ಕಾಲದ ಗಡಿಯಾರದಲ್ಲಿರೋದು ಹೂವುಗಳಲ್ಲ ಮುಳ್ಳುಗಳು. ಇದಕ್ಕೆ ದೊಡ್ಡವರು ಚಿಕ್ಕವರು ಎನ್ನುವ ಬೇಧವಿಲ್ಲ. ಒಳ್ಳೆಯವರು, ಕೆಟ್ಟವರೆನ್ನುವ ಗುಣವಿಭಾಗಗಳೂ ಗೊತ್ತಿಲ್ಲ. ಅಸಲಿಗೆ ಇದು ಯಾರೆಂದರೆ ಆರನ್ನೂ ಬಿಡೋದಿಲ್ಲ. ಎಲ್ಲರಿಗೂ ಚುಚ್ಚುತ್ತದೆ. ಅದು ಯಾವಾಗ? ಹೇಗೆ? ಅಂತಾ ಕೂಡಾ ನಿಖರವಾಗಿ ಹೇಳಲಿಕ್ಕಾಗುವುದಿಲ್ಲ. ವಿದ್ಯೆಗೆ ಅಹಂ, ಶಕ್ತಿಗೆ ಕೋಪ, ಅನುಭವಕ್ಕೆ ತಾಳ್ಮೆ ಇರುತ್ತದೆ. ಇವೆಲ್ಲವನ್ನೂ ಮೆಟ್ಟಿನಿಂತರೆ ಕಾಲನನ್ನು ಜಯಿಸಬಹುದು. ಎನ್ನುವ ಸಿದ್ದಾಂತವನ್ನಿಟ್ಟುಕೊಂಡು ರೂಪಿಸಿರುವ ಸಿನಿಮಾ ತ್ರಿಕೋನ.
ಒಬ್ಬ ಮಹಾನ್ ಸಿಡುಕ. ಹೆಂಡತಿ ಮಕ್ಕಳನ್ನು ಗದರುವುದು, ಎದುರಿಗೆ ಬಂದವರ ಮೇಲೂ ಎರಗುವುದು ಅವನ ಗುಣ. ಮತ್ತೊಬ್ಬ ಯುವಕ. ಹಣ, ಬುದ್ದಿ ಎಲ್ಲದರಲ್ಲೂ ಶಕ್ತಿಶಾಲಿ. ಮಗದೊಬ್ಬ ಹಿರಿಯ. ಅಪಾರ ಅನುಭವಿ. ಸೊನ್ನೆಯಿಂದ ಮೇಲೇರಿ ಬದುಕು ಮತ್ತು ಕೋಟೆ ಎರಡನ್ನೂ ಕಟ್ಟಿನಿಲ್ಲಿಸಿದವನು. ತಾಳ್ಮೆ ಈ ವ್ಯಕ್ತಿಯ ಪರಮ ಮಂತ್ರ.
– ಕಾಲನ ಕಣ್ಣಿಗೆ ಈ ಮೂವರೂ ಒಂದೇ. ಬೆನ್ನುಬಿದ್ದು ಹಿಂಬಾಲಿಸುತ್ತಾನೆ. ಬಿಟ್ಟೂ ಬಿಡದೆ ಕಾಡಿ, ಹೆದರಿಸಿ, ಬೆಚ್ಚಿಬೀಳಿಸಿ, ಬಡಿದು ಬಗ್ಗಿಸುತ್ತಾನೆ. ಇಷ್ಟಾದ ನಂತರವೂ ಕಾಲ ಬೀಸುವ ಪಾಶ ಯಾರ ಕುತ್ತಿಗೆಗೆ ಕುಣಿಕೆಯಾಗುತ್ತದೆ? ಯಾರು ಬಚಾವಾಗುತ್ತಾರೆ? ನಿರ್ದಯಿ ಕಾಲನ ಕ್ರೋಧಕ್ಕೆ ಬಲಿಯಾಗುವವರು ಯಾರು? ಅಹಂ ಕರಗುತ್ತದಾ? ತಾಳ್ಮೆ ಗೆಲ್ಲಬಹುದಾ? ಶಕ್ತಿ ಸೋಲೊಪ್ಪುತ್ತದಾ? ಅನ್ನೋದು ಚಿತ್ರದ ಕೊನೆಯ ಗುಟ್ಟು.
ಶಕ್ತಿ, ಅಹಂ ಮತ್ತು ತಾಳ್ಮೆಯ ಜೊತೆಗೆ ಕಾಲನನ್ನು ಸಮೀಕರಿಸಿ ಅಮೂರ್ತ ವಿಚಾರಗಳನ್ನು ಹೇಳಲು ಹೊರಟ ಸಿನಿಮಾ ತ್ರಿಕೋನ. ಮೂವರು ತಲುಪಬೇಕಿರುವ ಸ್ಥಳ ಒಂದೇ. ಆದರೆ ಕಾರಣಗಳು ಮಾತ್ರ ಬೇರೆ. ಸಾಗುವ ದಾರಿಯಲ್ಲಿ ಕಾಲ ಎನ್ನುವ ಪಾತ್ರ ಮೂವರಿಗೂ ಎದುರಾಗುತ್ತದೆ. ಮೂವರ ಕಾರು ಒಂದೇ ಸ್ಥಳದಲ್ಲಿ ಬೇರೆ ಬೇರೆ ಸಮಯದಲ್ಲಿ ಸಿಕ್ಕಿಕೊಳ್ಳುತ್ತದೆ. ಅಲ್ಲಿಗೆ ಕಾಲ ಎದುರುಗೊಳ್ಳುತ್ತಾನೆ. ʻಚುಲ್ ಚುಲ್ ಚುಲಾʼ ಅಂತಾ ವಿಲಕ್ಷಣವಾಗಿ ಅಬ್ಬರಿಸಿ ಭೀತಿಗೊಳಿಸುತ್ತಾನೆ. ಸಾಯುವಂತೆ ಬಡಿಯುತ್ತಾನೆ. ಯಮನ ವಾಹನ ಕೋಣ. ಇಲ್ಲಿ ಕಾಲ ಹಳೆಯದೊಂದು ಮೆಟಾಡೋರಿನಲ್ಲಿ ಜರ್ನಿ ಮಾಡುತ್ತಾನೆ. ಆ ವಾಹನಕ್ಕೆ ಕೋಣದ ಮುಖ, ಮೇಲೊಂದು ಬಿಲ್ಲು ಕೂಡಾ ಫಿಕ್ಸ್ ಆಗಿರುತ್ತದೆ. ಈ ಕಾಲ ಭಯಾನಕ ಕೊಳಕ ಕೂಡ. ಜೀವಮಾನದಲ್ಲಿ ಯಾವತ್ತೂ ಹಲ್ಲುಜ್ಜಿ, ಮುಖ ತೊಳೆದ ಲಕ್ಷಣವಿರೋದಿಲ್ಲ. ಕಾರು ಗ್ಲಾಸಿನ ಮೇಲೆ ಝಲ್ಲಂತಾ ಉಚ್ಚೆ ಹೊಯ್ಯುತ್ತಾನೆ. ವಿಚಿತ್ರವಾದ ಗದೆಯಲ್ಲಿ ಸದೆಬಡಿಯುತ್ತಾನೆ.
ಕಥಾರೂಪದಲ್ಲಿ ಸಲೀಸಾಗಿ ಹೇಳಿಬಿಡಬಲ್ಲ ಈ ಕಂಟೆಂಟನ್ನು ದೃಶ್ಯಕ್ಕೆ ಅಳವಡಿಸುವುದು ಕಷ್ಟ. ಕಥೆ ಬರೆದು ನಿರ್ಮಾಣವನ್ನೂ ಮಾಡಿರುವ ರಾಜಶೇಖರ್ ತಮ್ಮದೇ ಬದುಕಿನ ಘಟನೆಗಳು, ಮನಸ್ಸುಗಳಿಗೆ ಸಂಬಂಧಿಸಿದ ತಲ್ಲಣ, ಗೊಂದಲಗಳಿಗೆ ಜೀವ ನೀಡಿದ್ದಾರೆ. ಅಮೂರ್ತ ಕಥಾವಸ್ತುವನ್ನು ತಮ್ಮ ತಲೆಗಿಳಿಸಿಕೊಂಡು ದೃಶ್ಯ ಕಟ್ಟಿರುವ ಚಂದ್ರಕಾಂತ್ ಕೆಲಸ ನಿಜಕ್ಕೂ ಮೆಚ್ಚಬೇಕು. ಅಪರೂಪಕ್ಕೆ ಸಾಧು ಕೋಕಿಲಾ ಸಾಕಷ್ಟು ನಗಿಸುತ್ತಾರೆ. ಸುಧಾರಾಣಿ, ಅಚ್ಯುತ್ ಎಂದಿನಂತೆ ಅದ್ಭುತವಾಗಿ ನಟಿಸಿದ್ದಾರೆ. ಹೊಸ ಹೀರೋ ಮಾರುತೇಶ್ ಗುದ್ದಾಟದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ರಾಜ್ ವೀರ್ ಚಲ್ ಚಲ್ ಚುಲಾ ಅನ್ನುತ್ತಿದ್ದರೆ ನೋಡುಗರ ಎದೆಯೊಳಗೆ ಚಳುಕು ಶುರುವಾಗುತ್ತದೆ. ಹಿರಿಯ ನಟ ಸುರೇಶ್ ಹೆಬ್ಳೀಕರ್ ದೈಹಿಕವಾಗಿ ಶ್ಯಾನೆ ಬಳಲಿದ್ದಾರೆ. ಜ್ಯೂಲಿ ಲಕ್ಷ್ಮಿ ನಟನೆಯ ಬಗ್ಗೆ ಹೊಸದಾಗಿ ಹೇಳೋದೇನಿಲ್ಲ. ಈ ಥರದ ಕಥಾವಸ್ತುವನ್ನು ಅರ್ಥಮಾಡಿಕೊಂಡು ಕೆಲಸ ಮಾಡಿರುವ ಜೀವನ್ ಪ್ರಕಾಶ್ ಸಂಕಲನ, ವಿನಯ್ ಕಡೂರ್ ಕಲಾನಿರ್ದೇಶನದ ಕೆಲಸವನ್ನು ಮೆಚ್ಚಲೇಬೇಕು!
Rating : 3.5/5
Comments