ಮೊನ್ನೆ ಮಾರ್ಚ್ ಮೂವತ್ತೊಂದನೇ ತಾರೀಖು ಚಿತ್ರರಂಗದ ಸಾಕಷ್ಟು ಜನರ ಫೇಸ್ ಬುಕ್ ವಾಲ್’ನಲ್ಲಿ ‘ಹ್ಯಾಪಿ ಬರ್ತಡೇ ರಂಗಣ್ಣ… ಮಿಸ್ ಯೂ’ ಅನ್ನೋ ಬರಹವಿತ್ತು. ಅದು ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ತುಷಾರ್ ರಂಗನಾಥ್ ಕುರಿತಾದದ್ದು.
೨೦೧೧ರ ಡಿಸೆಂಬರ್ ೨೦ರಂದು ತುಷಾರ್ ರಂಗನಾಥ್ ಕೊನೆಯುಸಿರೆಳೆದಿದ್ದರು. ರಂಗಣ್ಣ ಸಾಯುವುದಕ್ಕೆ ಒಂದೂವರೆ ವರ್ಷಕ್ಕೆ ಮುಂಚೆಯೇ “ಕಂಠೀರವ’ ಚಿತ್ರದ ಚಿತ್ರೀಕರಣಗೊಳ್ಳುತ್ತಿದ್ದ ವೇಳೆ ಆ ಚಿತ್ರದ ನಿರ್ದೇಶಕ ತುಷಾರ್ ರಂಗನಾಥ್ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ” ಅಂತಾ ನ್ಯೂಸ್ ಚಾನೆಲ್ಗಳಲ್ಲಿ ಈ ಸುದ್ದಿ ಪ್ರಕಟವಾದಾಗ ಇಡೀ ಚಿತ್ರರಂಗ ಆಘಾತಕ್ಕೊಳಗಾಗಿತ್ತು. ‘ಹೌದಾ’ ಎನ್ನುವಷ್ಟರಲ್ಲಿ ಸುದ್ದಿ ಬದಲಾಗಿ ‘ಹೃದಯನಾಳ ಮುಚ್ಚಿಕೊಂಡಿದ್ದರಿಂದ ಕುಸಿದು ಬಿದ್ದ ರಂಗನಾಥ್ ಮೈಸೂರಿನ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ’ ಎಂದಾಗಿತ್ತು. ರಂಗನಾಥ್ರ ಗೆಣೇಕ್ಕಾರರು ಸೇರಿದಂತೆ ಎಲ್ಲರೂ ನಿಟ್ಟುಸಿರುಬಿಟ್ಟಿದ್ದರು!
ಅದಾಗಿ ವರ್ಷ ಕಳೆಯುತ್ತಿದ್ದಂತೇ “ದುನಿಯಾ ವಿಜಯ್ ಅವರ ಮುಂದಿನ ಸಿನಿಮಾ ಗಾಂಧಿ ಕ್ಲಾಸ್. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಸೆಟ್ಟೇರುತ್ತದೆ. ಕಷ್ಟದ ದಿನಗಳಲ್ಲೂ ಒಟ್ಟಿಗಿದ್ದ, ವಿಜಿಯ ಪ್ರಾಣಸ್ನೇಹಿತ ತುಷಾರ್ ರಂಗನಾಥ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ” ಹೀಗೊಂದು ಸುದ್ದಿ ಪತ್ರಿಕೆಗಳಲ್ಲಿ ಬಿತ್ತರಗೊಳ್ಳಬೇಕಿತ್ತು. ಆದರೆ ವಿಧಿ ಸುದ್ದಿಯನ್ನು ಬದಲಿಸಿಬಿಟ್ಟಿತ್ತು ; ‘ದುನಿಯಾ ವಿಜಯ್ ನಟಿಸಬೇಕಿದ್ದ ಗಾಂಧಿ ಕ್ಲಾಸ್ ಚಿತ್ರದ ನಿರ್ದೇಶಕ ತುಷಾರ್ ರಂಗನಾಥ್ ಕೊನೆಯುಸಿರೆಳೆದಿದ್ದಾರೆ’!! ಎಂಥ ವಿಪರ್ಯಾಸವಲ್ಲವಾ?
ಹೌದು ಆಗಿನ್ನೂ ಮೂವತ್ತಾರು ದಾಟಿರದ ತುಷಾರ್ ರಂಗನಾಥ್ ಉಸಿರು ನಿಲ್ಲಿಸಿಬಿಟ್ಟಿದ್ದರು. ಶಿವರಾಜ್ ಕುಮಾರ್ ನಟಿಸಿದ್ದ ರಾಕ್ಷಸ, ದರ್ಶನ್ನ ಸುಂಟರ ಗಾಳಿ ಸೇರಿದಂತೆ ರಾಮು ಬ್ಯಾನರ್ನ ಪರ್ಮನೆಂಟ್ ರೈಟರ್ ಆಗಿದ್ದ ರಂಗನಾಥ್ ಲೋಕಲ್ ಲಾಂಗ್ವೇಜ್ನಿಂದಲೇ ಹೆಸರು ಮಾಡಿದವರು. ತೆರೆಮೇಲೆ ಯಾವ ಹೀರೋ ಎಂಥ ಡೈಲಾಗ್ ಹೊಡೆದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ ಎಂಬ ನಾಡಿಮಿಡಿತ ತುಷಾರ್ ರಂಗನಾಥ್ಗೆ ಗೊತ್ತಿತ್ತು. ಹತ್ತಾರು ಕಮರ್ಷಿಯಲ್ ಸಿನಿಮಾಗಳಿಗೆ ಸಂಭಾಷಣೆ ಬರೆದುಕೊಂಡಿದ್ದ ರಂಗನಾಥ್ ಐವತ್ತಕ್ಕೂ ಹೆಚ್ಚು ಹಾಡುಗಳನ್ನೂ ಬರೆದಿದ್ದರು. ದುನಿಯಾ ಚಿತ್ರದಲ್ಲಿನ ‘ಪ್ರೀತಿ ಮಾಯೆ ಹುಷಾರೂ… ಕಣ್ಣೀರ್ ಮಾರೋ ಬಜಾರೂ…’ ಮತ್ತು ‘ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆಯೆ ನಿನ್ನಾಣೆ’ ಯಂಥ ಹಿಟ್ ಸಾಂಗುಗಳನ್ನು ಬರೆದಿದ್ದೂ ಇದೇ ರಂಗಣ್ಣನೇ.
ಪೊಲೀಸ್ ಕಾನ್ಸ್ಟೆಬಲ್ ಮಗನಾಗಿ ಹುಟ್ಟಿ ಬೆಂಗಳೂರಿನಲ್ಲೇ ಓದಿ ಬೆಳೆದ ರಂಗಣ್ಣ ಸಿನಿಮಾ ಹುಚ್ಚು ಹತ್ತಿಸಿಕೊಂಡಿದ್ದು ಉಪೇಂದ್ರ ಅವರಿಂದ. ಹೇಗಾದರೂ ಮಾಡಿ ಉಪ್ಪಿ ಜೊತೆ ಕೆಲಸ ಮಾಡಬೇಕು ಅನ್ನೋ ಕನಸನ್ನೂ ಈಡೇರಿಸಿಕೊಂಡ ರಂಗನಾಥ್ ‘ಆಟೋ ಶಂಕರ್’ ಚಿತ್ರದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಯೋಗರಾಜಭಟ್, ಸೂರಿ, ಶ್ರೀನಗರ ಕಿಟ್ಟಿ, ಗಣೇಶ್, ನಾಗಶೇಖರ್, ಪ್ರೀತಂ ಗುಬ್ಬಿ, ಪ್ರಶಾಂತ್ ಕಾಳೇಗೌಡ ಮತ್ತು ತುಷಾರ್ ರಂಗನಾಥ್ರನ್ನು ಚಿತ್ರರಂಗ ನವಗ್ರಹಗಳು ಎಂತಲೇ ಗುರುತಿಸುತ್ತಿತ್ತು. ಸಿನಿಮಾ ಕೆಲಸಗಳು ಮುಗಿಯುತ್ತಿದ್ದಂತೇ ಒಂದೆಡೆ ಸೇರಿ ಗುಂಡುಪಾರ್ಟಿ ಮಾಡಿ ಯದ್ವಾತದ್ವಾ ಎಂಜಾಯ್ ಮಾಡುತ್ತಿದ್ದರು. ಹೀರೋ ಆಗಿ ನಟಿಸಬಹುದು ಎಂಬ ಬಯಕೆಯನ್ನು ದುನಿಯಾ ವಿಜಯ್ ಮನಸ್ಸಿನಲ್ಲಿ ನೆಟ್ಟಿದ್ದೇ ರಂಗನಾಥ್. ಸದಾ ಸ್ನೇಹಿತರ ದಂಡು ಕಟ್ಟಿಕೊಂಡು ಪರಸ್ಪರರ ಸಿನಿಮಾಗಳು ಬಿಡುಗಡೆಯಾದಾಗ ಒಟ್ಟಿಗೇ ಸೇರಿ ಅದನ್ನು ಹಬ್ಬದಂತೆ ಆಚರಿಸುವುದರಲ್ಲಿ ಈ ಗೆಳೆಯರ ಗುಂಪಿಗೆ ಬಲು ಆಸಕ್ತಿ.
ರಂಗನಾಥ್ ನಿರ್ದೇಶಿಸಿದ ಮೊದಲ ಚಿತ್ರ ಗುಲಾಮ ಚಿತ್ರ ಸಂದರ್ಭದಲ್ಲಿ ಆ ಚಿತ್ರದ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದ ವಿನೋದ್ ಎಂಬ ಹುಡುಗನನ್ನು ಸೈಕೋ ನಿರ್ಮಾಪಕ ಗೋವರ್ಧನ ಮೂರ್ತಿ ಗುಂಡೊಡೆದು ಕೊಂದುಬಿಟ್ಟಿದ್ದ. ಆಗ ಇದೇ ತುಷಾರ್ ರಂಗನಾಥ್ ಸತ್ತ ವಿನೋದನ ಶವದ ಮುಂದೆ ಕಣ್ಣೀರಿಟ್ಟು ಕಂಬನಿಗರೆದಿದ್ದರು. ಇಂಥ ರಂಗನಾಥ್ ಪ್ರಜ್ವಲ್ದೇವರಾಜ್ ಗಾಗಿ ‘ಗುಲಾಮ’ ಮತ್ತು ವಿಜಯ್ ಅವರ ‘ಕಂಠೀರವ’ ಚಿತ್ರವನ್ನು ನಿರ್ದೇಶಿಸಿದ್ದರು. ಗುಲಾಮ ಗೆಲ್ಲದಿದ್ದರೂ, ಕಂಠೀರವ ನಿರ್ಮಾಪಕರ ಜೇಬನ್ನು ಉಳಿಸಿತ್ತು. ತನ್ನ ಮಿಕ್ಕ ಗೆಳೆಯರೆಲ್ಲಾ ಯಶಸ್ಸು ಕಂಡಿದ್ದಾರೆ. ನಾನೂ ಕೂಡಾ ಅವರಂತೆ ಸೂಪರ್ ಹಿಟ್ ಚಿತ್ರವನ್ನು ಕೊಡಬೇಕೆಂದು ಎಂಟು ತಿಂಗಳಿಂದ ಕೂತು ಗೆಳೆಯ ವಿಜಯ್ ಅವರಿಗೆ ಹೊಂದುವಂಥ ‘ಗಾಂಧಿ ಕ್ಲಾಸ್’ ಚಿತ್ರಕ್ಕೆ ಸ್ಕ್ರಿಪ್ಟು ಬರೆದಿಟ್ಟುಕೊಂಡಿದ್ದರು. ಗುರಿ ತಲುಪುವ ತನಕ ಮದುವೆಯೂ ಬೇಡ ಎಂದು ಪಣತೊಟ್ಟಿದ್ದ ರಂಗಣ್ಣನಿಗೆ ಗೆಲ್ಲಲೇಬೇಕೆನ್ನುವುದು ಪರಮಗುರಿಯಾಗಿತ್ತು. ಆದರೆ ಸಿನಿಮಾದಲ್ಲಿ ಗೆಲ್ಲಬೇಕಿದ್ದ ರಂಗಣ್ಣ ದಿಢೀರನೆ ಎದುರಾದ ಸಾವನ್ನು ಗೆದ್ದುಬಿಟ್ಟಿದ್ದರು.
ತುಷಾರ್ ರಂಗನಾಥ್ ಸಾವಿನ ಬಗ್ಗೆ ಅನೇಕ ಹೀರೋಗಳು, ನಿರ್ದೇಶಕರು ‘ಪ್ರಾಣಮಿತ್ರ… ಜೀವದ ಗೆಳೆಯ…’ ಎಂದೆಲ್ಲಾ ಹೇಳಿಕೊಂಡಿದ್ದರು. ಅಂತಿಮ ಸಂಸ್ಕಾರದ ವಿಚಾರದಲ್ಲಿ ‘ಅಮ್ಮ-ಅಕ್ಕ’ ಲೆವೆಲ್ಲಿನ ಗಲಾಟೆಗಳಾಗಿ, ಕೈಕೈ ಮಿಲಾಯಿಸಿದ ದೃಶ್ಯವೂ ನಡೆದಿತ್ತು. ಯಾರು ಎಷ್ಟರ ಮಟ್ಟಿಗೆ ಆತನ ತಾಯಿ, ಕುಟುಂಬಕ್ಕೆ ನೆರವಾಗುವ ಮನಸ್ಸು ಮಾಡಿದರೋ ಇಲ್ಲವೋ ಗೊತ್ತಿಲ್ಲ. ಆದರೆ ನಿರ್ದೇಶಕ ಪ್ರೇಮ್ ಮಾತ್ರ ಆ ವಿಚಾರದಲ್ಲಿ ಒಂದಿಷ್ಟು ಮಾನವೀಯವಾಗಿ ನಡೆದುಕೊಂಡಿದ್ದರು.
ರಂಗಣ್ಣ ಹೋದ ಬಳಿಕ ಪೋರ್ಟಿಸ್ ಆಸ್ಪತ್ರೆಗೆ ಅರವತ್ತು ಸಾವಿರ ರುಪಾಯಿ ಬಿಲ್ ಪೇ ಮಾಡಿದ್ದರು. ಜೊತೆಗೆ ‘ಪ್ರೇಮ್ ಅಡ್ಡ’ ಚಿತ್ರಕ್ಕಾಗಿ ರಂಗಣ್ಣ ಹಾಡುಗಳನ್ನು ಬರೆದಿದ್ದರಲ್ಲಾ? ಅದರ ಸಂಭಾವನೆಯ ಬಾಬ್ತು ಒಂದು ಲಕ್ಷ ರುಪಾಯಿಗಳನ್ನು ಅವರ ತಾಯಿಗೆ ತಲುಪಿಸಿದ್ದರು. ಇವೆಲ್ಲಾ ಆಗಿ ಒಂಭತ್ತು ವರ್ಷಗಳೇ ಕಳೆದಿವೆ. ತುಷಾರ್ ರಂಗನಾಥ್ ಮನೆಯವರ ಕತೆ ಏನಾಯಿತೋ ಗೊತ್ತಿಲ್ಲ. ಅವರ ಸಂಪರ್ಕದಲ್ಲಿದ್ದ ಸಾಕಷ್ಟು ಜನ ಈಗ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ರಂಗಣ್ಣನ ನೆನಪೂ ಎಲ್ಲರ ಮನಸ್ಸಿನಲ್ಲೂ ಜೀವಂತವಾಗಿದೆ. ಆದಿ ಪನ್ನೀರು ಅಂತ್ಯ ಕಣ್ಣೀರು, ಕೈ ಕೊಡುವನೋ ದೇವರು… ಇದು ಅವರೇ ಬರೆದ ಹಾಡಿನ ಸಾಲು!