ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ನವೀನ್ ಕೃಷ್ಣ ಯಶಸ್ವಿ ಜೋಡಿ ಎಂಬಂತೆ ಸಾಗಿ ಬಂದಿದ್ದಾರೆ. ಅವರಿಬ್ಬರ ಕಾಂಬಿನೇಷನ್ನಿನ ಆರನೇ ಚಿತ್ರವಾಗಿ ತ್ರಯಂಬಕಂ ಮೂಡಿ ಬಂದಿದೆ. ಈ ಚಿತ್ರಕ್ಕೆ ನವೀನ್ ಕೃಷ್ಣ ಅವರೇ ಸಂಭಾಷಣೆ ಬರೆದಿದ್ದಾರೆ. ಐದು ಸಾವಿರ ವರ್ಷಗಳಷ್ಟು ಹಿಂದಿನ ಕಥೆ, ಆಧುನಿಕತೆಯೊಂದಿಗೇ ಬ್ಲೆಂಡ್ ಆಗಿರುವ ಈ ಚಿತ್ರದ ಕಥೆ, ಅದಕ್ಕೆ ತಯಾರಾದ ರೀತಿ ಮತ್ತು ಸಂಭಾಷಣೆ ಬರೆದ ಅನುಭವಗಳ ಬಗ್ಗೆ ನವೀನ್ ಕೃಷ್ಣ ಒಂದಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ.
ದಯಾಳ್ ಪದ್ಮನಾಭನ್ ಅವರು ಆರಂಭದಲ್ಲಿ ಉಪ್ಪಿನಕಾಯಿಯಂಥಾ ಕಥಾ ಎಳೆ ಹಿಡಿದು ಚರ್ಚೆಗೆ ಶುರುವಿಟ್ಟುಕೊಳ್ಳುತ್ತಾರೆ. ಅದನ್ನು ಸಿನಿಮಾ ಮಾಡೋಕಾಗುತ್ತಾ ಎಂಬುದರ ಸುತ್ತಲೇ ಬಿಸಿ ಬಿಸಿ ವಾದ ವಿವಾದ ನಡೆದು ನವೀನ್ ಕೃಷ್ಣ ಮತ್ತು ದಯಾಳ್ ನಡುವೆ ಜಗಳ ಸಂಭವಿಸೋದೂ ಇದೆಯಂತೆ. ಇದುವರೆಗೂ ಈ ಜಗಳದ ಫಲವಾಗಿ ಅದಭುತ ಕಾನ್ಸೆಪ್ಟುಗಳೇ ಜೀವ ಪಡೆದಿವೆ. ಆದರೆ, ಈ ವರೆಗಿನ ಎಲ್ಲ ಕಥೆಗಳಿಗಿಂತಲೂ ತ್ರಯಂಬಕಂ ಚಿತ್ರವನ್ನು ದಯಾಳ್ ಅವರು ರೂಪಿಸಿದ ಪರಿಯೇ ಭಿನ್ನವಾಗಿದೆ ಎಂಬುದು ನವೀನ್ ಅಭಿಪ್ರಾಯ.
ದಯಾಳ್ ಈ ಬಾರಿ ತ್ರಯಂಬಕಂ ಚಿತ್ರಕ್ಕಾಗಿ ಭಾರೀ ತಯಾರಿ ಮಾಡಿಕೊಂಡೇ ಅಖಾಡಕ್ಕಿಳಿದಿದ್ದರಂತೆ. ಇಹಿಹಾಸ, ಪುರಾಣಗಳ ಬಗ್ಗೆ ಸಾಕಷ್ಟು ತಲಾಶು ನಡೆಸಿದ್ದಲ್ಲದೇ ಆ ಕುರುಹುಗಳು ಈಗ ಎಲ್ಲಾದರೂ ಸಿಗಬಹುದಾ ಅಂತಲೂ ದಯಾಳ್ ತಿರಿಗಾಡಿದ್ದರಂತೆ. ಈ ಬಗ್ಗೆ ಸಿಗುವ ಸಣ್ಣ ಮಾಹಿತಿಗಳನ್ನೂ ಕಲೆ ಹಾಕಿಯೇ ಅವರು ಕಥೆ, ಚಿತ್ರಕಥೆಯನ್ನು ರೂಪಿಸಿದ್ದರು. ಆದರೆ ಅದೆಲ್ಲವನ್ನೂ ಅರಿತುಕೊಳ್ಳದೇ, ತಾವೂ ಕೂಡಾ ಒಂದಷ್ಟು ಮಾಹಿತಿಯನ್ನ ಅರಿತುಕೊಳ್ಳದೆ ತ್ರಯಂಬಕಂಗೆ ಸಂಭಾಷಣೆ ಬರೆಯೋದು ಸಾಧ್ಯವೇ ಇಲ್ಲ ಅಂತ ನವೀನ್ ಕೃಷ್ಟರಿಗೆ ಸ್ಪಷ್ಟವಾಗಿಯೇ ಗೊತ್ತಾಗಿತ್ತು.
ದಯಾಳ್ ಕಳಿಸಿದ ಮಾಹಿತಿಯೂ ಸೇರಿದಂತೆ ತಾವೇ ಒಂದಷ್ಟು ಹುಡುಕಾಟವನ್ನೂ ನವೀನ್ ಮಾಡಿದ್ದರು. ಒಂದಷ್ಟು ಪುಸ್ತಕಗಳನ್ನು ಓದುವ ಮೂಲಕ ಪೂರಕ ಮಾಹಿತಿಗಳನ್ನು ಕಲೆ ಹಾಕಿದ್ದರು. ಆ ನಂತರವೇ ಈ ಸವಾಲನ್ನು ಸಮರ್ಥವಾಗಿ ಸ್ವೀಕರಿಸಲು ಸಾಧ್ಯವಾಗಿತ್ತು. ಈ ಕಾರಣದಿಂದಲೇ ತ್ರಯಂಬಕಂ ಚಿತ್ರಕ್ಕೆ ತೃಪ್ತಿಕರವಾಗಿ ಸಂಭಾಷಣೆ ಬರೆದಿರೋ ಸಾರ್ಥಕತೆ ನವೀನ್ ಕೃಷ್ಣರಲ್ಲಿದೆ.
ನವೀನ್ ಕೃಷ್ಣ ಪ್ರತಿಭಾವಂತ ನಟ. ಅವರೊಳಗಿದ್ದ ಬರಹಗಾರನಿಗೆ ಸೂಕ್ತ ಉತ್ತೇಜನ ನೀಡಿದ್ದು ದಯಾಳ್ ಅವರೇ. ಈ ಹಿಂದೆ ಹರಿಕಥೆ ಚಿತ್ರದಲ್ಲಿ ನವೀನ್ ಪಾತ್ರವೊಂದನ್ನು ನಿರ್ವಹಿಸಿದ್ದರು. ಆ ಹಂತದಲ್ಲಿಯೇ ದಯಾಳ್ ಗೆ ನವೀನ್ ಹಾಡು ಬರೆಯುತ್ತಾರೆಂಬ ವಿಚಾರ ಗೊತ್ತಾಗಿ ಅದಕ್ಕೆ ಅವಕಾಶ ಕೊಟ್ಟಿದ್ದರು. ಅದಾದ ನಂತರ ನವೀನ್ ಹಿಂದೇಟು ಹಾಕಿದರೂ ಸಂಭಾಷಣೆ ಬರೆಯಲು ಹಚ್ಚಿದ್ದರು. ಈ ಕಾರಣದಿಂದಲೇ ನವೀನ್ ಕೃಷ್ಣರಿಗೆ ಹಗ್ಗದ ಕೊನೆ ಚಿತ್ರದ ಸಂಭಾಷಣೆಗಾಗಿ ರಾಜ್ಯ ಪ್ರಶಸ್ತಿಯೂ ಬಂದಿದೆ. ಇದೀಗ ತೆರೆಗಾಣಲು ರೆಡಿಯಾಗಿರೋ ತ್ರಯಂಬಕಂ ಚಿತ್ರದ ಬಗ್ಗೆಯಂತೂ ನವೀನ್ ಗೆ ಅಪಾರ ಭರವಸೆಯಿದೆ.