ಮುರುಗದಾಸ್ ಮತ್ತು ವಿಜಯ್ ಕಾಂಬಿನೇಷನ್ನಿನಲ್ಲಿ ಬಂದು ಸೂಪರ್ ಹಿಟ್ ಆದ ಸಿನಿಮಾ ತುಪಾಕಿ. ಈಗ ಅದರ ಮುಂದುವರೆದ ಭಾಗ ತುಪಾಕಿ-೨ ಆರಂಭಗೊಳ್ಳುತ್ತಿದೆ. ದರ್ಬಾರ್ ಚಿತ್ರದ ನಂತರ ಮುರುಗದಾಸ್ ನಿರ್ದೇಶಿಸುತ್ತಿರುವ ಚಿತ್ರವಿದು. ಸನ್ ಪಿಕ್ಚರ್ಸ್ ತುಪಾಕಿ-೨ವನ್ನು ನಿರ್ಮಿಸುತ್ತಿದೆ.
ಈ ಸಿನಿಮಾಗಾಗಿ ಭಾರತೀಯ ಚಿತ್ರರಂಗದ ಸ್ಟಾರ್ ಮ್ಯೂಸಿಕ್ ಡೈರೆಕ್ಟರುಗಳಾದ ಎ.ಆರ್. ರೆಹಮಾನ್ ಅಥವಾ ಅನಿರುದ್ಧ್ ರವಿಚಂದರ್ ಅವರಲ್ಲಿ ಒಬ್ಬರನ್ನು ಸೆಲೆಕ್ಟ್ ಮಾಡಿಕೊಳ್ಳಿ ಅಂತಾ ಸನ್ ಪಿಕ್ಚರ್ಸ್ ಮುರುಗದಾಸ್’ಗೆ ತಿಳಿಸಿತ್ತು. ಆದರೆ ಮುರುಗದಾಸ್ ಆ ಇಬ್ಬರೂ ಬೇಡ ಅಂತಾ ಸಾರಾಸಗಟಾಗಿ ರಿಜೆಕ್ಟ್ ಮಾಡಿದ್ದಾರೆ. ಎ.ಆರ್. ರೆಹಮಾನ್ ಮತ್ತು ಅನಿರುದ್ಧ್ ಸಿನಿಮಾಗಳನ್ನು ಒಪ್ಪಿಕೊಂಡರೆ ಸಾಕು ಅಂತಾ ಕಾದು ಕುಳಿತ ನಿರ್ದೇಶಕರಿದ್ದಾರೆ. ಸ್ವತಃ ನಿರ್ಮಾಣ ಸಂಸ್ಥೆಯೇ ಹೇಳಿದರೂ ಬೇಡ ಅಂತಾ ಹೇಳಿದ ನಿರ್ದೇಶಕ ಮುರುಗದಾಸ್ ಆಗಿದ್ದಾರೆ. ಹಾಗೆ ನೋಡಿದರೆ, ಮುರುಗದಾಸ್ ಹಿಂದಿನ ಚಿತ್ರಗಳಾದ ಸರ್ಕಾರ್’ಗೆ ರೆಹಮಾನ್ ಮತ್ತು ದರ್ಬಾರ್’ಗೆ ಅನಿರುದ್ಧ್ ಸಂಗೀತ ನೀಡಿದ್ದರು.
ಈ ಬಾರಿ ಈ ಇಬ್ಬರೂ ಮ್ಯೂಸಿಕ್ ಡೈರೆಕ್ಟರುಗಳನ್ನು ಸೆಲೆಕ್ಟ್ ಮಾಡಿಕೊಳ್ಳದೇ ಇರಲು ಮುರುಗದಾಸ್ ನೀಡಿರುವ ಕಾರಣವೆಂದರೆ, ಈ ಇಬ್ಬರೂ ಸಂಗೀತ ನಿರ್ದೇಶಕರ ಬಳಿ ನಾನು ಹೊತ್ತಲ್ಲದ ಹೊತ್ತಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ರೆಹಮಾನ್ ಅವರು ನೀಡಿದ ಸಮಯಕ್ಕೆ ಹೋಗಿ ನಾನು ಟ್ಯೂನ್ ಮಾಡಿಸಬೇಕು. ಏನಾದರೂ ಎಮರ್ಜೆನ್ಸಿ ಕೆಲಸವಿದ್ದರಂತೂ ಅವರನ್ನು ಸಂಪರ್ಕಿಸಲು ಸಾಧ್ಯವೇ ಇರುವುದಿಲ್ಲ. ಅಷ್ಟೊಂದು ಶಿಸ್ತಿನಿಂದ ಟೈಂ ಟೇಬಲ್ ಹಾಕಿಕೊಂಡು ಕೆಲಸ ಮಾಡುವವನು ನಾನಲ್ಲ. ನಡುರಾತ್ರಿಯಲ್ಲಿ ಎಚ್ಚರವಾದಾಗ ಏನಾದರೂ ಐಡಿಯಾ ಬಂದರೂ ಇತರೆ ಟೆಕ್ನಿಷಿಯನ್ನುಗಳ ಬೆನ್ನು ಬಿದ್ದು ಕೆಲಸ ಮಾಡಿಸಿಕೊಳ್ಳುತ್ತೀನಿ. ಅನಿವಾರ್ಯವೆನಿಸಿದರೆ ಹಗಲು ರಾತ್ರಿಗಳನ್ನು ಮರೆತು ಕಾರ್ಯ ನಿರ್ವಹಿಸಿರುತ್ತೀನಿ. ಸಿನಿಮಾ ಅನ್ನೋದೇ ಸೃಜನಶೀಲ ಮಾದ್ಯಮ. ಕ್ರಿಯಾಶೀಲತೆ ಅನ್ನೋದು ನಮ್ಮ ಸಮಯಕ್ಕೆ ಹುಟ್ಟೋದಿಲ್ಲ. ಹೀಗಾಗಿ ನನ್ನ ಟೈಮು, ವರ್ಕಿಂಗ್ ಸ್ಟೈಲ್’ಗೆ ಹೊಂದುವವರೊಂದಿಗೆ ಕೆಲಸ ಮಾಡುತ್ತೇನೆ ಎಂದು ಮುರುಗದಾಸ್ ಹೇಳಿಕೊಂಡಿದ್ದಾರೆ. ಈ ಕಾರಣದಿಂದ ತುಪಾಕಿ-೨ ಚಿತ್ರಕ್ಕೆ ತಮನ್ ಮ್ಯೂಸಿಕ್ ಮಾಡಲಿದ್ದಾರೆ!
No Comment! Be the first one.