್ಲಿ ಅನುಪಮಾ ಗೌಡ ನಟಿಸಿದ್ದರೆ, ಅವರ ಗೆಳೆಯ ಕಂ ಡಿಟೆಕ್ಟಿವ್ ಆಗಿ ರಾಕ್ ಸ್ಟಾರ್ ರೋಹಿತ್ ನಟಿಸಿದ್ದಾರೆ.
ಆ ತಂದೆಯ ಕಣ್ಮುಂದೆ ಇರೋದು ಒಬ್ಬಳೇ ಮುದ್ದಾದ ಮಗಳು. ಆದರೆ ತನಗೆ ಮತ್ತೋರ್ವ ಮಗಳಿದ್ದಳೆಂಬ ವಿಚಾರ ಭಯಾನಕ ಕನಸೊಂದರ ಮೂಲಕ ಆತನಿಗೆ ಪದೇ ಪದೆ ಕಾಡುತ್ತಿರುತ್ತದೆ. ಅದು ಪ್ರಾಚ್ಯವಸ್ತು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ಮಗಳ ಬಗೆಗಿನ ಕನಸು. ಅವಳೊಂದಿಗೆ ನಂದಿ ಬೆಟ್ಟಕ್ಕೆ ಹೋದಾಗ ನಡೆಯೋ ಭೀಕರ ಅಪಘಾತದ ಚಿತ್ರಣಗಳು ಆ ತಂದೆಯನ್ನು ಪದೇ ಪದೆ ಬೆಚ್ಚಿ ಬೀಳಿಸುತ್ತಿರುತ್ತೆ. ಅದು ಭ್ರಮೆಯಾ ಅಥವಾ ತಾನು ವಾಸ್ತವವೆಂದುಕೊಂಡಿದ್ದೇ ಭ್ರಮೆಯಿರಬಹುದಾ ಎಂಬಂಥಾ ಮನೋ ವ್ಯಾಕುಲ ಆ ತಂದೆಯದ್ದು. ಇದೆಲ್ಲದರಾಚೆಗೆ ತನಗಿರೋದು ಒಬ್ಬಳೇ ಮಗಳಲ್ಲ, ಮತ್ತೊಬ್ಬಳೂ ಇದ್ದಳೆಂಬ ಸತ್ಯ ಸಾಕ್ಷಾತ್ಕಾರವಾಗೋ ಹೊತ್ತಿಗೆ ಮೊದಲಾರ್ಧ ಸಮಾಪ್ತಿಗೊಳ್ಳುತ್ತೆ.
ಹೀಗೆ ಭೀಕರ ಕನಸು ಕಾಡೋದೂ ಸೇರಿದಂತೆ ಎಲ್ಲ ವಿಚಾರಗಳನ್ನೂ ಕೂಡಾ ಆ ತಂದೆ ಮಗಳ ಮುಂದೆ ಮುಕ್ತವಾಗಿ ಹಂಚಿಕೊಳ್ಳುತ್ತಿರುತ್ತಾನೆ. ಇದರ ಹಿಂದೆ ಏನೋ ಇದೆ ಅಂತ ಅನುಮಾನಗೊಳ್ಳುವ ಮಗಳು ತನ್ನ ಡಿಟೆಕ್ಟಿವ್ ಗೆಳೆಯನಿಗೂ ಈ ವಿಷಯ ತಿಳಿಸುತ್ತಾಳೆ. ಆ ನಂತರದಲ್ಲಿಯಂತೂ ಕಥೆ ರೋಚಕವಾಗಿಯೇ ದಿಕ್ಕು ಬದಲಿಸಿಕೊಳ್ಳುತ್ತೆ. ತಂದೆಯನ್ನು ಕಾಡುತ್ತಿದ್ದ ಆ ಘಟನೆ ನಿಜವಾ? ಅದನ್ನು ಡಿಟೆಕ್ಟಿವ್ ಹೇಗೆ ಪತ್ತೆಹಚ್ಚುತ್ತಾನೆ, ಯಾವುದು ಭ್ರಮೆ, ಯಾವುದು ವಾಸ್ತವ ಅನ್ನೋದನ್ನು ಚಿತ್ರ ನೋಡೋ ಮೂಲಕವೇ ಕಣ್ತುಂಬಿಕೊಳ್ಳೋದೊಳಿತು.
ದಯಾಳ್ ಪದ್ಮನಾಭನ್ ಈ ಕಥೆಯನ್ನು ಐದು ಸಾವಿರ ವರ್ಷಗಳಷ್ಟು ಹಿಂದಿದ್ದ ನವಪಾಶಾಣ ಎಂಬ ಔಷಧಿಯ ಮೂಲಕ ಬೆರಗಾಗುವಂತೆ ನಿರೂಪಿಸಿದ್ದಾರೆ. ಅಷ್ಟು ವರ್ಷಗಳ ಹಿಂದೆ ಋಷಿಯೊಬ್ಬರು ಒಂಭತ್ತು ಪಾಶಾಣಗಳನ್ನು ಒಟ್ಟುಗೂಡಿಸಿ ತಯಾರಿಸಿದ್ದ ನವಪಾಶಾಣ ಎಂಥಾ ಕಾಯಿಲೆಯನ್ನಾದರೂ ಗುಣಪಡಿಸೋ ಶಕ್ತಿ ಹೊಂದಿತ್ತಂತೆ. ಅಂಥಾ ಔಷಧಿಯೊಂದು ಈ ದಿನಮಾನದಲ್ಲಿ ಸಿಕ್ಕರೆ ಏನೇನಾಗುತ್ತೆ ಎಂಬುದನ್ನು ದಯಾಳ್ ಅಚ್ಚರಿದಾಯಕವಾಗಿ ನಿರೂಪಿಸಿದ್ದಾರೆ.
ಈ ಮೂಲಕ ದಯಾಳ್ ತಾನು ಕಮರ್ಶಿಯಲ್ ಚೌಕಟ್ಟಿಗೂ ಸಲ್ಲುವ ನಿರ್ದೇಶಕ ಎಂಬುದನ್ನು ಸಾಬೀತುಗೊಳಿಸಿದ್ದಾರೆ. ಒಟ್ಟಾರೆಯಾಗಿ ಇದು ಪ್ರತಿಯೊಬ್ಬರೂ ನೋಡಲೇ ಬೇಕಾದ ಅಪರೂಪದ ಚಿತ್ರ ಅನ್ನೋದರಲ್ಲಿ ಎರಡು ಮಾತಿಲ್ಲ.
No Comment! Be the first one.