ಬ್ಯಾಡಪ್ಪಾ ಹುಡುಗೀರ ಸಾವಾಸ – ಅಂತಾ ಎಷ್ಟೇ ಎಚ್ಚರದಿಂದಿದ್ದರೂ, ಹುಡುಕ್ಕೊಂಡು ಬಂದು ಜೊತೆಯಾಗುವ ಹೆಣ್ಮಕ್ಕಳು. ಹಾಗೆ ಬಂದವರು ʻಐ ಲವ್ ಯೂʼ ಅನ್ನುತ್ತಾರೆ. ಪ್ರೀತಿ ಕೊಟ್ಟು ಪ್ರೀತಿ ಪಡೆಯುವ ಮಾತಾಡುತ್ತಾರೆ. ತಮ್ಮೆಲ್ಲಾ ಸ್ವಾರ್ಥ ಸಾಧನೆಗೆ ಹುಡುಗನನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ಕಡೆಗೆ ಹುಡುಗ ತನ್ನದಲ್ಲದ ತಪ್ಪಿಗೆ ತಾನು ಶಿಕ್ಷೆ ಅನುಭವಿಸುವ, ತಲೆಮರೆಸಿಕೊಂಡು ತಿರುಗಬೇಕಾದ ಪ್ರಸಂಗ ಒದಗಿಬರುತ್ತದೆ.
- ಇವೆಲ್ಲಾ ಯಾರದ್ದೋ ಲೈಫಿನ ನಿಜ ಘಟನೆಗಳಂತೆ ಅನ್ನಿಸಬಹುದು. ಇದು ಥ್ರಿಬಲ್ ರೈಡಿಂಗ್ ಚಿತ್ರದ ಕಥೆಯೂ ಹೌದು. ಗೋಲ್ಡನ್ ಸ್ಟಾರ್ ಗಣೇಶ್ ಒಂದೇ ಸಿನಿಮಾದಲ್ಲಿ ಇಬ್ಬರು ನಾಯಕಿಯರೊಂದಿಗೆ ಕಾಣಿಸಿಕೊಳ್ಳೋದು ಮಾಮೂಲು. ಹೆಸರಿಗೆ ತಕ್ಕಂತೆ ಥ್ರಿಬಲ್ ರೈಡಿಂಗ್‌ನಲ್ಲಿ ಮೂವರು ನಾಯಕಿಯರಿದ್ದಾರಲ್ಲಾ? ಇದರ ಕಥೆ ಏನಿರಬಹುದು ಅನ್ನೋದು ಎಲ್ಲ ಕುತೂಹಲವಾಗಿತ್ತು. ಈಗ ಚಿತ್ರ ತೆರೆಗೆ ಬಂದಿದೆ.
ಒಬ್ಬ ಅಡ್ವೋಕೇಟ್ ಮಗನಾಗಿದ್ದರೂ ಬದುಕಿಗೆ ಇಂಥದ್ದೇ ಎನ್ನುವ ನಿರ್ದಿಷ್ಟ ಕೆಲಸ ಇಲ್ಲದ ಹುಡುಗ. ಹಾಗಂತ ಅವನು ಸೋಮಾರಿಯಲ್ಲ. ವಂಚಿಸಿ ತಿನ್ನೋನೂ ಅಲ್ಲ. ಸಿಕ್ಕ ಕೆಲಸಗಳನ್ನೆಲ್ಲಾ ಅಚ್ಚುಕಟ್ಟಾಗಿ ನಿಭಾಯಿಸುವ ಸಕಲಕಲಾ ಗುಣ ಹೊಂದಿದವನು. ಈತನ ಲೈಫ್ ಜರ್ನಿಯಲ್ಲಿ ಒಬ್ಬರ ನಂತರ ಒಬ್ಬರು ಹುಡುಗಿಯರ ಪ್ರವೇಶವಾಗುತ್ತಾ ಹೋಗುತ್ತದೆ. ಅಲ್ಲಲ್ಲಿ ಟ್ವಿಸ್ಟುಗಳೂ ಸಂಭವಿಸುತ್ತವೆ. ತಮಾಷೆ ಪ್ರಸಂಗಗಳ ಜೊತೆಗೆ ಕಥೆ ಕೂಡಾ ಮುಂದುವರೆಯುತ್ತದೆ. ಮಧ್ಯಂತರದ ಹೊತ್ತಿಗೆ ಮಹಾ ತಿರುವೊಂದು ಎದುರಾಗುತ್ತದೆ. ಅದರಿಂದ ಪಾರಾಗಲು ಹೋದವನ ಎದುರು ಮತ್ತೊಬ್ಬಳು ಬಂದು ನಿಲ್ಲುತ್ತಾಳೆ.
ಥ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಅತ್ಯದ್ಭುತವಾದ ಕಥೆ ಇದೆ, ಘನ ಗಂಭೀರ ವಿಚಾರವಿದೆ ಅಂತೆಲ್ಲಾ ಅಂದುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಇದು ಮನರಂಜಿಸುವುದಷನ್ನಷ್ಟೇ ಗಮನದಲ್ಲಿಟ್ಟುಕೊಂಡು ತಯಾರಿಸಿರುವ ಸಿನಿಮಾ. ಮೂರು +ಒಬ್ಬಳು ಹುಡುಗಿ, ಮುದ್ದಾದ ಹೀರೋ ಜೊತೆಗೆ ತಮಾಷೆ ಸನ್ನಿವೇಶಗಳನ್ನು ಬೆರೆಸಿ ರೂಪಿಸಿರುವ ಚಿತ್ರ ಥ್ರಿಬಲ್ ರೈಡಿಂಗ್.
ಚಿತ್ರದ ನಿರ್ದೇಶಕ ಮಹೇಶ್ ಗೌಡ ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ದುಡಿದವರು. ಈ ಹಿಂದೆ ರಗಡ್ ಸಿನಿಮಾವನ್ನು ಕೂಡಾ ನಿರ್ದೇಶಿಸಿದ್ದರು. ಕಮರ್ಷಿಯಲ್ ಫಾರ್ಮುಲಾವನ್ನು ಬಳಸಿ ಜನರನ್ನು ರಂಜಿಸುವ ಬಗೆ ಅವರಿಗೆ ಗೊತ್ತು. ಥ್ರಿಬಲ್ ರೈಡಿಂಗ್ ನಲ್ಲೂ ಅವರು ಅದೇ ಸೂತ್ರವನ್ನು ಚಾಚೂ ತಪ್ಪದೆ ಪಾಲಿಸಿದ್ದಾರೆ. ರಮ್ಯ-ರಾಹುಲ್, ರಕ್ಷಿತಾ-ಪ್ರೇಮ್ ಜೊತೆಗೆ ರಾಧಿಕಾ ಪಾತ್ರವನ್ನೂ ಸೃಷ್ಟಿಸಿದ್ದಾರೆಂದರೆ, ಮಹೇಶ್ ಎಷ್ಟು ಇಂಟಲಿಜೆಂಟು ಅನ್ನುವ ಅಂದಾಜು ಸಿಗುತ್ತದೆ!
ಗಣೇಶ್ ಜೊತೆಗೆ ಅದಿತಿ ಪ್ರಭುದೇವಾ, ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ಹೊಂದಿಕೊಂಡಿದ್ದಾರೆ. ಆರ್ಮುಗಂ ರವಿಶಂಕರ್ ಅವರಿಗೆ ಅರ್ಚನಾ ಕೊಟ್ಟಿಗೆ ಜೋಡಿಯಾಗಿದ್ದು ಮಾತ್ರ ಸಹಿಸಲಸಾಧ್ಯ. ಪೂರ್ತಿ ಸಿನಿಮಾವನ್ನು ಕಲರ್ ಫುಲ್ ಆಗಿ ತೋರಿಸಿರುವ ಜೈ ಆನಂದ್ ಅವರಿಗೆ ಜೈ ಅನ್ನಲೇಬೇಕು. ಕ್ಯೂಟ್ ಹೀರೋ ಗಣೇಶ್ ಅವರ ಜೊತೆಗೆ ಮೂರ್ನಾಲ್ಕು ಜನ ಹೆಣ್ಮಕ್ಕಳು, ಸಿನಿಮಾದಲ್ಲಿ ತುಂಬಿಹೋಗಿರುವ ಆಂಟಿಯಂದಿರನ್ನೂ ಇಷ್ಟು ಚೆಂದಗೆ ತೋರಿಸೋದೆಂದರೆ ಸುಮ್ಮನೇ ಮಾತಲ್ಲ. ಜೈ ಆನಂದ್ ಅದನ್ನು ಸಾಧಿಸಿದ್ದಾರೆ. ಇಟ್ಟಇಟ್ಟಇಟ್ಟ…. ಚೆಡ್ಡಿ ಒಳಗೆ ಗಾಡು ಇರುವೆ ಬಿಟ್ಟ ಹಾಡು ಸೀಟಿನಲ್ಲಿ ಕುಂತವರನ್ನೂ ಕುಣಿಯುವಂತೆ ಮಾಡಿರೋದು ನಿಜ. ಸಾಧು ಕೋಕಿಲಾ ಮೈಕೊಡವಿಕೊಂಡು ಹಳೇ ಫಾರ್ಮಿನಲ್ಲಿ ನಟಿಸಿದ್ದಾರೆ.
ಒಟ್ಟಾರೆಯಾಗಿ ಮನರಂಜನೆಯನ್ನು ಬಯಸುವ ಮನಸುಗಳೆಲ್ಲಾ ನೋಡಬಹುದಾದ ಸಿನಿಮಾ ಥ್ರಿಬಲ್ ರೈಡಿಂಗ್!
Leave a Reply
You must be logged in to post a comment.